Earthquake: ಇಂಡೋನೇಷ್ಯಾದಲ್ಲಿ 7.0 ತೀವ್ರತೆಯ ಭೂಕಂಪ
ಜಕಾರ್ತ ಏಪ್ರಿಲ್ 14: ಇಂಡೋನೇಷ್ಯಾದ ಜಾವಾ ದ್ವೀಪದ ಉತ್ತರದ ಸಮುದ್ರದಲ್ಲಿ 7.0 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ಬಗ್ಗೆ ಯುಎಸ್ ಜಿಯೋಲಾಜಿಕಲ್ ಸರ್ವೆ (ಯುಎಸ್‌ಜಿಎಸ್) ಶುಕ್ರವಾರ ತನ್ನ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ.
ಪ್ರಬಲ ಭೂಕಂಪ ಸ್ಥಳೀಯ ಸಮಯ 4:55 ಗಂಟೆಗೆ (0955 GMT) ಅಪ್ಪಳಿಸಿದೆ. ಇಂಡೋನೇಷ್ಯಾದ ಭೂವೈಜ್ಞಾನಿಕ ಸಂಸ್ಥೆಯು 594 ಕಿಲೋಮೀಟರ್ (370 ಮೈಲುಗಳು) ಆಳದಲ್ಲಿ ಭೂಕಂಪನದ ಕೇಂದ್ರಬಿಂದುವನ್ನು ಪತ್ತೆಹಚ್ಚಿದೆ. ಇಂಡೋನೇಷ್ಯಾದ ಹವಾಮಾನ ಇಲಾಖೆ ಮತ್ತು ಜಿಯೋಫಿಸಿಕ್ಸ್ ಏಜೆನ್ಸಿಯಿಂದ ಯಾವುದೇ ಸುನಾಮಿ ಎಚ್ಚರಿಕೆ ನೀಡಲಾಗಿಲ್ಲ. ಈ ವರೆಗೂ ಯಾವುದೇ ಹಾನಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಇಂಡೋನೇಷ್ಯಾದಲ್ಲಿ ಈ ಹಿಂದೆ ಹಲವಾರು ಬಾರಿ ಭೂಕಂಪನ ಸಂಭವಿಸಿದೆ. ಇತ್ತೀಚೆಗೆ ಜನವರಿಯಲ್ಲಿ ಪಶ್ಚಿಮ ಇಂಡೋನೇಷ್ಯಾದಲ್ಲಿ ಪ್ರಬಲವಾದ ಭೂಕಂಪ ಸಂಭವಿಸಿತ್ತು. ಸುಮಾರು 6.0 ತೀವ್ರತೆಯ ಭೂಕಂಪ ಆಗ್ನೇಯಕ್ಕೆ ಅಚೆ ಪ್ರಾಂತ್ಯದ ಕರಾವಳಿ ಪ್ರದೇಶದಲ್ಲಿ ಕೇಂದ್ರೀಕೃತವಾಗಿತ್ತು. ಭೂಮಿಯ 48 ಕಿಲೋಮೀಟರ್ ಆಳದಲ್ಲಿ ಕಂಪನವಾಗಿದೆ ಎಂದು ಅಮೆರಿಕದ ಜಿಯೋಲಾಜಿಕಲ್ ಸರ್ವೆ ಹೇಳಿತ್ತು. ಕಂಪನದಲ್ಲಿ ಗಂಭೀರ ಹಾನಿ ಅಥವಾ ಸಾವು ನೋವು ಸಂಭವಿಸಿದ ಬಗ್ಗೆ ವರದಿಗಳಿರಲಿಲ್ಲ.
ಇಂಡೋನೇಷ್ಯಾದ ವಿಶಾಲವಾದ ದ್ವೀಪಸಮೂಹದಲ್ಲಿ 270 ಮಿಲಿಯನ್‌ಗಿಂತಲೂ ಹೆಚ್ಚು ಜನರು ವಾಸಿಸುತ್ತಿದ್ದು, ಇದು ರಿಂಗ್ ಆಫ್ ಫೈಯರ್‍ನ ಪದರದಲ್ಲಿದ್ದು ಇದರಿಂದ ಆಗಾಗ್ಗೆ ಭೂಕಂಪಗಳು ಮತ್ತು ಜ್ವಾಲಾಮುಖಿ ಸ್ಪೋಟ ಘಟನೆಗಳು ನಡೆಯುತ್ತಿರುತ್ತವೆ.
ಕಳೆದ ನವೆಂಬರ್ 21 ರಂದು ಪಶ್ಚಿಮ ಜಾವಾದ ಸಿಯಾಂಜೂರ್ ನಗರದಲ್ಲಿ ಸಂಭವಿಸಿದ 5.6 ತೀವ್ರತೆಯ ಭೂಕಂಪದಲ್ಲಿ ಸುಮಾರು 331 ಜನರು ಸಾವನ್ನಪ್ಪಿದರು ಮತ್ತು ಸುಮಾರು 600 ಜನರು ಗಾಯಗೊಂಡಿದ್ದರು.
ಇಂಡೋನೇಷ್ಯಾದ ಬೆಟ್ಟ ಪ್ರದೇಶಗಳು ತೀವ್ರ ಭೂಕಂಪ ಸಕ್ರಿಯ ವಲಯಗಳೆಂದು ಗುರುತಿಸಲಾಗಿದ್ದು, ಇದನ್ನು 'ಪೆಸಿಫಿಕ್ ರಿಂಗ್ ಆಫ್ ಫೈರ್' ಎಂದು ಕರೆಯಲಾಗಿದೆ. ಭೂಮಿಯ ಗಡಸು ಭಾಗದ ವಿಭಿನ್ನ ಪದರಗಳು ಘರ್ಷಣೆಗೆ ಒಳಗಾಗುತ್ತವೆ. ಇದರಿಂದ ಭಾರಿ ಸಂಖ್ಯೆಯ ಭೂಕಂಪನಗಳು ಮತ್ತು ಜ್ವಾಲಾಮುಖಿಗಳು ಉಂಟಾಗುತ್ತವೆ.












Click it and Unblock the Notifications