US Plane Crash: ವಾಷಿಂಗ್ಟನ್ ವಿಮಾನ ಅಪಘಾತ; ಎಲ್ಲಾ 67 ಮಂದಿ ಸಾವು?
ವಾಷಿಂಗ್ಟನ್ ಡಿಸಿ ಸಮೀಪ ನಡೆದಿದ್ದ ಅಮೆರಿಕನ್ ಏರ್ ಲೈನ್ಸ್ ವಿಮಾನ ಮತ್ತು ಸೇನಾ ಹೆಲಿಕಾಪ್ಟರ್ ನಡುವಿನ ಅಪಘಾತದಲ್ಲಿ ಎಲ್ಲಾ 67 ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಘಟನೆಯಲ್ಲಿ ಯಾರೂ ಬದುಕುಳಿದಿರುವ ಸಾಧ್ಯತೆ ಇಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.
ಅಪಘಾತದ ಬಳಿಕ ಎರಡೂ ವಿಮಾನಗಳು ಪೊಟೊಮ್ಯಾಕ್ ನದಿಗೆ ಬಿದ್ದಿದ್ದು ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಈವರೆಗೆ 28 ಶವಗಳನ್ನು ಹೊರತೆಗೆಯಲಾಗಿದ್ದು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ಅಮರಿಕದ ಇತಿಹಾಸದ ಮಹಾ ದುರಂತಗಳಲ್ಲಿ ಇದೂ ಕೂಡ ಒಂದು ಎಂದು ಪರಿಗಣಿಸಲಾಗಿದೆ. ರೊನಾಲ್ಡ್ ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಅಮೆರಿಕನ್ ಏರ್ ಲೈನ್ಸ್‌ಗೆ ಸೇರಿದ ವಿಮಾನಕ್ಕೆ ಯುಎಸ್ ಸೇನೆಯ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದಿದ್ದು ದುರಂತ ಸಂಭವಿಸಿದೆ. ಹೆಲಿಕಾಪ್ಟರ್‌ನಲ್ಲಿ ಮೂರು ಜನ ಸೇನಾ ಸಿಬ್ಬಂದಿ ಇದ್ದರು ಎಂದು ವರದಿಯಾಗಿದೆ.
ಯಾರೂ ಬದುಕುಳಿದಿರು ಸಾಧ್ಯತೆ ಇಲ್ಲ
ರಕ್ಷಣಾ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿರುವ ವಾಷಿಂಗ್ಟನ್‌ನ ಅಗ್ನಿಶಾಮಕ ಮುಖ್ಯಸ್ಥ ಜಾನ್ ಡೊನ್ನೆಲ್ಲಿ, "ರಕ್ಷಣಾ ಕಾರ್ಯಾಚರಣೆಯಿಂದ ದೇಹಗಳನ್ನು ಹೊರತೆಗೆಯುವ ಹಂತಕ್ಕೆ ಬಂದಿದ್ದೇವೆ, ದುರ್ಘಟನೆಯಲ್ಲಿ ಯಾರೂ ಬದುಕುಳಿದಿಲ್ಲ ಎಂದು ನಾವು ನಂಬಿದ್ದೇವೆ" ಎಂದು ಅವರು ಹೇಳಿದ್ದಾರೆ.
ಪ್ರಯಾಣಿಕ ವಿಮಾನವು ಮೂರು ಭಾಗಗಳಾಗಿದೆ, ಹೆಲಿಕಾಪ್ಟರ್ ಅವಶೇಷಗಳು ಸಹ ಕಂಡುಬಂದಿವೆ. ಈವರೆಗೆ 28 ಮೃತದೇಹಗಳನ್ನು ಹೊರ ತೆಗೆಯಲಾಗಿದ್ದು ಉಳಿದ ಶವಗಳನ್ನು ಹೊರತೆಗೆಯುವ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಅಪಘಾತಕ್ಕೆ ಕಾರಣವೇನು?
ವಿಮಾನ ಅಪಘಾತಕ್ಕೆ ಕಾರಣವೇನು ಎಂದು ಅಧಿಕಾರಿಗಳು ಇನ್ನೂ ಖಚಿತಪಡಿಸಿಲ್ಲ, ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (NTSB) ಮತ್ತು ಫೆಡರಲ್ ವಿಮಾನಯಾನ ಆಡಳಿತ (FAA) ದ ತನಿಖಾಧಿಕಾರಿಗಳು ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ್ದು, ಘಟನೆಗೆ ಕಾರಣವೇನು ಎಂದು ತಿಳಿಯಲು ತನಿಖೆ ಮಾಡುತ್ತಿದ್ದಾರೆ.
ಕಾನ್ಸಾಸ್‌ನ ವಿಚಿಟಾದಿಂದ ಹೊರಟಿದ್ದ ಪ್ರಯಾಣಿಕ ಜೆಟ್ ಮತ್ತು ತರಬೇತಿ ವ್ಯಾಯಾಮದಲ್ಲಿ ತೊಡಗಿದ್ದ ಮಿಲಿಟರಿ ಹೆಲಿಕಾಪ್ಟರ್ ರಾತ್ರಿ 9 ಗಂಟೆಯ ವೇಳೆಗೆ ಡಿಕ್ಕಿ ಹೊಡೆದಿದೆ ಎಂದು ಫೆಡರಲ್ ವಿಮಾನಯಾನ ಆಡಳಿತ ಮಾಹಿತಿ ಕೊಟ್ಟಿದೆ. ಶ್ವೇತಭವನದಿಂದ ಕೇವಲ ಮೂರು ಮೈಲಿ ದೂರದಲ್ಲಿ ಈ ಅಪಘಾತ ಸಂಭವಿಸಿದೆ. ಘಟನೆ ಬಗ್ಗೆ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯೆ ನೀಡಿದ್ದು, ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.












Click it and Unblock the Notifications