ಉಕ್ರೇನ್ ತೊರೆಯಲು 26 ಕಿ.ಮೀ ನಡೆದ ಭಾರತೀಯ ವಿದ್ಯಾರ್ಥಿಗಳು!
ಕೀವ್, ಫೆಬ್ರವರಿ 26: ರಷ್ಯಾದ ಆಕ್ರಮಣಕಾರಿ ನಿಲುವಿನಿಂದ ಉಕ್ರೇನ್ ನೆಲವು ಅಕ್ಷರಶಃ ರಣಾಂಗಣವಾಗಿದೆ. ಯಾವ ಕ್ಷಣದಲ್ಲಿ ಯಾವ ಕಡೆಯಿಂದ ಎಂಥಾ ಕ್ಷಿಪಣಿ ಬಂದು ಹೊಡೆಯುತ್ತದೆಯೇ ಎಂಬ ಭಯದಲ್ಲಿ ಜನರು ಜೀವ ಕೈಯಲ್ಲಿ ಹಿಡಿದು ಕುಳಿತಿದ್ದಾರೆ.
ಉಕ್ರೇನ್ ಪ್ರಜೆಗಳು ರಷ್ಯಾದ ವಿರುದ್ಧ ತೊಡೆತಟ್ಟಿ ನಿಲ್ಲುವುದಕ್ಕೆ ಒಂದು ಕಡೆಯಲ್ಲಿ ಅಣಿಯಾಗುತ್ತಿದ್ದಾರೆ. ಈ ಹಂತದಲ್ಲಿ ವಿದೇಶಗಳಿಂದ ಉಕ್ರೇನ್ ನೆಲಕ್ಕೆ ಶಿಕ್ಷಣ, ಉದ್ಯೋಗಕ್ಕಾಗಿ ಹೋದವರ ಸ್ಥಿತಿ ಡೋಲಾಯಮಾನವಾಗಿದೆ. ಅಲ್ಲಿ ಇರಲಾಗದೇ ಸ್ವದೇಶಕ್ಕೆ ಮರಳಲಾಗದೇ ಪರಿತಪಿಸುತ್ತಿರುವವವರ ಸಂಖ್ಯೆಯೂ ಹೆಚ್ಚಾಗಿದೆ. ಭಾರತೀಯ ಪ್ರಜೆಗಳನ್ನು ವಾಪಸ್ ಕರೆ ತರುವ ನಿಟ್ಟಿನಲ್ಲಿ ವಿದೇಶಾಂಗ ಸಚಿವಾಲಯ ಎಲ್ಲ ರೀತಿ ಕ್ರಮಗಳನ್ನು ತೆಗೆದುಕೊಂಡಿದೆ. ಸಹಾಯವಾಣಿ ನೀಡುವುದರ ಜೊತೆ ಉಕ್ರೇನ್ ರಾಯಭಾರಿ ಕಚೇರಿಯೊಂದಿಗೆ ನಿರಂತರ ಸಂಪರ್ಕವನ್ನು ಸಾಧಿಸಲಾಗುತ್ತಿದೆ.
ಭಾರತೀಯ ಸ್ಥಳಾಂತರ ಪ್ರಕ್ರಿಯೆ ನಡುವೆ ಒಂದು ಒಂದು ತಪ್ಪು ಸಂದೇಶದಿಂದ ಉಕ್ರೇನ್ ತೊರೆಯಲು ಅಣಿಯಾದ ವಿದ್ಯಾರ್ಥಿಗಳು 8 ಕಿಲೋ ಮೀಟರ್ ನಡೆದುಕೊಂಡು ಹೋಗಿರುವ ಘಟನೆ ನಡೆದಿದೆ. ಮೈಕೊರೆವ ಚಳಿಯಲ್ಲಿ ನಡೆದ ವಿದ್ಯಾರ್ಥಿಗಳ ಪ್ರಯತ್ನ ವ್ಯರ್ಥವಾಗಿದೆ. ಉಕ್ರೇನ್ ನೆಲದಲ್ಲಿ ಎದುರಿಸಿದ ಸಮಸ್ಯೆಯ ಕುರಿತು ರೇಡಿಯೋ ಜಾಕಿ ಪಟ್ ಪಟಾಕಿ ಶೃತಿಯವರಿಗೆ ಭಾರತೀಯ ವಿದ್ಯಾರ್ಥಿಯೊಬ್ಬರು ಸಂದೇಶವೊಂದನ್ನು ರವಾನಿಸಿದ್ದಾರೆ. ಈ ಸಂದೇಶದಲ್ಲಿ ವಿದ್ಯಾರ್ಥಿಗಳು ಎದುರಿಸಿದ ಸವಾಲಿನ ಚಿತ್ರಣವನ್ನು ವಿವರವಾಗಿ ಹೇಳಲಾಗಿದೆ.
ಭಾರತೀಯ ವಿದ್ಯಾರ್ಥಿಯ ಸಂದೇಶ. ಉಕ್ರೇನ್ ತೊರೆದು ಭಾರತ ಸೇರಲು ನಡೆಸುತ್ತಿರುವ ಪ್ರಯತ್ನ. ಸ್ವದೇಶಕ್ಕೆ ಹಿಂತಿರುಗಲು ಕಾತರಿಸುತ್ತಿರುವ ಭಾರತೀಯ ವಿದ್ಯಾರ್ಥಿಗಳ ಮನಸ್ಥಿತಿ ಹಾಗೂ ಪರಿಸ್ಥಿತಿಯ ಕುರಿತು ಒಂದು ವಿಸ್ತೃತ ವರದಿ ಇಲ್ಲಿದೆ ಓದಿ.

ಗಡಿ ದಾಟುವುದಕ್ಕೆ ವಾಹನ ಉಳ್ಳವರಿಗೆ ಮಾತ್ರ ಅವಕಾಶ
ಎಲ್ವಿವ್ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿ ಹಾಸ್ಟೆಲ್‌ನಿಂದ ಸುಮಾರು 200 ವಿದ್ಯಾರ್ಥಿಗಳು ಸ್ಥಳಾಂತರಿಸುವ ಬಗ್ಗೆ ತಿಳಿದು ಬೆಳಗ್ಗೆ 11 ಗಂಟೆ ಸುಮಾರಿಗೆ ವಿಶ್ವವಿದ್ಯಾಲಯದಿಂದ ಹೊರಟರು. ಈ ಹಂತದಲ್ಲಿ ನಾವು ಮೆಸೇಜ್ ಮತ್ತು ಫೋನ್ ಕರೆಗಳನ್ನು ಸ್ವೀಕರಿಸಲು ಅಥವಾ ಪ್ರತಿಕ್ರಿಯಿಸಲು ಸಾಧ್ಯವಾಗುತ್ತಿರಲಿಲ್ಲ. ಮಾರ್ಗಮಧ್ಯದಲ್ಲಿ ಟ್ರಾಫಿಕ್ ಹೆಚ್ಚಾಗಿದ್ದು, ನಡೆದುಕೊಂಡು ಹೋಗುವುದೇ ಉತ್ತಮ ಎಂದು ನಮ್ಮನ್ನು ಗಡಿಮಾರ್ಗದಲ್ಲಿಯೇ ಇಳಿಸಲಾಯಿತು. ಅಲ್ಲಿಂದ ಎಂಟು ಕಿಲೋಮೀಟರ್ ಮುಂದೆ ನಡೆದುಕೊಂಡು ಹೋದ ಬಳಿಕ ಅಲ್ಲಿ ವಾಹನಗಳನ್ನು ಹೊಂದಿದವರಿಗೆ ಮಾತ್ರ ಗಡಿ ದಾಟುವುದಕ್ಕೆ ಅವಕಾಶ ನೀಡಲಾಗುತ್ತದೆ ಎಂಬ ಕಹಿಸತ್ಯದ ಅರಿವಾಯಿತು ಎಂದು ವಿದ್ಯಾರ್ಥಿಯು ಕಳುಹಿಸಿದ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.

15 ಕಿ.ಮೀ ದೂರ ನಡೆದುಕೊಂಡ ಹೋದರೆ ಬಸ್ ವ್ಯವಸ್ಥೆ
ಗಡಿ ದಾಟುವುದಕ್ಕೆ ವಾಹನಗಳು ಅತ್ಯಗತ್ಯ ಎಂಬ ಬಗ್ಗೆ ಮಾಹಿತಿ ಇಲ್ಲದಿರುವುದು ನಮಗೆ ತೀವ್ರ ತೊಂದರೆಯನ್ನುಂಟು ಮಾಡಿತು. ಒಂದು ಒಂದು ತಪ್ಪು ಮಾಹಿತಿಯಿಂದ ತೀವ್ರ ಸಂಕಷ್ಟ ಎದುರಿಸಬೇಕಾಯಿತು. ಅಲ್ಲಿ ಎಷ್ಟು ಪರಿಪರಿಯಾಗಿ ಬೇಡಿಕೊಂಡರೂ, ಅಂತಿಮವಾಗಿ ತಮ್ಮನ್ನು ಅಲ್ಲಿಯೇ ಕೈಬಿಡಲಾಯಿತು. ಸುಮಾರು 80 ವಿದ್ಯಾರ್ಥಿಗಳು ಅಲ್ಲಿ ಜಮಾಯಿಸಿದ್ದು, ಬಸ್ಸುಗಳು ತಮಗಾಗಿ ಕಾಯುತ್ತಿರುವ ಬಗ್ಗೆ ಹೇಳಿದರು. ಆದರೆ ಬಸ್ ವ್ಯವಸ್ಥೆ ಆಗಿರುವ ಪ್ರದೇಶಕ್ಕೆ ತಲುಪಲು ನಾವು ಇನ್ನೂ 15 ಕಿಲೋ ಮೀಟರ್ ಹಿಂದಕ್ಕೆ ತೆರಳಬೇಕಾಗಿತ್ತು. ಅಂತಿಮವಾಗಿ ನಡೆದುಕೊಂಡು ಹೋಗಿಯೇ ಬಸ್ ವ್ಯವಸ್ಥೆಗಾಗಿ ನಿಗದಿಪಡಿಸಿದ ಸ್ಥಳವನ್ನು ತಲುಪಿದೆವು ಎಂದು ವಿದ್ಯಾರ್ಥಿ ಬರೆದಿದ್ದಾರೆ.

2 ಗಂಟೆ ಮೈಕೊರೆವ ಚಳಿಯಲ್ಲೇ ಪರದಾಟ
ಬಸ್ ವ್ಯವಸ್ಥೆ ಕಲ್ಪಿಸಿದ ಸ್ಥಳವನ್ನು ತಲುಪಿದ ತಕ್ಷಣಕ್ಕೆ ಎಲ್ಲವೂ ಸಿದ್ಧವಾಗಿರಲಿಲ್ಲ. ಅಲ್ಲಿಯೂ ಬಸ್ ವ್ಯವಸ್ಥೆ ಎಲ್ಲಿದೆ ಹೇಗಿದೆ ಎಂಬ ಬಗ್ಗೆ ಮಾಹಿತಿಗಾಗಿ ಎರಡು ಗಂಟೆ ಕಾದು ಕಾದು ಸುಸ್ತಾಯಿತು. ಸಾಮಾನ್ಯವಾಗಿ ಫೆಬ್ರವರಿ ತಿಂಗಳಿನಲ್ಲಿ ಉಕ್ರೇನ್ ತುಂಬಾ ಚಳಿಯಿಂದ ಆವರಿಸಿರುತ್ತದೆ. ಆದ್ದರಿಂದ ನಾವು ಚಾಕೊಲೇಟ್ ಅಥವಾ ಚಿಪ್‌ಗಳನ್ನು ಹೊರತುಪಡಿಸಿ ಏನನ್ನೂ ಸೇವಿಸಿರಲಿಲ್ಲ. ನಡುಬೀದಿಯಲ್ಲೇ ಬಸ್ಸಿಗಾಗಿ ಕಾದು ಕುಳಿತ ನಾವೆಲ್ಲರೂ ಅದಾಗಲೇ ತುಂಬಾ ದಣಿದಿದ್ದೆವು. ತೀವ್ರ ಆಯಾಸದಿಂದ ತಂಪಾದ ರಸ್ತೆಗಳಲ್ಲಿ ಮಲಗಿದ್ದೇವೆ. ಕೊನೆಗೂ ಬಸ್ಸುಗಳು ನಾವಿದ್ದ ಸ್ಥಳಕ್ಕೆ ಬಂದವು. ಅಂತಿಮವಾಗಿ ನಮ್ಮನ್ನು ಎಲ್ವಿವ್‌ನಲ್ಲಿರುವ ನಮ್ಮ ಹಾಸ್ಟೆಲ್‌ಗಳಿಗೆ ತಲುಪಿಸಲಾಯಿತು ಎಂದು ವಿದ್ಯಾರ್ಥಿಯ ಮೆಸೇಜ್ ನಲ್ಲಿ ಹೇಳಲಾಗಿದೆ.

ಉಕ್ರೇನ್ ಉದ್ವಿಗ್ನಗೊಂಡಿದೆ ಎಂದ ವಿದ್ಯಾರ್ಥಿ
ವಿದ್ಯಾರ್ಥಿಗಳು ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಈ ಹಂತದಲ್ಲಿ ನಮ್ಮ ವಿಚಾರದಲ್ಲಿ ರಾಯಭಾರ ಕಚೇರಿಯು ಯಾವುದೇ ರೀತಿ ಸಹಾಯ ಮಾಡಲಿಲ್ಲ. ಈ ನಿರ್ಧಾರಗಳನ್ನು ಅಷ್ಟು ವೇಗವಾಗಿ ಮಾಡಲಾಗುವುದಿಲ್ಲ ಎಂಬುದನ್ನು ನಾನು ಅರ್ಥ ಮಾಡಿಕೊಳ್ಳುತ್ತೇನೆ. ಆದರೆ ಪ್ರತಿಯೊಬ್ಬರೂ ತಮ್ಮ ಬೆಚ್ಚಗಿನ ಮನೆಗಳಲ್ಲಿ ಆರಾಮವಾಗಿ ಕುಳಿತುಕೊಳ್ಳುತ್ತಾರೆ, ನಾವು ಏನನ್ನು ಅನುಭವಿಸಿದ್ದೇವೆ ಎಂಬುದನ್ನು ಅಂಥವರು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ.
"ವಿಶ್ವವಿದ್ಯಾನಿಲಯವು ಮಾಡಿದ ಏಕೈಕ ಸಹಾಯವೆಂದರೆ ನಮ್ಮ ಸಾರಿಗೆಗೆ ಬಸ್ಸುಗಳನ್ನು ಒದಗಿಸುವುದು, ಇದಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಆದರೆ ನಾವೆಲ್ಲರೂ ಉಕ್ರೇನ್‌ಗೆ ಹಿಂತಿರುಗಲು ತುಂಬಾ ಆತಂಕಗೊಂಡಿದ್ದೇವೆ. ಏಕೆಂದರೆ ಉಕ್ರೇನ್ ಇದೀಗ ಸುರಕ್ಷಿತವಾಗಿಲ್ಲ. ಇಂದು ನಾವು ಮಾಡಿದ ಎಲ್ಲಾ ಪ್ರಯತ್ನಗಳು ನಿಷ್ಪ್ರಯೋಜಕವಾಗಿವೆ. ನಾವು ಮಾನಸಿಕವಾಗಿ ಮತ್ತು ದೈಹಿಕವಾಗಿ ದಣಿದಿದ್ದೇವೆ," ಎಂದು ವಿದ್ಯಾರ್ಥಿಯ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.












Click it and Unblock the Notifications