ಉದ್ಯೋಗಿಗಳಿಗೆ ಟಾರ್ಗೆಟ್ ಇಲ್ಲ, ಬಾಸ್‌ನಿಂದ ಪ್ರೆಶರ್ ಇಲ್ಲ: ಝೆರೋದಾ ಕಂಪನಿಯ ಯಶಸ್ಸಿನ ಗುಟ್ಟು ಬಿಚ್ಚಿಟ್ಟ ನಿತಿನ್ ಕಾಮತ್

ಕಾರ್ಪೊರೇಟ್ ಜಗತ್ತು ಎಂದರೆ ಅಲ್ಲಿ ವರ್ಕ್ ಟಾರ್ಗೆಟ್, ವಿಪರೀತ ಕೆಲಸದ ಒತ್ತಡ ಮತ್ತು ನಿದ್ದೆಯಿಲ್ಲದ ರಾತ್ರಿಗಳೇ ನೆನಪಾಗುವುದು ಸಹಜ. ಆದರೆ, ಭಾರತದ ಅತಿದೊಡ್ಡ ಸ್ಟಾಕ್ ಬ್ರೋಕಿಂಗ್ ಸಂಸ್ಥೆಯಾಗಿ ಬೆಳೆದಿರುವ 'ಝೆರೋದಾ' ಯಶಸ್ಸಿನ ಕಥೆ ಮಾತ್ರ ಸಂಪೂರ್ಣ ಭಿನ್ನವಾಗಿದೆ. ಇತ್ತೀಚೆಗೆ ಝೆರೋದಾ ಸಹ-ಸಂಸ್ಥಾಪಕ ಹಾಗೂ ಸಿಇಒ ನಿತಿನ್ ಕಾಮತ್ ಅವರು ಎಕ್ಸ್ ಖಾತೆಯಲ್ಲಿ ತಮ್ಮ ಸಂಸ್ಥೆಯ ಯಶಸ್ಸಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

ಕೇವಲ ವ್ಯವಹಾರ ಮಾದರಿಯಿಂದ ಮಾತ್ರವಲ್ಲ, ಬದಲಾಗಿ ಝೆರೋದಾದಲ್ಲಿನ ಉದ್ಯೋಗ ಸಂಸ್ಕೃತಿ ಹೇಗೆ ಒಂದು ದೊಡ್ಡ ಕಂಪನಿಯನ್ನು ಕಟ್ಟಲು ಸಹಾಯ ಮಾಡಿದೆ ಎಂಬುದನ್ನು ಅವರು ವಿವರಿಸಿದ್ದಾರೆ.

Zerodha CEO Nithin Kamath

ಅತ್ಯುತ್ತಮ ಝೆರೋದಾ ಉದ್ಯೋಗ ಸಂಸ್ಕೃತಿ

ಯಾವುದೇ ಕಂಪನಿಯಲ್ಲಾದರೂ ಹೊಸದಾಗಿ ಸೇರಿದ ಉದ್ಯೋಗಿ ಆ ವ್ಯವಸ್ಥೆಯನ್ನು ಅರ್ಥಮಾಡಿಕೊಂಡು, ವ್ಯವಹಾರಕ್ಕೆ ಅರ್ಥಪೂರ್ಣ ಕೊಡುಗೆ ನೀಡಲು ಕನಿಷ್ಠ ಒಂದೂವರೆಯಿಂದ ಎರಡು ವರ್ಷಗಳ ಸಮಯ ತೆಗೆದುಕೊಳ್ಳುತ್ತಾನೆ. ಆ ಹಂತಕ್ಕೆ ತಲುಪಿದ ತಕ್ಷಣ ಉದ್ಯೋಗಿ ಕೆಲಸ ಬಿಟ್ಟರೆ, ಸಂಸ್ಥೆಗೆ ದೊಡ್ಡ ನಷ್ಟವಾಗುತ್ತದೆ. ಹೀಗಾಗಿ ಉದ್ಯೋಗಿಗಳನ್ನು ಉಳಿಸಿಕೊಳ್ಳುವುದು ಅತ್ಯಂತ ಮುಖ್ಯ. ಕೆಲಸ ಮಾಡಲು ಉತ್ತಮವಾದ ವಾತಾವರಣವನ್ನು ನಿರ್ಮಿಸುವುದು ಕೇವಲ ಉದ್ಯೋಗಿಗಳಿಗೆ ನೀಡುವ ಸೌಲಭ್ಯವಲ್ಲ, ಅದೊಂದು ಅತ್ಯುತ್ತಮ ವ್ಯಾಪಾರ ತಂತ್ರ ಎಂದು ಕಾಮತ್ ಅಭಿಪ್ರಾಯಪಟ್ಟಿದ್ದಾರೆ. ದೀರ್ಘಕಾಲದವರೆಗೆ ಉದ್ಯೋಗಿಗಳನ್ನು ಬೆಂಬಲಿಸುವುದು ವ್ಯವಹಾರಕ್ಕೆ ಲಾಭ ತಂದುಕೊಡುತ್ತದೆ ಎನ್ನುವುದು ಅವರ ನಿಲುವು.

ಟಾರ್ಗೆಟ್ ಇಲ್ಲ, ಒತ್ತಡವಿಲ್ಲ

ಸಾಮಾನ್ಯವಾಗಿ ಬಹುತೇಕ ಕಂಪನಿಗಳಲ್ಲಿ ಉದ್ಯೋಗಿಗಳಿಗೆ ಟಾರ್ಗೆಟ್‌ಗಳನ್ನು ನೀಡಿ, ಅದನ್ನು ತಲುಪಲು ತೀವ್ರ ಒತ್ತಡ ಹೇರಲಾಗುತ್ತದೆ. ಆದರೆ, ಝೆರೋದಾದಲ್ಲಿ ಯಾವುದೇ ಆದಾಯದ ಗುರಿಗಳಿಲ್ಲ. 'ಯಾರ ತಲೆಗೂ ಬಂದೂಕು ಇಟ್ಟು ಟಾರ್ಗೆಟ್ ತಲುಪುವಂತೆ ನಾವು ಬೆದರಿಸುವುದಿಲ್ಲ' ಎಂದು ಕಾಮತ್ ಸ್ಪಷ್ಟಪಡಿಸಿದ್ದಾರೆ.

ಉದ್ಯೋಗಿಗಳಲ್ಲಿ ಪೈಪೋಟಿ ಹುಟ್ಟುಹಾಕುವ ಇನ್ಸೆಂಟಿವ್ ವ್ಯವಸ್ಥೆಯಿಂದ ಸಂಸ್ಥೆ ಮೊದಲಿನಿಂದಲೂ ದೂರವುಳಿದಿದೆ. ಇದೇ ನೀತಿಯನ್ನು ಗ್ರಾಹಕರಿಗೂ ಅನ್ವಯಿಸಲಾಗಿದ್ದು, ಆದಾಯ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಹೆಚ್ಚು ಟ್ರೇಡಿಂಗ್ ಮಾಡುವಂತೆ ಗ್ರಾಹಕರ ಮೇಲೆ ಎಂದಿಗೂ ಒತ್ತಡ ಹೇರುವುದಿಲ್ಲ.

ನಾಯಕತ್ವದ ಬದಲಾವಣೆ

ನಿತಿನ್ ಕಾಮತ್ ಅವರು 2019ರವರೆಗೆ ತಡರಾತ್ರಿಯವರೆಗೆ ಕಚೇರಿ ಕೆಲಸ ಮಾಡುತ್ತಿದ್ದರು ಮತ್ತು ರಜಾ ದಿನಗಳಲ್ಲೂ ಇಮೇಲ್‌ಗಳಿಗೆ ಪ್ರತಿಕ್ರಿಯಿಸುತ್ತಿದ್ದರು. ಆದರೆ, ನಾಯಕನ ಈ ವರ್ತನೆ ಉಳಿದ ಉದ್ಯೋಗಿಗಳ ಮೇಲೂ ಇಂತಹದ್ದೇ ನಿರೀಕ್ಷೆಗಳನ್ನು ಹೇರುತ್ತದೆ ಎಂಬುದನ್ನು ಅರಿತ ಅವರು, ತಮ್ಮ ನಾಯಕತ್ವದ ಶೈಲಿಯನ್ನು ಬದಲಾಯಿಸಿಕೊಂಡರು. ಉದ್ಯೋಗಿಗಳ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಮತ್ತು ವೃತ್ತಿ ಹಾಗೂ ವೈಯಕ್ತಿಕ ಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳಲು ಅವರು ಒತ್ತು ನೀಡಿದರು.

ಮತ್ತೊಂದು ಆಸಕ್ತಿದಾಯಕ ವಿಚಾರವನ್ನು ಹಂಚಿಕೊಂಡಿರುವ ಕಾಮತ್, ಒಮ್ಮೆ ಝೆರೋದಾದ ಚೀಫ್ ಟೆಕ್ನಾಲಜಿ ಆಫೀಸರ್ ಕೈಲಾಶ್ ನಾಧ್ ಅವರು, "ನೀವು ಸದಾ ಹೊಸ ಹೊಸ ಐಡಿಯಾಗಳನ್ನು ತರುವ ಮೂಲಕ ತಾಂತ್ರಿಕ ತಂಡದ ಏಕಾಗ್ರತೆಯನ್ನು ಭಂಗಗೊಳಿಸುತ್ತಿದ್ದೀರಿ" ಎಂದು ನೇರವಾಗಿ ಹೇಳಿದ್ದರಂತೆ. ಈ ಪ್ರಾಮಾಣಿಕ ಪ್ರತಿಕ್ರಿಯೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸಿದ ಕಾಮತ್, ಮೈಕ್ರೋಮ್ಯಾನೇಜ್‌ಮೆಂಟ್ ಮಾಡುವುದನ್ನು ನಿಲ್ಲಿಸಿ, ಉದ್ಯೋಗಿಗಳಿಗೆ ಹೆಚ್ಚಿನ ಜವಾಬ್ದಾರಿ ಮತ್ತು ಸ್ವಾತಂತ್ರ್ಯವನ್ನು ನೀಡಿದರು.

ಸಣ್ಣ ತಂಡ, ದೊಡ್ಡ ಸಾಧನೆ

ಝೆರೋದಾ, ಭಾರತದ ಅತ್ಯಂತ ಲಾಭದಾಯಕ ಫಿನ್‌ಟೆಕ್ ಕಂಪನಿಗಳಲ್ಲಿ ಒಂದಾಗಿದ್ದರೂ, ಉದ್ದೇಶಪೂರ್ವಕವಾಗಿಯೇ ಸಣ್ಣ ತಂಡವನ್ನು ಉಳಿಸಿಕೊಂಡಿದೆ. ಬೇಕಾಬಿಟ್ಟಿ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಬದಲು, ಸಣ್ಣ ಹಾಗೂ ದಕ್ಷ ತಂಡಗಳನ್ನು ರಚಿಸುವತ್ತ ಗಮನಹರಿಸಿದೆ.

"ಸಣ್ಣದಾಗಿ ಉಳಿಯುವುದು ನಮ್ಮ ಯಶಸ್ಸಿನ ಪ್ರಮುಖ ಅಂಶವಾಗಿದೆ" ಎನ್ನುವ ಕಾಮತ್, ಎಲ್ಲವನ್ನೂ ನಾವೇ ಕಟ್ಟುತ್ತೇವೆ ಎನ್ನುವ ಬದಲು ಉತ್ತಮ ಪಾಲುದಾರರೊಂದಿಗೆ ಕೆಲಸ ಮಾಡುವುದು ಮುಖ್ಯ ಎಂದಿದ್ದಾರೆ. ಉದ್ಯೋಗಿಗಳಲ್ಲಿ ವಿಶ್ವಾಸವಿರಿಸಿದ್ದೇ ಸಂಸ್ಥೆಯ ಬೆಳವಣಿಗೆಗೆ ಕಾರಣ ಎನ್ನುವ ಕಾಮತ್ ಅವರ ಈ ಪಾರದರ್ಶಕತೆಗೆ ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+