'ಯಮರಾಜ' ನಿಮಗಾಗಿ ಕಾಯುತ್ತಿದ್ದಾನೆ: ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದು ಯಾರಿಗೆ?
ನವದೆಹಲಿ, ಸೆಪ್ಟೆಂಬರ್ 18: ಎನ್‌ಕೌಂಟರ್‌ಗಳಿಗೆ ಹೆಸರುವಾಸಿಯಾಗಿರುವ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ಕಠಿಣ ಸಂದೇಶವೊಂದನ್ನು ರವಾನಿಸಿದ್ದಾರೆ. ಮಹಿಳೆಯರ ಮೇಲೆ ದೌರ್ಜನ್ಯ ಎಸಗುವ ಅಪರಾಧಿಗಳಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಠಿಣ ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವವರಿಗಾಗಿ ಯಮರಾಜ ಕಾಯುತ್ತಾನೆ ಎಂದು ಯೋಗಿ ಹೇಳಿದ್ದಾರೆ.
ಯುಪಿಯ ಗೋರಖ್‌ಪುರ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 'ರಾಜ್ಯದಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವಂತಹ ಅಪರಾಧವನ್ನು ಯಾರಾದರೂ ಮಾಡಿದರೆ ಅವರಿಗಾಗಿ ಯಮರಾಜ ಕಾಯುತ್ತಾನೆ' ಎಂದು ಆದಿತ್ಯನಾಥ್ ತಿಳಿಸಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಬಲವಾದ ಕಾನೂನು ಚೌಕಟ್ಟಿನ ಅಗತ್ಯವಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಕಾನೂನನ್ನು ದುರ್ಬಳಕೆ ಮಾಡಿಕೊಂಡು ವ್ಯವಸ್ಥೆಯನ್ನು ಹಾಳು ಮಾಡಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಅಂಬೇಡ್ಕರ್ ನಗರದ ಇತ್ತೀಚಿನ ಘಟನೆಯನ್ನು ಉಲ್ಲೇಖಿಸಿ ಅವರು ಈ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ದ್ವಿಚಕ್ರವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ದುಪಟ್ಟಾ ಎಳೆದು ಕಿರುಕುಳ ನೀಡಲು ಯತ್ನಿಸಿದ್ದರಿಂದ ವಿದ್ಯಾರ್ಥಿನಿಯೊಬ್ಬಳು ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ಅಂಬೇಡ್ಕರ್ ನಗರದಲ್ಲಿ ನಡೆದಿದೆ. ದುಪಟ್ಟಾ ಎಳೆದಿದ್ದರಿಂದ ಆಕೆ ಸೈಕಲ್‌ನಿಂದ ಕೆಳಗೆ ಬಿದ್ದಿದ್ದಾಳೆ. ನಂತರ ಆಕೆಗೆ ಮತ್ತೊಬ್ಬ ಬೈಕ್ ಸವಾರ ಡಿಕ್ಕಿ ಹೊಡೆದಿದ್ದಾನೆ. ಆಕೆ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾಳೆ.
ಈ ಘಟನೆ ಶುಕ್ರವಾರ ನಡೆದಿದ್ದು, ಶನಿವಾರ ರಾತ್ರಿ ವೇಳೆಗೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಭಾನುವಾರ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ಇಬ್ಬರು ಆರೋಪಿಗಳಿಗೆ ಗುಂಡೇಟಿನ ಗಾಯಗಳಾಗಿವೆ ಎಂದು ವರದಿಯಾಗಿದೆ.
ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವುದು ಕಂಡುಬಂದಿದೆ. 11 ನೇ ತರಗತಿಯ ವಿದ್ಯಾರ್ಥಿನಿಯು ತನ್ನ ಸೈಕಲ್‌ನಲ್ಲಿ ಇನ್ನೊಬ್ಬ ವಿದ್ಯಾರ್ಥಿನಿಯ ಜೊತೆಯಲ್ಲಿ ಸವಾರಿ ಮಾಡುತ್ತಿರುವುದು ಕಂಡುಬಂದಿದೆ. ಹಿಂದಿನಿಂದ ವೇಗವಾಗಿ ಬಂದ ಬೈಕ್ ಸವಾರರು ಆಕೆಯ ದುಪಟ್ಟಾವನ್ನು ಬಲವಂತವಾಗಿ ಎಳೆದಿರುವುದು ವಿಡಿಯೊದಲ್ಲಿ ಕಂಡುಬಂದಿದೆ.
ಈ ಕೃತ್ಯದಿಂದ ಬಾಲಕಿ ಸಮತೋಲನ ಕಳೆದುಕೊಂಡು ನೆಲಕ್ಕೆ ಬಿದ್ದಿದ್ದಾಳೆ. ದುರಂತವೆಂದರೆ ಆಕೆಗೆ ಹಿಂಬದಿಯಿಂದ ಬಂದ ಮತ್ತೊಬ್ಬ ವಾಹನ ಚಾಲಕ ಡಿಕ್ಕಿ ಹೊಡೆದಿದ್ದಾನೆ. ಆಗ ಆಕೆ ಪ್ರಾಣ ಬಿಟ್ಟಿದ್ದಾಳೆ.
ಘಟನೆಯಲ್ಲಿ ಬಂಧಿತರಾಗಿರುವ ವ್ಯಕ್ತಿಗಳನ್ನು ಸೆಹಬಾಜ್ ಮತ್ತು ಆತನ ಸಹೋದರ ಅರ್ಬಾಜ್ ಎಂದು ಗುರುತಿಸಲಾಗಿದೆ.












Click it and Unblock the Notifications