ಪಾಕಿಸ್ತಾನಿ F-16 ಯುದ್ಧ ವಿಮಾನ ಅವಶೇಷ ಪಿಒಕೆಯಲ್ಲಿ ಪತ್ತೆ
ಇಸ್ಲಾಮಾಬಾದ್, ಫೆಬ್ರವರಿ 28: ಭಾರತದ ವಾಯುಪಡೆಯು ಬುಧವಾರ ಹೊಡೆದುರುಳಿಸಿದ ಪಾಕಿಸ್ತಾನಿ F-16 ಯುದ್ಧ ವಿಮಾನದ ಅವಶೇಷಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಫೋಟೋಗಳು ಹರಿದಾಡುತ್ತಿವೆ.
ಭಾರತೀಯ ವಾಯು ಸೇನೆ ಮೂಲಗಳ ಪ್ರಕಾರ, F-16 ಯುದ್ಧ ವಿಮಾನದ ಲೋಹದ ತುಂಡುಗಳ ಭಾಗಗಳು ಕಂಡುಬಂದಿವೆ ಎಂದು ತಿಳಿಸಿದೆ. ನಲವತ್ತೆಂಟು ವರ್ಷಗಳಲ್ಲೇ ಮೊದಲ ಬಾರಿಗೆ ಇಂಥ ಕಾದಾಟ ಎರಡು ದೇಶಗಳ ಮಧ್ಯೆ ನಡೆದಿದೆ. ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಸಿಬ್ಬಂದಿ ವಾಹನದ ಮೇಲೆ ಆತ್ಮಾಹುತಿ ದಾಳಿ ನಡೆಸಿದ್ದ ಜೈಶ್ ಉಗ್ರಗಾಮಿಗಳ ನೆಲೆ ಮೇಲೆ ವಾಯು ಸೇನೆ ದಾಳಿ ನಡೆಸಿತ್ತು.
ಪಾಕಿಸ್ತಾನ ಕೂಡ ಬುಧವಾರದಂದು ಹೇಳಿಕೆ ನೀಡಿ, ಭಾರತದ ಎರಡು ವಿಮಾನ ಹೊಡೆದುರುಳಿಸಲಾಗಿದೆ. ಪೈಲಟ್ ವೊಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದಿತ್ತು. ಭಾರತದ ಸೇನೆಯನ್ನು ಗುರಿ ಮಾಡಿಕೊಂಡು ದಾಳಿ ನಡೆಸಿದ ಪಾಕ್ ಅನ್ನು ಹಿಮ್ಮೆಟ್ಟಿಸಲಾಗಿದೆ ಎಂದು ಹೇಳಲಾಗಿದೆ.

ಪಾಕಿಸ್ತಾನ ವಾಯುಪಡೆಯ ವಿಮಾನಗಳು ಕಂಡ ತಕ್ಷಣ ಭಾರತೀಯ ವಾಯುಪಡೆ ಪ್ರತಿಕ್ರಿಯೆ ನೀಡಿದೆ. ಈ ವೇಳೆ ಪಾಕಿಸ್ತಾನ ವಾಯು ಪಡೆಯ F-16 ವಿಮಾನ ಹೊಡೆದುರುಳಿಸಲಾಗಿದೆ. ಪಾಕಿಸ್ತಾನದ ನೆಲದ ಮೇಲೆ ಅದು ಬೀಳುವುದು ಕಂಡಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಈ ಪ್ರಯತ್ನದಲ್ಲಿ ನಮ್ಮ ಮಿಗ್ ವಿಮಾನ ಕಳೆದುಕೊಂಡಿದ್ದೇವೆ. ಪೈಲಟ್ ನಾಪತ್ತೆಯಾಗಿದ್ದಾರೆ. ಆ ಪೈಲಟ್ ತನ್ನ ಬಳಿ ಇರುವುದಾಗಿ ಪಾಕಿಸ್ತಾನ ಹೇಳಿಕೊಂಡಿದೆ ಎಂದು ಸಚಿವಾಲಯದ ಹೇಳಿಕೆಯಲ್ಲಿ ಸೇರಿಸಲಾಗಿದೆ.












Click it and Unblock the Notifications