ಹೆಣ್ಮಕ್ಕಳು ಏಜ್ ಗುಟ್ಟು ಬಿಟ್ಕೊಟ್ರು ಪರವಾಗಿಲ್ಲ ಸ್ಯಾಲರಿ ಎಷ್ಟಿದೆ ಅಂತ ಹೇಳ್ಬೇಡಿ! ಮಹಿಳೆ ಕೊಟ್ಟ ಸಂದೇಶವೇನು?
ಹೆಣ್ಣು ಮಕ್ಕಳ ವಯಸ್ಸು ಕೇಳಬಾರದು ಗಂಡು ಮಕ್ಕಳ ಸಂಬಳ ಕೇಳಬಾರದು ಎನ್ನುವ ಮಾತಿದೆ. ಆದರೆ ವಾಸ್ತವದಲ್ಲಿ ಹೆಣ್ಣು ಮಕ್ಕಳು ತಮ್ಮ ವಯಸ್ಸು ಎಷ್ಟು ಎನ್ನುವುದನ್ನು ಹೇಳಿದರೂ ಪರವಾಗಿಲ್ಲ ಆದರೆ ಸಂಬಳ ಎಷ್ಟು ಅನ್ನೋದನ್ನು ಮಾತ್ರ ಗುಟ್ಟಾಗಿಯೇ ಇಡಬೇಕಂತೆ. ಈ ಬಗ್ಗೆ ಮಹಿಳೆಯೊಬ್ಬರು ಎಲ್ಲಾ ಹೆಣ್ಣುಮಕ್ಳಳಿಗೆ ಬುದ್ದಿ ಮಾತು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ನಿಮಗೆ ಎಷ್ಟು ಸಂಬಳ ಎನ್ನುವುದನ್ನು ನಿಖರವಾಗಿ ಯಾರಿಗೂ ತಿಳಿಸಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಮಹಿಳೆಯ ಈ ಹೇಳಿಕೆ ಇದೀಗ ಹೊಸ ಚರ್ಚೆ ಹುಟ್ಟು ಹಾಕಿದೆ.
ಸಂಬಳದ ಬಗ್ಗೆ ಚರ್ಚಿಸುವಾಗ ಇರಲಿ ಎಚ್ಚರ
ತಮ್ಮ ನಿಖರವಾದ ಸಂಬಳವನ್ನು ಬೇರೆಯವರಿಗೆ ಹೇಳುವ ಮೊದಲು ಎರಡು ಬಾರಿ ಯೋಚಿಸಬೇಕು ಎಂದು ಹೇಳಿದ್ದಾರೆ. ಸಂಬಳದ ಬಗ್ಗೆ ಚರ್ಚಿಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕೆಂದು ಸಲಹೆ ನೀಡಿದ್ದಾರೆ. ಅವರ ಈ ಕಾಳಜಿಗೆ ಸಲಹೆಗೆ ಕಾರಣ ಇಲ್ಲ ಎಂದಲ್ಲ. ಬಹಳ ಮುಖ್ಯವಾದ ಕಾರಣವಿದೆ. ಅದನ್ನು ಕೂಡಾ ಅವರು ವಿವರಿಸಿ ಹೇಳುತ್ತಾರೆ. ಸಿಮ್ರನ್ ಮೌರ್ಯ ಎನ್ನುವವರು ಇನ್ಸ್ಟಾಗ್ರಾಮ್ನಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾರೆ. ವಿಶೇಷವಾಗಿ ತಮ್ಮ ಮೊದಲ ಕೆಲಸಕ್ಕೆ ಸೇರುವವರು ತನಗೆಷ್ಟು ಸಂಬಳ ಎನ್ನುವುದರ ಬಗ್ಗೆ ಎಲ್ಲರಿಗೂ ಹೇಳುವ ಮೊದಲು ಎಚ್ಚರಿಕೆಯಿಂದ ಯೋಚಿಸಬೇಕು ಎಂದು ಹೇಳಿದ್ದಾರೆ.

ನಿಮ್ಮ ಸಂಬಳವನ್ನು ಹೇಳುವುದರಲ್ಲಿ ಸಮಸ್ಯೆ ಇಲ್ಲ. ಆದರೆ ನಿಮಗೆ ಎಷ್ಟು ಸಂಬಳ ಬರುತ್ತಿದೆ ಎನ್ನುವ ನಿಖರ ಮಾಹಿತಿ ನೀಡುವುದರಲ್ಲಿ ಇರುವುದು ಸಮಸ್ಯೆ. ವಿಶೇಷವಾಗಿ ನೀವು ಮೊದಲ ಕೆಲಸಕ್ಕೆ ಸೇರಿದಾಗ ಸಿಗುವ ಮೊದಲ ಸಂಬಳದ ಬಗ್ಗೆ ಉತ್ಸಾಹ ಇರುತ್ತದೆ. ಆ ಉತ್ಸಾಹದಲ್ಲಿ, ನಿಮಗೆಷ್ಟು ಸ್ಯಾಲರಿ ಎನ್ನುವುದನ್ನು ಸ್ನೇಹಿತರಿಗೆ ಸಂಬಂಧಿಕರಿಗೆ ಹೇಳಿ ಬಿಡಬಹುದು. ನಿಧಾನವಾಗಿ ನಿಮಗೆಷ್ಟು ಸಂಬಳ ಎನ್ನುವ ಮಾಹಿತಿ ಎಲ್ಲರಿಗೂ ತಿಳಿದು ಬಿಡುತ್ತದೆ.
ಜಾಸ್ತಿಯಾಗುವುದು ನಿಮ್ಮ ಮೇಲಿನ ನಿರೀಕ್ಷೆ
ನಿಮ್ಮ ಗಳಿಕೆ ಎಷ್ಟು ಎನ್ನುವುದನ್ನು ನಿಖರವಾಗಿ ತಿಳಿದುಕೊಳ್ಳುವುದರಿಂದ ನೀವು ಎಷ್ಟು ಖರ್ಚು ಮಾಡಬೇಕು ಅಥವಾ ಉಳಿಸಬೇಕು ಎಂಬ ಬಗ್ಗೆ ಬೇರೆಯವರಲ್ಲಿ ನಿರೀಕ್ಷೆ ಹೆಚ್ಚಾಗುವುದು. ನಿಮ್ಮ ಸಂಬಳವನ್ನು ತಿಳಿದುಕೊಂಡ ತಕ್ಷಣ, ಅವರು ನಿಮ್ಮ ಸುತ್ತಲೂ ಮತ್ತು ನಿಮ್ಮ ಸಂಬಳದ ಬಗ್ಗೆ ನಿರೀಕ್ಷೆಗಳನ್ನು ಸೃಷ್ಟಿಸಿಕೊಳ್ಳಲು ಶುರು ಮಾಡುತ್ತಾರೆ. ನೀವು ಇಷ್ಟು ಸಂಪಾದಿಸುತ್ತೀರಾ? ಹಾಗಾದರೆ ನೀವು ಇದನ್ನು ಸುಲಭವಾಗಿ ನಿಭಾಯಿಸಬಹುದು. ನಿಮಗೆ ಇಷ್ಟೊಂದು ಸಂಬಳ ಇದೆ ಹಾಗಿದ್ದರೆ ನಿಮ್ಮ ಹತ್ರ ಸೇವಿಂಗ್ಸ್ ಇಲ್ವಾ? ಹೀಗೆ ಹತ್ತು ಹಲವು ನಿರೀಕ್ಷೆ ಪ್ರಶ್ನೆ ನಿಮ್ಮನ್ನು ಸುತ್ತಿಕೊಳ್ಳಬಹುದು. ಮಾತ್ರವಲ್ಲ ನಿಮ್ಮನ್ನು ಬೇರೆಯವರೊಂದಿಗೆ ಹೋಲಿಸಿ ನೋಡುವುದಕ್ಕೂ ಇದು ಕಾರಣವಾಗಬಹುದು. ಹೀಗಾಗುವಾಗ ನಿಮ್ಮ ಮೇಲೆ ನಿಮ್ಮ ಸಾಮರ್ಥ್ಯದ ಮೇಲೆ ನಿಮಗೆ ಅನುಮಾನ ಮೂಡಬಹುದು. ನನಗೆ ಕಡಿಮೆ ವೇತನ ಸಿಗ್ತಾ ಇದ್ಯಾ? ನನ್ನ ಸಂಬಳ ತುಂಬಾ ಕಡಿಮೆಯಾ? ನಾನು ನನ್ನ ಜೀವನದಲ್ಲಿ ಚೆನ್ನಾಗಿದ್ದೇನೆಯಾ, ಇಲ್ವಾ? ಎನ್ನುವ ಸಂಶಯಗಳು ಹುಟ್ಟಿಕೊಳ್ಳಬಹುದು.
ಕೆಲಸದ ಸ್ಥಳದಲ್ಲಿ ಹೆಚ್ಚು ಜಾಗರೂಕರಾಗಿರಿ
ಸಹೋದ್ಯೋಗಿಗಳೊಂದಿಗೆ ಕೂಡಾ ನಿಮ್ಮ ಸ್ಯಾಲರಿ ಬಗ್ಗೆ ಚರ್ಚಿಸಬಾರದು. ನೀವು ಬಹಳ ಎಚ್ಚರಿಕೆಯಿಂದ ಇರಬೇಕಾಗಿರುವುದು ಇಲ್ಲಿಯೇ ಎಂದು ಅವರು ಹೇಳಿದ್ದಾರೆ. ಯಾಕೆಂದರೆ ನೀವು ಸಹೋದ್ಯೋಗಿಯೊಂದಿಗೆ ಆಕಸ್ಮಿಕವಾಗಿ ಹಂಚಿಕೊಳ್ಳುತ್ತಿರುವ ಮಾಹಿತಿಯು ನಾಳೆ ನಿಮ್ಮ ವಿರುದ್ಧವೇ ಬಳಸಲ್ಪಡಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಆದರೂ, ಮಾರುಕಟ್ಟೆ ದರಗಳನ್ನು ಅರ್ಥಮಾಡಿಕೊಳ್ಳಲು ಅಥವಾ ಉತ್ತಮ ಪರಿಹಾರದ ಬಗ್ಗೆ ಮಾತುಕತೆ ನಡೆಸಲು ಸಹಾಯ ಆಗುವ ಹಾಗೆ ಸಂಬಳದ ಬಗ್ಗೆ ಚರ್ಚಿಸುವುದು ತಪ್ಪಲ್ಲ ಎನ್ನುವುದನ್ನೂ ಕೂಡಾ ಮೌರ್ಯ ಸ್ಪಷ್ಟಪಡಿಸಿದ್ದಾರೆ.
ನೀವು ನಿಮ್ಮ ಸಂಬಳದ ಬಗ್ಗೆ ಯಾವತ್ತೂ ಚರ್ಚಿಸಬಾರದು ಎಂದು ನಾನು ಹೇಳುತ್ತಿಲ್ಲ. ವಾಸ್ತವವಾಗಿ, ನೀವು ಸ್ಯಾಲರಿ ಬಗ್ಗೆ ಮಾತನಾಡುವಾಗ ನಿಮ್ಮ ರೋಲ್ಗೆ ಮಾರುಕಟ್ಟೆ ದರಗಳನ್ನು ಲೆಕ್ಕ ಹಾಕಬೇಕಾದರೆ ನೀವು ಕೆಲಸವನ್ನು ಬದಲಾಯಿಸುವಾಗ ನಿಮ್ಮ ಸಂಬಳದ ಬಗ್ಗೆ ಕಾಲಕಾಲಕ್ಕೆ ಚರ್ಚಿಸುವುದು ಬಹಳ ಮುಖ್ಯ. ಅದರ ಬಗ್ಗೆ ಮಾತನಾಡಿ. ನಿಮಗೆ ನಂಬಿಕೆ ಇರುವ ಜನರೊಂದಿಗೆ ಮಾತನಾಡಿ, ನಿಮ್ಮ ಉದ್ಯಮದ ಜನರೊಂದಿಗೆ ಮಾತನಾಡಿ, ಪ್ರಶ್ನೆಗಳನ್ನು ಕೇಳಿ. ಏಕೆಂದರೆ ಇಲ್ಲಿ ಈ ಬಗ್ಗೆ ಚರ್ಚಿಸದಿದ್ದರೆ, ಹೆಚ್ಚಿನ ಸಂಬಳವನ್ನು ಫಿಕ್ಸ್ ಮಾಡಿಸಿಕೊಳ್ಳುವುದು ಕಷ್ಟವಾಗಬಹುದು ಅಥವಾ ನಾವು ಕಡಿಮೆ ಸಂಬಳ ಪಡೀತಾ ಇದ್ದೇವಾ ಎನ್ನುವುದನ್ನು ತಿಳಿದುಕೊಳ್ಳುವುದು ಕೂಡಾ ಸಾಧ್ಯವಾಗದೇ ಇರಬಹುದು. ಆದರೆ ನಿಮ್ಮ ಸಂಬಳದ ಬಗ್ಗೆ ಸಾರ್ವಜನಿಕವಾಗಿ ಕಂಡ ಕಂಡವರಲ್ಲಿ ಮಾತನಾಡಿಕೊಂಡು ಬರಬೇಡಿ. ಪ್ರತಿಯೊಬ್ಬರೂ ನಿಮ್ಮ ಸಂಬಳದ ನಿಖರ ಸಂಖ್ಯೆಗಳನ್ನು ತಿಳಿದುಕೊಳ್ಳಬೇಕಾಗಿಲ್ಲ.
ಸಾಮಾಜಿಕ ಮಾಧ್ಯಮದಲ್ಲಿ ಜನ ಪ್ರತಿಕ್ರಿಯೆ
ಈ ಪೋಸ್ಟ್ಗೆ ನಾನಾ ರೀತಿಯ ಪ್ರತಿಕ್ರಿಯೆ ಬಂದಿದೆ. ಈ ಎಲ್ಲಾ ಕಾಮೆಂಟ್ಗಳಲ್ಲಿ ಸಂಬಳವನ್ನು ಖಾಸಗಿಯಾಗಿಡುವ ಬಗ್ಗೆಯೇ ಮಾತನಾಡಿದ್ದಾರೆ. ಪ್ರತಿಯೊಬ್ಬರೂ ನಿಮ್ಮ ಸ್ಯಾಲರಿ ಬಗ್ಗೆ ತಿಳಿದುಕೊಳ್ಳಬೇಕಾಗಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಎಲ್ಲರೊಂದಿಗೆ ನಮ್ಮ ವೈಯಕ್ತಿಕ ವಿಚಾರಗಳನ್ನು ಶೇರ್ ಮಾಡಿಕೊಳ್ಳುವುದರಿಂದ ಅನಗತ್ಯ ಒತ್ತಡ ಉಂಟಾಗಬಹುದು ಎಂದು ಹೇಳಿದ್ದಾರೆ. ಸಂಬಳದ ಬಗ್ಗೆ ಚರ್ಚಿಸಿ, ಆದರೆ ಸರಿಯಾದ ಜನರೊಂದಿಗೆ ಮಾತ್ರ ಚರ್ಚಿಸಿ ಎಂದು ಮತ್ತೊಬ್ಬರು ಹೇಳಿದ್ಧಾರೆ..


Click it and Unblock the Notifications
