Air India: ಶಂಕರ್ ಮಿಶ್ರಾ ಘಟನೆ ಬಳಿಕ ಮತ್ತೆ ಯಡವಟ್ಟು, ಮಹಿಳಾ ಪ್ರಯಾಣಿಕರಿಗೆ ಊಟದಲ್ಲಿ ಕಲ್ಲು ಪತ್ತೆ
ನವದೆಹಲಿ, ಜನವರಿ 10: ಇತ್ತೀಚೆಗಷ್ಟೇ ಮೂತ್ರ ವಿಸರ್ಜನೆ ಪ್ರಕರಣ ಕುರಿತಂತೆ ಸುದ್ದಿಯಾಗಿದ್ದ ಏರ್ ಇಂಡಿಯಾ ವಿಮಾನವು ಇದೀಗ ಮತ್ತೊಂದು ಯಡವಟ್ಟಿನಿಂದ ಪುನಃ ಮುನ್ನೆಲೆಗೆ ಬಂದಿದೆ. ಪ್ರಯಾಣಿಕರೊಬ್ಬರಿಗೆ ಊಟದಲ್ಲಿ ಕಲ್ಲು ಬಂದಿದ್ದು, ಆ ಮಹಿಳಾ ಪ್ರಯಾಣಿರು ಟ್ವಿಟ್ಟರ್‌ನಲ್ಲಿ ಫೋಟೊ ಹಂಚಿಕೊಂಡಿದ್ದಾರೆ.
ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸರ್ವಪ್ರಿಯಾ ಸಾಂಗ್ವಾನ್ ಎಂಬ ಮಹಿಳೆಗೆ ಪ್ರಯಾಣದ ವೇಳೆ ನೀಡುವ ಊಟದಲ್ಲಿ ಕಲ್ಲು ಪತ್ತೆಯಾಗಿದೆ. ತಮಗೆ ನೀಡಿದ್ದ ಊಟದಲ್ಲಿ ಸಣ್ಣ ಕಲ್ಲು ಕಂಡು ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ. ಅವರು ಹಂಚಿಕೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಏರ್ ಇಂಡಿಯಾ AI 215 ವಿಮಾನದಲ್ಲಿ ಈ ಘಟನೆ ನಡೆದಿದೆ. ನೀಡಲಾದ ಆಹಾರದಲ್ಲಿ ಕಲ್ಲು ಇದೆ ಎಂದು ನಾನು ವಿಮಾನ ಸಿಬ್ಬಂದಿ ಜೇಡನ್ ಅವರಿಗೆ ತಿಳಿಸಿದ್ದೇನೆ. ಈ ರೀತಿಯ ನಿರ್ಲಕ್ಷ್ಯ ಒಳ್ಳೆಯದಲ್ಲ ಎಂದು ಅವರು ಟ್ವಿಟ್ಟರ್ ಪೋಸ್ಟ್‌ನಲ್ಲಿ ಏರ್ ಇಂಡಿಯಾವನ್ನು ಟ್ಯಾಗ್ ಮಾಡಿದ್ದಾರೆ. ಕಲ್ಲು ಸಹಿತ ಆಹಾರವನ್ನು ನೀಡುವ ಮೂಲಕ ಏರ್ ಇಂಡಿಯಾ ಅಧಿಕಾರಿಗಳು ನಿರ್ಲಕ್ಷ್ಯ ವಿರುದ್ಧ ಕಿಡಿ ಕಾರಿದ್ದಾರೆ.

ಏರ್ ಇಂಡಿಯಾ ವಿರುದ್ಧ ಟೀಕೆ: ಸಂಸ್ಥೆ ಪ್ರತಿಕ್ರಿಯೆ
ಟಾಟಾ ಮುಖ್ಯಸ್ಥರು ಟ್ವಿಟರ್ ಬಳಕೆದಾರರೂ ಆಗಿದ್ದಾರೆ. ವಿಮಾನ ಸಂಸ್ಥೆಗೆ ನೀವು ಸರಿಯಾದ ಮಾನದಂಡಗಳನ್ನು ನಿಗದಿಪಡಿಸಿ. ಈ ಏರ್ ಇಂಡಿಯಾ ಸಂಸ್ಥೆ ಜಾಗತಿಕವಾಗಿ ಗೌರವಾನ್ವಿತ ಬ್ರಾಂಡ್ ಆಗಿದ್ದು, ಅಂತವರಿದ್ದ ಇಂತಹ ಧೋರಣೆ, ನಿರ್ಲಕ್ಷ್ಯ ಸರಿಯಲ್ಲ. ಏರ್ ಇಂಡಿಯಾ ಇತ್ತೀಚೆಗೆ ಕೆಟ್ಟ ಸಿಬ್ಬಂದಿ ವ್ಯವಸ್ಥೆಯನ್ನು ಹೊಂದಿದೆ ಎಂದು ಮಹಿಳಾ ಪ್ರಯಾಣಿಕರು ಟೀಕಿಸಿದ್ದಾರೆ.
ಸರ್ವಪ್ರಿಯಾ ಸಾಂಗ್ವಾನ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಏರ್ ಇಂಡಿಯಾ, 'ನಡೆದ ಅವಘಡಕ್ಕೆ ವಿಷಾಧ ವ್ಯಕ್ತಪಡಿಸುವ ಜೊತೆಗೆ ನಾವು ಈ ಕುರಿತು ಕ್ಯಾಟರಿಂಗ್ ತಂಡದೊಂದಿಗೆ ಮಾತನಾಡುತ್ತೇವೆ. ದಯವಿಟ್ಟು ಈ ಬಗ್ಗೆ ಸ್ಪಷ್ಟನೆ ನೀಡಲು ನಮಗೆ ಸ್ವಲ್ಪ ಸಮಯ ನೀಡಿ ಎಂದಿರುವ ಏರ್ ಇಂಡಿಯಾ, ಈ ವಿಚಾರ ಗಮನಕ್ಕೆ ತಂದಿರುವುದಕ್ಕೆ ಏರ್ ಇಂಡಿಯಾ ಸಾಂಗ್ವಾನ್ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದೆ.

ಕಳೆದ ತಿಂಗಳ ನವೆಂಬರ್ ಇದೇ ಏರ್ ಇಂಡಿಯಾ ವಿಮಾನದಲ್ಲಿ ಕುಡಿದು ವೃದ್ಧ ಮಹಿಳೆಯ ಮೇಲೆ ಶಂಕರ್ ಮಿಶ್ರಾ ಎಂಬುವವರು ಮೂತ್ರ ವಿಸರ್ಜನೆ ಮಾಡಿದ್ದರು. ಈ ಆರೋಪಿಯನ್ನು ಕಳೆದ ಶುಕ್ರವಾರ ದೆಹಲಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಮಿಶ್ರಾ ಕೆಲಸ ಮಾಡುತ್ತಿದ್ದ ಕಂಪನಿ ಅವರನ್ನು ವಜಾಗೊಳಿಸಿದೆ.












Click it and Unblock the Notifications