Tirumala: ತಿರುಪತಿ ಆಸ್ಪತ್ರೆಯಲ್ಲಿ ವೈದ್ಯೆಯ ಮೇಲೆ ಹಲ್ಲೆ ಮಾಡಿದ ರೋಗಿ: ವಿಡಿಯೋ ವೈರಲ್
ವೃತ್ತಿಪರ ವೈದ್ಯೆಯ ಮೇಲೆ ರೋಗಿಯೊಬ್ಬರು ಅಮಾನುಷವಾಗಿ ಹಲ್ಲೆ ಮಾಡಿದ ಘಟನೆ ತಿರುಪತಿಯಲ್ಲಿ ನಡೆದಿದೆ. ತಿರುಪತಿಯ ಶ್ರೀ ವೆಂಕಟೇಶ್ವರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (SVIMS) ಮಹಿಳಾ ಕಿರಿಯ ವೈದ್ಯರ ಮೇಲೆ ರೋಗಿಯೊಬ್ಬರು ಹಲ್ಲೆ ಮಾಡಿದ್ದಾರೆ. ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇತ್ತೀಚೆಗೆ ನಡೆದ ಅತ್ಯಾಚಾರ ಮತ್ತು ಕೊಲೆಯ ನಂತರ ದೇಶದಲ್ಲಿ ವೈದ್ಯಕೀಯ ವೃತ್ತಿಪರರ ಸುರಕ್ಷತೆಯ ಬಗ್ಗೆ ಕಳವಳದ ನಡುವೆ ಈ ದಾಳಿ ನಡೆದಿದೆ.
ತಿರುಪತಿಯಲ್ಲಿ ನಡೆದ ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರೋಗಿಯು ಇದ್ದಕ್ಕಿದ್ದಂತೆ ಕಿರಿಯ ವೈದ್ಯರ ಕೂದಲನ್ನು ಹಿಡಿದು ಆಸ್ಪತ್ರೆಯ ಬೆಡ್‌ನ ಸ್ಟೀಲ್ ಫ್ರೇಮ್‌ಗೆ ಹೊಡೆದಿದ್ದಾರೆ. ಹಿಂಸಾತ್ಮಕವಾಗಿ ಆಕೆಯ ತಲೆ ಕೂದಲನ್ನು ಹಿಡಿದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಅನಿರೀಕ್ಷಿತ ದಾಳಿಯಿಂದ ತಕ್ಷಣವೇ ಸಹಾಯಕ್ಕೆ ಧಾವಿಸಿದ ವಾರ್ಡ್‌ನಲ್ಲಿರುವ ಇತರ ವೈದ್ಯಕೀಯ ಸಿಬ್ಬಂದಿ ವೈದ್ಯರನ್ನು ಕಾಪಾಡಿದರು. ತುಂಬಾ ಕಷ್ಟಪಟ್ಟು ಇತರ ವೈದ್ಯಕೀಯ ಸಿಬ್ಬಂದಿ ರೋಗಿಯಿಂದ ವೈದ್ಯರನ್ನು ಬಿಡಿಸಿದ್ದಾರೆ.

ಆದರೆ ದಾಳಿಗೆ ಕಾರಣವೇನು ಎನ್ನುವುದು ಇನ್ನೂ ಕೂಡ ಸ್ಪಷ್ಟವಾಗಿಲ್ಲ. ಆದರೆ ಈ ದಾಳಿಯಿಂದ ವೈದ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ನಡೆದ ತಕ್ಷಣ ವೈದ್ಯರು ಮತ್ತು ಇತರ ವೈದ್ಯಕೀಯ ಸಿಬ್ಬಂದಿ ಕೆಲಸದ ಸ್ಥಳದಲ್ಲಿ ತಮ್ಮ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಒತ್ತಾಯಿಸಿ ಆಸ್ಪತ್ರೆಯಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ SVIMS ಜೂನಿಯರ್ ಡಾಕ್ಟರ್ಸ್ ಅಸೋಸಿಯೇಷನ್ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದು, ಘಟನೆಯ ಸಮಗ್ರ ತನಿಖೆ ಮಾಡುವ ಭರವಸೆ ನೀಡಿದೆ.
ಕೋಲ್ಕತ್ತಾ ವೈದ್ಯೆ ಅತ್ಯಾಚಾರ ಪ್ರಕರಣ
ಕೋಲ್ಕತ್ತಾದಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಿ ದೇಶಾದ್ಯಂತ ವ್ಯಾಪಕ ಪ್ರತಿಭಟನೆ ನಡುವೆಯೇ ಈ ಘಟನೆ ನಡೆದಿದೆ. ಈ ಫಟನೆ ಹಿನ್ನೆಲೆಯಲ್ಲಿ ವೈದ್ಯರ ಮೇಲಿನ ಹಿಂಸಾಚಾರವನ್ನು ತಡೆಯಲು ಕ್ರಮಗಳನ್ನು ಶಿಫಾರಸು ಮಾಡಲು ಸುಪ್ರೀಂ ಕೋರ್ಟ್ 10 ಸದಸ್ಯರ ರಾಷ್ಟ್ರೀಯ ಕಾರ್ಯಪಡೆಯನ್ನು ಸ್ಥಾಪಿಸಿದೆ.

ಕೋಲ್ಕತ್ತಾದ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸ್ನಾತಕೋತ್ತರ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಗೆ ಸಂಬಂಧಿಸಿದ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಆರಂಭಿಸಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ವಿಚಾರಣೆ ಕೈಗೆತ್ತಿಕೊಂಡು, ವೈದ್ಯರು ಮತ್ತು ಇತರ ಆರೋಗ್ಯ ವೃತ್ತಿಪರರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಶಿಷ್ಠಾಚಾರಗಳನ್ನು ರೂಪಿಸಲು ಸುಪ್ರೀಂ ಕೋರ್ಟ್ 10 ಸದಸ್ಯರ ರಾಷ್ಟ್ರೀಯ ಕಾರ್ಯಪಡೆ (NTF)ಯನ್ನು ರಚಿಸಿದೆ.
Assault on ER Intern in SVIMS TIRUPATI
— Dr.Dhruv Chauhan (@DrDhruvchauhan) August 25, 2024
Just look at the audacity of the man trying to grab the female doctor in front of everyone
This is exactly why doctors are demanding Central protection act ! @APPOLICE100 pic.twitter.com/VEuG02BzQa
ಹತ್ಯಾಚಾರ ಘಟನೆ ಹಾಗೂ ನಂತರ ಆಸ್ಪತ್ರೆಯೊಳಗೆ ದುಷ್ಕರ್ಮಿಗಳು ನುಗ್ಗಿ ನಡೆಸಿದ ವಿಧ್ವಂಸಕ ಕೃತ್ಯವನ್ನು "ಭಯಾನಕ" ಎಂದು ಬಣ್ಣಿಸಿದ ಸುಪ್ರೀಂ ಕೋರ್ಟ್, ಎಫ್‌ಐಆರ್ ದಾಖಲಿಸುವಲ್ಲಿ ವಿಳಂಬ ಮತ್ತು ಸರ್ಕಾರಿ ಸೌಲಭ್ಯವನ್ನು ಧ್ವಂಸ ಮಾಡಲು ಕಿಡಿಗೇಡಿಗಳಿಗೆ ಹೇಗೆ ಅವಕಾಶ ನೀಡಿದಿರಿ ಎಂದು ಪಶ್ಚಿಮ ಬಂಗಾಳ ಸರ್ಕಾರವನ್ನು ಪ್ರಶ್ನಿಸಿದೆ. ಆಗಸ್ಟ್ 13 ರಂದು ಕೋಲ್ಕತ್ತಾ ಹೈಕೋರ್ಟ್ ತನಿಖೆಯನ್ನು ಕೋಲ್ಕತ್ತಾ ಪೊಲೀಸರಿಂದ ಸಿಬಿಐಗೆ ವರ್ಗಾಯಿಸಲು ಆದೇಶಿಸಿತು, ಸಿಬಿಐ ಆಗಸ್ಟ್ 14 ರಂದು ತನಿಖೆಯನ್ನು ಪ್ರಾರಂಭಿಸಿದೆ.
ಪಶ್ಚಿಮ ಬಂಗಾಲ ಸಿಎಂ ರಾಜೀನಾಮೆಗೆ ಒತ್ತಾಯ
ಕೋಲ್ಕತ್ತಾದಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಗೆ ಸಂಬಂಧಿಸಿದಂತೆ ಯಾವುದೇ ಕಠಿಣ ಕ್ರಮ ಕೈಗೊಳ್ಳದೆ ಹತಾಶರಾಗಿ ಕುಳಿತಿರುವ ಸಿಎಂ ಮಮತಾ ಬ್ಯಾನರ್ಜಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಮದು ಒತ್ತಾಯಿಸಿ ಇಂದು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದರು.












Click it and Unblock the Notifications