ಮೋದಿ, ಎನ್ಡಿಎ- ಪಂಟರ್, ಬುಕ್ಕಿಗಳ ಫೇವರೀಟ್
ಬೆಂಗಳೂರು, ಮೇ.2: ಸರಿಯಾಗಿ ಲೆಕ್ಕ ಹಾಕಿದರೆ 14 ದಿನ ಇಲ್ಲಾ ಕಣ್ರಿ. ಇನ್ನೂ ಎರಡು ಹಂತದ ಮತದಾನ ಬಾಕಿ ಇದೆ. ಆದರೆ, ಪಂಟರ್ ಗಳೂ ಆಗ್ಲೇ ಮೋದಿ ಹಾಗೂ ಎನ್ ಡಿಎ ಪರ ಮುದ್ರೆ ಒತ್ತಿಬಿಟ್ಟಿದ್ದಾರೆ. ಮೇ.16ರ ನಂತರ ಯಾರು ಯಾರು ಎಷ್ಟು ಕೋಟಿಗಟ್ಟಲೆ ಹಣ ಕಳೆದುಕೊಳ್ಳುತ್ತಾರೋ? ಯಾರು ತಮ್ಮ ಜೋಳಿಗೆ ತುಂಬಿಸಿಕೊಳ್ಳುತ್ತಾರೋ ದೇವರೇ ಬಲ್ಲ. ಆದರೆ, ಬೆಟ್ಟಿಂಗ್ ಜಗತ್ತಿನಲ್ಲಿ ಇರುವ ಅಲೆ ಬಗ್ಗೆ ಐಬಿಎನ್ ಸುದ್ದಿವಾಹಿನಿ ವರದಿ ಮಾಡಿದೆ.
ಮುಂಬೈನಲ್ಲಿರುವ ಪಂಟರ್ ಗಳು ನ್ಯಾಷನಲ್ ಡೆಮಾಕ್ರಾಟಿಕ್ ಅಲೈಯನ್ಸ್(ಎನ್ ಡಿಎ)ಗೆ 317 ಸೀಟುಗಳು ಸಿಗಲಿವೆ ಎಂದು ಬೆಟ್ ಕಟ್ಟಿದ್ದಾರೆ. ಜತೆಗೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಭರ್ಜರಿ ವಿಜಯದ ಸಿಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಬೆಟ್ಟಿಂಗ್ ಮಾರುಕಟ್ಟೆಯ ನಿಯಮಗಳ ಪ್ರಕಾರ ಯಾವ ವ್ಯಕ್ತಿ/ಪಕ್ಷಕ್ಕೆ ಅತ್ಯಂತ ಕಡಿಮೆ ರೇಟ್ ನಿಗದಿಪಡಿಸಲಾಗುತ್ತದೋ ಆ ವ್ಯಕ್ತಿ/ಪಕ್ಷ ಗೆಲ್ಲುವ ಸಾಧ್ಯತೆ ಹೆಚ್ಚಿರುತ್ತದೆ. ಯಾವ ವ್ಯಕ್ತಿ/ಪಕ್ಷಕ್ಕೆ ಹೆಚ್ಚು ರೇಟ್ ನಿಗದಿಪಡಿಸಲಾಗುತ್ತದೋ ಆ ವ್ಯಕ್ತಿ/ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆ ಜಾಸ್ತಿ ಇರುತ್ತದೆ.
ಪಂಟರುಗಳು ಅಪ್ಪಿತಪ್ಪಿಯೂ ಕಾಂಗ್ರೆಸ್ ಯುವರಾಜನತ್ತ ಕಣ್ಣುಹೊರಳಿಸುತ್ತಿಲ್ಲ. ರಾಹುಲ್ ಗಾಂಧಿ ಭವಿಷ್ಯ ಈಗಾಗಲೇ ನಿರ್ಧಾರವಾಗಿದೆ ಎಂಬ ಸುದ್ದಿ ಈಗಾಗಲೆ ಓದಿರಬಹುದು. [ಇಲ್ಲದಿದ್ದರೆ ತಪ್ಪದೇ ಓದಿ]
ಈಗ ಚುನಾವಣಾ ಪೂರ್ವ ಸಮೀಕ್ಷೆಗಳ ನಂತರ ದೇಶದೆಲ್ಲೆಡೆ ಬೆಟ್ಟಿಂಗ್ ಭರಾಟೆಯ ಮಾಹಿತಿ ಗುಪ್ತವಾಗಿ ಸಂಗ್ರಹಿಸಿ ಸುದ್ದಿ ಮಾಡುವುದು ರಾಷ್ಟ್ರೀಯ ಮಾಧ್ಯಮಗಳ ಪ್ರಮುಖ ಕಸರತ್ತಾಗಿದೆ. ಚುನಾವಣಾ ನೀತಿ ಸಂಹಿತೆ ಇರುವುದರಿಂದ ಮತದಾನದ ನಂತರ ಪ್ರಕಟವಾಗುತ್ತಿದ್ದ ಚುನಾವಣೋತ್ತರ ಸಮೀಕ್ಷಾ ವರದಿಗಳಿಗೆ ಬ್ರೇಕ್ ಬಿದ್ದಿದೆ. ಹೀಗಾಗಿ ಈಗ ಬುಕ್ಕಿಗಳ ಭವಿಷ್ಯಕ್ಕೆ ಬೇಡಿಕೆ ಹೆಚ್ಚಿದೆ.

ಮೋದಿ ಅಲೆ ಬೆಲೆ ಎಷ್ಟು ಗೊತ್ತಾ?
ಮೋದಿ ಅಲೆ ಬೆಲೆ ಎಷ್ಟು ಗೊತ್ತಾ? : ದೇಶದೆಲ್ಲೆಡೆ ವ್ಯಾಪಿಸಿರುವ ಮೋದಿ ಅಲೆಯ ಪರಿಣಾಮವಾಗಿ ದಿನೇ ದಿನೇ ಬೆಟ್ಟಿಂಗ್ ಕಾಳಸಂತೆಯಲ್ಲಿ ಮೋದಿ ಹೆಸರಿನ ಬೆಲೆ ಏರುಪೇರಾಗುತ್ತಲೇ ಇದೆ. ಮೋದಿ ಬೆಲೆ 48 ಪೈಸೆ, ರಾಹುಲ್ ಗಾಂಧಿ 60 ಪೈಸೆ ಇದ್ದರೆ, ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಬೆಲೆ 11.50 ರು ನಷ್ಟಿದೆ.

ಎನ್ ಡಿಎಗೆ ಅತಿ ಹೆಚ್ಚು ಸೀಟು ಎಲ್ಲಿಂದ
ಬುಕ್ಕಿಗಳ ಪ್ರಕಾರ ಉತ್ತರಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ 85 ಸೀಟುಗಳು ಎನ್ ಡಿಎ ಪಾಲಾಗಲಿವೆಯಂತೆ. ಹೀಗಾಗಿ ಸಂಸತ್ತಿಗೆ ಈ ರಾಜ್ಯಗಳಿಂದಲೇ ಹೆಚ್ಚಿನ ಪ್ರಮಾಣದ ಸಂಸದರು ಸೇರಲಿದ್ದಾರೆ.
ಮಧ್ಯಪ್ರದೇಶ, ರಾಜಸ್ಥಾನದಲ್ಲೂ ಮೋದಿ ಅಲೆ ಪ್ರಭಾವದಿಂದಾಗಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಲಿದೆ.
ಕರ್ನಾಟಕ ಹಾಗೂ ದಕ್ಷಿಣದ ಕಥೆ ಏನು?
ಕರ್ನಾಟಕದಲ್ಲಿ ಬಿಜೆಪಿಗೆ 18 ಸೀಟು ಸಿಗಲಿದೆ ಎಂದು ಬುಕ್ಕಿಗಳು ಹೇಳಿದ್ದಾರೆ. ತಮಿಳುನಾಡಿನಲ್ಲಿ ಎನ್ ಡಿಎ ಮೈತ್ರಿಕೂಟಕ್ಕೆ 8 ಸೀಟುಗಳು ಲಭ್ಯವಾಗಲಿದೆ. ಆಂಧ್ರದಲ್ಲೂ ಮೋದಿ ಅಲೆಯಿಂದ ಟಿಡಿಪಿಗೆ ಲಾಭವಾಗಲಿದೆ ಎಂಬ ಸುದ್ದಿ ಬಂದಿದೆಯಾದರೂ ಎಷ್ಟು ಸ್ಥಾನ ಸಿಗಬಹುದು ಎಂಬುದರ ಬಗ್ಗೆ ಸ್ಪಷ್ಟವಾಗಿಲ್ಲ. ಕೇರಳದಲ್ಲಿ ಬಿಜೆಪಿ ನಿರೀಕ್ಷೆ ಸುಳ್ಳಾಗಲಿದೆ.

ಪ್ರಿಯಾಂಕಾ ಸ್ಪರ್ಧಿಸಿದ್ದರೆ ಲೆಕ್ಕಾಚಾರ
ಪ್ರಿಯಾಂಕಾ ಗಾಂಧಿ ಬೆಲೆ 12 ಪೈಸೆ ಎಂದು ನಿಗದಿಯಾಗಿರುವುದು ಕಾಂಗ್ರೆಸ್ ಪಾಲಿಗೆ ಸಮಾಧಾನಕರ ಬಹುಮಾನ ಎನ್ನಬಹುದು. ಪ್ರಿಯಾಂಕಾ ಸ್ಪರ್ಧಿಸಿದ್ದರೆ ಲೆಕ್ಕಾಚಾರ ಎಲ್ಲಾ ಉಲ್ಪಾ ಪಲ್ಟಾ ಆಗುತ್ತಿತ್ತು ಎಂದು ಬುಕ್ಕಿಗಳ ಲೆಕ್ಕಾಚಾರ

ಐಪಿಎಲ್ ಜತೆಗೆ ರಾಜಕೀಯ ಬೆಟ್ಟಿಂಗ್ ಭರಾಟೆ
ಐಪಿಎಲ್ ಜತೆಗೆ ರಾಜಕೀಯ ಬೆಟ್ಟಿಂಗ್ ಭರಾಟೆ ಜೋರಾಗಿದೆ. ಮುಂಬೈ, ದೆಹಲಿಯಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್ XI ಪಂಜಾಬ್ ಪರ ಭಾರಿ ಬೆಟ್ಟಿಂಗ್ ಮುಂದುವರೆದಿದೆ.












Click it and Unblock the Notifications