ಜನರ ನಾಡಿ ಮಿಡಿತ ಅರಿಯಲು ನಮೋ Appನಿಂದ ಸಮೀಕ್ಷೆ
ನವದೆಹಲಿ, ಜನವರಿ 16: ಲೋಕಸಭಾ ಚುನಾವಣೆಗಾಗಿ ಮೋದಿ ವಿರೋಧಿ ಬಣ ಅಥವಾ ಮಹಾ ಘಟಬಂಧನ್ ಮಾಡಿರುವ ರಣತಂತ್ರದ ಎಷ್ಟರಮಟ್ಟಿಗೆ ಜನರ ಮೇಲೆ ಪ್ರಭಾವ ಬೀರಿದೆ? ಎಬ ಪ್ರಶ್ನೆ ಸೇರಿದಂತೆ ಮತದಾರರ ಮನದ ಮಾತು, ನಾಡಿ ಮಿಡಿತವನ್ನು ಅರಿಯಲು ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಅಪ್ಲಿಕೇಷನ್ ನಿಂದ ಸಮೀಕ್ಷೆ ನಡೆಸಲಾಗುತ್ತಿದೆ.
ನರೇಂದ್ರ ಮೋದಿ ಮೊಬೈಲ್ ಆಪ್ನಲ್ಲಿ ಹೊಸ ಸಮೀಕ್ಷೆ ಆರಂಭಿಸಲಾಗಿದೆ ಎಂದು ಸಂಕ್ಷಿಪ್ತ ವಿಡಿಯೋ ಮೂಲಕ ಸಮೀಕ್ಷೆಗೆ ಮೋದಿ ಚಾಲನೆ ನೀಡಿದ್ದಾರೆ.
ಸರ್ಕಾರದ ಬಗ್ಗೆ ಮತದಾರರ ನಿಲುವೇನಿದೆ? ನಿಮ್ಮ ಕ್ಷೇತ್ರದ ಪ್ರಗತಿ, ಆರೋಗ್ಯ, ಶಿಕ್ಷಣ, ಭ್ರಷ್ಟಾಚಾರ ರಹಿತ ಆಡಳಿತ, ಸ್ವಚ್ಛ ಭಾರತ್, ರಾಷ್ಟ್ರೀಯ ಭದ್ರತೆ, ಮೂಲ ಸೌಕರ್ಯ, ಗ್ರಾಮೀಣ ಭಾಗದಲ್ಲಿ ವಿದ್ಯುತ್ತೀಕರಣ ಹೀಗೆ ಅನೇಕ ವಿಭಾಗ, ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳಿವೆ.

ಇದಲ್ಲದೆ, ಯಾವ ವಿಚಾರದ ಬಗ್ಗೆ ಸರ್ಕಾರ ಗಮನ ಕೇಂದ್ರೀಕರಿಸಬೇಕು, ಮಹಾಮೈತ್ರಿಯ ರಾಜಕೀಯ ಪರಿಣಾಮ ಸೇರಿ ಇತರ ವಿಚಾರಗಳನ್ನು ಮತದಾರರಿಂದ ಪಡೆಯಲಾಗುತ್ತಿದೆ.
ಚುನಾವಣೆ ತಂತ್ರಗಾರ ಪ್ರಶಾಂತ್ ಕಿಶೋರ್ ವೆಬ್ಸೈಟ್ ಮೂಲಕವು ಇಂತಹ ಪ್ರಯತ್ನ ನಡೆದಿದೆ. ಸ್ಥಳೀಯವಾಗಿ ನಾಯಕರ ಜನಪ್ರಿಯತೆ ಕುರಿತು ಕೂಡ ಸಮೀಕ್ಷೆಯಲ್ಲಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಇದರಿಂದ ಟಿಕೆಟ್ ಹಂಚಿಕೆಗೂ ಕಮಲ ಪಾಳಯಕ್ಕೆ ನೆರವಾಗಲಿದೆ.
ಸಾಮಾಜಿಕ ಜಾಲತಾಣ, ಆಪ್ಗಳು, ಸಾರ್ವಜನಿಕ ಚರ್ಚಾ ವೇದಿಕೆಗಳಂಥ ವಿಭಿನ್ನ ಮಾರ್ಗಗಳ ಮೂಲಕ ನೇರವಾಗಿ ಮತದಾರರ ಅಭಿಪ್ರಾಯ ಪಡೆಯುವ ಹೊಸ ಪ್ರಯೋಗ ಇದಾಗಿದೆ.











Click it and Unblock the Notifications