ನಿತೀಶ್ ಕುಮಾರ್ ಹೊಸ ಬಾಂಬ್: ಕಾಂಗ್ರೆಸ್‌ಗೆ ಪರೋಕ್ಷ ಎಚ್ಚರಿಕೆ?
ನವದೆಹಲಿ: ಪ್ರತಿಪಕ್ಷಗಳ ಒಗ್ಗಟ್ಟು ಒಡೆದ ಮನೆಯಾಗಿದೆ. ಕೇಂದ್ರ ಬಿಜೆಪಿ ಸರ್ಕಾರಕ್ಕೆ ಈ ಬಾರಿ ಬಿಸಿ ಮುಟ್ಟಿಸಿ, ಮೋದಿ ಸರ್ಕಾರವನ್ನ ಸೋಲಿಸುತ್ತೇವೆ ಅಂತಾ ವಿಪಕ್ಷಗಳು ತೊಡೆ ತಟ್ಟಿವೆ. ಆದರೆ ವಿರೋಧ ಪಕ್ಷಗಳ ಬುಡವೇ ಗಟ್ಟಿಯಾಗಿಲ್ಲ ಅನ್ನೋದು ಮತ್ತೆ ಸಾಬೀತು ಆಗಿದ್ದು, ಬಿಹಾರ ಸಿಎಂ ನಿತೀಶ್ ಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ.
2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಗೆಲುವು ಸಾಧಿಸುವುದು ವಿಪಕ್ಷಗಳ ಒನ್‌ಲೈನ್ ಅಜೆಂಡಾ. ಇದೇ ಕಾರಣಕ್ಕೆ ವಿರೋಧ ಪಕ್ಷಗಳ ನಡುವೆ ಒಗ್ಗಟ್ಟು ಮೂಡಿಸಿ, ಮುಂದಿನ ಲೋಕಸಭೆ ಚುನಾವಣೆಗೆ ಸಜ್ಜಾಗಲು ಮೀಟಿಂಗ್ ಮಾಡಲು ಡೇಟ್ ಕೂಡ ಫಿಕ್ಸ್ ಆಗಿದೆ. ಆದ್ರೆ ಈ ಹೊತ್ತಲ್ಲೇ ಕಿರಿಕ್ ಕೂಡ ಶುರುವಾಗಿದೆ. ಈ ಮೊದಲು ಮೀಟಿಂಗ್ ಎಲ್ಲಿ ಮಾಡೋದು ಅಂತಾ ಕಿರಿಕ್ ಮಾಡಿಕೊಂಡಿದ್ದ ವಿಪಕ್ಷ ನಾಯಕರು, ಇದೀಗ ಮೀಟಿಂಗ್‌ಗೆ ಯಾರು ಬರಬೇಕು? ಯಾರು ಬರಬಾರದು? ಅನ್ನೋ ವಿಚಾರಕ್ಕೆ ಫೈಟ್ ಶುರು ಮಾಡಿವೆ (Opposition Meeting).

ನಿತೀಶ್ ಕುಮಾರ್ ಬಾಂಬ್ ಏನು?
ಹೌದು, ಬಿಹಾರದ ಸಿಎಂ ಕೂಡ ಆಗಿರುವ ನಿತೀಶ್ ಕುಮಾರ್ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳನ್ನ ಒಗ್ಗೂಡಿಸುತ್ತಿರುವ ನಾಯಕರೂ ಆಗಿದ್ದಾರೆ. ಹೀಗಾಗಿಯೇ ನಿತೀಶ್ ಮೇಲೆ ಸಾಕಷ್ಟು ಜವಾಬ್ದಾರಿ ಇದೆ. ಹಾಗೂ ನಿತೀಶ್ ಮಾತಿಗೆ ಸಾಕಷ್ಟು ಬೆಲೆಯೂ ಇದೆ. ಈ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ಈಗ ಒಂದು ಮಾತನ್ನ ಹೇಳಿದ್ದು, ಸಂಚಲನ ಸೃಷ್ಟಿ ಆಗಿದೆ. ವಿರೋಧ ಪಕ್ಷಗಳ ಸಭೆಗೂ ಮೊದಲೇ ವಿಪಕ್ಷಗಳ ನಾಯಕರ ನಡುವೆ ಒಗ್ಗಟ್ಟಿನ ಮಂತ್ರ ಕೈಕೊಟ್ಟಿದೆ ಅನ್ನೋದು ಬಿಹಾರದ ಮುಖ್ಯಮಂತ್ರಿ ಮಾತಿನಲ್ಲೇ ಸಾಬೀತಾಗಿದೆ.
ಕಾಂಗ್ರೆಸ್ ಹೇಳಿಕೆಗೆ ಖಡಕ್ ಸಂದೇಶ?
ಜೂನ್ 12ರಂದು ನಿಗದಿಯಾಗಿ ಇದೀಗ ಮುಂದೂಡಿಕೆ ಆಗಿರುವ ವಿರೋಧ ಪಕ್ಷಗಳ ಸಭೆಗೆ, ಆಯಾ ಪಕ್ಷದ ಮುಖ್ಯಸ್ಥರು ಮಾತ್ರ ಬರಬೇಕೆಂದು ನಿತೀಶ್ ಹೇಳಿದ್ದಾರೆ. ನಿತೀಶ್‌ರ ಹೇಳಿಕೆ ಸಂಚಲನ ಸೃಷ್ಟಿಸಿದೆ. ಕಳೆದವಾರ ಬಿಹಾರ ಕಾಂಗ್ರೆಸ್ ಅಧ್ಯಕ್ಷ ಗೊಂದಲ ಮೂಡುವ ಹೇಳಿಕೆ ನೀಡಿದ್ದರು. ತಮ್ಮ ಪಕ್ಷ ಒಬ್ಬ ಮುಖ್ಯಮಂತ್ರಿ & ಇನ್ನೊಬ್ಬ ಹಿರಿಯ ನಾಯಕರನ್ನು ಪ್ರತಿಪಕ್ಷದ ಸಭೆಗೆ ಕಳುಹಿಸಲು ಯೋಜಿಸುತ್ತಿದೆ ಎಂದಿದ್ದರು. ಈ ಬೆನ್ನಲ್ಲೇ ಸಭೆ ಮುಂದೂಡಿಕೆಗೆ ಮನವಿ ಬಂದಿತ್ತು. ಇದೀಗ ನಿತೀಶ್ ಕುಮಾರ್ ಖಡಕ್ ಸಂದೇಶ ನೀಡಿದ್ದಾರೆ.
ನಿತೀಶ್ ಕುಮಾರ್ ಹೇಳಿದ್ದು ಏನು?
ವಿಪಕ್ಷಗಳ ಸಭೆ ಮುಂದೂಡಿಕೆ ಬಗ್ಗೆ ನಿತೀಶ್ ಕುಮಾರ್ ಮಾಹಿತಿ ನೀಡಿದ್ದಾರೆ. 'ವಿಪಕ್ಷಗಳ ಸಭೆ ನಡೆಸಲು ಹಿಂದೆ ನಿಗದಿ ಮಾಡಿದ್ದ ಜೂನ್ 12ರ ದಿನಾಂಕ ಬದಲಾವಣೆಗಾಗಿ ಕಾಂಗ್ರೆಸ್ & ಇನ್ನೊಂದು ಪಕ್ಷ ಮನವಿ ಮಾಡಿತ್ತು. ಹೀಗಾಗಿ ಸಭೆ ಮುಂದೂಡಿದ್ದು ಈಗ ಮತ್ತೊಮ್ಮೆ ಇತರ ಪಕ್ಷಗಳ ನಾಯಕರ ಜೊತೆ ಚರ್ಚಿಸಿ ಸಭೆಗೆ ಹೊಸ ದಿನಾಂಕ ಪ್ರಕಟಿಸುತ್ತೇವೆ' ಎಂದು ನಿತೀಶ್ ಹೇಳಿದ್ದಾರೆ. ಅಲ್ಲದೆ, ವಿಪಕ್ಷಗಳ ಸಭೆಗೆ ಬರಲು ಒಪ್ಪುವ ಪಕ್ಷಗಳು ತಮ್ಮ ಪಕ್ಷದ ಮುಖ್ಯಸ್ಥರನ್ನೇ ಕಳುಹಿಸಬೇಕೆಂದು ಸ್ಪಷ್ಟವಾಗಿ ಹೇಳಿದ್ದಾರೆ ನಿತೀಶ್ ಕುಮಾರ್. ಆದರೆ ಈ ಹೇಳಿಕೆ ಪರೋಕ್ಷವಾಗಿ ಕಾಂಗ್ರೆಸ್ ನಾಯಕರ ವಿರುದ್ಧ ಚಾಟಿ ಬೀಸಿದಂತೆ ಭಾಸವಾಗುತ್ತಿದೆ.

ಮಮತಾ ಬ್ಯಾನರ್ಜಿ VS ಕಾಂಗ್ರೆಸ್ ಲೀಡರ್ಸ್
2024ರ ಲೋಕಸಭಾ ಚುನವಣೆಗಾಗಿ ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಮಹಾಮೈತ್ರಿ ರೂಪಿಸಲು ಪ್ರಯತ್ನ ಆರಂಭಿಸಿದ್ದ ವಿಪಕ್ಷಗಳ ನಾಯಕರು ಆ ಕಸರತ್ತು ಮುಂದುವರಿಸಿದ್ದಾರೆ. ಜೂನ್ 12ರಂದು ಸಭೆ ನಿಗದಿ ಮಾಡಿ ಎಲ್ಲಾ ಸಿದ್ಧತೆ ಮಾಡಲಾಗಿತ್ತು. ಆದರೆ ಅಂತಿಮ ಕ್ಷಣದಲ್ಲಿ ದೊಡ್ಡ ಬದಲಾವಣೆ ಆಗಿದೆ. ಹಾಗಾದ್ರೆ ದಿಢೀರ್ ಸಭೆ ಮುಂದೂಡಿಕೆ ಆಗಿದ್ದು ಏಕೆ? ಸಭೆ ವಿಚಾರದಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಕಾಂಗ್ರೆಸ್ ನಡುವೆ ಒಳಗೊಳಗೆ ಕಿತ್ತಾಟ ಶುರುವಾಗಿದೆಯಾ? ಬನ್ನಿ ತಿಳಿಯೋಣ.
ಮಹತ್ವದ ಸಭೆಯೇ ಈಗ ಮುಂದೂಡಿಕೆ!
'ಎತ್ತು ಏರಿಗೆ ಕೋಣ ನೀರಿಗೆ' ಎಂಬಂತೆ ವಿಪಕ್ಷ ನಾಯಕರ ನಡುವೆ ಒಮ್ಮತ ಮೂಡುತ್ತಿಲ್ಲ. ಪಕ್ಷಗಳ ನಡುವಿನ ಭಿನ್ನಾಭಿಪ್ರಾಯದ ಕಾರಣ ಬಿಹಾರದಲ್ಲಿ ನಡೆಸಲು ಉದ್ದೇಶಿಸಿದ್ದ ವಿಪಕ್ಷಗಳ ಜಂಟಿ ಸಭೆ ಸ್ಥಳ ಹಾಗೂ ದಿನಾಂಕ ಘೋಷಣೆ ಲೇಟ್ ಆಗುತ್ತಾ ಬಂದಿತ್ತು. ಕಿತ್ತಾಟದ ಪರಿಣಾಮ ಲೋಕಸಭಾ ಚುನಾವಣೆ ಮೇಲೆ ಆಗೋದು ಪಕ್ಕಾ ಅನ್ನೋ ಮಾತು ಕೇಳಿಬರುತ್ತಿತ್ತು. ಆದರೆ ಕೊನೆಗೆ ಮಾತುಕತೆ ಫೈನಲ್ ಆಗಿ, ಅಂತಿಮವಾಗಿ ಮಮತಾ ಬ್ಯಾನರ್ಜಿ ಬಣ ಹೇಳಿದಂತೆ ಸಭೆ ಬಿಹಾರದಲ್ಲೇ ನಡೆಯೋದು ಫಿಕ್ಸ್ ಆಗಿತ್ತು. ಜೂನ್ 12ರಂದು ವಿಪಕ್ಷಗಳ ನಾಯಕರ ಸಭೆಗೆ ಮುಹೂರ್ತ ಫಿಕ್ಸ್ ಆಗಿತ್ತು, ಆದ್ರೆ ಈಗ ಮತ್ತೆ ಕಿರಿಕ್ ಶುರುವಾಗಿದೆ.
ದೇಶಕ್ಕೆ ಕರ್ನಾಟಕ ರಿಸಲ್ಟ್ ಮಾದರಿ!
ಅಷ್ಟಕ್ಕೂ ಕರ್ನಾಟಕ ಫಲಿತಾಂಶ ರಾಷ್ಟ್ರ ಮಟ್ಟದಲ್ಲೂ ಭಾರಿ ಪರಿಣಾಮ ಬೀರಿದೆ. ಅದ್ರಲ್ಲೂ ರಾಷ್ಟ್ರ ರಾಜಕಾರಣದಲ್ಲಿ ಕರ್ನಾಟಕ ಚುನಾವಣೆ ಸಂಚಲನ ಸೃಷ್ಟಿಸಿದೆ. ಕಾಂಗ್ರೆಸ್ ಪಕ್ಷ ಇದೇ ಆಧಾರದಲ್ಲಿ 2024ರ ಲೋಕಸಭೆ ಚುನಾವಣೆಗೆ ಸಜ್ಜಾಗುತ್ತಿದೆ. ಅದರಲ್ಲೂ ವಿಪಕ್ಷ ನಾಯಕರು ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶದ ಉದಾಹರಣೆ ನೀಡಿ, ಮುಂಬರುವ ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಇಷ್ಟೆಲ್ಲಾ ಆದ್ರೂ ವಿಪಕ್ಷ ನಾಯಕರಲ್ಲಿ ಮಾತ್ರ ಒಗ್ಗಟ್ಟು ಮೂಡುತ್ತಿಲ್ಲ. ಇದೀಗ ಸಭೆ ಮುಂದೂಡಿಕೆ ಕೂಡ ಅದರ ಒಂದು ಭಾಗ ಎಂದರೂ ತಪ್ಪಾಗುವುದಿಲ್ಲ.

ಕಾಂಗ್ರೆಸ್ ನೇತೃತ್ವ ಬೇಡ ಅಂದಿದ್ರಾ ಮಮತಾ?
ಬಿಹಾರ ಸಿಎಂ ನಿತೀಶ್ ವಿರೋಧ ಪಕ್ಷಗಳ ನಾಯಕರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ರೆ, ಮತ್ತೊಂದು ಕಡೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನಿತೀಶ್ ಕಾರ್ಯಕ್ಕೆ ಹೆಗಲು ನೀಡಿದ್ದಾರೆ. ಹೀಗೆ ವಿಪಕ್ಷ ನಾಯಕರು ತಮ್ಮ ಮಧ್ಯೆ ಭಿನ್ನಾಭಿಪ್ರಾಯ ಮರೆತು ಒಂದಾಗುವ ಮುನ್ಸೂಚನೆ ಕೂಡ ಸಿಕ್ಕಿತ್ತು. ಆ ಮೂಲಕ ಮುಂಬರುವ ದಿನಗಳಲ್ಲಿ ಒಗ್ಗಟ್ಟಿನ ಹೋರಾಟ ಪ್ರದರ್ಶಿಸಲು ಸಜ್ಜಾಗಿದ್ದಾರೆ ಎನ್ನಲಾಗಿತ್ತು. ಈ ಕಾರಣಕ್ಕೆ ಕಾಂಗ್ರೆಸ್ ನೇತೃತ್ವ ತೋರಿಸುವುದು ಬೇಡ ಅನ್ನೋದು ಮಮತಾ ಬ್ಯಾನರ್ಜಿ ಪ್ಲ್ಯಾನ್ ಆಗಿತ್ತು ಎಂಬ ವಾದ ಕೂಡ ಇದೆ. ಆದರೆ ಇದೀಗ ವಿರೋಧ ಪಕ್ಷಗಳ ಒಳಗೇ ತಿಕ್ಕಾಟ ಶುರುವಾಗಿದೆ.
ಒಟ್ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಒಗ್ಗಟ್ಟಿನ ಮಂತ್ರ ಜಪಿಸುತ್ತಿರುವ ವಿರೋಧ ಪಕ್ಷಗಳ ನಾಯಕರ ನಡುವೆಯೇ ಒಗ್ಗಟ್ಟು ಮೂಡುತ್ತಿಲ್ಲ. ಹೀಗಾಗಿ ಕಿರಿಕ್ ಶುರುವಾಗಿದೆ. ಮಮತಾ ಬ್ಯಾನರ್ಜಿ ಕಾಂಗ್ರೆಸ್ ನಾಯಕರ ನಿರ್ಧಾರಗಳಿಗೆ ಕೆಂಡವಾಗುತ್ತಿದ್ದಾರೆ. ಈ ಎಲ್ಲಾ ಅಡ್ಡಿಯ ನಡುವೆ, ವಿಪಕ್ಷಗಳ ಜೂನ್ 12ರ ಸಭೆ ಕೂಡ ಮುಂದೂಡಿಕೆ ಆಗಿದೆ. ಹೀಗಾಗಿ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದ ವಿಪಕ್ಷಗಳ ಒಗ್ಗಟ್ಟಿನಲ್ಲಿ ಬಿರುಕು ಮೂಡಿದೆಯಾ? ಎಂಬ ಅನುಮಾನ ಮತದಾರ ಪ್ರಭುವನ್ನ ಕಾಡುತ್ತಿರುವುದು ಸುಳ್ಳಲ್ಲ.












Click it and Unblock the Notifications