ವೈದ್ಯಕೀಯ ಶಿಕ್ಷಣಕ್ಕಾಗಿ ಭಾರತೀಯ ವಿದ್ಯಾರ್ಥಿಗಳು ಉಕ್ರೇನ್‌ಗೆ ಏಕೆ ಹೋಗುತ್ತಾರೆ?
ನವದೆಹಲಿ, ಫೆಬ್ರವರಿ 26: ಕಳೆದ ಎರಡು ದಿನಗಳಿಂದ ಉಕ್ರೇನ್ ಮೇಲೆ ರಷ್ಯಾ ನಿರಂತರವಾಗಿ ದಾಳಿ ಮಾಡುತ್ತಿದ್ದು, ಮಧ್ಯೆ ಪೂರ್ವ ಯುರೋಪಿನಲ್ಲಿ ಬಿಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಉಕ್ರೇನ್‌ನಿಂದ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವಂತೆ ಭಾರತೀಯ ವಿದ್ಯಾರ್ಥಿಗಳು ಮನವಿ ಮಾಡುತ್ತಿದ್ದಾರೆ. ಉಕ್ರೇನ್ ವಿರುದ್ಧ ರಷ್ಯಾದ ಆಕ್ರಮಣವು ಕರ್ನಾಟಕದಾದ್ಯಂತ ನೂರಾರು ಪೋಷಕರನ್ನು ತಲ್ಲಣಗೊಳಿಸಿದೆ.
ಯುದ್ಧ- ಹಾನಿಗೊಳಗಾದ ದೇಶದಲ್ಲಿ ಭಾರತೀಯ ವಿದ್ಯಾರ್ಥಿಗಳ ದೊಡ್ಡ ಸಮೂಹವಿದೆ. ಉಕ್ರೇನ್ ಅನ್ನು ವೈದ್ಯಕೀಯ ಶಿಕ್ಷಣದ ಕೇಂದ್ರವನ್ನಾಗಿ ಆಯ್ಕೆ ಮಾಡಿಕೊಂಡಿರುವುದು ಅನೇಕರನ್ನು ಆಶ್ಚರ್ಯ ಪಡುವಂತೆ ಮಾಡಿದೆ. ತಜ್ಞರ ಪ್ರಕಾರ, ಉಕ್ರೇನ್‌ನಲ್ಲಿ ಕೈಗೆಟುಕುವ ಶುಲ್ಕ ರಚನೆ, ಯಾವುದೇ ಪರೀಕ್ಷೆಗಳಿಲ್ಲದೆ ಮುಕ್ತ ಮತ್ತು ನೇರ ಪ್ರವೇಶವು ಹೆಚ್ಚುತ್ತಿರುವ ವೈದ್ಯಕೀಯ ಶಿಕ್ಷಣದ ವೆಚ್ಚವನ್ನು ನಿಭಾಯಿಸಲು ಹೆಣಗಾಡುತ್ತಿರುವ ಭಾರತದ ವಿದ್ಯಾರ್ಥಿಗಳನ್ನು ಕೈಬೀಸಿ ಕರೆಯುತ್ತದೆ.
ಯಾವುದೇ ಪ್ರವೇಶ ಪರೀಕ್ಷೆಗಳಿಲ್ಲ ಮತ್ತು ಭಾರತಕ್ಕೆ ಹೋಲಿಸಿದರೆ ಶಿಕ್ಷಣದ ವೆಚ್ಚವೂ ಕೈಗೆಟುಕುವ ಕಾರಣ, ಉಕ್ರೇನ್ ಅಥವಾ ರಷ್ಯಾದ ಯಾವುದೇ ಕಾಲೇಜುಗಳಲ್ಲಿ ಪ್ರವೇಶ ಪಡೆಯುವುದು ಸುಲಭ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (RGUHS) ಮಾಜಿ ಉಪಕುಲಪತಿಯೊಬ್ಬರು ತಿಳಿಸಿದ್ದಾರೆ.

"ಉಕ್ರೇನ್‌ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ನೀಟ್ (NEET) ಪರೀಕ್ಷೆ ಮೂಲಕ ಸೀಟ್ ಪಡೆಯಲು ಅನರ್ಹರಾಗಿರುತ್ತಾರೆ ಅಥವಾ ಮ್ಯಾನೇಜ್‌ಮೆಂಟ್ ಕೋಟಾದ ಅಡಿಯಲ್ಲಿ ವೈದ್ಯಕೀಯ ಶಿಕ್ಷಣದ ವೆಚ್ಚವನ್ನು ಭರಿಸಲಾಗುವುದಿಲ್ಲ,'' ಎಂದು ಅವರು ವಿವರಿಸಿದ್ದಾರೆ.
ತಜ್ಞರ ಪ್ರಕಾರ, ಸರಾಸರಿ 10,000 ವಿದ್ಯಾರ್ಥಿಗಳು ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಪಶು ವೈದ್ಯಕೀಯ ಕೋರ್ಸ್‌ಗಳನ್ನು ಪಡೆಯಲು ಪ್ರತಿ ವರ್ಷ ಉಕ್ರೇನ್‌ಗೆ ಭಾರತದಿಂದ ಹೋಗುತ್ತಾರೆ.
ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ.ಪಿ.ಜಿ. ಗಿರೀಶ್ ಮಾತನಾಡಿ, ''ಶುಲ್ಕ ವ್ಯವಸ್ಥೆ ನೋಡಿದರೆ ಭಾರತದಲ್ಲಿನ ಖಾಸಗಿ ವೈದ್ಯಕೀಯ ಕಾಲೇಜುಗಳು ಮ್ಯಾನೇಜ್‌ಮೆಂಟ್ ಕೋಟಾದಡಿ ವಿಧಿಸುವ ಒಂದು ವರ್ಷದ ಶುಲ್ಕವನ್ನು ಉಕ್ರೇನ್‌ನಲ್ಲಿಯೇ ಸಂಪೂರ್ಣ ಎಂಬಿಬಿಎಸ್ ಕೋರ್ಸ್ ಮುಗಿಸಬಹುದು," ಎಂದಿದ್ದಾರೆ.
"ಉಕ್ರೇನ್‌ನಲ್ಲಿ ಆರು ವರ್ಷಗಳ ಎಂಬಿಬಿಎಸ್ ಕೋರ್ಸ್‌ಗೆ ಅಂದಾಜು ವೆಚ್ಚ ಸುಮಾರು 17 ಲಕ್ಷ ರೂಪಾಯಿ ಮತ್ತು ವಸತಿಗಾಗಿ ಇನ್ನೂ 3.5 ಲಕ್ಷ ರೂಪಾಯಿ ವೆಚ್ಚವಾಗಲಿದೆ ಎಂದು ತಜ್ಞರು ಬಹಿರಂಗಪಡಿಸಿದ್ದಾರೆ. ಆದರೆ, ಭಾರತದಲ್ಲಿ ಮ್ಯಾನೇಜ್‌ಮೆಂಟ್ ಕೋಟಾದಡಿಯಲ್ಲಿ ನಾಲ್ಕೂವರೆ ವರ್ಷಗಳ ಕೋರ್ಸ್‌ಗೆ ಒಬ್ಬರು ವರ್ಷಕ್ಕೆ ಸುಮಾರು 1 ಕೋಟಿ ರೂಪಾಯಿ ಖರ್ಚು ಮಾಡುತ್ತಾರೆ ಎಂದು ಅಂದಾಜಿಸಿದ್ದಾರೆ''.
"ಆದಾಗ್ಯೂ, ಬೋಧನೆ ಮತ್ತು ಸಂಶೋಧನೆಯ ಗುಣಮಟ್ಟ ಮತ್ತು ಸುಧಾರಿತ ವಿಧಾನಗಳಲ್ಲಿ ಉಕ್ರೇನ್‌ಗಿಂತ ಭಾರತದ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಉತ್ತಮವಾಗಿವೆ,'' ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ. ಗಿರೀಶ್ ವಿಶ್ವಾಸ ವ್ಯಕ್ತಪಡಿಸಿದರು.

"ಈ ಕಾರಣಕ್ಕಾಗಿಯೇ ಕೇಂದ್ರವು ಸಾಗರೋತ್ತರ ವಿಶ್ವವಿದ್ಯಾಲಯಗಳಿಂದ ವೈದ್ಯಕೀಯ ಪದವಿಗಳನ್ನು ಪೂರ್ಣಗೊಳಿಸಿದವರಿಗೆ ಕಡ್ಡಾಯ ಅರ್ಹತಾ ಪರೀಕ್ಷೆಯನ್ನು ಪರಿಚಯಿಸಲಾಗಿದೆ. ಅವರು ಅರ್ಹತೆ ಪಡೆಯಲು ವಿಫಲರಾದರೆ, ಅವರು ಇಲ್ಲಿ ಭಾರತದಲ್ಲಿ ಅಭ್ಯಾಸ ಮಾಡಲು ಅರ್ಹರಲ್ಲ," ಎಂದು ಅವರು ಹೇಳಿದರು.
ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ (NMC) ಸಂಬಂಧಿಸಿದ ಮೂಲಗಳ ಪ್ರಕಾರ, ಉಕ್ರೇನ್‌ನಂತಹ ದೇಶಗಳ ವೈದ್ಯಕೀಯ ಪದವೀಧರರಲ್ಲಿ ಶೇ.18ರಷ್ಟು ಸಹ ಭಾರತದಲ್ಲಿ ವಿದೇಶಿ ವೈದ್ಯಕೀಯ ಪದವೀಧರರ ಪರೀಕ್ಷೆಯನ್ನು (FMGE) ತೇರ್ಗಡೆಯಾಗುವುದಿಲ್ಲ. ಉಕ್ರೇನ್, ಚೀನಾ, ಫಿಲಿಪೈನ್ಸ್ ಮತ್ತು ರಷ್ಯಾದಿಂದ ವೈದ್ಯಕೀಯ ಪದವಿ ಹೊಂದಿರುವ ವಿದ್ಯಾರ್ಥಿಗಳು ಸಾಮಾನ್ಯವಾಗಿ ಅರ್ಹತೆಗಾಗಿ ಈ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಾರೆ.
ಎನ್‌ಎಂಸಿಯ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮಂಡಳಿಯ ಅಧ್ಯಕ್ಷರಾಗಿದ್ದ ಆರ್‌ಜಿಯುಎಚ್‌ಎಸ್‌ನ ಉಪ ಕುಲಪತಿ ಡಾ.ಎಂ.ಕೆ. ರಮೇಶ್ ಮಾತನಾಡಿ, "ಶಿಕ್ಷಣದ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು ಎಫ್‌ಎಂಜಿಇ ತೇರ್ಗಡೆಯಾದವರಿಗೆ ಕಡ್ಡಾಯ ಇಂಟರ್ನ್‌ಶಿಪ್ ಅನ್ನು ಸಹ ಎನ್‌ಎಂಸಿ ಪರಿಚಯಿಸಿದೆ. ಭಾರತದಲ್ಲಿ ಅಭ್ಯಾಸ ಮಾಡಲು ಅನುಮತಿಸಲಾಗಿದೆ," ಎಂದರು.
ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮಾಜಿ ನಿರ್ದೇಶಕ ಕೆ.ಎಸ್. ಗಂಗಾಧರ್ ಅವರ ಪ್ರಕಾರ, "ಕರ್ನಾಟಕವು ಸುಮಾರು 63 ವೈದ್ಯಕೀಯ ಕಾಲೇಜುಗಳನ್ನು ಹೊಂದಿದೆ ಮತ್ತು ಅವುಗಳಲ್ಲಿ 20 ಸರ್ಕಾರಿ ಕಾಲೇಜುಗಳಾಗಿವೆ. ಉಳಿದವುಗಳು ಖಾಸಗಿ ಅಥವಾ ಡೀಮ್ಡ್ ವಿಶ್ವವಿದ್ಯಾಲಯಗಳಾಗಿವೆ. ಅವರು ತಮ್ಮ ಒಟ್ಟು ಸೀಟುಗಳಲ್ಲಿ ಶೇ.40ರಷ್ಟನ್ನು ಸರ್ಕಾರಿ ಕೋಟಾ ವಿದ್ಯಾರ್ಥಿಗಳಿಗೆ ನೀಡಿದರೆ, ಶೇ.60ರಷ್ಟು ಸೀಟುಗಳನ್ನು ಮ್ಯಾನೇಜ್‌ಮೆಂಟ್ ಕೋಟಾದಡಿಯಲ್ಲಿ ಸೇರಿಸಿಕೊಳ್ಳಲಾಗುತ್ತದೆ," ಎಂದು ಮಾಹಿತಿ ನೀಡಿದರು.












Click it and Unblock the Notifications