Uniform Civil Code: ಏಕರೂಪ ನಾಗರಿಕ ಸಂಹಿತೆಯನ್ನು ಖಡಾಖಂಡಿತವಾಗಿ ಒಪ್ಪಲ್ಲವೆಂದ ಎಐಎಡಿಎಂಕೆ- ಬಿಜೆಪಿ ಮಹದಾಸೆಗೆ ತಣ್ಣೀರು
ಚೆನ್ನೈ, ಜುಲೈ 05: ಕಳೆದ ಕೆಲ ದಿನಗಳಿಂದ ದೇಶದಾದ್ಯಂತ ಏಕರೂಪ ನಾಗರಿಕ ಸಂಹಿತೆ ವಿಚಾರ ಭಾರೀ ಚರ್ಚೆಯಲ್ಲಿದೆ. ಪ್ರಧಾನಿ ಮೋದಿ ಹಾಗೂ ಬಿಜೆಪಿ ನಾಯಕರು ಏಕರೂಪ ನಾಗರಿಕ ಸಂಹಿತೆ ಜಾರಿ ಕುರಿತು ಮಾತನಾಡಿದ್ದಾರೆ. ಇದಕ್ಕೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಆದರೆ, ಎನ್‌ಡಿಎ ಮೈತ್ರಿಕೂಟದಲ್ಲಿರುವ ತಮಿಳುನಾಡಿನ ಎಐಎಡಿಎಂಕೆ ಪಕ್ಷವು ಇದಕ್ಕೆ ವಿರೋಧ ವ್ಯಕ್ತಪಡಿಸಿರುವುದು ಅಚ್ಚರಿಗೆ ಕಾರಣವಾಗಿದೆ.
ಈ ವಿಚಾರವಾಗಿ ತಮಿಳು ನಾಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಎಐಎಡಿಎಂಕೆ ಅಧ್ಯಕ್ಷ, ಮಾಜಿ ಸಿಎಂ ಕೆ ಪಳನಿಸ್ವಾಮಿ, 'ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬಿಜೆಪಿ ಮುಂದಾಗಿದೆ. ಆದರೆ, 2019 ರ ಲೋಕಸಭೆ ಚುನಾವಣೆಯಲ್ಲಿ ನಾವು ಪ್ರಕಟಿಸಿದ್ದ ಪ್ರಣಾಳಿಕೆಯಲ್ಲಿ ನಮ್ಮ ನಿಲುವನ್ನು ತಿಳಿಸಿದ್ದೆವು' ಎಂದು ಹೇಳಿದ್ದಾರೆ.

ಚೆನ್ನೈನಲ್ಲಿ ನಡೆದ ಪಕ್ಷದ ಜಿಲ್ಲಾ ಕಾರ್ಯದರ್ಶಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಪ್ರಣಾಳಿಕೆಯನ್ನು ಓದಿ, ಅದರಲ್ಲಿ ಸ್ಪಷ್ಟವಾಗಿ ನಮೂದಿಸಿದ್ದೇವೆ. ನಾವು ಏಕರೂಪ ನಾಕರಿಕತೆಯ ಪರ ಇಲ್ಲ ಎಂದು ತಿಳಿಸಿದ್ದಾರೆ.
'ಅಲ್ಪಸಂಖ್ಯಾತರ ( ಮುಸ್ಲಿಮರು, ಕ್ರೈಸ್ತರು, ಸಿಕ್ಖರು ) ಧಾರ್ಮಿಕ ಹಕ್ಕುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಏಕರೂಪ ನಾಗರಿಕ ಸಂಹಿತೆಯನ್ನು ಪಕ್ಷವು ವಿರೋಧಿಸಲಿದೆ. ಈ ಕುರಿತು ಸಂವಿಧಾನಕ್ಕೆ ಯಾವುದೇ ತಿದ್ದುಪಡಿಗಳನ್ನು ತರದಂತೆ ಭಾರತ ಸರ್ಕಾರವನ್ನು ಎಐಎಡಿಎಂಕೆ ಒತ್ತಾಯಿಸುತ್ತದೆ' ಎಂದು ಈ ಹಿಂದಿನ ಪ್ರಣಾಳಿಕೆಯಲ್ಲಿ ಹೇಳಲಾಗಿದೆ.

2024 ರ ಲೋಕಸಭಾ ಚುನಾವಣೆಗೆ ಬಿಜೆಪಿಯೊಂದಿಗೆ ತಮ್ಮ ಪಕ್ಷದ ಮೈತ್ರಿ ಮುಂದುವರಿಯುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪಳನಿಸ್ವಾಮಿ, 'ಈಗ ಯಾವುದೇ ಚುನಾವಣೆ ಇಲ್ಲ. ಲೋಕಸಭೆ ಚುನಾವಣೆಗೆ ಒಂದು ವರ್ಷವಿದೆ. ನಮಗೆ ಯಾವುದೇ ತುರ್ತು ಇಲ್ಲ. ಚುನಾವಣೆಯ ಸಮಯದಲ್ಲಿ ಎಲ್ಲವನ್ನೂ ಬಹಿರಂಗಪಡಿಸುತ್ತೇವೆ. ನಾವು ಯಾವ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದೇವೆ ಎಂಬುದನ್ನು ನಿಮಗೆ ಖಚಿತವಾಗಿ ಹೇಳುತ್ತೇವೆ' ಎಂದು ಹೇಳಿದ್ದಾರೆ.
ಸೂಕ್ತ ಸಮಯದಲ್ಲಿ ಎಲ್ಲವನ್ನೂ ಪಾರದರ್ಶಕವಾಗಿ ಮಾತನಾಡಲಾಗುವುದು ಎಂದೂ ಪಳನಿಸ್ವಾಮಿ ತಿಳಿಸಿದ್ದಾರೆ.
ಪಕ್ಷದ ಸಂಸ್ಥಾಪಕ ಎಂಜಿ ರಾಮಚಂದ್ರನ್ ಹಾಗೂ ಮಾಜಿ ಸಿಎಂ ಜಯಲಲಿತಾ ಅವರ ಹೆಜ್ಜೆಗಳನ್ನು ನಾವು ಅನುಸರಿಸುತ್ತೇವೆ. ಅವರ ಈ ಹಿಂದೆ ತಳೆದಿದ್ದ ನಿಲುವಿನಂತೆ ಮೈತ್ರಿ ಮಾಡಿಕೊಳ್ಳಲಾಗುವುದು. ಬಿಜೆಪಿಯೊಂದಿಗಿನ ನಮ್ಮ ಮೈತ್ರಿ ಕುರಿತು ಈಗಾಗಲೇ ಸ್ಪಷ್ಟಪಡಿಸಲಾಗಿದೆ ಎಂದು ಅವರು ಪುನರುಚ್ಚರಿಸಿದರು.











Click it and Unblock the Notifications