ಬಿಜೆಪಿ VS ಕಾಂಗ್ರೆಸ್: 3 ಬಾರಿ ಗೆದ್ದು ಹ್ಯಾಟ್ರಿಕ್ ಪಡೆದ ಬಿಜೆಪಿಗೆ ಮತ್ತೆ ಸೋಲು!
ದೇಶದಲ್ಲಿ ಕಾಂಗ್ರೆಸ್ ಮುಕ್ತ ವಾತಾವರಣ ನಿರ್ಮಾಣ ಮಾಡಬೇಕು ಅನ್ನೋದು ಬಿಜೆಪಿಯ ಗುರಿ, ಆದರೆ ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಶಕ್ತಿ ತೋರಿಸುತ್ತಿದೆ ಅನ್ನೋ ಮಾತು ಕಾಂಗ್ರೆಸ್ ನಾಯಕರದ್ದು. ಹೀಗೆ ಪಂಚರಾಜ್ಯ ಚುನಾವಣೆಯಲ್ಲೂ, ಈ ಸ್ಟ್ರಾಟಜಿ ಮುಂದೆ ಇಟ್ಟುಕೊಂಡು ಬಿಜೆಪಿ ಮತ್ತು ಕಾಂಗ್ರೆಸ್ ಫೈಟ್ ಮಾಡಿವೆ. ಈ ಪೈಕಿ, ಬಿಜೆಪಿ ನಾಯಕರಿಗೆ ಅದೊಂದು ರಾಜ್ಯದಲ್ಲಿ ಮತ್ತೆ ಆಘಾತ ಎದುರಾಗುವುದು ಬಹುತೇಕ ಪಕ್ಕಾ ಆಗಿದೆ.
ಪಂಚರಾಜ್ಯ ಚುನಾವಣೆಯ ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಕಠಿಣ ಪೈಪೋಟಿ ಇರೋದು ಗೊತ್ತಾಗಿದೆ. ಆದರೆ ತೀವ್ರ ಕುತೂಹಲ ಕೆರಳಿಸಿ ದೇಶದ ಗಮನ ಸೆಳೆದಿದ್ದ ಛತ್ತೀಸ್‌ಗಢ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಗೆಲ್ಲುವುದು ಈಗ ಬಹುತೇಕ ಪಕ್ಕಾ ಆಗಿದೆ. ಇದು ಬಿಜೆಪಿ ನಾಯಕರಿಗೆ ದೊಡ್ಡ ಆಘಾತ ನೀಡಿದೆ. ಅದ್ರಲ್ಲೂ 3 ಬಾರಿ ಸತತವಾಗಿ ಛತ್ತೀಸ್‌ಗಢ ರಾಜ್ಯದಲ್ಲಿ ಸರ್ಕಾರ ರಚಿಸಿದ್ದ ಬಿಜೆಪಿ ಮತ್ತೊಮ್ಮೆ ಭಾರಿ ಮುಖಭಂಗ ಅನುಭವಿಸುವ ಸಾಧ್ಯತೆ ಇದೆ ಅಂತಿವೆ ಸಮೀಕ್ಷೆಗಳು.

ಭದ್ರಕೋಟೆಯಲ್ಲೇ ಬಿಜೆಪಿಗೆ ಬಿಗ್ ಶಾಕ್?
ಬಿಜೆಪಿಗೆ ಈ ಮೊದಲು ಇಲ್ಲಿ ಗಟ್ಟಿ ನೆಲೆ ಇತ್ತು. ಅದರಲ್ಲೂ 2003, 2008, 2013ರ ಎಲೆಕ್ಷನ್ ಅಖಾಡದಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿತ್ತು. ಆದರೆ, 2018ರಲ್ಲಿ ಹೀನಾಯ ಸೋಲು ಕಂಡ ಬಿಜೆಪಿ 2023ರಲ್ಲಿ ಮತ್ತೆ ಛತ್ತೀಸ್‌ಗಢ ರಾಜ್ಯವನ್ನ ಗೆಲ್ಲುವ ನಿರೀಕ್ಷೆ ಹೊಂದಿತ್ತು. ಆದರೆ ಈಗ ಬಿಜೆಪಿ ನಾಯಕರಿಗೆ ಮತ್ತೆ ಸೋಲಿನ ಭೀತಿ ಎದುರಾಗಿದೆ. ಕಾಂಗ್ರೆಸ್ ಮತ್ತೆ ಅಧಿಕಾರ ಹಿಡಿಯಬಹುದು ಅಂತಿವೆ ಸಮೀಕ್ಷೆಗಳು. ಹಾಗಾದರೆ ಯಾವ ಯಾವ ಚುನಾವಣೋತ್ತರ ಸಮೀಕ್ಷೆಗಳು ಏನು ಹೇಳಿವೆ?
ಯಾವ ಸಮೀಕ್ಷೆ ಏನು ಹೇಳುತ್ತೆ?
ಛತ್ತೀಸ್‌ಗಢ ರಾಜ್ಯದಲ್ಲಿ ಹಲವು ಚುನಾವಣೋತ್ತರ ಸಮೀಕ್ಷೆಗಳು ಜನರಿಂದ ಮಾಹಿತಿಯನ್ನ ಸಂಗ್ರಹ ಮಾಡಿವೆ. ಈ ಪೈಕಿ ಎಬಿಪಿ & ಸಿ-ವೋಟರ್ ಸಮೀಕ್ಷೆಯ ಪ್ರಕಾರ, ಕಾಂಗ್ರೆಸ್ 41 ರಿಂದ 53 ಸ್ಥಾನ ಪಡೆಯಬಹುದು ಎನ್ನಲಾಗಿದೆ. ಬಿಜೆಪಿ 36ರಿಂದ 48 ಸ್ಥಾನ ಗೆಲ್ಲಬಹುದು ಅಂತಾ ಹೇಳಿದ್ದರೆ, ಇತರರು 0-4 ಸ್ಥಾನ ಗೆಲ್ಲಬಹುದು ಅಂತಿದೆ ಎಬಿಪಿ & ಸಿ-ವೋಟರ್ ಸಮೀಕ್ಷೆ. 'ಜನ್ ಕಿ ಬಾತ್' ಸಮೀಕ್ಷೆ ಪ್ರಕಾರ ಕಾಂಗ್ರೆಸ್ 42-53 ಸ್ಥಾನ ಪಡೆಯಬಹುದು ಎನ್ನಲಾಗಿದೆ. ಬಿಜೆಪಿ 34-45 ಸ್ಥಾನ ಗೆಲ್ಲಬಹುದು ಅಂತಾ ಹೇಳಿದ್ದರೆ ಇತರರು 0-3 ಸ್ಥಾನ ಗೆಲ್ಲಬಹುದು ಅಂತಾ ಹೇಳಲಾಗಿದೆ.

ಇಂಡಿಯಾ ಟುಡೇ & ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 40-50 ಸ್ಥಾನ ಗೆಲ್ಲಬಹುದು ಎಂಬ ನಿರೀಕ್ಷೆ ಮೂಡಿದ್ದರೆ, ಬಿಜೆಪಿ 36-46 ಸ್ಥಾನ ಹಾಗೂ ಇತರರು 1-5 ಸ್ಥಾನದಲ್ಲಿ ಜಯ ಗಳಿಸಬಹುದು ಎನ್ನಲಾಗಿದೆ. ಹಾಗೇ ಟಿವಿ5 ಚುನಾವಣೋತ್ತರ ಸಮೀಕ್ಷೆ ಪ್ರಕಾರ ಕಾಂಗ್ರೆಸ್‌ಗೆ 54-66 ಸ್ಥಾನ, ಬಿಜೆಪಿಗೆ 29-39 ಸ್ಥಾನ ಮತ್ತು ಇತರರಿಗೆ ಸ್ಥಾನ ಸಿಗಲ್ಲ ಎನ್ನಲಾಗಿದೆ. ಈ ಮೂಲಕ ಛತ್ತೀಸ್‌ಗಢ ರಾಜ್ಯದಲ್ಲಿ ಗೆಲುವು ಯಾರಿಗೆ ಅನ್ನೋದು ಭಾರಿ ಕುತೂಹಲ ಕೆರಳಿಸಿದೆ.
ಏನೆಲ್ಲಾ ಭರವಸೆ ನೀಡಿತ್ತು ಬಿಜೆಪಿ?
ಛತ್ತೀಸ್‌ಗಢ ಜನರಿಗೆ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದ್ರೆ 500 ರೂ.ಗೆ ಸಿಲಿಂಡರ್ ಕೊಡುವ ಭರವಸೆ ಸೇರಿದಂತೆ ಹಲವು ವಾಗ್ದಾನ ನೀಡಲಾಗಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೆ ಛತ್ತೀಸ್‌ಗಢ ಪ್ರಣಾಳಿಕೆ ಬಿಡುಗಡೆ ಮಾಡಿದ್ದರು. ಪ್ರಣಾಳಿಕೆ ಹಲವು ಭರವಸೆ ನೀಡಿ ಸಂಚಲನ ಸೃಷ್ಟಿ ಮಾಡಿತ್ತು. ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಪ್ರತಿ ವಿವಾಹಿತ ಮಹಿಳೆಗೆ ವಾರ್ಷಿಕ 12 ಸಾವಿರ ನೀಡುವುದಾಗಿ ಬಿಜೆಪಿ ಘೋಷಿಸಿತ್ತು. ಅಲ್ಲದೆ ಇನ್ನೂ ಹಲವು ಗಿಫ್ಟ್ ಕೊಟ್ಟಿತ್ತು.
2 ವರ್ಷದಲ್ಲಿ 1 ಲಕ್ಷ ಹುದ್ದೆ ನೇಮಕಾತಿ
ಇದರ ಜೊತೆಗೆ ಪ್ರತಿ ಎಕರೆಗೆ 21 ಕ್ವಿಂಟಾಲ್ ಭತ್ತ ಖರೀದಿ ಮಾಡುವುದರ ಜೊತೆಗೆ, ಕ್ವಿಂಟಲ್‌ಗೆ 3,100 ರೂಪಾಯಿ ಬೆಂಬಲ ಬೆಲೆಯ ನೀಡುವ ಭರವಸೆ ನೀಡಲಾಗಿತ್ತು. 2 ವರ್ಷದಲ್ಲಿ 1 ಲಕ್ಷ ಖಾಲಿ ಹುದ್ದೆ ನೇಮಕಾತಿಗೆ ಪ್ರಕಟಣೆ ಹೊರಡಿಸುವುದು & ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 18 ಲಕ್ಷ ಮನೆ ನಿರ್ಮಿಸಲಾಗುವುದು ಅಂತ ಬಿಜೆಪಿ ಪ್ರಣಾಳಿಕೆಯಲ್ಲಿ ಭರವಸೆಯನ್ನ ನೀಡಿತ್ತು. ಈಗ ಚುನಾವಣೆ ಮುಗಿದು ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದು ಇಲ್ಲಿ ಕಾಂಗ್ರೆಸ್ ಮುಂದೆ ಇದೆ ಎನ್ನುತ್ತಿವೆ ಸಮೀಕ್ಷೆಗಳು. ಅಂತಿಮ ಫಲಿತಾಂಶ ಡಿಸೆಂಬರ್ 3ಕ್ಕೆ ಹೊರಬೀಳಲಿದ್ದು, ಹೀಗಾಗಿ ಅಂದೇ ಪಕ್ಕಾ ಮಾಹಿತಿ ಸಿಗಲಿದೆ.












Click it and Unblock the Notifications