ಯಾರಾಗುತ್ತಾರೆ ಕಾಂಗ್ರೆಸ್ ಮುಂದಿನ ಅಧ್ಯಕ್ಷರು? ಚುನಾವಣಾ ವೇಳಾಪಟ್ಟಿ ಯಾವಾಗ?
ನವದೆಹಲಿ, ಆಗಸ್ಟ್ 22: ಕಾಂಗ್ರೆಸ್‌ನ ಮುಂದಿನ ಅಧ್ಯಕ್ಷ ಆಯ್ಕೆ ಪ್ರಕ್ರಿಯೆಗೆ ಭಾನುವಾರ ಅಖಿಲ ಭಾರತೀಯ ಕಾಂಗ್ರೆಸ್ ಚಾಲನೆ ನೀಡಲಾಗಿದ್ದು, ಸೆಪ್ಟೆಂಬರ್ 20 ರೊಳಗೆ ಹೊಸ ಮುಖ್ಯಸ್ಥರನ್ನು ಆಯ್ಕೆ ಮಾಡಲಾಗುವುದಾಗಿ ಪಕ್ಷದ ಚುನಾವಣಾ ಪ್ರಾಧಿಕಾರ ತಿಳಿಸಿದೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಅವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ (ಸಿಡಬ್ಲ್ಯೂಸಿ) ಕಾಂಗ್ರೆಸ್ ಮುಖ್ಯಸ್ಥರ ಆಯ್ಕೆಯ ಅಂತಿಮ ದಿನಾಂಕವನ್ನು ಅನುಮೋದಿಸಲು ಬಿಟ್ಟಿದ್ದು, ಅದು ಆಗಸ್ಟ್ 21ರಿಂದ ಸೆಪ್ಟೆಂಬರ್ 20 ರ ನಡುವೆ ಯಾವುದೇ ದಿನವಾಗಿರಬಹುದು ಎಂದು ಹೇಳಲಾಗಿದೆ.
ಬ್ಲಾಕ್ ಸಮಿತಿಗಳಿಗೆ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿಯ ತಲಾ ಒಬ್ಬ ಸದಸ್ಯರಿಗೆ ಏಪ್ರಿಲ್ 16 ರಿಂದ ಮೇ 31, 2022 ರವರೆಗೆ ಚುನಾವಣೆ ನಡೆಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ನಿರ್ಧರಿಸಲಾಗಿತ್ತು. ಜೂನ್ 1 ಮತ್ತು ಜುಲೈ 20ರ ನಡುವೆ ಜಿಲ್ಲಾ ಸಮಿತಿ ಮುಖ್ಯಸ್ಥರು ಮತ್ತು ಕಾರ್ಯಕಾರಿಣಿಗೆ ಹಾಗೂ ಜುಲೈ 21 ಮತ್ತು ಆಗಸ್ಟ್ 20, 2022 ರ ನಡುವೆ ಪ್ರದೇಶ ಕಾಂಗ್ರೆಸ್ ಸಮಿತಿಗಳ ಮುಖ್ಯಸ್ಥರ ಆಯ್ಕೆ ಮಾಡಲಾಗಿತ್ತು. ಮುಂದುವರಿದು ಎಐಸಿಸಿ ಸದಸ್ಯರು ಮತ್ತು ಆಗಸ್ಟ್ 21 ಮತ್ತು ಸೆಪ್ಟೆಂಬರ್ 20 ರ ನಡುವೆ ಎಐಸಿಸಿ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿದ್ದವು.
ನಾವು ಈ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಕಾರ್ಯನಿರತರಾಗುತ್ತೇವೆ. ಈಗಾಗಲೇ ಚುನಾವಣಾ ವೇಳಾಪಟ್ಟಿಯನ್ನು ಪಕ್ಷದ ಹಾಂಗಾಮಿ ನಾಯಕಿ ಸೋನಿಯಾ ಗಾಂಧಿ ಅವರಿಗೆ ರವಾನಿಸಿದ್ದೇವೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಗೆ ಅಂತಿಮ ದಿನಾಂಕವನ್ನು ನಿಗದಿಪಡಿಸುವ ಸಿಡಬ್ಲ್ಯೂಸಿಯ ಒಪ್ಪಿಗೆಗಾಗಿ ಕಾಯುತ್ತಿದ್ದೇವೆ ಎಂದು ಮಿಸ್ತ್ರಿ ಪಿಟಿಐಗೆ ತಿಳಿಸಿದ್ದಾರೆ.
ಬ್ಲಾಕ್, ಜಿಲ್ಲಾ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿಗಳ ಮಟ್ಟದ ಸಾಂಸ್ಥಿಕ ಚುನಾವಣೆ ಮುಕ್ತಾಯವಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಕ್ರಿಯೆಯು ಯಥಾವತ್ತಾಗಿ ಪೂರ್ಣಗೊಂಡಿದೆ ಎಂದು ಹೇಳಿದರು. ಆದಾಗ್ಯೂ, ಪಕ್ಷದ ಉನ್ನತ ಹುದ್ದೆಗೆ ನಿರ್ಣಾಯಕ ಚುನಾವಣೆಯಲ್ಲಿ ಮತ ಚಲಾಯಿಸುವ ಎಐಸಿಸಿ ಪ್ರತಿನಿಧಿಗಳನ್ನು ಚುನಾವಣಾ ಪ್ರಾಧಿಕಾರ ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದೆ ಎಂದು ಮಿಸ್ತ್ರಿ ಹೇಳಿದರು.
ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ನಿಖರವಾದ ದಿನಾಂಕವನ್ನು ಅಂತಿಮಗೊಳಿಸಲಿದೆ ಎಂದ ಅವರು, ಶೀಘ್ರದಲ್ಲೇ ಉನ್ನತ ನಿರ್ಧಾರ ತೆಗೆದುಕೊಳ್ಳುವ ಪಕ್ಷದ ಮಂಡಳಿಯ ಸಭೆ ನಡೆಯಲಿದೆ. ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವು ಸೆಪ್ಟೆಂಬರ್ 20ರೊಳಗೆ ಕಾಂಗ್ರೆಸ್ ತನ್ನ ಹೊಸ ಅಧ್ಯಕ್ಷರನ್ನು ನೇಮಕ ಮಾಡಲಿದೆ ಎಂದು ಹೇಳಿದರು. ಏತನ್ಮಧ್ಯೆ, ಜಿ -23 ಗುಂಪು ಚುನಾವಣಾ ಪ್ರಕ್ರಿಯೆ ಮತ್ತು ಅದರ ಪಾರದರ್ಶಕತೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ತಿಳಿದುಬಂದಿದೆ.

ಆಂತರಿಕ ಚುನಾವಣೆಗೆ ಆಗ್ರಹ
ರಾಜ್ಯಸಭೆಯ ಮಾಜಿ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಮತ್ತು ಉಪನಾಯಕ ಆನಂದ್ ಶರ್ಮಾ, ಭೂಪಿಂದರ್ ಸಿಂಗ್ ಹೂಡಾ ಮತ್ತು ಮನೀಶ್ ತಿವಾರಿ ಸೇರಿದಂತೆ ಪ್ರಮುಖ ಅನುಭವಿಗಳನ್ನು ಒಳಗೊಂಡ ಗುಂಪು ಬ್ಲಾಕ್‌ನಿಂದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಹಂತದವರೆಗೆ ಚುನಾವಣೆಗೆ ಈಗಾಗಲೇ ಒತ್ತಾಯಿಸುತ್ತಿದೆ ಎಂದು ತಿಳಿದು ಬಂದಿದೆ.

ರಾಹುಲ್ ಗಾಂಧಿ ಸ್ಪರ್ಧೆ ನಿರ್ಧಾರ ಗೊಂದಲ
ಕಾಂಗ್ರೆಸ್‌ನ ಚುನಾವಣಾ ಪ್ರಾಧಿಕಾರವು ಅಧ್ಯಕ್ಷರ ಚುನಾವಣೆ ತಯಾರಿಗೆ ಮುಂದಾಗಿರುವ ಹಿನ್ನೆಲೆಯಲ್ಲಿ ಅಧ್ಯಕ್ಷರ ಸ್ಪರ್ಧೆಯಲ್ಲಿ ಸಂಭಾವ್ಯ ಅಭ್ಯರ್ಥಿಗಳು ಯಾರಿದ್ದಾರೆ ಎಂದು ತಿಳಿದು ಬಂದಿಲ್ಲ. ಈಗಾಗಲೇ ಸ್ಪರ್ಧೆಯಲ್ಲಿದ್ದ ಮಾಜಿ ಮುಖ್ಯಸ್ಥ ರಾಹುಲ್ ಗಾಂಧಿ ಸ್ಪರ್ಧಿಸಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಎಂಬ ಸುದ್ದಿಗಳು ಕಾಂಗ್ರೆಸ್ ವರಿಷ್ಠರ ವಲಯದಲ್ಲಿ ಇವೆ.

ರಾಹುಲ್ ಗಾಂಧಿ ಸ್ಫರ್ಧೆ ಬಗ್ಗೆ ಖಚಿತವಿಲ್ಲ
ಆಂತರಿಕ ಚುನಾವಣೆಗಳು ಮುಗಿಯುತ್ತಿದ್ದಂತೆ ಅಧ್ಯಕ್ಷ ಆಯ್ಕೆಗೆ ಪಕ್ಷದ ಹಿರಿಯ ನಾಯಕರನ್ನು ಸಂಪರ್ಕಿಸಿದಾಗ ಹೆಚ್ಚಿನ ನಾಯಕರು ಯೋಜನೆಯ ಬಗ್ಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಇಂದಿನವರೆಗೆ, ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಒಪ್ಪುತ್ತಾರೆಯೇ ಎಂಬುದರ ಕುರಿತು ಯಾವುದೇ ಸ್ಪಷ್ಟತೆ ಇಲ್ಲ. ಆದರೆ ಕೆಲವು ಪಕ್ಷದ ನಾಯಕರು ಅವರು ಅಧ್ಯಕ್ಷರ ಸ್ಪರ್ಧೆಗೆ ನಿರಾಸಕ್ತಿ ತೋರುತ್ತಿದ್ದಾರೆಂದು ಹೇಳಿದ್ದಾರೆ.

ಕಾಂಗ್ರೆಸ್ ಹಿರಿಯ ತಲೆ ಮಲ್ಲಿಕಾರ್ಜುನ ಖರ್ಗೆ ಹೆಸರು
ನೂತನ ಅಧ್ಯಕ್ಷರ ಆಯ್ಕೆ ಬಗ್ಗೆ ಯಾರಿಗೂ ಸ್ಪಷ್ಟತೆ ಇಲ್ಲದ ಕಾರಣ ಮುಂದಿನ ಅಧ್ಯಕ್ಷರು ಯಾರಾಗಬಹುದು ಎಂಬ ಗೊಂದಲ ಎಲ್ಲರಿಗೂ ಇದ್ದೇ ಇದೆ. ಅದ್ಯಾಗೂ ಸೋನಿಯಾ ಗಾಂಧಿ ಅವರೇ ಮುಂದಿವರಿಯ ಬಹುದು ಎಂದೂ ಸಹ ಭಾವಿಸಲಾಗಿದೆ. ಯಾಕೆಂದರೆ ಕಣದಲ್ಲಿ ಯಾರು ಗಾಂಧಿಯೇತರ ಮುಖಗಳು ಸ್ಪಷ್ಟವಾಗಿ ಕಂಡು ಬರುತ್ತಿಲ್ಲವಾದರೂ ಅಧ್ಯಕ್ಷರ ಸ್ಪರ್ಧೆಗೆ ಕರ್ನಾಟಕ ಸಂಸದ, ಕಾಂಗ್ರೆಸ್ ಹಿರಿಯ ತಲೆ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಇಲ್ಲಿ ಕೇಳಿಬಂದಿದೆ.












Click it and Unblock the Notifications