Madhav Gadgil Profile: ಮಾಧವ ಗಾಡ್ಗೀಳ್ ಯಾರು, ದಕ್ಷಿಣ ಭಾರತಕ್ಕೆ ಕೊಟ್ಟ ಕೊಡುಗೆ ವಿವರ ಇಲ್ಲಿದೆ
Madhav Gadgil History: ದಕ್ಷಿಣ ಭಾರತದ ಜೀವನಾಡಿ ಎಂದೇ ಖ್ಯಾತಿ ಗಳಿಸಿರುವ ಪಶ್ಚಿಮಘಟ್ಟದ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಪರಿಸರ ವಿಜ್ಞಾನಿ ಹಾಗೂ ತಜ್ಞ ಮಾಧವ ಗಾಡ್ಗೀಳ್ ಅವರು ಮೃತಪಟ್ಟಿದ್ದಾರೆ. ಮಾಧವ ಗಾಡ್ಗೀಳ್ ತಮ್ಮ ಇಡೀ ಜೀವನವನ್ನು ಪರಿಸರ ಸಂರಕ್ಷಣೆಗೆ ಮುಡುಪಾಗಿರಿಸಿದ್ದರು. ಮಾಧವ ಗಾಡ್ಗೀಳ್ ಯಾರು ಹಾಗೂ ಅವರ ಹಿನ್ನೆಲೆ ಏನು ಎನ್ನುವ ವಿವರ ಇಲ್ಲಿದೆ.
1943 ರಲ್ಲಿ ಪುಣೆಯಲ್ಲಿ ಜನಿಸಿದ ಮಾಧವ ಗಾಡ್ಗೀಳ್ ಅವರು ಪಕ್ಷಿ ವೀಕ್ಷಕರಾಗಿದ್ದ ತಮ್ಮ ತಂದೆಯಿಂದ ಪ್ರಭಾವಿತರಾಗಿದ್ದರು. ಈ ಮೂಲಕ ಬಾಲ್ಯದಿಂದಲೇ ಅವರಿಗೆ ಪರಿಸರದೊಂದಿಗೆ ಅವಿನಾಭಾವ ಸಂಬಂಧ ಮೂಡಿತ್ತು. ಮಾಧವ ಗಾಡ್ಗೀಳ್ ಅವರು ಓದುವುದನ್ನು ಕಲಿಯುವುದಕ್ಕೂ ಮೊದಲೇ ಪಕ್ಷಿಗಳನ್ನು ಚಿತ್ರಗಳಿಂದ ಗುರುತಿಸುವಷ್ಟು ಚತುರರಾಗಿದ್ದರು.

ಇದೇ ಮುಂದೆ ಅವರು ದೊಡ್ಡ ಪರಿಸರ ವಿಜ್ಞಾನಿ ಆಗುವುದಕ್ಕೆ ಹಾಗೂ ಪಶ್ಚಿಮಘಟ್ಟಗಳ ಬಗ್ಗೆ ಅಧ್ಯಯನ ಮಾಡುವುದಕ್ಕೆ ವೇದಿಕೆ ಕಲ್ಪಿಸಿತ್ತು. ಮಾಧವ ಗಾಡ್ಗೀಳ್ ಅವರು ನೈಸರ್ಗಿಕ ಪ್ರಪಂಚದ ವೈವಿಧ್ಯತೆ, ಪರಿಸರ ಹಾಗೂ ಜೀವವೈವಿಧ್ಯತೆ ಒಂದಕ್ಕೊಂದು ಬೆಸೆದುಕೊಂಡಿರುವ ರೀತಿಯ ಬಗ್ಗೆ ಆಕರ್ಷಿತರಾಗಿದ್ದರು. ಭಾರತದ ಪರಿಸರ ಸಂರಕ್ಷಣೆಯಲ್ಲಿ ಅವರು ಪ್ರಯತ್ನ ಹಾಗೂ ಶ್ರಮ ದೊಡ್ಡದು.
ಮಹಾರಾಷ್ಟ್ರದ ಪುಣೆ ವಿಶ್ವವಿದ್ಯಾಲಯದ ಫರ್ಗುಸನ್ ಕಾಲೇಜಿನಿಂದ ಜೀವಶಾಸ್ತ್ರದಲ್ಲಿ ಪದವಿ ಪಡೆದ ಅವರು ನಂತರ ಮುಂಬೈ ವಿಶ್ವವಿದ್ಯಾಲಯದಿಂದ ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಗ್ಯಾಡ್ಗಿಲ್ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದಿದ್ದರು. ಅಲ್ಲದೇ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ 31 ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಐಐಎಸ್ಸಿಯಲ್ಲಿದ್ದಾಗ ಪರಿಸರ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಿದರು. ಅಲ್ಲದೇ ಬುಡಕಟ್ಟು ಜನಾಂಗದವರು, ರೈತರು, ಕುರಿಗಾಹಿಗಳು ಹಾಗೂ ಮೀನುಗಾರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಅವಿರತ ಶ್ರಮಿಸಿದರು.

ಪಶ್ಚಿಮ ಘಟ್ಟ: ಎಚ್ಚರಿಕೆ ನೀಡಿದ್ದ ಮಾಧವ ಗಾಡ್ಗೀಳ್
ಮಾಧವ ಗಾಡ್ಗೀಳ್ ಅವರು ದೇಶದ ಹಲವು ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದಾರೆ. 1986 ರಿಂದ 1990 ರವರೆಗೆ ಮಾಧವ ಗಾಡ್ಗೀಳ್ ಅವರು ಭಾರತದ ಪ್ರಧಾನ ಮಂತ್ರಿಗಳ ವಿಜ್ಞಾನ ಸಲಹಾ ಮಂಡಳಿಯ ಸದಸ್ಯರಾಗಿದ್ದರು. 2010 ರಿಂದ 2012 ರವರೆಗೆ ರಾಷ್ಟ್ರೀಯ ಸಲಹಾ ಮಂಡಳಿಯ ಸದಸ್ಯರಾಗಿದ್ದರು. 2010 ರಿಂದ 2011 ರವರೆಗೆ ಪಶ್ಚಿಮ ಘಟ್ಟಗಳ ಪರಿಸರ ವಿಜ್ಞಾನ ತಜ್ಞರ ಸಮಿತಿಯ ಅಧ್ಯಕ್ಷರಾಗಿದ್ದರು. ಪಶ್ಚಿಮ ಘಟ್ಟಗಳಲ್ಲಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳನ್ನು ನಿರ್ಮಿಸುವುದು ಹಾನಿಕಾರಕ ಪರಿಣಾಮಗಳಿಗೆ ಕಾರಣವಾಗುತ್ತದೆ ಎಂದು ಎಚ್ಚರಿಸಿದ್ದರು.
ಪಶ್ಚಿಮ ಘಟ್ಟದ ವಿಚಾರವಾಗಿ ಅವರು ನೀಡಿದ್ದ ವರದಿಯು ಮಾಧವ ಗಾಡ್ಗೀಳ್ ವರದಿ ಎಂದೇ ಖ್ಯಾತಿ ಗಳಿಸಿದೆ. ಕೈಗಾರಿಕೆಗಳು ಹಾಗೂ ಪರಿಸರ ಹಾನಿಯಿಂದ ಪಶ್ಚಿಮ ಘಟ್ಟದ ಭಾಗದಲ್ಲಿ ಹೆಚ್ಚಾಗುವ ಸಮಸ್ಯೆಗಳ ಬಗ್ಗೆ ಮಾಧವ ಗಾಡ್ಗೀಳ್ ಅವರು ಬೆಳಕು ಚಲ್ಲಿದ್ದರು. ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಯನ್ನು ರಕ್ಷಿಸುವಂತೆ ಕರೆ ನೀಡಿದ್ದರು. 2011ರ ವರದಿ ಹಾಗೂ ಅದರ ಶಿಫಾರಸುಗಳನ್ನು ಇನ್ನೂ ಜಾರಿಗೆ ತಂದಿಲ್ಲ ಎನ್ನುವುದು ಬೇಸರದ ಸಂಗತಿ.












Click it and Unblock the Notifications