ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸುವ ವಿಚಾರಗಳು
ನವದೆಹಲಿ, ನವೆಂಬರ್ 05: ಹಿಮಾಚಲ ಪ್ರದೇಶ ವಿಧಾನಸಭೆಗೆ ನವೆಂಬರ್ 12ರಂದು ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಹೊಸ ಸರ್ಕಾರಕ್ಕೆ ಅಧಿಕಾರ ನೀಡುವ ಹಾಗೂ ಅಧಿಕಾರದಲ್ಲಿರುವ ಪಕ್ಷವನ್ನು ಕೆಳಗಿಳಿಸುವ ಸಂಪ್ರದಾಯವಿದೆ.
ರಾಜ್ಯದಲ್ಲಿ ಈ ಬಾರಿ 68 ಸ್ಥಾನಗಳಿಗೆ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕಾಂಗ್ರೆಸ್ ನಡುವೆ ಹಣಾಹಣಿ ಏರ್ಪಟ್ಟಿದ್ದು, ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮಾರ್ಕ್ಸ್‌ವಾದಿ (ಸಿಪಿಐ-ಎಂ) ಕೂಡ ಸೇರಿಕೊಂಡಿವೆ.
ಎಲ್ಲಾ ಪಕ್ಷಗಳು ತಮ್ಮ ಚುನಾವಣಾ ಪ್ರಚಾರದ ಸಮಯದಲ್ಲಿ ಮತದಾರರ ಗಮನ ಸೆಳೆಯಲು ವಿವಿಧ ವಿಷಯಗಳನ್ನು ತೆಗೆದುಕೊಳ್ಳುತ್ತಿವೆ. ರಾಜ್ಯ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಪ್ರಮುಖ ಚುನಾವಣಾ ಅಂಶಗಳು ಯಾವುವು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಹಿಮಾಚಲ ಪ್ರದೇಶದಲ್ಲಿ ನಿರುದ್ಯೋಗ
ಹಿಮಾಚಲ ಪ್ರದೇಶದಲ್ಲಿ ನಿರುದ್ಯೋಗ ಸಮಸ್ಯೆಯು ಈ ಬಾರಿ ಪ್ರಮುಖ ಚುನಾವಣಾ ಅಸ್ತ್ರವಾಗಿದೆ. ಅದರ ಅಂಕಿ-ಅಂಶಗಳೇ ಅತ್ಯಂತ ಆತಂಕಕಾರಿ ಪರಿಸ್ಥಿತಿಯ ಬಗ್ಗೆ ಸಾರಿ ಹೇಳುತ್ತವೆ. ರಾಜ್ಯದಲ್ಲಿ ನಿರುದ್ಯೋಗ ದರವು 2022ರ ಸೆಪ್ಟೆಂಬರ್ ತಿಂಗಳಿನಲ್ಲಿ ಶೇ. 9.2 ಹಾಗೂ 2022ರ ಅಕ್ಟೋಬರ್ ತಿಂಗಳಿನಲ್ಲಿ ಶೇ.8.6ರಷ್ಟಿದೆ. ರಾಷ್ಟ್ರೀಯ ಸರಾಸರಿ ಶೇಕಡಾ 7.6ರಷ್ಟಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ಬಹಿರಂಗಪಡಿಸಿದೆ.
ಮತ್ತೊಂದು ಅಧ್ಯಯನದ ಪ್ರಕಾರ, ಹಿಮಾಚಲದಲ್ಲಿ ಸುಮಾರು 15 ಲಕ್ಷ ನಿರುದ್ಯೋಗಿಗಳಿದ್ದಾರೆ, ಅವರಲ್ಲಿ 8.77 ಲಕ್ಷ ಜನರು ರಾಜ್ಯಾದ್ಯಂತ ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ಉದ್ಯೋಗಕ್ಕಾಗಿ ನೋಂದಾಯಿಸಿಕೊಂಡಿದ್ದಾರೆ. ಉದ್ಯೋಗಾವಕಾಶಗಳ ಕೊರತೆ ಮತ್ತು ಸರ್ಕಾರಿ ಉದ್ಯೋಗ ಖಾಲಿ ಹುದ್ದೆಗಳ ಕಡಿತ ಇದಕ್ಕೆ ಕಾರಣವೆಂದು ತಜ್ಞರು ಹೇಳುತ್ತಾರೆ.

ಹಳೆಯ ಪಿಂಚಣಿ ಯೋಜನೆ ಬಗ್ಗೆ ತಿಳಿಯಿರಿ
ಹಳೆಯ ಪಿಂಚಣಿ ಯೋಜನೆಯನ್ನು (OPS) 2003ರಲ್ಲಿ ರದ್ದುಗೊಳಿಸಲಾಯಿತು. 2021ರಲ್ಲಿ ರಾಜ್ಯ ಸರ್ಕಾರವು ಹೊಸ ಪಿಂಚಣಿ ಯೋಜನೆಯಡಿ ಒಳಗೊಂಡಿರುವ ನೌಕರರ ಬೇಡಿಕೆಗಳನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಿತು. ಈ ಫೆಬ್ರವರಿಯಲ್ಲಿ ಸರ್ಕಾರಿ ನೌಕರರ ಸಂಘವು ತನ್ನ ಆತಂಕವನ್ನು ವ್ಯಕ್ತಪಡಿಸಿತು. ರಾಜ್ಯದಲ್ಲಿ OPS ಅನ್ನು ಮರುಸ್ಥಾಪಿಸುವಂತೆ ಕರೆ ನೀಡಿತು. ಅಕ್ಟೋಬರ್‌ನಲ್ಲಿ ನಡೆಸಿದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕಾಂಗ್ರೆಸ್ ಜನಾದೇಶವನ್ನು ಪಡೆದರೆ OPS ಅನ್ನು ಪುನಃಸ್ಥಾಪಿಸುವುದಾಗಿ ಭರವಸೆ ನೀಡಿದ್ದರು. ಎಎಪಿ ಕೂಡ ಒಪಿಎಸ್ ಅನ್ನು ವಾಪಸ್ ತರುವುದಾಗಿ ಹೇಳಿದೆ.
"ಹಿಮಾಚಲದಲ್ಲಿ ಒಪಿಎಸ್ ಅನ್ನು ಮರುಸ್ಥಾಪಿಸಬೇಕು. ಶಾಸಕರು ಮತ್ತು ಸಚಿವರು ತಮ್ಮ ಭವಿಷ್ಯವನ್ನು ಸಾಮಾನ್ಯ ಜನರ ವೆಚ್ಚದಲ್ಲಿ ರಕ್ಷಿಸಲು ಸಾಕಷ್ಟು ಪ್ರಯೋಜನಗಳನ್ನು ಪಡೆಯುತ್ತಾರೆ. ಒಪಿಎಸ್‌ನ ಲಾಭವನ್ನು ಇತರ ಜನರು ಏಕೆ ಪಡೆಯಲು ಸಾಧ್ಯವಿಲ್ಲ?,' ಎಂದು ಜುಬ್ಬಳದ ನಿವೃತ್ತ ಸರ್ಕಾರಿ ನೌಕರ ಹಾಗೂ ಸಾಮಾಜಿಕ ಕಾರ್ಯಕರ್ತ ಗೋವಿಂದ ಛತ್ರಂತ ಹೇಳಿದ್ದಾರೆ.

ಹದಗೆಟ್ಟ ಸೇಬು ಉದ್ಯಮ
ಹಿಮಾಚಲ ಪ್ರದೇಶದಲ್ಲಿ ಹದಗೆಟ್ಟಿರುವ ಸೇಬು ಉದ್ಯಮವು ತೀವ್ರ ಬಿಕ್ಕಟ್ಟನ್ನು ಸೃಷ್ಟಿಸಿದೆ. ಸೇಬು ಬೆಳೆಯುವ ರೈತರಿಂದ ಪ್ರತಿಭಟನೆಗಳು ನಡೆದಿವೆ. ಕಚ್ಚಾ ಒಪ್ಪಂದದ ಬಗ್ಗೆ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಸಗೊಬ್ಬರ ಮತ್ತು ಶಿಲೀಂಧ್ರನಾಶಕಗಳು ಸೇರಿದಂತೆ ಕಡಿಮೆ ಆದಾಯ, ಇಂಧನ ವೆಚ್ಚಗಳ ಹೆಚ್ಚಳ ಮತ್ತು ಹವಾಮಾನ ಏರಿಳಿತವು ಸೇಬು ಬೆಳಗಾರರನ್ನು ಒತ್ತಡಕ್ಕೆ ಸಿಲುಕುವಂತೆ ಮಾಡಿವೆ. ಹೀಗಾಗಿ ಪ್ರತಿಭಟನೆ ಹೊರತಾಗಿ ಅನ್ಯಮಾರ್ಗ ಸಿಗದಂತಹ ಪರಿಸ್ಥಿತಿ ಸೃಷ್ಟಿಯಾಗಿದೆ.
ಕಾರ್ಟನ್‌ಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) ಶೇ.12 ರಿಂದ ಶೇ.18ಕ್ಕೆ ಹೆಚ್ಚಿಸಿರುವುದು ಶವಪೆಟ್ಟಿಗೆಗೆ ಅಂತಿಮ ಮೊಳೆ ಹೊಡೆದಂತೆ ಆಗಿದೆ. ಕಾರ್ಪೊರೇಟ್ ಷರತ್ತುಗಳ ಎದುರಿಗೆ ಸಣ್ಣ ರೈತರು ಬದುಕುವುದೇ ಕಷ್ಟಸಾಧ್ಯವಾಗಿ ಬಿಟ್ಟಿದೆ. ಈ ಕಾರ್ಪೋರೇಟ್ ಉದ್ಯಮಿಗಳು 'ಉತ್ತಮ ಗುಣಮಟ್ಟ'ದ ಮಾನದಂಡವನ್ನು ಪೂರೈಸುವ ಸೇಬುಗಳನ್ನು ಮಾತ್ರ ಖರೀದಿಸುತ್ತಾರೆ, ಇದು ಅನ್ಯಾಯವಾಗಿದೆ. ಹಿಮಾಚಲದಲ್ಲಿ ಸೇಬುಗಳಿಗೆ ಕನಿಷ್ಠ ಸಂಗ್ರಹಣೆ ದರವಿಲ್ಲ. ಇದರ ಪರಿಣಾಮವಾಗಿ ಹಣ್ಣುಗಳನ್ನು ತಿಪ್ಪೆಗೆ ಎಸೆಯುವ ಬೆಲೆಯಲ್ಲಿ ನೀಡಲಾಗುತ್ತಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ರಸ್ತೆ ಸಂಪರ್ಕ
ಹಿಮಾಚಲ ಪ್ರದೇಶವು ಗುಡ್ಡಗಾಡು ರಾಜ್ಯವೆಂದೇ ಪ್ರಸಿದ್ಧವಾಗಿದ್ದು, ಹಳ್ಳಿಗಳು ಮತ್ತು ಪ್ರದೇಶಗಳನ್ನು ಸಂಪರ್ಕಿಸುವ ರಸ್ತೆಗಳೇ ಇಲ್ಲದಂತೆ ಆಗಿ ಬಿಟ್ಟಿದೆ. ಇದರಿಂದ ಅದೆಷ್ಟೋ ಹಳ್ಳಿಗಳು ಸಂಪರ್ಕವನ್ನು ಕಡಿದುಕೊಂಡಿವೆ. ರಾಜ್ಯದ ಬಹುತೇಕ ಭಾಗವು 'ಅರಣ್ಯ ಪ್ರದೇಶದಡಿಯಲ್ಲಿ ಬರುವ ಭೂಮಿಯನ್ನು ಹೊಂದಿದೆ. ಹಿಮಾಚಲ ಪ್ರದೇಶದಲ್ಲಿ ರಸ್ತೆ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್‌ನ ಅನುಮತಿ ಅಗತ್ಯವಿರುತ್ತದೆ.
ಒಂದು ವರದಿಯ ಪ್ರಕಾರ, ರಾಜ್ಯದ 17,882 ಹಳ್ಳಿಗಳಲ್ಲಿ 10,899 ಮಾತ್ರ ಸರಿಯಾದ ರಸ್ತೆ ಸಂಪರ್ಕವನ್ನು ಹೊಂದಿವೆ. ಅಂದರೆ ಶೇ.39ರಷ್ಟು ಹಳ್ಳಿಗಳಿಗೆ ರಸ್ತೆ ಸಂಪರ್ಕವಿಲ್ಲ. ರಾಜ್ಯದಲ್ಲಿ 3,125 ಕಿ.ಮೀ ಗ್ರಾಮೀಣ ರಸ್ತೆಗಳ ಮೇಲ್ದರ್ಜೆಗೆ ಸರ್ಕಾರದಿಂದ ಚಾಲನೆ ನೀಡಲಾಗಿದೆ. ಈ ರಸ್ತೆ ಸಾರಿಗೆಯು ಒಂದು ದೊಡ್ಡ ಸಮಸ್ಯೆಯಾಗಿದೆ, ಏಕೆಂದರೆ ಜನರು ಸೇವೆಗಳನ್ನು ಪಡೆಯಲು ಒಂದು ಸ್ಥಳದಿಂದ ಇನ್ನೊಂದಕ್ಕೆ ಚಲಿಸುವ ಮಾರ್ಗವಾಗಿದೆ. ಅಲ್ಲದೆ, ಪ್ರವಾಸೋದ್ಯಮವು ರಾಜ್ಯಕ್ಕೆ ಆದಾಯವನ್ನು ತರುತ್ತದೆ ಮತ್ತು ಉತ್ತಮ ರಸ್ತೆ ಸಂಪರ್ಕವು ಅದಕ್ಕೆ ಬೆನ್ನೆಲುಬಾಗಿ ನಿಲ್ಲುತ್ತವೆ.

ಹಿಮಾಚಲ ಪ್ರದೇಶದಲ್ಲಿ ಅಗ್ನಿಪಥ್ ಯೋಜನೆ
ಅಗ್ನಿಪಥ ಯೋಜನೆ ಘೋಷಣೆಯಾದಾಗ ರಾಜ್ಯಾದ್ಯಂತ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿತ್ತು. ಹಿಮಾಚಲ ಪ್ರದೇಶದ ಯುವಕರಲ್ಲಿ ಹೆಚ್ಚಿನವರು ಭಾರತೀಯ ಸೇನೆಗೆ ಸೇರಲು ಬಯಸುತ್ತಾರೆ. ಸರ್ಕಾರವು ರಕ್ಷಣಾ ನೇಮಕಾತಿಯನ್ನು ಒಪ್ಪಂದದ ವ್ಯವಹಾರವನ್ನಾಗಿ ಮಾಡಿದ್ದರಿಂದ ಇದನ್ನು ಅವರು ಖಂಡಿಸಿದರು. ರಾಜ್ಯವು ಅನೇಕ ನಿರುದ್ಯೋಗಿ ಯುವಕರನ್ನು ಹೊಂದಿರುವುದೇ ಈ ವಿಷಯಕ್ಕೆ ಮಹತ್ವವನ್ನು ಒದಗಿಸಿದೆ.
ಕಾಂಗ್ರಾ ಜಿಲ್ಲೆಯಲ್ಲಿ ಅನೇಕ ಯೋಧರು ನೆಲೆಸಿದ್ದಾರೆ. "ಅಗ್ನಿವೀರ್ ಯೋಜನೆಯ ರಕ್ಷಣಾ ವಲಯದ ಬಗ್ಗೆ ಕೇಂದ್ರ ಸರ್ಕಾರ ಅಥವಾ ಸೇನೆಯು ಏನೇ ಹೇಳಲಿ, ಪಿಂಚಣಿ ಪಾವತಿಸುವುದನ್ನು ತಪ್ಪಿಸುವ ಮೂಲಕ ಹಣವನ್ನು ಉಳಿಸುವುದು ಕೇಂದ್ರದ ಉದ್ದೇಶವಾಗಿದ್ದರೆ, ಅಸ್ತಿತ್ವದಲ್ಲಿರುವ ಕಿರು ಸೇವಾ ಆಯೋಗ (ಎಸ್‌ಎಸ್‌ಸಿ) ಸಾಕಷ್ಟು ಉತ್ತಮವಾಗಿದೆ ಎಂದು ನಾನು ವೈಯಕ್ತಿಕವಾಗಿ ಭಾವಿಸುತ್ತೇನೆ. ಎಸ್‌ಎಸ್‌ಸಿಗೆ ಸೇರುವವರು 10 ವರ್ಷಗಳ ಕಾಲ ಕಮಿಷನ್ಡ್ ಆಫೀಸರ್‌ಗಳಾಗಿ ಸೇವೆ ಸಲ್ಲಿಸುತ್ತಾರೆ. ನಂತರ ಅವರು ಶಾಶ್ವತವಾಗಿ ಆಯೋಗಕ್ಕೆ ಹೋಗಬಹುದು ಅಥವಾ 4 ವರ್ಷಗಳ ವಿಸ್ತರಣೆಯನ್ನು ಆರಿಸಿಕೊಳ್ಳಬಹುದು. ಅವರು 10 ವರ್ಷಗಳ ನಂತರ ಆಯ್ಕೆಯಿಂದ ಹೊರಗುಳಿದರೆ, ಅವರು ಪಿಂಚಣಿ/ಸವಲತ್ತುಗಳನ್ನು ಪಡೆಯುವುದಿಲ್ಲ," ಎಂಬುದನ್ನು ಧರ್ಮಶಾಲಾದ ಖಾಸಗಿ ಸುದ್ದಿ ಸಂಸ್ಥೆ ಸಂಪಾದಕ ಸಂಜೀವ್ ರತನ್ ಸಿಂಗ್ ಹೇಳಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ನ.12ರಂದ ಮತದಾನ
ಹಿಮಾಚಲ ಪ್ರದೇಶ 68 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ನವೆಂಬರ್ 12ರಂದು ಚುನಾವಣೆ ನಡೆಯಲಿದೆ. ಡಿಸೆಂಬರ್ 8ರಂದು ಮತಗಳ ಎಣಿಕೆ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಅಕ್ಟೋಬರ್ 25 ಕೊನೆಯ ದಿನಾಂಕವಾಗಿದ್ದು, ಅಕ್ಟೋಬರ್ 27 ನಾಮಪತ್ರ ಪರಿಶೀಲನೆ ನಡೆಯಲಿದೆ, ನಾಮಪತ್ರ ವಾಪಸ್ ಪಡೆಯುವುದಕ್ಕೆ ಅಕ್ಟೋಬರ್ 29 ಕೊನೆಯ ದಿನವಾಗಿದೆ.
ಈ ಹಿಂದೆ ನಡೆದ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) 44 ಸ್ಥಾನಗಳನ್ನು ಪಡೆದುಕೊಂಡಿದ್ದರೆ, ಕಾಂಗ್ರೆಸ್ 21 ಸ್ಥಾನಗಳನ್ನು ಗೆದ್ದುಕೊಂಡಿತ್ತು.












Click it and Unblock the Notifications