ಸಂಪುಟ ವಿಸ್ತರಣೆ: ಸದಾನಂದ ಗೌಡ ಹಿಂಬಡ್ತಿಗೆ ಈ ಕಾರಣ ಇರಬಹುದೇ?

Written By:
Subscribe to Oneindia Kannada

ನವದೆಹಲಿ, ಜುಲೈ 6: ಮುಂಬರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಹುನಿರೀಕ್ಷಿತ ಕೇಂದ್ರ ಸಚಿವ ಸಂಪುಟ ಪುನಾರಚನೆಯಾಗಿದೆ. ಮೋದಿ ಟೀಂಗೆ 19 ಹೊಸ ಮುಖಗಳ ಸೇರ್ಪಡೆಯಾಗಿದೆ.

ಸಚಿವ ಸ್ಥಾನ ಕಳೆದುಕೊಳ್ಳಲಿದ್ದಾರೆಂದು ಹೇಳಲಾಗುತ್ತಿದ್ದ ಸದಾನಂದ ಗೌಡರು ಸಂಪುಟ ಪುನಾರಚನೆಯಲ್ಲಿ ಸದ್ಯ ನಿರಾಳವಾಗಿದ್ದರೂ, ಮಹತ್ವದ ಖಾತೆಯಿಂದ ಕೊಕ್ ಪಡೆಯುವ ಮೂಲಕ ಹಿಂಬಡ್ತಿ ಪಡೆದಿದ್ದಾರೆ. (ಖಾತೆ ಹಂಚಿಕೆಯಲ್ಲಿ ಭಾರೀ ಬದಲಾವಣೆ, ಸ್ಮೃತಿಗೆ ಶಾಕ್)

ಕಾನೂನು ಖಾತೆಯನ್ನು ನಿರ್ವಹಿಸುತ್ತಿದ್ದ ಗೌಡರಿಗೆ ಯೋಜನೆ ಮತ್ತು ಸಾಂಖ್ಯಿಕ ಖಾತೆಯನ್ನು ವಹಿಸಲಾಗಿದೆ. ಕಾನೂನು ಖಾತೆಯನ್ನು ಹೆಚ್ಚುವರಿಯಾಗಿ ರವಿಶಂಕರ್ ಪ್ರಸಾದ್ ಅವರಿಗೆ ನೀಡಲಾಗಿದೆ.

ಮೋದಿ ಸರಕಾರ ಅಧಿಕಾರಕ್ಕೆ ಬಂದಾಗ ಊಹಿಸಲೂ ಅಸಾಧ್ಯವಾದ ರೈಲ್ವೆ ಖಾತೆಯನ್ನು ಸದಾನಂದ ಗೌಡರಿಗೆ ನೀಡಿ ಎಲ್ಲರನ್ನೂ ಮೋದಿ ಹುಬ್ಬೇರಿಸುವಂತೆ ಮಾಡಿದ್ದರು.

ಗೌಡರು ರೈಲ್ವೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಆರೇ ತಿಂಗಳಲ್ಲಿ ಖಾತೆ ನಿರ್ವಹಣೆ ಸರಿಯಾದ ವೇಗದಲ್ಲಿ ಸಾಗುತ್ತಿಲ್ಲ ಎಂದು, ರೈಲ್ವೆ ಖಾತೆಯಿಂದ ಎತ್ತಂಗಡಿ ಮಾಡಿ ಕಾನೂನು ಸಚಿವರನ್ನಾಗಿ ಮಾಡಲಾಯಿತು. ಸುರೇಶ್ ಪ್ರಭು ಅವರನ್ನು ರೈಲ್ವೆ ಸಚಿವರನ್ನಾಗಿ ನೇಮಕ ಮಾಡಲಾಗಿತ್ತು (ಮೋದಿ ಸಂಪುಟ ಸೇರಿದ 19 ಸಚಿವರ ಸಂಕ್ಷಿಪ್ತ ಪರಿಚಯ)

ಈಗ ಮತ್ತೊಮ್ಮೆ ಹಿಂಬಡ್ತಿ ಪಡೆದಿರುವ ಗೌಡರಿಗೆ ಅಷ್ಟೇನೂ ಪ್ರಾಮುಖ್ಯತೆ ಇಲ್ಲದ ಯೋಜನೆ ಮತ್ತು ಸಾಂಖ್ಯಿಕ ಖಾತೆಯನ್ನು ವಹಿಸಲಾಗಿದೆ.

ಕಾನೂನು ಖಾತೆಯನ್ನು ರವಿಶಂಕರ್ ಪ್ರಸಾದ್ ಅವರಿಗೆ ನಿರ್ವಹಿಸಿರುವ ಹಿಂದೆ, ಮೋದಿ ಪ್ರಭಲವಾದ ಕಾನೂನು ಜಾರಿಗೆ ತರುವನಿಟ್ಟಿನಲ್ಲಿ ಇಟ್ಟಿರುವ ಮೊದಲ ಹೆಜ್ಜೆಯೆಂದು ಹೇಳಲಾಗುತ್ತಿದೆ. ಮುಂದೆ ಓದಿ..

ವರಿಷ್ಠರ ಅಸಮಾಧಾನ

ವರಿಷ್ಠರ ಅಸಮಾಧಾನ

ಕೇಂದ್ರ ಸಚಿವರ ಕಾರ್ಯ ನಿರ್ವಹಣೆ ಕುರಿತು ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಮಗ್ರ ಮಾಹಿತಿ ಕಲೆಹಾಕಿದ್ದು, ಕೇಂದ್ರ ಕೈಗಾರಿಕಾ ಸಚಿವ ಸಿದ್ದೇಶ್ವರ ಮತ್ತು ಕಾನೂನು ಸಚಿವ ಸದಾನಂದ ಗೌಡ ಕಾರ್ಯನಿರ್ವಹಣೆಯ ಬಗ್ಗೆ ವರಿಷ್ಠರು ಅಸಮಾಧಾನ ಹೊಂದಿದ್ದರೆನ್ನುವ ಮಾತು ಕೇಳಿ ಬರುತ್ತಿತ್ತು.

ಡಿವಿಎಸ್ ಮತ್ತು ಸಿದ್ದೇಶ್ವರ್

ಡಿವಿಎಸ್ ಮತ್ತು ಸಿದ್ದೇಶ್ವರ್

ಆದರೂ ಪಕ್ಷದ ಹಿರಿಯ ಸಚಿವರಿಬ್ಬರನ್ನು ಕೈಬಿಡದೇ ಡಿವಿಎಸ್ ಖಾತೆಯಲ್ಲಿ ಮೋದಿ ಬದಲಾವಣೆ ಮಾಡಿದ್ದರೆ, ಸಿದ್ದೇಶ್ವರ್ ಇದ್ದ ಖಾತೆಯಲ್ಲೇ ಮುಂದುವರಿದಿದ್ದಾರೆ. ಪ್ರಸ್ತಾಪವಾದಾಗಲೆಲ್ಲ ವಿವಾದ ಸೃಷ್ಟಿಸುವ ಏಕರೂಪ ನಾಗರಿಕ ಸಂಹಿತೆ ಕಾನೂನು ಈಗ ಮತ್ತೆ ಚರ್ಚೆಗೆ ಬಂದಿರುವುದು ಡಿವಿಎಸ್ ಖಾತೆ ಬದಲಾವಣೆಗೆ ಪ್ರಮುಖ ಕಾರಣವಾಗಿರಬಹುದು.

ಏಕರೂಪ ನಾಗರಿಕ ಸಂಹಿತೆ

ಏಕರೂಪ ನಾಗರಿಕ ಸಂಹಿತೆ

ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಮಾಡುವುದಕ್ಕೆ ಇರುವ ಸಮಸ್ಯೆಗಳೇನು ಎಂಬುದನ್ನು ಪರಿಶೀಲನೆ ನಡೆಸುವಂತೆ ಕಾನೂನು ಆಯೋಗಕ್ಕೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಆ ಮೂಲಕ ಚುನಾವಣೆಯ ವೇಳೆ ನೀಡಿದ್ದ ಆಶ್ವಾಸನೆಯನ್ನು ಜಾರಿಗೆ ತರುವಲ್ಲಿ ಮೋದಿ ಸರಕಾರ ಮೊದಲ ಹೆಜ್ಜೆಯಿಟ್ಟಿದೆ.

ಪ್ರಣಾಳಿಕೆಯಲ್ಲಿ ಘೋಷಣೆ

ಪ್ರಣಾಳಿಕೆಯಲ್ಲಿ ಘೋಷಣೆ

ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವಂತೆ ಬಿಜೆಪಿ ಮತ್ತು ಸಂಘ ಪರಿವಾರ ಮೊದಲಿನಿಂದಲೂ ಪ್ರತಿಪಾದಿಸುತ್ತಲೇ ಇತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ಕಾನೂನನ್ನು ಜಾರಿಗೆ ತರುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿತ್ತು.

ಉತ್ತಮ ನಿರ್ವಹಣೆ ತೋರುವ ಕಾನೂನು ಸಚಿವ

ಉತ್ತಮ ನಿರ್ವಹಣೆ ತೋರುವ ಕಾನೂನು ಸಚಿವ

ಈ ಕಾನೂನು ಜಾರಿಗೆ ತರಬೇಕಾದಲ್ಲಿ ಉತ್ತಮ ನಿರ್ವಹಣೆ ತೋರುವ ಕಾನೂನು ಸಚಿವರ ಅವಶ್ಯಕತೆ ಇರುವುದರಿಂದ ಡಿ ವಿ ಸದಾನಂದ ಗೌಡರನ್ನು ಕಾನೂನು ಖಾತೆಯಿಂದ ಎತ್ತಂಗಡಿ ಮಾಡಲಾಗಿದೆ ಎನ್ನುವ ಮಾತು ಅಲ್ಲಲ್ಲಿ ಕೇಳಿ ಬರುತ್ತಿದೆ.

ಮೃದು ಸ್ವಭಾವದ ಸದಾನಂದ ಗೌಡ

ಮೃದು ಸ್ವಭಾವದ ಸದಾನಂದ ಗೌಡ

ಜನಾನುರಾಗಿ, ಮೃದು ಸ್ವಭಾವದವಾಗಿರುವ ಸದಾನಂದ ಗೌಡರು, ದೇಶಾದ್ಯಂತ ಭಾರೀ ವಿರೋಧ ವ್ಯಕ್ತವಾಗಬಹುದಾದ ಏಕರೂಪ ನಾಗರಿಕ ಸಂಹಿತೆ ಕಾನೂನು ಜಾರಿಯಲ್ಲಿ ಸರಕಾರವನ್ನು ಸಮರ್ಥಿಸಿಕೊಂಡು, ಎದುರಿಸಬೇಕಾಗಿರುವ ಪ್ರತಿಭಟನೆಯನ್ನು ತಿಳಿಗೊಳಿಸುವ ಸಾಮರ್ಥ್ಯ ಹೊಂದಿರುವ ಬಗ್ಗೆ ಪ್ರಧಾನಿಗೆ ಭರವಸೆ ಇಲ್ಲದೇ ಇರುವುದರಿಂದ ರವಿಶಂಕರ್ ಪ್ರಸಾದ್ ಅವರನ್ನು ಆ ಸ್ಥಾನಕ್ಕೆ ನೇಮಿಸಿದ್ದರೆ ಆಶ್ಚರ್ಯ ಪಡಬೇಕಾಗಿಲ್ಲ.

ರವಿಶಂಕರ್‌ ಪ್ರಸಾದ್

ರವಿಶಂಕರ್‌ ಪ್ರಸಾದ್

ಕಾನೂನು ಖಾತೆಯ ಜವಾಬ್ದಾರಿಯನ್ನು ವಹಿಸಿಕೊಂಡಿರುವ ರವಿಶಂಕರ್‌ ಪ್ರಸಾದ್, ರಾಜ್ಯಸಭೆಯಲ್ಲಿ ಬಿಹಾರವನ್ನು ಪ್ರತಿನಿಧಿಸುತ್ತಿದ್ದಾರೆ. ಪಾಟ್ನಾ ವಿಶ್ವವಿದ್ಯಾನಿಲಯದಲ್ಲಿ ಎಂ.ಎ. (ರಾಜಕೀಯ ಶಾಸ್ತ್ರ) ಹಾಗೂ ಎಲ್‌.ಎಲ್‌.ಬಿ. ಕಾನೂನು ಪದವಿ ಗಳಿಸಿರುವ ರವಿಶಂಕರ್, ಸುಪ್ರೀಂಕೋರ್ಟಿನಲ್ಲಿ ಹಿರಿಯ ನ್ಯಾಯವಾದಿಯಾಗಿ ಸೇವೆ ಸಲ್ಲಿಸಿದ್ದಾರೆ. ಮೇವು ಹಗರಣದಲ್ಲಿ ಲಾಲೂ ಪ್ರಸಾದ್‌ ಯಾದವ್‌ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಲ್ಲಿ ವಾದಿಸಿದ ಪ್ರಮುಖ ನ್ಯಾಯವಾದಿಗಳಲ್ಲಿ ರವಿಶಂಕರ್ ಪ್ರಸಾದ್ ಕೂಡಾ ಒಬ್ಬರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
What is the reason behind D V Sadananda Gowda removed from Union law ministry. Is it because, PM Modi would like to start process on Common Civil Code Law and need strong Law minister to handle the entire situation?
Please Wait while comments are loading...