Interim Budget: ಮಧ್ಯಂತರ ಬಜೆಟ್ ಎಂದರೇನು, ಯಾವಾಗ ಇದನ್ನು ಮಂಡಿಸಲಾಗುತ್ತದೆ ?
Interim Budget: ಕೇಂದ್ರ ಸರ್ಕಾರವು ಬಜೆಟ್ ಮಂಡನೆ ಮಾಡುವುದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರಂತರ ಬೆಲೆ ಏರಿಕೆಯಿಂದ ಜನ ಈಗಾಗಲೇ ಹೈರಾಣಾಗಿದ್ದಾರೆ. ಇದೀಗ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ಕ್ಕೆ 2025 -26ನೇ ಆರ್ಥಿಕ ಸಾಲಿನ ಕೇಂದ್ರ ಬಜೆಟ್ ಮಂಡಿಸುವುದಕ್ಕೆ ಮುಂದಾಗಿದ್ದಾರೆ. ಈ ಬಾರಿಯ ಕೇಂದ್ರ ಸರ್ಕಾರ ಬಜೆಟ್‌ನಲ್ಲೂ ಬಡವರು ಹಾಗೂ ಜನ ಸಾಮಾನ್ಯರು ಹಲವು ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರೆ. ಬಜೆಟ್ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದ ಬಜೆಟ್ ಎಂದರೆ ಏನು ಮಧ್ಯಂತರ ಬಜೆಟ್ ಯಾವಾಗ ಮಂಡಿಸಲಾಗುತ್ತದೆ ಎನ್ನುವ ವಿಷಯಗಳ ಬಗ್ಗೆಯೂ ಚರ್ಚೆ ನಡೆದಿದೆ. ಮಧ್ಯಂತರ ಹಾಗೂ ಪೂರ್ಣ ಪ್ರಮಾಣದ ಬಜೆಟ್ ಎಂದರೆ ಏನು. ಈ ಬಜೆಟ್‌ಗಳನ್ನು ಯಾವ ಸಮಯದಲ್ಲಿ ಮಂಡಿಸಲಾಗುತ್ತದೆ ಎನ್ನುವ ವಿವರ ಇಲ್ಲಿದೆ.
ಕೇಂದ್ರ ಬಿಜೆಪಿ ಸರ್ಕಾರದ ಬಜೆಟ್ ಮಂಡನೆಗೆ ಇನ್ನು ಮೂರು ದಿನಗಳು ಮಾತ್ರ ಬಾಕಿ ಉಳಿದಿವೆ. ಈ ಬಾರಿಯ ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ಗುಡ್‌ನ್ಯೂಸ್, ಉದ್ಯೋಗ ಸೃಷ್ಟಿ ಹಾಗೂ ಹಣದುಬ್ಬರಕ್ಕೆ ಕಡಿವಾಣ ಸೇರಿದಂತೆ ಹಲವು ನಿರೀಕ್ಷೆಗಳು ಇವೆ. ಇದರ ಹೊರತಾಗಿ ಬಜೆಟ್ ಹಿನ್ನೆಲೆಯಲ್ಲಿ ಮಧ್ಯಂತರ ಹಾಗೂ ಪೂರ್ಣ ಪ್ರಮಾಣದ ಬಜೆಟ್‌ನ ಬಗ್ಗೆ ಚರ್ಚೆ ನಡೆದಿದೆ. ಈ ಬಜೆಟ್‌ಗಳನ್ನು ಯಾವಾಗ ಮಂಡಿಸಲಾಗುತ್ತದೆ. ಮಧ್ಯಂತರ ಬಜೆಟ್‌ನ ಉದ್ದೇಶವೇನು ಹಾಗೂ ಅದನ್ನು ಯಾವ ಸಮಯದಲ್ಲಿ ಮಂಡಿಸಲಾಗುತ್ತದೆ ಎನ್ನುವುದನ್ನು ನೋಡೋಣ.

ಇನ್ನು ಬಜೆಟ್ ಎನ್ನುವುದು ಆ ವರ್ಷ ಸರ್ಕಾರ ಯಾವುದಕ್ಕೆ ಎಷ್ಟು ಖರ್ಚು ಮಾಡಬೇಕು ಎನ್ನುವುದರ ಲೆಕ್ಕಾಚಾರದ ಪತ್ರವಾಗಿದೆ. ಸರಳವಾಗಿ ಹೇಳಬೇಕೆಂದರೆ ಪ್ರತಿ ತಿಂಗಳು ಸಂಬಳ ಬಂದ ಮೇಲೆ ಅಥವಾ ಬರುವುದಕ್ಕಿಂತ ಮುಂಚೆ ಈ ತಿಂಗಳಿನ ಆದಾಯ, ಖರ್ಚು ಹಾಗೂ ಉಳಿತಾಯ ಹೇಗೆ, ಏನು ಎನ್ನುವ ಲೆಕ್ಕಾಚಾರದಂತೆಯೇ ಬಜೆಟ್ ಮಂಡನೆಯೂ ಆಗಿದೆ. ಈ ಬಜೆಟ್‌ನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸರ್ಕಾರಿ ನೌಕರರಿಗೆ ವೇತನ, ವಿವಿಧ ಯೋಜನೆಗೆ ಹಣ ಹಾಗೂ ಖರ್ಚು - ವೆಚ್ಚಗಳನ್ನು ನಿಗದಿ ಮಾಡುತ್ತದೆ. ಅದೇ ರೀತಿ ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಮಧ್ಯಂತರ ಬಜೆಟ್ ಸಹ ಮಂಡಿಸಲಾಗುತ್ತದೆ.
ಯಾವಾಗ ಮಧ್ಯಂತರ ಬಜೆಟ್ ಮಂಡಿಸಲಾಗುತ್ತದೆ ?
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೆಲವು ನಿರ್ದಿಷ್ಟ ಸಮಯದಲ್ಲಿ ಮಾತ್ರ ಮಧ್ಯಂತರ ಬಜೆಟ್ ಮಂಡನೆಯನ್ನು ಮಾಡುತ್ತವೆ. ಯಾವುದೇ ಸರ್ಕಾರದ ಅವಧಿ ಮುಕ್ತಾಯವಾಗುವುದಿದ್ದರೆ. ಇಲ್ಲವೇ ಬಜೆಟ್ ಮಂಡಿಸಲು ಸಮಯವಿಲ್ಲದೆ ಇದ್ದರೆ ಹಾಗೂ ಚುನಾವಣೆಗಳು ನಡೆಯುವ ಸಂದರ್ಭದಲ್ಲಿ ಮಧ್ಯಂತರ ಬಜೆಟ್ ಮಂಡಿಸಲಾಗುತ್ತದೆ. ಇನ್ನು ಮಧ್ಯಂತರ ಬಜೆಟ್ ಎನ್ನುವುದು ಕೆಲವು ತಿಂಗಳುಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ಇದೊಂದು ತಾತ್ಕಾಲಿಕ ವ್ಯವಸ್ಥೆಯಾಗಿದ್ದು, ಹೊಸ ಸರ್ಕಾರ ಬಂದರೆ ಅಥವಾ ಅದೇ ಸರ್ಕಾರ ಮತ್ತೆ ಆಯ್ಕೆಯಾದರೂ ಮುಂದೆ ಪೂರ್ಣ ಪ್ರಮಾಣದ ಬಜೆಟ್ ಮಂಡನೆಯಾಗುವುದು ಇದೆ. ದೇಶದ ಹಣಕಾಸಿನ ನಿರ್ವಹಣೆ ಉದ್ದೇಶದಿಂದ ಇದನ್ನು ಮಂಡಿಸಲಾಗುತ್ತದೆ.
ಮಧ್ಯಂತರ ಬಜೆಟ್ ಮಂಡನೆಗೆ ಇರುವ ಷರತ್ತುಗಳೇನು ?
ಮಧ್ಯಂತರ ಬಜೆಟ್‌ನಲ್ಲಿ ಕೆಲವು ನಿರ್ದಿಷ್ಟ ಸೂಚನೆಗಳು ಇರುತ್ತವೆ. ಚುನಾವಣಾ ಆಯೋಗದ ನೀತಿ ಸಂಹಿತೆ ಪಾಲಿಸಿಕೊಂಡೇ ಮಧ್ಯಂತರ ಬಜೆಟ್ ಮಂಡಿಸಬೇಕಾಗುತ್ತದೆ. ಚುನಾವಣೆ ಸಮಯದಲ್ಲಿ ಮಧ್ಯಂತರ ಬಜೆಟ್ ಸಾಮಾನ್ಯವಾಗಿ ಮಂಡನೆ ಆಗುತ್ತದೆ. ಹೀಗಾಗಿ ಮಧ್ಯಂತರ ಬಜೆಟ್‌ನಲ್ಲಿ ಮತದಾರರ ಮೇಲೆ ಪ್ರಭಾವ ಬೀರುವಂತಹ ಯಾವುದೇ ಯೋಜನೆಗಳನ್ನು ಪರಿಚಯಿಸುವುದಕ್ಕೆ ಅವಕಾಶ ಇರುವುದಿಲ್ಲ. ಅಲ್ಲದೆ ಆರ್ಥಿಕ ಸಮೀಕ್ಷೆ ಸಹ ನಡೆಸಲು ಅವಕಾಶ ಇರುವುದಿಲ್ಲ.












Click it and Unblock the Notifications