ಅಮಿತ್ ಶಾ- ಚಂದ್ರಬಾಬು ನಾಯ್ಡು ಮಾತುಕತೆ: ಕರ್ನಾಟಕದ ಸೋಲಿನ ಬಳಿಕ ಭಯಗೊಂಡಿತೇ ಬಿಜೆಪಿ? ಇನ್‌ಸೈಡ್ ರಿಪೋರ್ಟ್
ಬೆಂಗಳೂರು, ಜೂನ್ 5: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಐದು ವರ್ಷಗಳ ನಂತರ ತೆಲುಗು ದೇಶಂ ಪಕ್ಷದ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರನ್ನು ಶನಿವಾರ ರಾತ್ರಿ ಭೇಟಿಯಾದರು. 2019 ರ ಲೋಕಸಭೆ ಚುನಾವಣೆಗೆ ಮುನ್ನ, ಆಂಧ್ರಪ್ರದೇಶ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದರು. ಈಗ ಬಿಜೆಪಿಯು ಮತ್ತೆ ಟಿಡಿಪಿಯೊಂದಿಗೆ ಸ್ನೇಹ ಬೆಳೆಸಲು ಮುಂದಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ವಿರುದ್ಧ ಚಂದ್ರಬಾಬು ನಾಯ್ಡು ಸಿಡಿದೆದ್ದ ಬಳಿಕ ಕೇಂದ್ರ ನಾಯಕರನ್ನು ಟೀಕಿಸುತ್ತಲೇ ಬಂದರು. ಎನ್‌ಡಿಎ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಟಿಡಿಪಿ ಮಂಡಿಸಿತು. ಪ್ರಧಾನಿ ನರೇಂದ್ರ ಮೋದಿ ಅವರನ್ನು 'ಭಯೋತ್ಪಾದಕ' ಎಂದು ಹೇಳಿಕೆ ನೀಡುವ ಮೂಲಕ ನಾಯ್ಡು ಅವರು ವಿವಾದವನ್ನು ಹುಟ್ಟುಹಾಕಿದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಅಮಿತ್ ಶಾ, ನಾಯ್ಡು ಅವರನ್ನು 'ಯು-ಟರ್ನ್ ಸಿಎಂ' ಎಂದು ಕರೆದಿದ್ದರು. ಚಂದ್ರಬಾಬು ನಾಯ್ಡು ಅವರು ಲೆಕ್ಕವಿಲ್ಲದಷ್ಟು ಬಾರಿ ಎಲ್ಲದರ ಬಗ್ಗೆ ತಮ್ಮ ನಿಲುವನ್ನು ಬದಲಾಯಿಸಿದ್ದಾರೆ. ಟಿಡಿಪಿಗೆ ಎನ್‌ಡಿಎ ಬಾಗಿಲು ಶಾಶ್ವತವಾಗಿ ಮುಚ್ಚಲ್ಪಟ್ಟಿದೆ ಎಂದು ಶಾ ಹೇಳಿದ್ದರು.
ಇಷ್ಟೆಲ್ಲ ಬೆಳವಣಿಗಗಳು ನಡೆದ ನಂತರವೂ ಅಮಿತ್ ಶಾ ಚಂದ್ರ ಬಾಬು ನಾಯ್ಡು ಅವರನ್ನು ಭೇಟಿ ಮಾಡಿ ಮಾತುಕತೆಗೆ ಮುಂದಾಗಿದ್ದು ಏಕೆ ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಎದ್ದಿವೆ.
ಕರ್ನಾಟಕದಲ್ಲಿ ಬಿಜೆಪಿ ಸೋಲು
ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಕರ್ನಾಟಕದಲ್ಲಿ ಭಾರೀ ಸೋಲನ್ನು ಅನುಭವಿಸಿದೆ. ಕಾಂಗ್ರೆಸ್‌ಗೆ ಅಭೂತಪೂರ್ವ ಜನಬೆಂಬಲ ಸಿಕ್ಕಿರುವ ಹಿನ್ನೆಲೆಯಲ್ಲಿ ಬಿಜೆಪಿಯೊಳಗೆ ಆತಂಕ ದಟ್ಟವಾಗುತ್ತಿದೆ ಎನ್ನಲಾಗಿದೆ. ನೆರೆಯ ತೆಲಂಗಾಣದಲ್ಲಿ ಬಿಜೆಪಿಗೆ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ತೆಲಂಗಾಣ ಬಿಜೆಪಿ ಮುಖಂಡರಾದ ಎಟೆಲ ರಾಜೇಂದರ್ ಮತ್ತು ಬಂಡಿ ಸಂಜಯ್ ನಡುವಿನ ಬಣ ಕದನಗಳು ಕಳವಳಕ್ಕೆ ಕಾರಣವಾಗಿವೆ ಎಂದು ಬಿಜೆಪಿಯ ಆಪ್ತ ಮೂಲವೊಂದು 'ದಿ ವೈರ್'ಗೆ ತಿಳಿಸಿದೆ.
ಪ್ರಮುಖ ನಾಯಕರಾದ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ ಮತ್ತು ಜೂಪಲ್ಲಿ ಕೃಷ್ಣರಾವ್ ಅವರು ಬಿಜೆಪಿಗೆ ಸೇರಲು ನಿರಾಕರಿಸಿದ್ದಾರೆ. ಇದು ತೆಲಂಗಾಣದಲ್ಲಿ ಬಿಜೆಪಿ ಅಲೆ ಇಲ್ಲವೆಂಬುದನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತಿದೆ.
ಕರ್ನಾಟಕದ ಸೋಲಿನ ನಂತರ ಆತಂಕದಲ್ಲಿರುವ ಬಿಜೆಪಿ ತನ್ನ ಸ್ನೇಹಿತರಿಗಾಗಿ ಕೈಚಾಚುತ್ತಿದೆ ಎಂದು ತಿಳಿದುಬಂದಿದೆ. ಕರ್ನಾಟಕ ಸೋಲಿನ ಬಳಿಕ ಬಿಜೆಪಿ ದಕ್ಷಿಣ ಭಾರತದಲ್ಲಿ ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿದೆ ಎಂಬುದು ಕೇಂದ್ರ ನಾಯಕರ ಕಳವಳಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಮೈತ್ರಿಪಕ್ಷಗಳನ್ನು ಬಿಜೆಪಿ ಹುಡುಕುತ್ತಿದೆ ಎಂದು ಟಿಡಿಪಿ ಮೂಲಗಳು ತಿಳಿಸಿವೆ.

ಅಮಿತ್ ಶಾ ತಂತ್ರವೇನು?
ಮುಂಬರುವ ತೆಲಂಗಾಣ ಚುನಾವಣೆಯ ಸಂಬಂಧವಾಗಿ ಚಂದ್ರಬಾಬು ನಾಯ್ಡು ಮತ್ತು ಅಮಿತ್ ಶಾ ನಡುವೆ ಸಭೆ ನಡೆದಿದೆ ಎಂಬ ಊಹಾಪೋಹಗಳು ಎದ್ದಿವೆ. ಇಂತಹ ವದಂತಿಗಳನ್ನು ನಿರಾಕರಿಸಿರುವ ಟಿಡಿಪಿ ವಕ್ತಾರ ಕೊಮ್ಮರೆಡ್ಡಿ ಪಟ್ಟಾಬಿ, ಸೂಕ್ತ ಸಮಯದಲ್ಲಿ ಸಭೆಯ ವಿವರಗಳನ್ನು ಬಹಿರಂಗಪಡಿಸಲಾಗುವುದು ಎಂದು 'ದಿ ವೈರ್'ಗೆ ತಿಳಿಸಿದ್ದಾರೆ.
ಈ ವರ್ಷ ನಡೆಯಲಿರುವ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಮತಗಳನ್ನು ಸೆಳೆಯಲು ಟಿಡಿಪಿಯನ್ನು ಬಳಸಿಕೊಳ್ಳವ ಚಿಂತನೆಯಲ್ಲಿ ಅಮಿತ್ ಶಾ ಇದ್ದಾರೆ ಎಂಬ ಮಾತುಗಳನ್ನು ರಾಜಕೀಯ ವಿಮರ್ಶಕರು ಹೇಳಿದ್ದಾರೆ.
ವಿಶೇಷವಾಗಿ ಹೈದರಾಬಾದ್ ನಗರದಲ್ಲಿ ನೆಲೆಸಿರುವ ಕರಾವಳಿ ಆಂಧ್ರದ ಜನರ ಮತಗಳನ್ನು ಸೆಳೆಯಲು ಚಂದ್ರಬಾಬು ನಾಯ್ಡು ಅವರ ಬೆಂಬಲವನ್ನು ಅಮಿತ್ ಶಾ ಕೋರಿರಬಹುದು ಎಂಬ ಮಾತುಗಳೂ ಕೇಳಿಬಂದಿವೆ.
ಇದಲ್ಲದೇ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿಯೂ ಟಿಡಿಪಿ ಮೈತ್ರಿ ಬಗ್ಗೆ ಮಾತನಾಡಲಾಗಿದೆ ಎಂಬ ಮಾತುಗಳೂ ಕೇಳಿಬಂದಿವೆ.












Click it and Unblock the Notifications