ಎಎಪಿ ಗೆಲುವಿಗೆ ಕಾರಣವಾದ 10 ಅಂಶಗಳು ಯಾವವು?
ನವದೆಹಲಿ, ಫೆ. 10: ಬಿಜೆಪಿ ಮತ್ತು ಕಾಂಗ್ರೆಸ್ ನ್ನು ಧೂಳಿಪಟ ಮಾಡಿ ಆಮ್ ಆದ್ಮಿ ಪಕ್ಷ ದೆಹಲಿ ಅಧಿಕಾರದ ಗದ್ದುಗೆ ಹಿಡಿದಿದೆ. ಹಿಂದಿನ ಎಲ್ಲ ದಾಖಲೆಗಳನ್ನು ಪುಡಿ ಪುಡಿ ಮಾಡಿದ ಕೇಜ್ರಿ ಪಡೆ ವಿರೋಧ ಪಕ್ಷವೂ ಇಲ್ಲದಂತೆ ಮಾಡಿದೆ.
ಚುನಾವಣೆಗೆ ಮುನ್ನ ಇದು ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷದ ನಡುವಿನ ಹಣಾಹಣಿ ಎಂದೇ ಬಿಂಬಿತವಾಗಿತ್ತು. ಆದರೆ ಫಲಿತಾಂಶ ತಿಳಿಸಿಕೊಟ್ಟಿದ್ದೇ ಬೇರೆ. ಆಮ್ ಆದ್ಮಿ ಪಕ್ಷದ ಈ ಅಭೂತಪೂರ್ವ ಗೆಲುವಿಗೆ ನಿಜವಾದ ಕಾರಣಗಳೇನು? ಎಂಬುದರ ಮೇಲೆ ಒಂದು ನೋಟ ಇಲ್ಲಿದೆ.[ಚಿತ್ರಗಳಲ್ಲಿ: ನೆಲಕಚ್ಚಿದ ಕಮಲ, ಎಎಪಿಗೆ ಅಭೂತಪೂರ್ವ ಜಯ]
ಮೊದಲಿನಿಂದ ಸಿದ್ಧತೆ ಮಾಡಿಕೊಂಡಿದ್ದ ಕೇಜ್ರಿವಾಲ್, ಬಿಜೆಪಿಯ ಸರ್ವಾಧಿಕಾರ ಧೊರಣೆ, ಅಡ್ವಾಣಿ ಅನುಪಸ್ಥಿತಿ, ಬಿಜೆಪಿಯಲ್ಲಿನ ಅತಿಯಾದ ಆತ್ಮವಿಶ್ವಾಸ, ಶಕ್ತಿ ಕಳೆದುಕೊಂಡ ಕಾಂಗ್ರೆಸ್, ಕ್ಲಿಕ್ ಆಗದ ಜಾತಿವಾರು ಲೆಕ್ಕಾಚಾರ ಎಲ್ಲವೂ ಪ್ರಮುಖ ರಾಜಕೀಯ ಪಕ್ಷಗಳಿಗೆ ಮುಳುವಾದವು.

ಮೊದಲಿಂದಲೇ ಸಿದ್ಧತೆ
ಆಮ್ ಆದ್ಮಿ ಪಕ್ಷ ದೆಹಲಿ ವಿಧಾನಸಭೆ ಚುನಾವಣೆಗೆ ಬಹಳ ಮೊದಲಿನಿಂದಲೇ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಯಾವಾಗ 2014 ರ ಲೋಕಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿತ್ತೋ ಅಂದಿನಿಂದಲೇ ದೆಹಲಿ ವಿಧಾನ ಸಭೆ ಚುನಾವಣೆಗೆ ತಾಲೀಮು ನಡೆಸಿತ್ತು.

ಕೇಜ್ರಿವಾಲ್ ಕ್ಷಮೆ
ಕೇವಲ 49 ದಿನ ಸರ್ಕಾರ ನಡೆಸಿದ್ದಕ್ಕೆ ಕೇಜ್ರಿವಾಲ್ ಜನತೆಯ ಕ್ಷಮೆ ಕೇಳಿದ್ದರು. ಕೇಜ್ರಿವಾಲ್ ತಮ್ಮ ಪ್ರತಿಸ್ಪರ್ಧಿ ಕಿರಣ್ ಬೇಡಿ ಬಗ್ಗೆ ಕೀಳಾಗಿ ಮಾತನಾಡದಿರುವುದು ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿತ್ತು.

ಮೋದಿ ಮತ್ತು ಕೇಜ್ರಿವಾಲ್
ಬಿಜೆಪಿ ತನ್ನ ಕಾರ್ಯ ತಂತ್ರಗಳನ್ನು ಸರಿಯಾಗಿ ರೂಪಿಸಲು ವಿಫಲವಾಗಿದ್ದು ಒಂದೆಡೆಯಾದರೆ 10 ಲಕ್ಷ ಬೆಲೆಬಾಳುವ ಕೋಟ್ ನ ನರೇಂದ್ರ ಮೋದಿ ಮತ್ತು ಸಾಮಾನ್ಯ ಮಫ್ಲರ್ ಮ್ಯಾನ್ ಅರವಿಂದ್ ಕೇಜ್ರಿವಾಲ್ ನಡುವಿನ ಹೋರಾಟವೇ ದೆಹಲಿ ಚುನಾವಣೆ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು ಆಮ್ ಆದ್ಮಿಗೆ ಲಾಭ ತಂದುಕೊಟ್ಟಿತು.

ಆಪ್ ನೊಂದಿಗೆ ನಿಂತ ಅಲ್ಪಸಂಖ್ಯಾತರು
ಈ ಬಾರಿಯ ಆಮ್ ಆದ್ಮಿ ಗೆಲುವಿಗೆ ಮುಖ್ಯವಾಗಿ ಕಾರಣವಾಗಿದ್ದು ಮುಸ್ಲಿಮರ ಮತದಾನ. ಮತದಾನ ಪ್ರಮಾಣವು ಹೆಚ್ಚಾಗಿದ್ದು ಶೇಕಡಾವಾರು ಅಲ್ಪಸಂಖ್ಯಾತರು ಆಮ್ ಆದ್ಮಿಗೆ ಬೆಂಬಲ ನೀಡಿದ್ದರಿಂದ ಗೆಲುವು ಸುಲಭ ಸಾಧ್ಯವಾಯಿತು.

ಕಾಂಗ್ರೆಸ್ ಓಟು ಕಿತ್ತುಕೊಂಡ ಕೇಜ್ರಿ
ಕಾಂಗ್ರೆಸ್ ನಂಬಿಕೆ ಇಟ್ಟುಕೊಂಡಿದ್ದ ದಲಿತರು ಮತ್ತು ಹಿಂದುಳಿದ ವರ್ಗದ ಮತಗಳು ನೇರವಾಗಿ ಆಮ್ ಆದ್ಮಿ ಬುಟ್ಟಿ ಸೇರಿದವು. ಇದು ಅಭೂತಪೂರ್ವ ಗೆಲುವಿಗೆ ಕಾರಣವಾಯಿತು.

ಬಿಜೆಪಿಗೆ ಮುಳುವಾದ ಆತ್ಮವಿಶ್ವಾಸ
ಲೋಕಸಭೆಯಲ್ಲಿ ದೆಹಲಿಯ 7 ಸ್ಥಾನಗಳನ್ನು ಬಾಚಿದ್ದ ಬಿಜೆಪಿಗೆ ಅತಿಯಾದ ಆತ್ಮವಿಶ್ವಾಸ ಮುಳುವಾಯಿತು. ನರೇಂದ್ರ ಮೋದಿ ಮತ್ತು ಅಮಿತ್ ಷಾ ಅವರನ್ನು ನಂಬಿಕೊಂಡ ಪಕ್ಷ ಸ್ಥಳೀಯ ನಾಯಕರನ್ನು ಕಡೆಗಣಿಸಿದ ಪರಿಣಾಮ ಎದುರಿಸುವಂತಾಯಿತು.

ಕ್ಲಿಕ್ ಆಗದ ಕಿರಣ್ ಬೇಡಿ
ಕಿರಣ್ ಬೇಡಿ ಅವರನ್ನು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದು ಪಕ್ಷದ ಒಳಗಡೆಯೇ ಅಸಮಾಧಾನಕ್ಕೆ ಕಾರಣವಾಗಿತ್ತು. ಜತೆಗೆ ವ್ಯಾಪಾರಿ ವರ್ಗದವರು ಬೇಡಿ ಇದ್ದ ಕಾರಣಕ್ಕೆ ಬಿಜೆಪಿಯಿಂದ ದೂರ ಸರಿದರು.

ರಾಜಕೀಯ ಧ್ರುವೀಕರಣವಿಲ್ಲ
ಈ ಬಾರಿ ಯಾವುದೇ ರೀತಿಯ ರಾಜಕೀಯ ಧ್ರುವೀಕರಣಕ್ಕೆ ಆಮ್ ಆದ್ಮಿ ಪಕ್ಷ ಅವಕಾಶ ನೀಡಲಿಲ್ಲ. ಧಾರ್ಮಿಕತೆ ಹೆಸರಿನಲ್ಲಿ ಮತ ಕೇಳುವವರಿಗೂ ಆಮ್ ಆದ್ಮಿ ಪ್ರಚಾರ ತಂತ್ರದಿಂದ ಕಂಗಾಲಾದರು. ಹಿಂದು-ಮುಸ್ಲಿಮರನ್ನು ಒಡೆದು ಆಳುವ ನೀತಿಗೂ ಬ್ರೇಕ್ ಬಿದ್ದಿದ್ದು ಆಮ್ ಆದ್ಮಿ ಗೆಲುವಿಗೆ ಕಾರಣವಾಯಿತು.

ಪ್ರಭಾವ ಬೀರದ ಅಧಿಕಾರ
ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಪರ ಉಳಿದ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಮತದಾರ ಒಲವು ವ್ಯಕ್ತಪಡಿಸಿದ್ದ. ಆದರೆ ಇಲ್ಲಿ ಪರಿಸ್ಥಿತಿ ಸಂಪೂರ್ಣ ಉಲ್ಟಾ ಹೊಡೆದಿದ್ದು ಆಮ್ ಆದ್ಮಿ ಗೆಲುವಿನ ನಗೆ ಬೀರಲು ಕಾರಣವಾಯಿತು.

ಇದು ಮೋದಿ ಚುನಾವಣೆ ಅಲ್ಲ
ನಾವು ವಿಧಾನಸಭೆಗೆ ಕೇಜ್ರಿವಾಲ್ ಅವರನ್ನು, ಲೋಕಸಭೆಗೆ ಮೋದಿ ಅವರನ್ನು ಆಯ್ಕೆ ಮಾಡುತ್ತೇವೆ ಎಂದು ದೆಹಲಿ ಮತದಾರರು ಬಹಿರಂಗವಾಗಿಯೇ ಅಭಿಪ್ರಾಯ ವ್ಯಕ್ತಪಡಿಸಿದ್ದರು, ದೆಹಲಿಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದಾಗಲೇ ಜನ ಆಮ್ ಆದ್ಮಿ ಬೆಂಬಲಿಸುವ ನಿರ್ಧಾರ ತೆಗೆದುಕೊಂಡಿದ್ದರು. ಅದರಲ್ಲಿ ಯಾವುದೇ ಬದಲಾವಣೆ ಆಗದಿದ್ದದ್ದು ಆಮ್ ಆದ್ಮಿ ಗೆಲುವಿಗೆ ಕಾರಣವಾಯಿತು.












Click it and Unblock the Notifications