'ಸುಪ್ರೀಂ ಕೋರ್ಟ್ 'ನರಭಕ್ಷಕ ಹುಲಿಯಲ್ಲ', ಸರಕಾರಗಳು ಹೆದರಬಾರದು'
ನವದೆಹಲಿ, ಸೆಪ್ಟೆಂಬರ್ 21: ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ ಎಂದು ಸರಕಾರಗಳು ಹೆದರಬಾರದು, ಸುಪ್ರೀಂ ಕೋರ್ಟ್ "ನರಭಕ್ಷಕ ಹುಲಿಯಲ್ಲ" ಎಂದು ಶುಕ್ರವಾರ ಭಾರತದ ಸರ್ವೋಚ್ಚ ನ್ಯಾಯಾಲಯ ಹೇಳಿದೆ.
"ನಾವು ಹುಲಿಯೋ ಮತ್ತೊಂದೋ ಅಲ್ಲ. ನಾವು ನರಭಕ್ಷಕ ಹುಲಿಗಳಲ್ಲ. ಸರಕಾರಗಳಿಗೆ ಭಯ ಇರಬಾರದು" ಎಂದು ನ್ಯಾಯಮೂರ್ತಿಗಳಾದ ಮದನ್ ಬಿ ಲೋಕುರ್ ಮತ್ತು ದೀಪಕ್ ಗುಪ್ತಾ ಅವರನ್ನು ಒಳಗೊಂಡ ಪೀಠ ಹೇಳಿದೆ.
ಖಾಸಗಿ ಕಂಪೆನಿಯೊಂದರ ಪರವಾಗಿ ಹಿರಿಯ ವಕೀಲ ಮುಕುಲ್ ರೋಹ್ಟಗಿ ವಾದ ಮಂಡಿಸುತ್ತಾ, ಆಂಧ್ರಪ್ರದೇಶದಲ್ಲಿ ಕಂಪೆನಿಯು ಅಕ್ರಮ ಗಣಿಗಾರಿಕೆ ಮಾಡುತ್ತಿದೆ ಎಂದು ಆರೋಪ ಮಾಡಿ, ಅರ್ಜಿ ಹಾಕುವ ಮೂಲಕ ಸರಕಾರದ ಮೇಲೆ ಒತ್ತಡ ಹೇರುವ ಗುರಿ ಅರ್ಜಿದಾರರದು ಎಂದು ಹೇಳಿದರು. ಈ ವೇಳೆ ಸುಪ್ರೀಂ ಕೋರ್ಟ್ ಪೀಠವು ಈ ಮೇಲ್ಕಂಡ ಅಭಿಪ್ರಾಯ ವ್ಯಕ್ತಪಡಿಸಿದೆ.
ಆಂಧ್ರಪ್ರದೇಶ ಸರಕಾರವನ್ನು ಪ್ರತಿನಿಧಿಸುವ ವಕೀಲರು ಇತ್ತೀಚೆಗೆ ಸರಕಾರದಿಂದ ಹೊರಡಿಸಿದ ಆದೇಶದ ದಾಖಲೆ ಪ್ರಸ್ತುತ ಪಡಿಸಿ, ಟ್ರೈಮೆಕ್ಸ್ ಗ್ರೂಪ್ ನ ಗಣಿಗಾರಿಕೆಯನ್ನು ಅಮಾನತು ಮಾಡಿದೆ ಎಂದು ಹೇಳಿದ್ದರು.

ಆಗ ರೋಹ್ಟಗಿ, ಇದು ಅಕ್ರಮ ಗಣಿಗಾರಿಕೆ ಪ್ರಕರಣವಲ್ಲ. ಸುಪ್ರೀಂ ಕೋರ್ಟ್ ನಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ ಎಂಬ ಕಾರಣಕ್ಕೆ ಸರಕಾರ ಈ ನಿರ್ಧಾರ ಕೈಗೊಂಡಿದೆ ಎಂದು ವಾದಿಸಿದರು.
ಅರ್ಜಿದಾರರು ಮತ್ತು ಹಿರಿಯ ಅಧಿಕಾರಿ ಇಎಎಸ್ ಶರ್ಮಾ ಪರ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್, ಸರಕಾರವು ಪರವಾನಗಿಯನ್ನು ಅಮಾನತು ಮಾತ್ರ ಮಾಡಿದೆ. ಆದರೆ ಲೆಸನ್ಸ್ ರದ್ದು ಮಾಡಿ, ಆ ಕಂಪೆನಿಯಿಂದ ಹಣ ವಸೂಲಿ ಮಾಡಿಕೊಳ್ಳಬೇಕು ಎಂದರು.
ರಾಜ್ಯ ಸರಕಾರಕ್ಕೆ ಒತ್ತಡ ಹೇರಲು ಕೋರ್ಟ್ ಗೆ ಅರ್ಜಿ ಹಾಕಿದ್ದಾರೆ. ಅಕ್ರಮ ಗಣಿಗಾರಿಕೆ ಅಂತ ಹೇಳುವುದಕ್ಕೆ ಯಾವ ಪ್ರಕರಣ ಇಲ್ಲ. ರಾಜ್ಯ ಸರಕಾರ ಹೊರಡಿಸಿದ ಆದೇಶವನ್ನು ನಾವು ಪ್ರಶ್ನಿಸಬೇಕು ಎಂದು ರೋಹ್ಟಗಿ ಹೇಳಿದರು.
ರಾಜ್ಯ ಸರಕಾರ ಈ ಆದೇಶ ನೀಡುವ ಮೂಲಕ ಅರ್ಜಿದಾರರು ತಮ್ಮ 'ಪ್ರಯತ್ನ'ದಲ್ಲಿ 'ಯಶಸ್ಸು' ಕಾಣುವಂತಾಗಿದೆ ಎಂದು ರೋಹ್ಟಗಿ ತಮ್ಮ ವಾದ ಮಂಡಿಸಿದರು. ಆಗ ಸುಪ್ರೀಂ ಕೋರ್ಟ್ ಪೀಠವು, ಯಾರೋ ಒಬ್ಬರು ಅಥವಾ ಇಬ್ಬರ ಬೆದರಿಕೆಗೆ ಬಗ್ಗುವಷ್ಟು ಅಸಹಾಯಕ ಆಗಬಾರದು ಸರಕಾರ ಎಂದು ಹೇಳಿತು. ಈ ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 27ಕ್ಕೆ ಮುಂದೂಡಿತು.
ಆಂಧ್ರಪ್ರದೇಶದಲ್ಲಿ ಕಂಪೆನಿಯೊಂದರ ಮೇಲೆ ಮಾಡಿರುವ ಅಕ್ರಮ ಗಣಿಗಾರಿಕೆ ಆರೋಪದ ಬಗ್ಗೆ ಹಾಗೂ ಆ ವಿಚಾರವಾಗಿ ಎಸ್ ಐಟಿ ಅಥವಾ ಸಿಬಿಐನಿಂದ ತನಿಖೆ ಆಗಬೇಕು ಎಂದು ಕೋರಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಹಾಗೂ ಆಂದ್ರಪ್ರದೇಶ ಸರಕಾರ ಮತ್ತು ಗಣಿಗಾರಿಕೆ ಮಾಡುತ್ತಿದ್ದ ಕಂಪೆನಿಯ ಪ್ರತಿಕ್ರಿಯೆಯನ್ನು ಸುಪ್ರೀಂ ಕೋರ್ಟ್ ಕೇಳಿತ್ತು.












Click it and Unblock the Notifications