ಟಾಯ್ಲೆಟ್ ನೀರು ಬಳಸಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಡುಗೆ ತಯಾರಿ! ವಿಡಿಯೋ ವೈರಲ್
'ವೈದ್ಯೋ ನಾರಾಯಣೋ ಹರಿಃ' ಅನ್ನೋ ಶ್ಲೋಕ ನಮಗೆ ವೈದ್ಯರ ಮಹತ್ವ ತಿಳಿಸುತ್ತದೆ. ಆದರೆ ಹೀಗೆ ರೋಗಿಗಳ ಜೀವ ಉಳಿಸಲು ಭವಿಷ್ಯದ ವೈದ್ಯರಾಗಬೇಕಿದ್ದ ವಿದ್ಯಾರ್ಥಿಗಳ ಜೀವದ ಜೊತೆ ಚಲ್ಲಾಟ ಆಡಿರುವ ಆರೋಪ ಕೇಳಿ ಬಂದಿದೆ. ಮಧ್ಯಪ್ರದೇಶ ರಾಜ್ಯದ ಜಬಲ್ಪುರದಲ್ಲಿ ಇರುವ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಟಾಯ್ಲೆಟ್ ನೀರು ಬಳಸಿ ಅಡುಗೆ ಮಾಡಿರುವ ಆರೋಪ ಕೇಳಿ ಬಂದಿದೆ.
ಮೆಡಿಕಲ್ ಕಾಲೇಜು ಸೀಟ್ ಪಡೆಯಲು ವಿದ್ಯಾರ್ಥಿಗಳು ದೊಡ್ಡ ತಪಸ್ಸು ಮಾಡಬೇಕು ಎಂಬ ಮಾತು ಇದೆ. ಯಾಕಂದ್ರೆ ವೈದ್ಯಕೀಯ ವಿದ್ಯಾರ್ಥಿ ಆಗಲು ಸಾಕಷ್ಟು ಅಡೆತಡೆ ಎದುರಿಸಿದ್ದೂ ಅಲ್ಲದೆ ಲಕ್ಷ ಲಕ್ಷ ರೂಪಾಯಿ ಫೀಸ್ ಕೂಡ ಕೊಡಬೇಕು. ಇನ್ನೂ ಕೆಲವು ಕಾಲೇಜುಗಳು ಈ ವಿಚಾರದಲ್ಲಿ ಕೋಟಿ ಕೋಟಿ ರೂಪಾಯಿ ವಸೂಲಿ ಮಾಡೋದು ಕೂಡ ಉಂಟು. ಹೀಗೆಲ್ಲಾ ಹಾಳಾಗಿ ಹೋಗಿರುವ ಶೈಕ್ಷಿಣಿಕ ವ್ಯವಸ್ಥೆ ನಡುವೆ ವಿದ್ಯಾರ್ಥಿಗಳಿಗೆ ನೀಡುವ ಆಹಾರದಲ್ಲೂ ಕಲಬೆರಕೆ ಆರೋಪ ಕೇಳಿ ಬಂದಿದೆ. ಹಾಗಾದರೆ ಟಾಯ್ಲೆಟ್ ನೀರು ಬಳಸಿ ವಿದ್ಯಾರ್ಥಿಗಳಿಗೆ ಅಡುಗೆ ಮಾಡಿದ್ದು ಏಕೆ? ಮುಂದೆ ಓದಿ.

ಟಾಯ್ಲೆಟ್ ನೀರಲ್ಲಿ ಅಡುಗೆ ಮಾಡ್ತಿದ್ರು!
ಅಂದಹಾಗೆ ಮಧ್ಯಪ್ರದೇಶದ ಜಬಲ್ಪುರದ ನೇತಾಜಿ ಸುಭಾಷ್ ಚಂದ್ರ ಬೋಸ್ ವೈದ್ಯಕೀಯ ಕಾಲೇಜಿನಲ್ಲಿ ರಾಷ್ಟ್ರೀಯ ಮಟ್ಟದ ವೈದ್ಯಕೀಯ ಸಮ್ಮೇಳನ ಆಯೋಜನೆ ಮಾಡಲಾಗಿತ್ತು. ಈ ಸಮ್ಮೇಳನದ ಕಾರಣಕ್ಕೆ, ವಿದ್ಯಾರ್ಥಿಗಳಿಗೆ ವಿಶೇಷ ಅಡುಗೆ ತಯಾರಿಸಲು ಆದೇಶ ನೀಡಿದ್ದರು ಕಾಲೇಜು ಅಧಿಕಾರಿಗಳು. ಆದರೆ ಹೀಗೆ ಅಡುಗೆ ತಯಾರಿಸುವ ವೇಳೆ ಟಾಯ್ಲೆಟ್ ಕಮೋಡ್‌ನ ಮೂಲಕ ನೀರಿನ ಸಂಪರ್ಕ ಪಡೆದಿರುವ ಆರೋಪ ಕೇಳಿ ಬಂದಿದೆ. ವಿದ್ಯಾರ್ಥಿಗಳು ವಿಡಿಯೋ ಮಾಡಿ ಅದನ್ನ ಸೋಷಿಯಲ್ ಮೀಡಿಯಾಗೆ ಹಾಕಿದ್ದಾರೆ.
ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಆಕ್ರೋಶ
ಹೀಗೆ ಟಾಯ್ಲೆಟ್ ನೀರು ಬಳಸಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಅಡುಗೆ ಮಾಡಿರುವ ವಿಡಿಯೋ ವೈರಲ್ ಆಗಿದ್ದೇ ತಡ, ಸೋಷಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶ ಕೂಡ ಮೊಳಗಿದೆ. ಅಲ್ಲದೆ ವಿದ್ಯಾರ್ಥಿಗಳು ಘಟನೆ ವಿರುದ್ಧ ರೊಚ್ಚಿಗೆದ್ದು ಆಕ್ರೋಶ ಕೂಡ ಹೊರ ಹಾಕುತ್ತಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ಅಧಿಕಾರಿಗಳು, ಕ್ರಮ ಕೈಗೊಳ್ಳುವ ಭರವಸೆಯನ್ನ ನೀಡಿದ್ದಾರೆ. ಜಬಲ್ಪುರದ ನೇತಾಜಿ ಸುಭಾಷ್ ಚಂದ್ರ ಬೋಸ್ ವೈದ್ಯಕೀಯ ಕಾಲೇಜಿನ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಸಂಜಯ್ ಮಿಶ್ರಾ ಘಟನೆಯ ಬಗ್ಗೆ ತನಿಖೆಗೂ ಆದೇಶಿಸಿದ್ದಾರೆ.
ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದ ಜನ
ಒಟ್ನಲ್ಲಿ ತಿನ್ನುವ ಅನ್ನದ ಜೊತೆಗೆ ಈ ರೀತಿ ಆಟ ಆಡಿದವರಿಗೆ ತಕ್ಕ ಪಾಠ ಕಲಿಸಬೇಕಾಗಿದೆ ಎಂಬುದು ನೆಟ್ಟಿಗರ ಡಿಮ್ಯಾಂಡ್. ಅದರಲ್ಲೂ ಲಕ್ಷ ಲಕ್ಷ ಫೀಸ್ ಕಟ್ಟಿ ಬಂದಿದ್ದರೂ ಹೀಗೆಲ್ಲಾ ಮೆಡಿಕಲ್ ವಿದ್ಯಾರ್ಥಿಗಳಿಗೆ ಕೆಟ್ಟ ಊಟ ಕೊಡುತ್ತಿರುವ ಬಗ್ಗೆ ಕೂಡ ಭಾರಿ ಆಕ್ರೋಶ ಮೊಳಗಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಕೂಡ ಜನ ಸೋಷಿಯಲ್ ಮೀಡಿಯಾದ ಮೂಲಕ ಇದೀಗ ಆಗ್ರಹಿಸುತ್ತಿದ್ದಾರೆ.












Click it and Unblock the Notifications