Water: ಅನಂತರಪುರ ಜಿಲ್ಲೆಯ ಬರಡು ಭೂಮಿಯ ಯಶೋಗಾಥೆ: ಜಗದೀಶ್ ಕೊಪ್ಪ ಬರಹ
ಅನಂತರಪುರ ಜಿಲ್ಲೆಯ ಬರಡು ಭೂಮಿಯ ಯಶೋಗಾಥೆಯ ಬಗ್ಗೆ ಪತ್ರಕರ್ತ ಜಗದೀಶ್ ಕೊಪ್ಪ ಅವರ ಬರಹ ಇಲ್ಲಿದೆ.
ಪ್ರತಿ ವರ್ಷ ಬೇಸಿಗೆಯ ದಿನಗಳಲ್ಲಿ ನನಗೆ ಪರಿಸರ ರಕ್ಷಣೆಗೆ ಜೀವನ ಮುಡಿಪಾಗಿಟ್ಟವರು, ಕುಡಿಯುವ ನೀರಿನ ಮಹತ್ವವನ್ನು ಅರಿತು ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಮಳೆ ನೀರು ಸಂಗ್ರಹಕ್ಕಾಗಿ ಹಗಲು, ರಾತ್ರಿ ದುಡಿಯುವ ಮಹತ್ವದ ಜೀವಗಳು ನೆನಪಾಗುತ್ತಾರೆ. ನಮ್ಮ ನೆರೆಯ ಅನಂತಪುರ ಜಿಲ್ಲೆ (ಅನಂತಪುರಂ ಜಿಲ್ಲೆಯು ಆಂಧ್ರಪ್ರದೇಶದ ರಾಯಲಸೀಮಾ ಪ್ರದೇಶವಾಗಿದೆ) ಇಡೀ ದಕ್ಷಿಣ ಭಾರತದ ಬರಪೀಡಿತ ಜಿಲ್ಲೆಗಳಲ್ಲಿ ಒಂದು. ಇಲ್ಲಿನ ಭೂಮಿಯ ಬೆಲೆ ಪ್ರತಿ ಎಕರೆಗೆ ನಲವತ್ತು ಸಾವಿರ ಅಂದರೆ, ಒಂದು ಗುಂಟೆಗೆ ಒಂದು ಸಾವಿರ. ಬೆಂಗಳೂರು ನಗರದಲ್ಲಿ ಒಂದು ಗುಂಟೆ ಭೂಮಿ ಬೆಲೆ ಒಂದು ಕೋಟಿ. ಇದು ನಾವು ಬದುಕುತ್ತಿರುವ ವರ್ತಮಾನದ ಜಗತ್ತಿನ ವೈರುಧ್ಯಗಳಲ್ಲಿ ಒಂದು.

ಕಳೆದ ಇಪ್ಪತ್ತೂದು ವರ್ಷಗಳಿಂದ ಅನಂತಪುರದಲ್ಲಿ ಅನೇಕ ಮಹನೀಯರು ಭೂಮಿಯನ್ನು ಕೊಂಡು, ಅಲ್ಲಿನ ಬರಡು ನೆಲವನ್ನು ಅರಣ್ಯವಾಗಿ ಪರಿವರ್ತಿಸಿದ್ದಾರೆ. ಮತ್ತೇ ಕೆಲವರು ಅಂತರ್ಜಲ ಹೆಚ್ಚಿಸಿ, ಅಲ್ಲಿನ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಿದ್ದಾರೆ. ಮಳೆಯಧಾರಿತ ಶೇಂಗಾ ಮತ್ತು ರಾಗಿ ಬೆಳಯನ್ನು ನಂಬಿ ಬದುಕಿದ್ದ ರೈತರು, ಅವರಿಂದಾಗಿ, ಮಳೆ ನೀರು ಸಂಗ್ರಹದ ಮಹತ್ವವನ್ನು ಈಗ ಅರಿತುಕೊಂಡಿದ್ದಾರೆ.
ಇದೀಗ ತೆಲಂಗಾಣದ ಅರಣ್ಯಾಧಿಕಾರಿ ವಿನೀತ್ ಎಂಬ ಯುವಕ ಅನಂತಪುರದ ನಾಲ್ಕನೂರು ಹಳ್ಳಿಗಳ ಜನರ ಮನವೊಲಿಸಿ ಕಲ್ಯಾಣದುರ್ಗ ಮತ್ತು ರಾಯಲದುರ್ಗ ಎಂಬ ಬರಡು ಪ್ರದೇಶಗಳ ಜನರ ಬಾಯಾರಿಕೆಯನ್ನು ಶಾಶ್ವತವಾಗಿ ತಡೆಗಟ್ಡಿದ್ದಾರೆ. 2008ರ ಬ್ಯಾಚ್‌ನ ಐ.ಎಫ್.ಎಸ್. ಅಧಿಕಾರಿಯಾಗಿ ಬಂದ ವಿನೀತ್, ತಮ್ಮ ಪತ್ನಿ ರೂಪಕ್ ಯಾದವ್ ಜೊತೆಗೂಡಿ ಇಡೀ ಗ್ರಾಮೀಣ ಬದುಕಿನ ವ್ಯವಸ್ಥೆಯನ್ನು ಬದಲಾಯಿಸಿದ್ದಾರೆ.
ನರೇಗಾ ಮತ್ತು ಇತರೆ ಸರ್ಕಾರಿ ಯೋಜನೆಯಡಿ ಕೆರೆ ಕಟ್ಟೆಗಳನ್ನು ನಿರ್ಮಿಸಿ, ಒಂದು ಹನಿ ಮಳೆ ನೀರು ಹರಿದು ವ್ಯರ್ಥವಾಗದಂತೆ ಶ್ರಮವಹಿಸಿದ್ದಾರೆ. ಇದರ ಜೊತೆಗೆ ಎಪ್ಪತ್ತು ಸಾವಿರ ಬೇವು, ಹುಣಸೆಯಂತೆ ದೇಶಿ ಗಿಡಗಳನ್ನು ನೆಟ್ಟು ಮರವಾಗಿ ಬೆಳೆಸಿದ್ದಾರೆ. ಕುಡಿಯುವ ನೀರಿಗಾಗಿ ಸೈಕಲ್‌ಗೆ ನಾಲ್ಕು ಬಿಂದಿಗೆ ಕಟ್ಟಿಕೊಂಡು ಬರಗಾಲಲ್ಲಿ ನಡೆಯುತ್ತಿದ್ದ ಮತ್ತು ಸೈಕಲ್ ತಳ್ಳಿಕೊಂಡು ಬರುತ್ತಿದ್ದ ಮಹಿಳೆಯರ ಪಾಲಿಗೆ ವಿನೀತ್ ಈಗ ಜಲ ದೇವರಾಗಿದ್ದಾರೆ. ಇಂತಹ ಕಥನಗಳು ಅನಂತಪುರ ಜಿಲ್ಲೆಯೊಂದರಲ್ಲಿ ಇಪ್ಪತ್ತಕ್ಕೂ ಮೇಲ್ಪಟ್ಟಿವೆ. ವಿನೀತ್ ಈಗ ಪಕ್ಕದ ಕಡಪ ಜಿಲ್ಲೆಗೆ ವರ್ಗವಾಗಿ ಬಂದಿದ್ದಾರೆ. ಕಡಪ ಜಿಲ್ಲೆಯನ್ನು ಪರಿವರ್ತಿಸುವ ಆಲೋಚನೆಯಲ್ಲಿದ್ದಾರೆ.
ಯಾವ ರಾಜಕಾರಣಿ ಏನು ತಿಂದನು, ಏನು ವಿಸರ್ಜಿಸಿದನು, ಯಾವ ನಟಿ ಈದಿನ ಯಾವ ಬಣ್ಣದ ಒಳ ಉಡುಪು, ಧರಿಸಿದ್ದಳು ಎಂದು ಸುದ್ದಿ ಮಾಡುವುದು ಪತ್ರಿಕೋದ್ಯಮವಲ್ಲ. ಈ ನೆಲವನ್ನು, ಇಲ್ಲಿನ ಜಲವನ್ನು ಹಾಗೂ ಗಾಳಿಯನ್ನು ರಕ್ಷಿಸುತ್ತಾ, ಎಲೆ ಮರೆಯ ಕಾಯಿಯಂತೆ ಬದುಕುತ್ತಿರುವ ಜೀವಗಳತ್ತಲೂ ನಮ್ಮ ಕಣ್ಣು ಮತ್ತು ಹೃದಯ ಹರಿಯಬೇಕಿದೆ.
ಜಗದೀಶ್ ಕೊಪ್ಪ, ಮೈಸೂರು.












Click it and Unblock the Notifications