ಹಲವು ರಾಜ್ಯಗಳಿಗೆ ಅಧಿಕ ಮಳೆಯಾಗುವ ಎಚ್ಚರಿಕೆ: ಎಲ್ಲೆಲ್ಲಿ ಮಳೆ ತರಿಸುತ್ತೆ ಮಾರುತಗಳು?
ದೇಶದ ಹಲವಾರು ರಾಜ್ಯಗಳಲ್ಲಿ ಶನಿವಾರ ಮತ್ತು ಭಾನುವಾರ (ಅಕ್ಟೋಬರ್ 29-30) ಅಧಿಕ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಐಎಂಡಿ ಪ್ರಕಾರ ಅಕ್ಟೋಬರ್ 29 ರಂದು (ಶನಿವಾರ) ತಮಿಳುನಾಡು ಮತ್ತು ಪುದುಚೇರಿಯ ಕೆಲವು ಭಾಗಗಳಲ್ಲಿ ತೀವ್ರ ಮಳೆಯಾಗುವ ಸಾಧ್ಯತೆಯಿದೆ. ಇದಲ್ಲದೆ, ಅಕ್ಟೋಬರ್ 30 ರಂದು (ಭಾನುವಾರ) ತಮಿಳುನಾಡು, ಪುದುಚೇರಿ, ಆಂಧ್ರಪ್ರದೇಶ ಮತ್ತು ಕೇರಳದಲ್ಲಿ ಧಾರಾಕಾರ ಮಳೆಯಾಗುವ ಎಚ್ಚರಿಕೆಯನ್ನು ನೀಡಿದೆ. ಇನ್ನೆರಡು ದಿನಗಳಲ್ಲಿ ತಮಿಳುನಾಡಿನಲ್ಲಿ ಈಶಾನ್ಯ ಮುಂಗಾರು ಅಪ್ಪಳಿಸಲಿದ್ದು ಇದರಿಂದಾಗಿ ಅಧಿಕ ಮಳೆಯ ಎಚ್ಚರಿಕೆ ನೀಡಲಾಗಿದೆ.
ನೈರುತ್ಯ ಮುಂಗಾರು ದೇಶದಿಂದ ನಿರ್ಗಮಿಸಿದೆ. ಮೊದಲು ಅದು ಕೇರಳದಲ್ಲಿ ಸಮಯಕ್ಕಿಂತ ಮುಂಚಿತವಾಗಿ ಅಪ್ಪಳಿಸಿತು. ನಂತರ ಅತ್ಯಂತ ವೇಗವಾಗಿ ದಕ್ಷಿಣ ಮತ್ತು ಈಶಾನ್ಯದಲ್ಲಿ ಮಳೆಯಾಯಿತು. ಅನೇಕ ರಾಜ್ಯಗಳು ಪ್ರವಾಹದ ಹಿಡಿತಕ್ಕೆ ಸಿಲುಕಿದವು. ಆದರೆ ಅದರ ನಂತರ ಅದರ ವೇಗವು ಗಮನಾರ್ಹವಾಗಿ ಕಡಿಮೆಯಾಯಿತು. ದೆಹಲಿ ತಲುಪುವ ಹೊತ್ತಿಗೆ ಅದು ತುಂಬಾ ನಿಧಾನವಾಗಿತ್ತು. ಇದರಿಂದಾಗಿ ಉತ್ತರ ಭಾರತದ ಅನೇಕ ಸ್ಥಳಗಳಲ್ಲಿ ಬರಗಾಲದಂತಹ ಪರಿಸ್ಥಿತಿಗಳು ಸೃಷ್ಟಿಯಾದವು.

ಮಿನಿ ಮಾನ್ಸೂನ್ ಚುರುಕು
ಉತ್ತರ ಭಾರತದಲ್ಲಿ ಮಳೆಯ ಆಶಾಭಾವನೆಯಲ್ಲಿ ಜುಲೈ-ಆಗಸ್ಟ್ ಕಳೆಯುತ್ತಿದ್ದರೆ, ಸೆಪ್ಟೆಂಬರ್‌ನಲ್ಲಿ ಮತ್ತೊಮ್ಮೆ ಮುಂಗಾರು ಚುರುಕು ಪಡೆದು ಧಾರಾಕಾರ ಮಳೆ ಸುರಿದಿದ್ದು ವಿಜ್ಞಾನಿಗಳಿಗೂ ಅಚ್ಚರಿ ಮೂಡಿಸಿದೆ. ಸಾಮಾನ್ಯವಾಗಿ ಮುಂಗಾರು ಸೆಪ್ಟೆಂಬರ್ ಅಂತ್ಯಕ್ಕೆ ಹಿಮ್ಮೆಟ್ಟುತ್ತದೆ. ಅಕ್ಟೋಬರ್ ಹೊತ್ತಿಗೆ ತೀವ್ರತೆ ಕಳೆದುಕೊಳ್ಳುತ್ತದೆ. ಆದರೆ ಈ ಬಾರಿ ಮುಂಗಾರು ಅನೇಕ ಜನರಿಗೆ ತೊಂದರೆಯನ್ನುಂಟು ಮಾಡಿದೆ. ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಅನೇಕ ರಾಜ್ಯಗಳಲ್ಲಿ ಅಧಿಕ ಮಳೆಯಿಂದಾಗಿ ಪ್ರವಾಹದಂತಹ ಪರಿಸ್ಥಿತಿ ಉದ್ಭವಿಸಿತು. ಇದರಲ್ಲಿ ಐಟಿ ಸಿಟಿ ಬೆಂಗಳೂರು ಕೂಡ ಸೇರಿದೆ. ಸದ್ಯ ಮುಂಗಾರು ಕೈ ಬಿಟ್ಟಿದೆ, ಆದರೆ ಈಗ ಈಶಾನ್ಯ ಮುಂಗಾರು ಅಂದರೆ ಮಿನಿ ಮಾನ್ಸೂನ್ ದಕ್ಷಿಣದಲ್ಲಿ ಚುರುಕಾಗಲಿದೆ.

ಈಶಾನ್ಯ ರಾಜ್ಯಗಳಲ್ಲಿ ಅಧಿಕ ಮಳೆ ಎಚ್ಚರಿಕೆ
ಈಶಾನ್ಯ ಮಾನ್ಸೂನ್ ಅಕ್ಟೋಬರ್ 29 ರಂದು ದೇಶದಲ್ಲಿ ಅಪ್ಪಳಿಸಬಹುದೆಂದು IMD ಹೇಳಿದೆ. ಇದರಿಂದಾಗಿ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ. ಇದು ನೆರೆಯ ರಾಜ್ಯಗಳ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲೂ ಮಳೆಯಾಗುವ ಸಾಧ್ಯತೆ ಇದೆ. ಈಶಾನ್ಯ ರಾಜ್ಯಗಳಲ್ಲಿ ಅಧಿಕ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಉತ್ತರ ಭಾರತದಲ್ಲಿ ಶುಷ್ಕ ಹವಾಮಾನ ಇರುತ್ತದೆ.

ಸಾಕಷ್ಟು ಮಳೆ ತರಿಸುವ ಈಶಾನ್ಯ ಮಾನ್ಸೂನ್
ಗಮನಾರ್ಹವಾಗಿ, ಈಶಾನ್ಯ ಮಾನ್ಸೂನ್ ಅಕ್ಟೋಬರ್ ನಿಂದ ಡಿಸೆಂಬರ್‌ವರೆಗೆ ಸಕ್ರಿಯವಾಗಿರುತ್ತದೆ. ಇದು ದೇಶದ ನೈಋತ್ಯ ಮಾನ್ಸೂನ್ ನಿರ್ಗಮನದ ನಂತರ ಸಕ್ರಿಯವಾಗಿರುತ್ತದೆ. ಇದರಿಂದಾಗಿ ಈಶಾನ್ಯ ಮತ್ತು ದಕ್ಷಿಣ ಭಾರತದಲ್ಲಿ ಅಧಿಕ ಮಳೆಯಾಗುತ್ತದೆ.
ಅಕ್ಟೋಬರ್‌ನಲ್ಲಿ ಈಶಾನ್ಯ ಮಾನ್ಸೂನ್ ಸಾಕಷ್ಟು ಮಳೆ ತರಿಸುತ್ತದೆ. ಆದರೂ ಅದರ ನಂತರ ಅದರ ವೇಗವು ನಿಧಾನಗೊಳ್ಳಲು ಪ್ರಾರಂಭಿಸುತ್ತದೆ. ಇದರ ವಿಶೇಷವೆಂದರೆ ಈ ಬಾರಿಯ ಮುಂಗಾರು ತಮಿಳುನಾಡಿನಿಂದ ಪ್ರವೇಶಿಸುತ್ತದೆ ಮತ್ತು ನಂತರ ಅದು ಇಲ್ಲಿಂದಲೇ ಹೊರಡುತ್ತದೆ. ಇದರ ಮುಖ್ಯ ಕೇಂದ್ರ ತಮಿಳುನಾಡು ಆಗಿದೆ.

ಹಿಮಪಾತದ ಮುನ್ಸೂಚನೆ
ಮತ್ತೊಂದೆಡೆ ಉತ್ತರ ಭಾರತದಲ್ಲಿ ಚಳಿ ಆವರಿಸುತ್ತಿದೆ. ಈಗ ಬೆಳಗ್ಗೆ ಮತ್ತು ಸಂಜೆ ತಂಪಾಗಲಿ ಆರಂಭವಾಗಿದೆ. ಆದರೆ ಹಗಲಿನಲ್ಲಿ ಹವಾಮಾನವು ಶುಷ್ಕವಾಗಿರುತ್ತದೆ. ಹವಾಮಾನ ಇಲಾಖೆಯು ಇಂದು ಉತ್ತರಾಖಂಡ, ಹಿಮಾಚಲ ಮತ್ತು ಕಾಶ್ಮೀರದಲ್ಲಿ ಮಳೆ ಮತ್ತು ಹಿಮಪಾತದ ಮುನ್ಸೂಚನೆ ನೀಡಿದ್ದು, ಮಹಾರಾಷ್ಟ್ರ, ಗೋವಾ-ಕೊಂಕಣ ಮತ್ತು ಈಶಾನ್ಯದಲ್ಲಿ ಸಾಮಾನ್ಯ ಮಳೆ ಸಾಧ್ಯತೆ ಇದೆ ಎಂದಿದೆ.












Click it and Unblock the Notifications