ಬಿಆರ್‌ಎಸ್ ಪಕ್ಷಕ್ಕೆ ಏಕೆ ಮತ ನೀಡಬೇಕು?, ಮೋದಿ ವಿವರಣೆ
ನವದೆಹಲಿ, ಜೂನ್ 28; ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ತೆಲಂಗಾಣ ವಿಧಾನಸಭೆ ಚುನಾವಣೆ ಕಾವು ಈಗಿನಿಂದಲೇ ಏರುತ್ತಿದೆ. ರಾಜ್ಯದಲ್ಲಿ ಅಧಿಕಾರ ಹಿಡಿಯಬೇಕು ಎಂದು ಬಿಜೆಪಿ ಬಯಸುತ್ತಿದೆ. ಆದ್ದರಿಂದ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ವಿರುದ್ಧ ಬಿಜೆಪಿ ಟೀಕೆಗಳನ್ನು ಮಾಡುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮಧ್ಯ ಪ್ರದೇಶದಲ್ಲಿ ಬಿಜೆಪಿ ಸಮಾವೇಶ ಉದ್ದೇಶಿಸಿ ಮಾತನಾಡಿದರು. ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್ ನೇತೃತ್ವದ ಬಿಆರ್‌ಎಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

"ಕರುಣಾನಿಧಿ ಕುಟುಂಬದ ಕಲ್ಯಾಣವಾಗಬೇಕಾದರೆ ಡಿಎಂಕೆಗೆ ಮತ ಹಾಕಿ. ಕೆ. ಚಂದ್ರಶೇಖರರಾವ್ ಪುತ್ರಿಯ ಅಭಿವೃದ್ಧಿಗಾಗಿ ಬಿಆರ್‌ಎಸ್‌ಗೆ ಮತ ನೀಡಿ. ನಿಮ್ಮ ಮಕ್ಕಳು ಮತ್ತು ಮೊಮ್ಮಕ್ಕಳ ಭವಿಷ್ಯಕ್ಕಾಗಿ ಬಿಜೆಪಿಗೆ ಮತ ಹಾಕಿ" ಎಂದರು.
ರಾಜಕೀಯ ಚಿತ್ರಣ ಬದಲು; ಮುಂಬರುವ ಚುನಾವಣೆ ಹಿನ್ನಲೆಯಲ್ಲಿ ತೆಲಂಗಾಣದ ರಾಜಕೀಯ ಚಿತ್ರಣ ಬದಲಾಗುತ್ತಿದೆ. ಕೆ. ಚಂದ್ರಶೇಖರರಾವ್ ಈ ಬಾರಿ ಹಿನ್ನಡೆ ಅನುಭವಿಸಲಿದ್ದಾರೆ ಎಂಬ ಸುದ್ದಿಗಳಿವೆ. ಬಿಆರ್‌ಎಸ್ ಪಕ್ಷದ 35ಕ್ಕೂ ಅಧಿಕ ನಾಯಕರು ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ ಎಂಬ ವಿಚಾರ ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ಬಿಆರ್‌ಎಸ್ ಪಕ್ಷದ ಮಾಜಿ ನಾಯಕ ಪೊಂಗುಲೆಟ್ಟಿ ಶ್ರೀನಿವಾಸ ರೆಡ್ಡಿ ಮತ್ತು ಮಾಜಿ ಸಚಿವ ಜೂಪಲ್ಲಿ ಕೃಷ್ಣರಾವ್ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಭೇಟಿಯಾಗಿದ್ದಾರೆ.
ಸತತ ಎರಡು ವರ್ಷಗಳ ಕಾಲ ಕೇಂದ್ರ ಸರ್ಕಾರದ ಸಭೆಗಳನ್ನು ಬರಿಷ್ಕಾರ ಮಾಡಿದ್ದ ಬಿಆರ್‌ಎಸ್ ಪಕ್ಷ ಎರಡು ವಾರದ ಹಿಂದೆ ಮಣಿಪುರದ ಪರಿಸ್ಥಿತಿ ಕುರಿತು ಕೇಂದ್ರ ನಡೆಸಿದ ಸರ್ವಪಕ್ಷಗಳ ಸಭೆಯಲ್ಲಿ ಪಾಲ್ಗೊಂಡು ಅಚ್ಚರಿ ಮೂಡಿಸಿತ್ತು. ಜೂನ್ ಮೊದಲ ವಾರ ಕಾರ್ಯಕ್ರಮವೊಂದರಲ್ಲಿ ಕೆ. ಚಂದ್ರಶೇಖರರಾವ್ ಪ್ರಧಾನಿ ನರೇಂದ್ರ ಮೋದಿ ಅವರನ್ನು "ಉತ್ತಮ ಸ್ನೇಹಿತ" ಎಂದು ಕರೆದಿದ್ದರು.
ಕಳೆದ ಶುಕ್ರವಾರ ಬಿಜೆಪಿ ವಿರುದ್ಧದ ವಿರೋಧ ಪಕ್ಷಗಳು ಪಾಟ್ನಾದಲ್ಲಿ ಸಭೆ ನಡೆಸಿದ್ದವು. ಕೆ. ಚಂದ್ರಶೇಖರರಾವ್ ಪುತ್ರ ಮತ್ತು ರಾಜ್ಯದ ಸಚಿವ ಕೆಟಿ ರಾಮರಾವ್ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿಯಾಗಿದ್ದರು. ಬಳಿಕ ವಿರೋಧ ಪಕ್ಷದ ಸಭೆಯಲ್ಲಿ ಪಾಲ್ಗೊಂಡಿದ್ದರು.
ಕೆ. ಚಂದ್ರಶೇಖರರಾವ್ ಪುತ್ರಿ ಕೆ ಕವಿತಾ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಆರೋಪಿ. ಜಾರಿ ನಿರ್ದೇಶನಾಲಯ (ಇಡಿ) ಅವರನ್ನು ಹಲವು ಬಾರಿ ವಿಚಾರಣೆ ನಡೆಸಿದೆ. ಎರಡು ಚಾರ್ಜ್‌ಶೀಟ್‌ನಲ್ಲಿ ಅವರ ಹೆಸರು ಉಲ್ಲೇಖವಾಗಿತ್ತು, ಆದರೆ 3ನೇ ಚಾರ್ಜ್‌ಶೀಟ್‌ನಲ್ಲಿ ಅವರ ಹೆಸರು ಕೈ ಬಿಟ್ಟಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಮೈತ್ರಿ ಇಲ್ಲ ಎಂದ ಕಾಂಗ್ರೆಸ್; ಈಗಾಗಲೇ ಕಾಂಗ್ರೆಸ್ ಪಕ್ಷ ಬಿಆರ್‌ಎಸ್ ಜೊತೆ ತೆಲಂಗಾಣದಲ್ಲಿ ಮೈತ್ರಿ ಮಾಡಿಕೊಳ್ಳುವುದಿಲ್ಲ. ರಾಷ್ಟ್ರಮಟ್ಟದ ವಿರೋಧ ಪಕ್ಷಗಳ ಒಕ್ಕೂಟದಲ್ಲಿಯೂ ಬಿಆರ್‌ಎಸ್ ಭಾಗವಾಗುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈಗಾಗಲೇ ತೆಲಂಗಾಣ ರಾಜ್ಯದ ಪಕ್ಷದ ನಾಯಕರಿಗೆ ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದು ಜಯಗಳಿಸಿರುವ ಕಾಂಗ್ರೆಸ್ ಪಕ್ಷ ಪಕ್ಕದ ತೆಲಂಗಾಣ ರಾಜ್ಯದಲ್ಲಿಯೂ ಗೆಲ್ಲುವ ತಂತ್ರ ರೂಪಿಸುತ್ತಿದೆ. ಬಿಜೆಪಿ, ಜಗನ್ ಮೋಹನ್ ಸಹೋದರಿ ನೇತೃತ್ವದ ಪಕ್ಷ, ಬಿಆರ್‌ಎಸ್ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಎದುರಾಳಿಗಳು.
ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಸೇರಿದಂತೆ ಪ್ರಮುಖ ನಾಯಕರ ಜೊತೆ ಸಭೆ ನಡೆಸಿರುವ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಭಿನ್ನಾಭಿಪ್ರಾಯಗಳನ್ನು ಮರೆತು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲರೂ ಶ್ರಮಿಸಬೇಕು ಎಂದು ಸೂಚನೆ ನೀಡಿದ್ದಾರೆ.












Click it and Unblock the Notifications