ವಿದ್ಯಾರ್ಥಿಯ 'ಪುಷ್ಪ' ಪೋಸ್ ಕಾಪಿ ಮಾಡಿದ ಪ್ರಿನ್ಸಿಪಾಲ್: Viral Video ನೋಡಿ ನೆಟ್ಟಿಗರು ಫಿದಾ
ಚೆನ್ನೈ: ಶಾಲಾ ದಿನಗಳು ಅಂದರೆ ಪ್ರತಿಯೊಬ್ಬರಿಗೂ ನೆನಪಾಗುವುದು ಶಿಸ್ತಿನ ಶಿಕ್ಷಕರು, ಅದಕ್ಕಿಂತ ಹೆಚ್ಚಾಗಿ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವ ಪ್ರಿನ್ಸಿಪಾಲ್. ಸಾಮಾನ್ಯವಾಗಿ ಪ್ರಿನ್ಸಿಪಾಲ್ ಎಂದರೆ ವಿದ್ಯಾರ್ಥಿಗಳಲ್ಲಿ ಒಂದು ರೀತಿಯ ಭಯ, ಭಕ್ತಿ ಇರುತ್ತದೆ. ಆದರೆ, ಇಲ್ಲೊಬ್ಬರು ಪ್ರಿನ್ಸಿಪಾಲ್ ತಮ್ಮ ಶಾಲೆಯ ಪುಟ್ಟ ವಿದ್ಯಾರ್ಥಿಯ ಸ್ಟೈಲ್‌ನ ಪೋಸ್ ಅನ್ನು ತಾವೂ ಕಾಪಿ ಮಾಡುವ ಮೂಲಕ ನೆಟ್ಟಿಗರ ಮನಗೆದ್ದಿದ್ದಾರೆ. ತಮಿಳುನಾಡಿನ ಶಾಲೆಯೊಂದರಲ್ಲಿ ನಡೆದ ಈ ಸುಂದರ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.
ವೇದಿಕೆ ಮೇಲೆ 'ಪುಷ್ಪ' ಪೋಸ್ ಕೊಟ್ಟ ವಿದ್ಯಾರ್ಥಿ
ತಮಿಳುನಾಡಿನ ವೇತಲೋಗ ವಿದ್ಯಾಲಯ ಶಾಲೆಯಲ್ಲಿ (Vethaloga Vidhyalaya School) ಆಯೋಜಿಸಲಾಗಿದ್ದ ಘಟಿಕೋತ್ಸವ (Graduation Ceremony) ಕಾರ್ಯಕ್ರಮದಲ್ಲಿ ಈ ಮಧುರ ಕ್ಷಣ ಸೆರೆಯಾಗಿದೆ. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರಮಾಣಪತ್ರಗಳನ್ನು ಸ್ವೀಕರಿಸಲು ಒಬ್ಬೊಬ್ಬರಾಗಿ ವೇದಿಕೆಯ ಮೇಲೆ ಬರುತ್ತಿದ್ದರು. ಶಾಲೆಯ ಪ್ರಿನ್ಸಿಪಾಲ್ ಅವರು ಖುದ್ದಾಗಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಪ್ರಮಾಣಪತ್ರವನ್ನು ನೀಡಿ, ಮುಂದಿನ ಭವಿಷ್ಯಕ್ಕೆ ಶುಭ ಹಾರೈಸುತ್ತಿದ್ದರು.

ಇದೇ ವೇಳೆ, ಪುಟ್ಟ ವಿದ್ಯಾರ್ಥಿಯೊಬ್ಬ ವೇದಿಕೆ ಏರಿದ್ದಾನೆ. ಪ್ರಿನ್ಸಿಪಾಲ್ ಅವರು ನಗುಮುಖದಿಂದಲೇ ಆತನಿಗೆ ಪ್ರಮಾಣಪತ್ರ ನೀಡಿದ್ದಾರೆ. ಫೋಟೋಗಾಗಿ ಸಾಂಪ್ರದಾಯಿಕವಾಗಿ ಸ್ಮೈಲ್ ಮಾಡುತ್ತಾ ನಿಲ್ಲುವ ಬದಲು, ಈ ಪುಟ್ಟ ಪೋರ ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ 'ಪುಷ್ಪ: ದಿ ರೈಸ್' ಸಿನಿಮಾದ ಸಿಗ್ನೇಚರ್ ಸ್ಟೆಪ್ ಅನ್ನು ಮಾಡಿದ್ದಾನೆ. ತನ್ನ ಕೈಯನ್ನು ಗದ್ದದ ಕೆಳಗೆ ಇಟ್ಟುಕೊಂಡು, ಭರ್ಜರಿ ಕಾನ್ಫಿಡೆನ್ಸ್‌ನೊಂದಿಗೆ 'ತಗ್ಗೇದೆ ಲೇ' (ನಾನು ಯಾರಿಗೂ ಜಗ್ಗಲ್ಲ) ಎನ್ನುವ ಸ್ಟೈಲ್‌ನಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾನೆ.
ವಿದ್ಯಾರ್ಥಿಯ ಈ ಅನಿರೀಕ್ಷಿತ ನಡೆಯನ್ನು ಕಂಡು ಕೋಪಗೊಳ್ಳುವ ಬದಲು, ಆತನ ಕಾನ್ಫಿಡೆನ್ಸ್ ನೋಡಿ ಖುಷಿಪಟ್ಟ ಪ್ರಿನ್ಸಿಪಾಲ್ ಅವರು ತಕ್ಷಣವೇ ಆತನ ಪೋಸ್ ಅನ್ನು ಕಾಪಿ ಮಾಡಿದ್ದಾರೆ! ಹೌದು, ವಿದ್ಯಾರ್ಥಿಯ ಪಕ್ಕದಲ್ಲೇ ನಿಂತು, ತಾವೂ ಕೂಡ ಗದ್ದದ ಕೆಳಗೆ ಕೈಯಿಟ್ಟು ಅದೇ 'ಪುಷ್ಪ ರಾಜ್' ಪೋಸ್ ನೀಡಿದ್ದಾರೆ. ಇಬ್ಬರೂ ಒಟ್ಟಿಗೆ ಈ ಪೋಸ್ ನೀಡುತ್ತಿದ್ದಂತೆ, ಸಭಾಂಗಣದಲ್ಲಿದ್ದ ಇತರ ವಿದ್ಯಾರ್ಥಿಗಳು ಹಾಗೂ ಪೋಷಕರು ಕೇಕೆ ಹಾಕಿ, ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ. ಇಬ್ಬರ ಮುಖದಲ್ಲೂ ಮೂಡಿದ ಆ ಮುದ್ದಾದ ನಗು ನೋಡುಗರ ಹೃದಯ ಕದ್ದಿದೆ.
ಈ ಸುಂದರ ವಿಡಿಯೋವನ್ನು ವೇತಲೋಗ ವಿದ್ಯಾಲಯ ಶಾಲೆಯ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋಗೆ, "ಜೆನ್ ಆಲ್ಫಾ ಸ್ಟೆಪ್ಸ್? ಸರ್ ಹೇಳಿದ್ರು - ಚಾಲೆಂಜ್ ಅಕ್ಸೆಪ್ಟೆಡ್ (Gen Alpha steps? Sir said - challenge accepted)" ಎಂದು ಆಕರ್ಷಕ ಕ್ಯಾಪ್ಶನ್ ನೀಡಲಾಗಿದೆ. ಈ ವಿಡಿಯೋ ಅಪ್‌ಲೋಡ್ ಆದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ವೈರಲ್ ಟ್ರೆಂಡ್ ಆಗಿ ಬದಲಾಗಿದೆ.
ನೆಟ್ಟಿಗರ ಮೆಚ್ಚುಗೆಯ ಮಹಾಪೂರ
ವಿದ್ಯಾರ್ಥಿಯನ್ನು ಅರ್ಥಮಾಡಿಕೊಂಡು, ಆತನ ಸಂಭ್ರಮದಲ್ಲಿ ತಾವೂ ಭಾಗಿಯಾದ ಪ್ರಿನ್ಸಿಪಾಲ್ ಅವರ ನಡೆಯನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ. "ಈ ವ್ಯಕ್ತಿ ಯಾರು ಅಂತ ಗೊತ್ತಿಲ್ಲ, ಆದರೆ ಅವರು ನಿಜಕ್ಕೂ ಗ್ರೇಟ್. ಮಕ್ಕಳ ವಿಶೇಷ ದಿನವನ್ನು ಅವರು ಇನ್ನಷ್ಟು ಸ್ಪೆಷಲ್ ಆಗಿ ಮಾಡಿದ್ದಾರೆ" ಎಂದು ಸಾಂಮಾಜಿಕ ಜಾಲತಾಣ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ಇದು ತುಂಬಾ ಕ್ಯೂಟ್ ಆಗಿದೆ. ಇಬ್ಬರಲ್ಲಿ ಯಾರು ಮಗು ಅಂತ ಹೇಳುವುದೇ ಕಷ್ಟವಾಗುತ್ತಿದೆ" ಎಂದು ಬರೆದುಕೊಂಡಿದ್ದಾರೆ.
ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಬಾಂಧವ್ಯ ಹೇಗಿರಬೇಕು ಎಂಬುದಕ್ಕೆ ಈ ವಿಡಿಯೋ ಉತ್ತಮ ಉದಾಹರಣೆಯಾಗಿದೆ. ಕೇವಲ ಪಾಠ-ಪ್ರವಚನಗಳಿಗೆ ಮಾತ್ರ ಸೀಮಿತವಾಗದೆ, ಮಕ್ಕಳ ಭಾಷೆಯಲ್ಲೇ ಅವರೊಂದಿಗೆ ಬೆರೆಯುವ, ಟ್ರೆಂಡಿಂಗ್ ವಿಷಯಗಳ ಮೂಲಕ ಅವರೊಂದಿಗೆ ಕನೆಕ್ಟ್ ಆಗುವ ಇಂತಹ ಶಿಕ್ಷಕರು ಮಕ್ಕಳ ಪಾಲಿಗೆ ಸದಾ ನೆಚ್ಚಿನವರಾಗಿರುತ್ತಾರೆ.












Click it and Unblock the Notifications