ವಿಡಿಯೋ; ಜಮ್ಮುವಿನಲ್ಲಿ ಗುಡ್ಡ ಕುಸಿತ, ಹೆದ್ದಾರಿ ಬಂದ್
ಶ್ರೀನಗರ, ಆಗಸ್ಟ್ 06; ಜಮ್ಮು ಕಾಶ್ಮೀರದ ರಂಬನ್ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಮೇಲೆಯೆ ಭೂ ಕುಸಿತ ಉಂಟಾಗಿದೆ. ಇದರಿಂದಾಗಿ ಜಮ್ಮು ಮತ್ತು ಶ್ರೀನಗರ ನಡುವಿನ ಸಂಚಾರ ಸ್ಥಗಿತವಾಗಿದೆ. ಈ ವಿಡಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎಎನ್‌ಐ ಜಮ್ಮು ಮತ್ತು ಶ್ರೀನಗರ ನಡುವಿನ ರಾಷ್ಟ್ರೀಯ ಹೆದ್ದಾರಿ ಮೇಲೆ ಗುಡ್ಡ ಕುಸಿತವಾಗುವ ವಿಡಿಯೋವನ್ನು ಟ್ವೀಟ್ ಮಾಡಿದೆ. ನೋಡ ನೋಡುತ್ತಿದ್ದಂತೆ ಗುಡ್ಡ ಹೆದ್ದಾರಿ ಮೇಲೆ ಕುಸಿದು ಬಿದ್ದಿದೆ.

ರಂಬನ್ ಜಿಲ್ಲೆಯಲ್ಲಿ ಸಾಗುವ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲವು ಕಾಮಗಾರಿಗಳು ನಡೆಯುತ್ತಿವೆ. ಇಂತಹ ಸಮಯದಲ್ಲಿ ಗುಡ್ಡ ಕುಸಿದು ರಸ್ತೆಯ ಮೇಲೆ ಬಿದ್ದಿದೆ. ಇದರಿಂದಾಗಿ ಜಮ್ಮು ಮತ್ತು ಶ್ರೀನಗರ ನಡುವಿನ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ.
ವಿಡಿಯೋ ವೈರಲ್; ಜಮ್ಮು ಮತ್ತು ಶ್ರೀನಗರ ನಡುವಿನ ರಾಷ್ಟ್ರೀಯ ಹೆದ್ದಾರಿ ಮೇಲೆ ಗುಡ್ಡ ಕುಸಿಯುವ ವಿಡಿಯೋ ವೈರಲ್ ಆಗಿದೆ. ಭಾನುವಾರ ಈ ಘಟನೆ ನಡೆದಿದೆ. ಜಮ್ಮುವಿಗೆ ಯಾತ್ರೆ ತೆರಳಿದ್ದ ನೂರಾರು ಯಾತ್ರಿಕರು ಈ ಘಟನೆಯಿಂದಾಗಿ ಸಿಲುಕಿಕೊಂಡಿದ್ದಾರೆ.
#WATCH | J&K | Jammu-Srinagar National Highway blocked due to landslide in Ramban area.
— ANI (@ANI) August 6, 2023
(Video: J&K Police) pic.twitter.com/ngr3UTYone
ಗುಡ್ಡದ ಮಣ್ಣು, ಕಲ್ಲು ಕುಸಿದು ಬೀಳುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜನರು ಜೋರಾಗಿ ಕೂಗುವ ಮೂಲಕ ಹತ್ತಿರ ಹೋಗದಂತೆ ಪ್ರವಾಸಿ ವಾಹನಗಳಿಗೆ ಸೂಚನೆ ನೀಡುತ್ತಿರುವುದನ್ನು ಸಹ ವಿಡಿಯೋದಲ್ಲಿ ಕಾಣಬಹುದಾಗಿದೆ.
270 ಕಿ. ಮೀ. ಉದ್ದದ ಜಮ್ಮು ಮತ್ತು ಶ್ರೀನಗರ ನಡುವಿನ ರಾಷ್ಟ್ರೀಯ ಹೆದ್ದಾರಿಯ ಸಂಚಾರ ಗುಡ್ಡ ಕುಸಿತದ ಕಾರಣ ಸಂಪೂರ್ಣ ಸ್ಥಗಿತವಾಗಿದೆ. ಮಣ್ಣು, ಕಲ್ಲುಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಯಾವಾಗ ಅವಕಾಶ ಮಾಡಿಕೊಡಲಾಗುತ್ತದೆ? ಎಂಬುದು ಇನ್ನೂ ಖಚಿತವಾಗಿಲ್ಲ.
ಎಲ್ಲಾ ರೀತಿಯ ಹವಮಾನದಲ್ಲಿಯೂ ದೇಶವನ್ನು ಕಾಶ್ಮೀರದೊಂದಿಗೆ ಸಂಪರ್ಕಿಸುವ ಪ್ರಮುಖವಾದ ಹೆದ್ದಾರಿ ಇದಾಗಿದೆ. ಆದರೆ ಈಗ ಗುಡ್ಡ ಕುಸಿತದ ಕಾರಣ ಇದು ಬಂದ್ ಆಗಿದ್ದು, ನೂರಾರು ವಾಹನಗಳು ಎರಡು ಬದಿಯಲ್ಲಿಯೂ ಸಾಲುಗಟ್ಟಿ ನಿಂತಿವೆ.
ಶ್ರೀನಗರದಿಂದ ಜಮ್ಮುವಿಗೆ ಭಾನುವಾರ ಬೆಳಗ್ಗೆ 1,626 ಯಾತ್ರಾರ್ಥಿಗಳು ಸಂಚಾರ ಆರಂಭಿಸಿದ್ದರು. ದಕ್ಷಿಣ ಕಾಶ್ಮೀರದ ಹಿಮಾಲಯ ಭಾಗಕ್ಕೆ ಯಾತ್ರೆ ಕೈಗೊಂಡಿದ್ದ ಇವರು ಈಗ ಗುಡ್ಡ ಕುಸಿತದ ಕಾರಣ ರಸ್ತೆಯಲ್ಲಿಯೇ ಸಿಲುಕಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸರು, ರಂಬನ್ ಜಿಲ್ಲಾಡಳಿತ ಜಮ್ಮು ಮತ್ತು ಶ್ರೀನಗರ ಹೆದ್ದಾರಿ ಬಂದ್ ಆಗಿರುವ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಈ ರಸ್ತೆಯಲ್ಲಿ ಸಂಚಾರ ನಡೆಸುವ ಜನರು ಸಂಚಾರ ಮುಂದೂಡಿ ಎಂದು ಸಲಹೆ ನೀಡಿದೆ.
ರಂಬನ್ ಜಿಲ್ಲಾಡಳಿತ ಹೆದ್ದಾರಿಯಲ್ಲಿ ಸಿಲುಕಿರುವ ಯಾತ್ರಾರ್ಥಿಗಳು ಸೇರಿದಂತೆ ಜನರ ನೆರವಿಗೆ ಅಗತ್ಯ ವ್ಯವಸ್ಥೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದೆ. ಆದರೆ ಯಾವಾಗ ಸಂಚಾರ ಆರಂಭವಾಗಲಿದೆ? ಎಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.












Click it and Unblock the Notifications