ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಹೆದ್ದಾರಿಗಳು ಹಾಗೂ ವಾಜಪೇಯಿ ಕನಸು

By ಪ್ರತಾಪ್ ಸಿಂಹ
|
Google Oneindia Kannada News

ಅಮೆರಿಕದ ಹೆದ್ದಾರಿಗಳನ್ನು "ಫ್ರೀ ವೇಸ್" ಎನ್ನುತ್ತಾರೆ. ಜರ್ಮನಿಯ ಹೆದ್ದಾರಿಗಳನ್ನು "ಅಟೋಬಾನ್ಸ್" ಎಂದು ಕರೆಯುತ್ತಾರೆ. ಇಟಲಿಯ ಹೆದ್ದಾರಿಗಳಿಗೆ "ಅಟೋಸ್ಟ್ರೆಡ್ಸ್" ಎನ್ನಲಾಗುತ್ತದೆ. ಹಾಗಾದರೆ ಭಾರತದ ಹೆದ್ದಾರಿಗಳನ್ನು ಏನೆಂದು ಕರೆಯುತ್ತಾರೆ?ಇಂಥದ್ದೊಂದು ಪ್ರಶ್ನೆಯನ್ನು ನಾವು ಶಾಲೆಯಲ್ಲಿದ್ದಾಗ "ಕ್ವಿಝ್ ಕಾಂಪಿಟಿಷನ್"ನಲ್ಲಿ ಕೇಳುತ್ತಿದ್ದರು. ಆಗ ಗ್ರ್ಯಾಂಡ್ಟ್ರಂಕ್ ಎಂದು ಉತ್ತರಿಸುತ್ತಿದ್ದೆವು.

ಆದರೆ, ಈ ಗ್ರಾಂಡ್ ಟ್ರಂಕ್ ಕೂಡಾ ಯಾವುದು, ಯಾರು, ಯಾವ ಕಾಲದಲ್ಲಿ ನಿರ್ಮಿಸಿದ್ದು ಎಂದು ಕೇಳಿದರೆ ಇಡೀ ದೇಶವೇ ತಲೆತಗ್ಗಿಸಬೇಕಾಗಿತ್ತು. ಇಷ್ಟಕ್ಕೂ ಈ ರಸ್ತೆಯನ್ನು ನಿರ್ಮಾಣ ಮಾಡಿದ್ದು ಶೇರ್ ಶಾ ಸೂರಿ, ಅದೂ 16ನೇ ಶತಮಾನದಲ್ಲಿ. ಹಾಗಿರುವಾಗ ಎತ್ತಿನ ಬಂಡಿಗಳು ನಮ್ಮ ರಸ್ತೆಯನ್ನು ಆಳುತ್ತಿದ್ದ ಕಾಲಘಟ್ಟದ ಅದನ್ನು ಯಾವ ಮಾನದಂಡದ ಮೂಲಕ ಹೆದ್ದಾರಿ ಎಂದು ಹೇಳಲು ಸಾಧ್ಯವಿತ್ತು ಹೇಳಿ?

1947ರಲ್ಲಿ ಸ್ವಾತಂತ್ರ್ಯ ಬಂದ ನಂತರವೂ ಪರಿಸ್ಥಿತಿ ಬದಲಾಗಲಿಲ್ಲ. ಆ ನಮ್ಮ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಮಹಾಶಯರು 16 ವರ್ಷ ದೇಶವನ್ನಾಳಿದರೂ, ಅವರ ಮಗಳು ಇಂದಿರಾ ಗಾಂಧಿ 15 ವರ್ಷ ಪ್ರಧಾನಿ ಗದ್ದುಗೆಯಲ್ಲಿ ಮೆರೆದರೂ ಭಾರತದ ರಸ್ತೆಗಳು ಬದಲಾಗಲಿಲ್ಲ.

1998ರಲ್ಲಿ ಅಂದರೆ ಸ್ವಾತಂತ್ರ್ಯ ಬಂದು 50 ವರ್ಷಗಳು ಕಳೆದ ನಂತರವೂ ಭಾರತದಲ್ಲಿದ್ದ ಚತುಷ್ಪಥ ಅಥವಾ Four-lane ಹೆದ್ದಾರಿಯ ಉದ್ದವೆಷ್ಟೆಂದರೆ ಕೇವಲ 334 ಕಿ.ಮೀ. ಎಂದರೆ ನಂಬುತ್ತೀರಾ? ಭಾರತದ ಸಂಪತ್ತನ್ನು ಸಾಗಿಸಲು ಹಾಗೂ ವ್ಯಾಪಾರ ವಹಿವಾಟಿಗೆ ಅಗತ್ಯವೆಂದು ಭಾವಿಸಿ ಶೇರ್ ಶಾ ಸೂರಿ ನಿರ್ಮಿಸಿದ
ಗ್ರಾಂಡ್ ಟ್ರಂಕ್ ರಸ್ತೆ, ಅದೇ ಕಾರಣಕ್ಕಾಗಿ ಬ್ರಿಟಿಷರು ಹಾಕಿದ ರೈಲು ಹಳಿಗಳನ್ನು ಬಿಟ್ಟರೆ ಈ ದೇಶದ ಸರ್ವತೋಮುಖ ಅಭಿವೃದ್ಧಿಗೆ ಸುಸಜ್ಜಿತ ರಸ್ತೆಗಳ ನಿರ್ಮಾಣದ ಅಗತ್ಯವಿದೆ ಎಂದು ಯಾರಿಗೂ ಏಕೆ ಅನಿಸಲಿಲ್ಲ?

ಇಂಥದ್ದೊಂದು ಹೀನಾಯ ಪರಿಸ್ಥಿತಿ ಕೇವಲ ಕಳೆದ 15 ವರ್ಷಗಳಲ್ಲಿ ಬದಲಾಗಿದ್ದು ಹೇಗೆ? ಭಾರತದ ರಸ್ತೆಗಳನ್ನು ಬದಲಾಯಿಸಿದ ಮಹಾನ್ ವ್ಯಕ್ತಿ ಯಾರು?ಅಟಲ್ ಬಿಹಾರಿ ವಾಜಪೇಯಿ! ಆ ಬಗ್ಗೆ ಅನುಮಾನವೇ ಬೇಡ.

Atal Bihari Vajpayee's Golden Quadrilateral compare to Grand Trunk Road

ಅಣು ಪರೀಕ್ಷೆಗೆ ಆದೇಶ : ಆರ್ಯನ್ನರ ವಲಸೆ, ಮೊಘಲರ ಆಕ್ರಮಣ ಮತ್ತು ದರ್ಬಾರು, ಬ್ರಿಟಿಷರ ಸಾಮ್ರಾಜ್ಯಶಾಹಿತ್ವ ಇವೆಲ್ಲವೂ ಭಾರತದ ನಾಗರಿಕತೆಯ ವಿಕಾಸಕ್ಕೆ ಕಾರಣವಾದರೂ ಅಟಲ್ರ ಪ್ರಭಾವ ಅಮೋಘ ಬದಲಾವಣೆಗೆ ನಾಂದಿಯಾಯಿತು. 1998ರಲ್ಲಿ ಅಟಲ್ ಅಧಿಕಾರಕ್ಕೆ ಬಂದ ಕೂಡಲೇ ಮಾಡಿದ ಮೊದಲ ಕೆಲಸವೆಂದರೆ ಅಣು ಪರೀಕ್ಷೆಗೆ ಆದೇಶ. ಅದಕ್ಕೂ ಮೊದಲಿದ್ದ ಪರಿಸ್ಥಿತಿಯನ್ನು ನೆನಪಿಸಿಕೊಳ್ಳಿ.

1962ರಲ್ಲಿ ಚೀನಾದ ಎದುರು ನಾವು ಹೀನಾಯವಾಗಿ ಸೋಲು ಅನುಭವಿಸಿ ಆತ್ಮಸ್ಥೈರ್ಯವನ್ನೇ ಕಳೆದುಕೊಂಡಿದ್ದೆವು. ಆ ಮುಖಭಂಗದ ನಂತರ ಜಗತ್ತಿನ ಎದುರು ಎದೆ ಸೆಟೆಸಿ ನಿಲ್ಲುವ ತಾಕತ್ತೇ ನಮ್ಮಿಂದ ದೂರವಾಗಿತ್ತು.

ಆದರೆ, 1998 ಮೇ 11ರಂದು ಅಟಲ್ ನಡೆಸಿದ ಅಣುಪರೀಕ್ಷೆ ಇಡೀ ದೇಶವೇ ಬೀದಿಗಿಳಿದು ಪಟಾಕಿ ಸಿಡಿಸಿ, ನವೋತ್ಸಾಹ ಬೀರುವಂತೆ ಮಾಡಿತು. ಯಾವ ಆರ್ಥಿಕ ದಿಗ್ಬಂಧನೆಗೂ ಅಟಲ್ ಸೊಪ್ಪು ಹಾಕಲಿಲ್ಲ. 1974ರಲ್ಲೇ ನಾವು ಅಣುಪರೀಕ್ಷೆ ನಡೆಸಿದ್ದರೂ ಅದರ ಯೋಗ್ಯಾಯೋಗ್ಯತೆ ಬಗ್ಗೆ
ಅನುಮಾನಗಳಿದ್ದವು. ಆದರೆ 1998ರ ಪರೀಕ್ಷೆ ಭಾರತ ಕೂಡ ಒಂದು ಕ್ರೆಡಿಬಲ್ ನ್ಯೂಕ್ಲಿಯರ್ಪವರ್ ಎಂಬುದನ್ನು ನಿರೂಪಿಸಿತು.

ಲಾಲ್ ಬಹದ್ದೂರ್ ಶಾಸ್ತ್ರಿಯವರ, "ಜೈ ಜವಾನ್, ಜೈ ಕಿಸಾನ್"ಗೆ ಅಟಲ್ "ಜೈ ವಿಜ್ಞಾನ್" ಸೇರಿಸಿದರು. ಈ ದೇಶ ಅಭಿವೃದ್ಧಿ ಕಾಣಬೇಕಾದರೆ ವಿಜ್ಞಾನಕ್ಕೆ ಮೊದಲ ಆದ್ಯತೆ ನೀಡಬೇಕೆಂಬುದನ್ನು ಮನದಟ್ಟು ಮಾಡಿಕೊಟ್ಟರು.

ಹಾಗಂತ ಅಟಲ್ ಬಡಾಯಿ ಕೊಚ್ಚಿಕೊಳ್ಳುವುದರಲ್ಲೇ ಕಾಲಹರಣ ಮಾಡಲಿಲ್ಲ. 1999ರಲ್ಲಿ ದೇಶದ 4 ಮಹಾನಗರಗಳಾದ ದೆಹಲಿ, ಮುಂಬೈ, ಕೋಲ್ಕತಾ ಹಾಗೂ ಚೆನ್ನೈ ಹೀಗೆ ದೇಶದ ನಾಲ್ಕೂ ಮೂಲೆಗಳಿಗೆ ಸಂಪರ್ಕ ಕಲ್ಪಿಸುವಂಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಮುಂದಾದರು.

ಸುವರ್ಣ ಚತುಷ್ಪಥದ ನೀಲನಕ್ಷೆ : ಒಂದು ದೇಶ ಬದಲಾಗುತ್ತಿದೆ, ಅಭಿವೃದ್ಧಿ ಹೊಂದುತ್ತಿದೆ ಎಂದು ಬಹಳ ವಿಸಿಬಲ್ ಆಗಿ ಕಾಣುವುದೇ ರಸ್ತೆಗಳಲ್ಲಿ.ಅದಕ್ಕಾಗಿಯೇ ನಾಲ್ಕು ಹಾಗೂ 6 ಪಥಗಳನ್ನು ಹೊಂದಿರುವ "Golden Quadrilateral'' ಅಥವಾ ಸುವರ್ಣ ಚತುಷ್ಪಥದ ನೀಲನಕ್ಷೆ ರೂಪಿಸಿದರು!

ಅದು 13 ರಾಜ್ಯಗಳ ಮೂಲಕ ಹಾದುಹೋಗುವ, ದೇಶದ 75 ಪ್ರಮುಖ ನಗರಗಳನ್ನು ಸ್ಪರ್ಶಿಸುವ 5,846 ಕಿ. ಮೀಟರ್ ಹೆದ್ದಾರಿಯಾಗಿತ್ತು. ದಯವಿಟ್ಟು ನೆನಪಿಡಿ, ಸ್ವಾತಂತ್ರ್ಯ ಬಂದ ನಂತರದ 50 ವರ್ಷಗಳಲ್ಲಿ ನಿರ್ಮಾಣವಾಗಿದ್ದು ಕೇವಲ 334 ಕಿ.ಮೀಟರ್,

ಅಟಲ್ ಕೇವಲ 4 ವರ್ಷಗಳಲ್ಲಿ ಅಂದರೆ 2003 ಡಿಸೆಂಬರ್ನೊಳಗೆ ಪೂರ್ಣಗೊಳಿಸಲು ಹೊರಟಿದ್ದು 5,846 ಕಿ.ಮೀಟರ್ ಹೆದ್ದಾರಿ!! ಅದಕ್ಕಾಗಿ ಅಧಿಕಾರಶಾಹಿಗಳ ಜಂಜಾಟವೇ ಇಲ್ಲದ ಹೊಸ ವ್ಯವಸ್ಥೆಯನ್ನೇ ರೂಪಿಸಿದರು, ತ್ವರಿತವಾಗಿ ಭೂ ಸ್ವಾಧೀನ ನಡೆಯಿತು. ಅದರ ಹೊಣೆಗಾರಿಕೆಯನ್ನು ಸಾರಿಗೆ
ಸಚಿವರಾಗಿದ್ದ ತಮ್ಮ ಆಪ್ತ ಸ್ನೇಹಿತ ಹಾಗೂ ಮಾಜಿ ಮೇಜರ್ ಜನರಲ್ ಬಿ.ಸಿ. ಖಂಡೂರಿಯವರಿಗೆ ವಹಿಸಿದರು.

ಇಷ್ಟೊಂದು ವ್ಯಾಪ್ತಿಯ ಹೆದ್ದಾರಿಯನ್ನು ಕೇವಲ 4 ವರ್ಷಗಳೊಳಗೆ ಪೂರ್ಣಗೊಳಿಸುವ ಸಲುವಾಗಿ ತುಂಡುಗುತ್ತಿಗೆ ನೀಡಿದರು, ನೀವು ದುಡ್ಡೊಂದನ್ನೇ ಮಾಡುತ್ತಿಲ್ಲ, ರಾಷ್ಟ್ರ ನಿರ್ಮಾಣ ಕಾರ್ಯವನ್ನೂ ಮಾಡುತ್ತಿದ್ದೀರಿ (You are not only making money, you are building a nation) ಎಂಬುದನ್ನು ಮರೆಯಬೇಡಿ ಎಂದು ಕಾಂಟ್ರ್ಯಾಕ್ಟರ್ಗಳಿಗೆ ಕಿವಿಮಾತು ಹೇಳುವ ಮೂಲಕ ಹೊಣೆಗಾರಿಕೆಯನ್ನು ತುಂಬಲು ಯತ್ನಿಸಿದರು. ಪರೋಕ್ಷ ಎಚ್ಚರಿಕೆಯೂ ಅದರಲ್ಲಿತ್ತು.

ಈ ಹೆದ್ದಾರಿಯ ಒಟ್ಟು ವೆಚ್ಚವನ್ನು 60 ಸಾವಿರ ಕೋಟಿ ಎಂದು ಅಂದಾಜು ಮಾಡಲಾಯಿತು. ಆದರೆ, ಅದು 2011ರಲ್ಲಿ ಪೂರ್ಣಗೊಂಡಾಗ ಖರ್ಚಾಗಿದ್ದು 30,858 ಕೋಟಿ ಮಾತ್ರ! ಹೆದ್ದಾರಿಗಳು ಮಾತ್ರವಲ್ಲ, ಗ್ರಾಮಗಳತ್ತಲೂ ಅಟಲ್ ಮುಖ ಮಾಡಿದರು.

ಗ್ರಾಮ್ ಸಡಕ್ ಯೋಜನೆ : ಅವರು ಜಾರಿಗೆ ತಂದ ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನೆ ದೇಶದ ಮೂಲೆ ಮೂಲೆಯ ಹಳ್ಳಿ ಹಳ್ಳಿಗಳ ರಸ್ತೆಗಳನ್ನು ಬದಲಿಸಿಬಿಟ್ಟಿತು. ಪಾಶ್ಚಿಮಾತ್ಯರಲ್ಲಿ Time equals money ಎಂಬ ಮಾತಿದೆ. ಅದನ್ನು ಭಾರತದಲ್ಲಿ ಮನಗಂಡವರು ಮತ್ತು ರಸ್ತೆ ನಿರ್ಮಾಣದ ಮೂಲಕ ಅದನ್ನು ವಾಸ್ತವದಲ್ಲಿ ಚಾಲ್ತಿಗೆ ತಂದವರು ಅಟಲ್ ಹಾಗೂ ಅಟಲ್ ಮಾತ್ರ. ರಸ್ತೆ, ಹೆದ್ದಾರಿ ನಿರ್ಮಾಣದಿಂದ ಸರಕು ಸಾಗಣೆ, ವ್ಯಾಪಾರ
ವಹಿವಾಟು ಚುರುಕುಗೊಂಡಿತು, ಹೆದ್ದಾರಿ ಬದಿಯಲ್ಲಿ ಹೋಟೆಲ್ ಉದ್ಯಮ ಕೂಡ ಬೆಳೆಯಿತು,

ಭೂಮಿಗೂ ಬೆಲೆ ಬಂತು, ಮಹಾನಗರಗಳ ಹೊರವಲಯದಲ್ಲಿ ಸುಸಜ್ಜಿತ ಉಪನಗರಗಳು ನಿರ್ಮಾಣಗೊಂಡವು. ಅದರಿಂದ ಸಾಫ್ಟ್ವೇರ್ ಹಾಗೂ ಸರ್ವಿಸ್ ಇಂಡಸ್ಟ್ರಿಗೂ ಉತ್ತೇಜನ ದೊರೆಯಿತು.ಇದರ ನಡುನಡುವೆಯೇ ಅಟಲ್ ತಲೆಯಲ್ಲಿ ಹೊಸದೊಂದು ಯೋಜನೆ ರೂಪ ಪಡೆಯುತ್ತಿತ್ತು! ನೀರಾವರಿ ಸಮಸ್ಯೆಗಾಗಿ ನದಿ ಜೋಡಣೆ, ಬರ ಪರಿಸ್ಥಿತಿ ಎದುರಿಸಿದ ರೀತಿ, ಸರ್ವ ಶಿಕ್ಷಾ ಅಭಿಯಾನವನ್ನು ಕಾಂಗ್ರೆಸ್ ಹೇಗೆ ದುರುಪಯೋಗ ಪಡಿಸಿದೆ ಎಂಬುದನ್ನು ಮುಂದೆ ಓದಿ..

English summary
A Muslim emperor called Sher Shah Suri mapped the Grand Trunk Road(Indian ancient Highway) route in its entirety, although it was the British who gave the route its current name. Here is the comparison with Atal Bihari Vajapayee's nationwide road network with Grand Trunk Road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X