ಡೆಲ್ಟಾ ರೂಪಾಂತರ ಮಣಿಸಲು ಯಾವ್ಯಾವ ಲಸಿಕೆ ಸಿದ್ಧವಿವೆ? ಇಲ್ಲಿದೆ ಪಟ್ಟಿ...
ನವದೆಹಲಿ, ಜುಲೈ 02: ಇಡೀ ವಿಶ್ವವನ್ನೇ ಆಕ್ರಮಿಸಿ ಅಪಾಯದ ಅಂಚಿಗೆ ದೂಡಿರುವ ಡೆಲ್ಟಾ ಕೊರೊನಾ ರೂಪಾಂತರವನ್ನು ಮಣಿಸಲು ಈಗ ಅಭಿವೃದ್ಧಿಗೊಂಡಿರುವ ಲಸಿಕೆಗಳಿಂದ ಸಾಧ್ಯವೇ? ಡೆಲ್ಟಾ ರೂಪಾಂತರ ಭಾರತದಲ್ಲಿ ಪತ್ತೆಯಾದಾಗ ಹುಟ್ಟಿಕೊಂಡ ಮೊಟ್ಟ ಮೊದಲ ಪ್ರಶ್ನೆಯಿದು. ಆನಂತರ ಹಲವು ಲಸಿಕೆಗಳನ್ನು ಈ ಡೆಲ್ಟಾ ರೂಪಾಂತರ ಶಮನಗೊಳಿಸುವ ಪರೀಕ್ಷೆಗೆ ಒಡ್ಡಲಾಯಿತು.
ಆಲ್ಫಾ, ಬೆಟಾ, ಗಾಮಾ ಹಾಗೂ ಡೆಲ್ಟಾ ಒಳಗೊಂಡ ಎಲ್ಲಾ ರೂಪಾಂತರಗಳ ಪೈಕಿ ಡೆಲ್ಟಾ ಅತಿ ಅಪಾಯಕಾರಿ ಎಂದು ಪರಿಗಣಿಸಲಾಯಿತು. 96 ದೇಶಗಳನ್ನು ಈ ರೂಪಾಂತರ ಆಕ್ರಮಿಸಿಕೊಂಡಿತು. ಹಲವು ಲಸಿಕಾ ಅಭಿವೃದ್ಧಿ ಸಂಸ್ಥೆಗಳು ಡೆಲ್ಟಾ ರೂಪಾಂತರದ ವಿರುದ್ಧ ತಮ್ಮ ಲಸಿಕೆಗಳು ಕೆಲಸ ನಿರ್ವಹಿಸುತ್ತವೆಯೇ ಎಂಬ ಪ್ರಯೋಗ ನಡೆಸಿದವು. ಇದೀಗ ಹಲವು ಸಂಸ್ಥೆಗಳು, ಈ ಮಾರಕ "ಡೆಲ್ಟಾ" ವಿರುದ್ಧ ನಮ್ಮ ಲಸಿಕೆಗಳು ಪರಿಣಾಮಕಾರಿ ಎಂದು ವರದಿ ನೀಡುತ್ತಿವೆ. ಡೆಲ್ಟಾ ವಿರುದ್ಧ ಪರಿಣಾಮಕಾರಿ ಎಂಬುದನ್ನು ಪ್ರಸ್ತುತಪಡಿಸಿರುವ ಸಂಸ್ಥೆಗಳು ಯಾವುವು? ಮುಂದೆ ಓದಿ...

ಪ್ರತಿಕಾಯ ಮಟ್ಟ ತಗ್ಗಿಸುವ ರೂಪಾಂತರ
ಲಸಿಕೆಗೇ ಈ ರೂಪಾಂತರಗಳು ಸವಾಲು ಒಡ್ಡುತ್ತಿವೆ. ಕೊರೊನಾ ರೂಪಾಂತರಗಳು, ಲಸಿಕೆಗಳಿಂದ ಉತ್ಪತ್ತಿಯಾಗುವ ಪ್ರತಿಕಾಯ ಮಟ್ಟವನ್ನು ತಗ್ಗಿಸುತ್ತವೆ ಅಥವಾ ತಟಸ್ಥಗೊಳಿಸುತ್ತವೆ ಎಂಬುದನ್ನು ಅಧ್ಯಯನಗಳು ತಿಳಿಸಿವೆ. ಈ ತಗ್ಗಿಸುವ ಪ್ರಮಾಣದ ಅಂಕಿ ಅಂಶಗಳ ಆಧಾರದ ಮೇಲೆ ಈ ಲಸಿಕೆಗಳು ವಿವಿಧ ರೂಪಾಂತರಗಳ ವಿರುದ್ಧ ಎಷ್ಟು ಪರಿಣಾಮಕಾರಿ ಎಂಬ ಮಾಹಿತಿಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಲಭ್ಯವಿವೆ.

ಡೆಲ್ಟಾ ವಿರುದ್ಧ ಹೋರಾಡಲು ಯಾವ್ಯಾವ ಲಸಿಕೆಗಳು ಇವೆ?
ಡೆಲ್ಟಾ ರೂಪಾಂತರದ ವಿರುದ್ಧ ಅಮೆರಿಕದ ಫೈಜರ್ ಹಾಗೂ ಮಾಡೆರ್ನಾ ಲಸಿಕೆ ಪರಿಣಾಮಕಾರಿ ಎನ್ನಲಾಗಿದೆ. ಭಾರತದಲ್ಲಿ ನೀಡಲಾಗುತ್ತಿರುವ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಯು ಡೆಲ್ಟಾ ರೂಪಾಂತರವನ್ನು ಸೋಲಿಸಬಲ್ಲದು ಎಂದು ಸಂಸ್ಥೆಗಳು ಪ್ರಕಟಿಸಿವೆ. ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್, ಹಾಗೂ ಸೆರಂ -ಆಸ್ಟ್ರಾಜೆನೆಕಾ ಲಸಿಕೆಗಳು ಡೆಲ್ಟಾ ವಿರುದ್ಧ ಹೋರಾಡಬಲ್ಲವು ಎಂದು ತಿಳಿಸಿವೆ.

"ಜಾನ್ಸನ್ ಅಂಡ್ ಜಾನ್ಸನ್ ಕೂಡ ಪರಿಣಾಮಕಾರಿ"
ಶುಕ್ರವಾರ ಈ ಕುರಿತು ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆ ಪ್ರಕಟಣೆ ಹೊರಡಿಸಿದೆ. ಈ ಲಸಿಕೆ ಪಡೆದ ಎಂಟು ತಿಂಗಳ ನಂತರವೂ ಹೆಚ್ಚು ಸಾಂಕ್ರಾಮಿಕವಾಗಿರುವ 'ಡೆಲ್ಟಾ ರೂಪಾಂತರದ ವಿರುದ್ಧ ಪರಿಣಾಮಕಾರಿ" ಎಂದು ಸಂಸ್ಥೆ ಹೇಳಿದೆ.
''ಈ ಲಸಿಕೆ ಮೂಲ ವೈರಸ್ ವಿರುದ್ಧ ಹೋರಾಡುವ ದಕ್ಷತೆಗೆ ಹೋಲಿಸಿದರೆ, ರೂಪಾಂತರದ ವಿರುದ್ಧದ ಪರಿಣಾಮ ಕೊಂಚ ಕುಸಿತಕಂಡಿದೆ. ಆದರೆ ಈ ಲಸಿಕೆಯು ಕೊರೊನಾ ಸೋಂಕಿನ ರೂಪಾಂತರಗಳ ವಿರುದ್ದ ಶೇ.85 ರಷ್ಟು ಪರಿಣಾಮಕಾರಿ. ಈ ಲಸಿಕೆ ಪಡೆದವರಿಗೆ ಕೊರೊನಾ ರೂಪಾಂತರ ತಗುಲಿದರೆ ಆಸ್ಪತ್ರೆಗೆ ದಾಖಲಾಗುವುದನ್ನು ಹಾಗೂ ಸಾವನ್ನು ತಡೆಯಲು ಸಹಕಾರಿಯಾಗುತ್ತದೆ,'' ಎಂದು ಹೇಳಿದೆ.

ಸ್ಪುಟ್ನಿಕ್ ವಿ ಲಸಿಕೆಯ ದಕ್ಷತೆ...
ರಷ್ಯಾ ಮೂಲದ ಸ್ಪುಟ್ನಿಕ್ ವಿ ಲಸಿಕೆಯನ್ನೂ ಡೆಲ್ಟಾ ವಿರೋಧಿ ಲಸಿಕೆಗೆ ಸೇರಿಸಲಾಗಿದೆ. ಸ್ಪುಟ್ನಿಕ್ ವಿ ಜೊತೆ ಸ್ಪುಟ್ನಿಕ್ ಲೈಟ್ ಎಂಬ ಲಸಿಕೆಯನ್ನೂ ಬಿಡುಗಡೆ ಮಾಡಿದೆ. ಭಾರತದ ಝೈಕೋವಿಡ್ ಈ ಡೆಲ್ಟಾ ವಿರುದ್ಧ ಪರಿಣಾಮಕಾರಿ ಎನ್ನಲಾಗುತ್ತಿದೆ. ಇದು ಡಿಎನ್‌ಎ ಲಸಿಕೆ ಎಂದು ಕರೆಸಿಕೊಂಡಿದ್ದು, ಡೆಲ್ಟಾ ವಿರುದ್ಧ ಹೋರಾಡಬಲ್ಲದಾಗಿ ಸಂಸ್ಥೆ ಹೇಳಿಕೊಂಡಿದೆ. ಕೊರೊನಾ ಎರಡನೇ ಅಲೆ ಸಮಯದಲ್ಲಿ ಮೂರನೇ ಹಂತದ ಪ್ರಯೋಗ ನಡೆದಿದೆ.

ವೇಗವಾಗಿ ಹರಡುವ ರೂಪಾಂತರಿ
'ವಿಶ್ವದಲ್ಲಿ ಇದುವರೆಗೂ ಕಾಣಿಸಿಕೊಂಡಿರುವ ಕೊರೊನಾ ಸೋಂಕಿನ ವಿವಿಧ ಮಾದರಿಗಳಲ್ಲಿ ಡೆಲ್ಟಾ ಮಾದರಿ ಅತ್ಯಂತ ವೇಗವಾಗಿ ಹರಡುವ ಗುಣ ಹೊಂದಿದೆ. ಹೀಗಾಗಿ ಜನರು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮತ್ತು ಉದಾಸೀನ ಮನೋಭಾವ ತೋರಬಾರದು ಮತ್ತು ತೀವ್ರ ಎಚ್ಚರಿಕೆ ವಹಿಸಬೇಕು. ವಿವಿಧ ದೇಶಗಳು ಅದರಲ್ಲೂ ಡೆಲ್ಟಾ ಮಾದರಿಯ ರೂಪಾಂತರ ಕಾಣಿಸಿಕೊಂಡಿರುವ ದೇಶಗಳು ತಮ್ಮ ದೇಶಗಳಲ್ಲಿ ಸೋಂಕು ಹೆಚ್ಚು ಹರಡದಂತೆ ಜಾಗ್ರತೆ ವಹಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಮೈಕ್ ರಿಹಾನ್ ಸಲಹೆ ನೀಡಿದ್ದರು.











Click it and Unblock the Notifications