15 ರಿಂದ 18ರ ಮಕ್ಕಳಿಗೆ ಲಸಿಕೆ; 600,000 ನೋಂದಣಿ
ನವದೆಹಲಿ, ಜನವರಿ 03; ಭಾರತದಲ್ಲಿನ 15 ರಿಂದ 18 ವರ್ಷದೊಳಗಿನ ಮಕ್ಕಳು ಲಸಿಕಾಕರಣಕ್ಕೆ ಒಳಪಡಲಿದ್ದಾರೆ. ಸೋಮವಾರ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಕೋವಿನ್ ಪೋರ್ಟಲ್ ಪ್ರಕಾರ ಸುಮಾರು 600,000 ಮಕ್ಕಳು ಲಸಿಕೆ ಪಡೆಯಲು ನೋಂದಣಿ ಮಾಡಿಸಿದ್ದಾರೆ.
ಡಿಸೆಂಬರ್ 25ರಂದು ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಲಸಿಕಾ ಅಭಿಯಾನ ಆರಂಭವಾಗಲಿದೆ ಎಂದು ಹೇಳಿದ್ದರು. ಇದರಿಂದಾಗಿ ಶಾಲೆಗಳಿಗೆ ಮತ್ತು ಕಾಲೇಜುಗಳಿಗೆ ಹೋಗುವ ಮಕ್ಕಳ ಆತಂಕವನ್ನು ಮತ್ತು ಅವರ ಪೋಷಕರ ಆತಂಕ ಕಡಿಮೆ ಆಗಲಿದೆ.
ಭಾರತದಲ್ಲಿ 14 ರಿಂದ 17 ವರ್ಷದೊಳಗಿನ ಮಕ್ಕಳ ಸಂಖ್ಯೆ ಸುಮಾರು 3 ಕೋಟಿ ಎಂದು ಅಂದಾಜಿಸಲಾಗಿದೆ. ಸೋಮವಾರ ಎಲ್ಲಾ ರಾಜ್ಯಗಳಲ್ಲಿ ಲಸಿಕಾಕರಣ ಆರಂಭವಾಗಲಿದ್ದು, ಸಿದ್ಧತೆಗಳು ನಡೆದಿವೆ. ಶಾಲೆಗಳ ಆವರಣದಲ್ಲಿಯೇ ಲಸಿಕಾ ಅಭಿಯಾನ ನಡೆಯಲಿದೆ.

ಭಾನುವಾರ ದೇಶದಲ್ಲಿ 27,553 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 1,525 ಆಗಿದೆ. ದೆಹಲಿ, ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ಮತ್ತು ಕೇರಳದಲ್ಲಿ ಹೆಚ್ಚು ಓಮಿಕ್ರಾನ್ ಪ್ರಕರಣಗಳು ದಾಖಲಾಗಿವೆ.
ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಬೂಸ್ಟರ್ ಡೋಸ್ ಬಗ್ಗೆ ಸಹ ಚರ್ಚೆ ನಡೆಯುತ್ತಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಈ ಕುರಿತು ಸಹ ಘೋಷಣೆ ಮಾಡಿದ್ದಾರೆ. ಕೊರೊನಾ ವಾರಿಯರ್‌ಗಳು, ಆರೋಗ್ಯರಕ್ಷಣಾ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು ಈಗಲೂ ತಮ್ಮ ಬಹು ಸಮಯವನ್ನು ಕೊರೊನಾ ರೋಗಿಗಳಿಗೆ ಸೇವೆ ಮಾಡುವುದರಲ್ಲಿ ಕಳೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಆದುದರಿಂದ ಮುಂಜಾಗರೂಕತಾ ಕ್ರಮವಾಗಿ ಸರ್ಕಾರ ಆರೋಗ್ಯ ಕಾರ್ಯಕರ್ತೆಯರಿಗೆ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆಯ ಮುಂಜಾಗರೂಕತಾ ಡೋಸ್ ಆರಂಭ ಮಾಡಲು ನಿರ್ಧರಿಸಿದ್ದು ಜನವರಿ 10 ರಂದು ಆರಂಭಗೊಳ್ಳಲಿದೆ ಎಂದು ಘೋಷಣೆ ಮಾಡಿದ್ದಾರೆ.
ವಯಸ್ಸಾದವರು ಮತ್ತು ಈಗಾಗಲೇ ಇತರ ಗಂಭೀರ ಖಾಯಿಲೆಗಳಿಂದ ಬಳಲುತ್ತಿರುವವರು ಈ ಮುಂಜಾಗರೂಕತಾ ಡೋಸ್ ಪಡೆದುಕೊಳ್ಳಬಹುದಾಗಿದೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡು 60 ವರ್ಷಕ್ಕೆ ಮೇಲ್ಪಟ್ಟ ಹಿರಿಯರು ಮತ್ತು ಇತರ ಖಾಯಿಲೆಗಳು ಇರುವವರು ಅವರ ವೈದ್ಯರ ಶಿಫಾರಸಿನ ಮೇರೆಗೆ ಮುಂಜಾಗರೂಕತಾ ಡೋಸ್ ಪಡೆದುಕೊಳ್ಳುವ ಅವಕಾಶವನ್ನು ಹೊಂದಿರುತ್ತಾರೆ.
ವಿವಿಧ ರಾಜ್ಯಗಳಲ್ಲಿ ಏರಿಕೆ; ದೆಹಲಿಯಲ್ಲಿ ಭಾನುವಾರ 3,194 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಮೇ 2020ರ ಬಳಿಕ ಒಂದೇ ದಿನದಲ್ಲಿ ದಾಖಲಾದ ಅತಿ ಹೆಚ್ಚಿನ ಹೊಸ ಪ್ರಕರಣವಿದು. ಪಾಸಿಟಿವಿಟಿ ದರ ಶೇ 4.59 ಆಗಿದೆ. ಆದರೆ ಯಾವುದೇ ಸೋಂಕಿತರು ಮೃತಪಟ್ಟಿಲ್ಲ.
"ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 8,397 ಆಗಿದೆ. ಇವರಲ್ಲಿ 4,759 ಜನರು ಹೋಂ ಐಸೋಲೇಷನ್‌ನಲ್ಲಿದ್ದಾರೆ. ಆಸ್ಪತ್ರೆಗಳಲ್ಲಿ ಶೇ 99.78ರಷ್ಟು ಹಾಸಿಗೆಗಳು ಖಾಲಿ ಇವೆ. ಇನ್ನೂ 37,000 ಹಾಸಿಗೆಗಳನ್ನು ಸಿದ್ಧಪಡಿಸುವ ಕೆಲಸ ನಡೆಯುತ್ತಿದೆ. ಕೋವಿಡ್ ಹರಡುವಿಕೆ ತಡೆಯಲು ಸದ್ಯ ಯಾವುದೇ ಕಠಿಣ ನಿಯಮ ಜಾರಿಗೊಳಿಸುವುದಿಲ್ಲ" ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
6 ತಿಂಗಳ ಬಳಿಕ ಮಹಾರಾಷ್ಟ್ರದಲ್ಲಿ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಭಾನುವಾರ 11,877 ಹೊಸ ಪ್ರಕರಣ ದಾಖಲಾಗಿದೆ. ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 42,024 ಆಗಿದೆ. 50 ಓಮಿಕ್ರಾನ್ ಪ್ರಕರಣಗಳು ಭಾನುವಾರ ಪತ್ತೆಯಾಗಿದೆ.
ಓಡಿಶಾದಲ್ಲಿ ಭಾನುವಾರ 424 ಹೊಸ ಕೋವಿಡ್ ಪ್ರಕರಣ ಪತ್ತೆಯಾಗಿದೆ. ಹೊಸ ಪ್ರಕರಣದಲ್ಲಿ ಕೊಂಚ ಏರಿಕೆ ಕಂಡುಬಂದ ಹಿನ್ನಲೆಯಲ್ಲಿ ಸರ್ಕಾರ ಸೋವಾರದಿಂದ ಪ್ರಾಥಮಿಕ ಶಾಲೆಗಳನ್ನು ಆರಂಭಿಸುವ ತೀರ್ಮಾನವನ್ನು ಮುಂದೂಡಿದೆ.
ಉಳಿದಂತೆ ಕೇರಳದಲ್ಲಿ 2,802 ಹೊಸ ಪ್ರಕರಣ, ಆಂಧ್ರ ಪ್ರದೇಶದಲ್ಲಿ 165, ಗುಜರಾತ್‌ನಲ್ಲಿ 986, ತೆಲಂಗಾಣದಲ್ಲಿ 274, ಕರ್ನಾಟಕದಲ್ಲಿ 1,187, ತಮಿಳುನಾಡಿನಲ್ಲಿ 1,594 ಹೊಸ ಪ್ರಕರಣಗಳು ಭಾನುವಾರ ದಾಖಲಾಗಿವೆ.
ವಿವಿಧ ರಾಜ್ಯದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಅಧಿಕವಾದರೂ ಕೋವಿಡ್ 2ನೇ ಅಲೆಯಂತೆ ಆಸ್ಪತ್ರೆ ಸೇರುವವರ ಸಂಖ್ಯೆಯಲ್ಲಿ ಏರಿಕೆಯಾಗಿಲ್ಲ. ಇದರಿಂದಾಗಿ ಜನರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ.












Click it and Unblock the Notifications