ಮುಸ್ಲಿಂ ಹುಡುಗನ ಜೊತೆ ಬಿಜೆಪಿ ನಾಯಕನ ಮಗಳ ಮದುವೆ: ಆಹ್ವಾನ ಪತ್ರಿಕೆ ವೈರಲ್
ಬಿಜೆಪಿ ಮುಖಂಡರ ಮಗಳ ಮದುವೆ ಆಹ್ವಾನ ಪತ್ರಿಕೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದೆ. ಉತ್ತರಾಖಂಡದ ಪೌರಿ ಪ್ರದೇಶದ ಮಾಜಿ ಶಾಸಕ ಯಶಪಾಲ್ ಬೇನಮ್ ಅವರ ಪುತ್ರಿ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗುತ್ತಿದ್ದು, ಅದ್ದೂರಿಯಾಗಿ ಮದುವೆ ಆಮಂತ್ರಣ ಪತ್ರಿಕೆ ಸಿದ್ಧಪಡಿಸಲಾಗಿದೆ.
ಮದುವೆ ಆಮಂತ್ರಣ ಪತ್ರಿಕೆ ಸದ್ಯ ಬಾರಿ ವೈರಲ್ ಆಗಿದ್ದು, ಬಿಜೆಪಿಯ ಬೆಂಬಲಿಗರು, ವಿರೋಧಿಗಳು ಕೂಡ ಬೇನಾಮ್ ಅವರ ನಡೆಯನ್ನು ಟೀಕಿಸಿದ್ದಾರೆ. ಹಲವರು ಇದು ಹಿಂದೂ ಧರ್ಮವನ್ನು ಕಾಪಾಡುತ್ತೇನೆ ಎಂದು ಬೊಬ್ಬೆ ಹೊಡೆಯುವ ಬಿಜೆಪಿ ನಾಯಕರ ಡಬಲ್ ಸ್ಟಾಂಡರ್ಡ್ ಎಂದು ಹರಿಹಾಯ್ದಿದ್ದಾರೆ.

ಹಿಂದುತ್ವವಾದಿಗಳು, ಬಿಜೆಪಿ ಕಾರ್ಯಕರ್ತರು ಈ ಮದುವೆಯನ್ನು ಲವ್ ಜಿಹಾದ್ ಎಂದು ಕರೆದಿದ್ದಾರೆ. ಅಲ್ಲದೆ ಇತ್ತೀಚೆಗೆ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿರುವ ಕೇರಳ ಸ್ಟೋರಿ ಚಿತ್ರದ ಕಥೆಗೆ ಈ ಮದುವೆಯನ್ನು ಹೋಲಿಕೆ ಮಾಡಿದ್ದಾರೆ.
"ಬಿಜೆಪಿ ಆಡಳಿತವಿರುವ ರಾಜ್ಯಗಳು 'ದಿ ಕೇರಳ ಸ್ಟೋರಿ'ಯಂತಹ ಚಲನಚಿತ್ರಗಳನ್ನು ತೆರಿಗೆ ಮುಕ್ತವಾಗಿ ಮಾಡುತ್ತಿವೆ ಆದರೆ ಇಲ್ಲಿ ಬಿಜೆಪಿ ನಾಯಕನ ಮಗಳು ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗುತ್ತಿದ್ದಾರೆ. ಇದು ಬಿಜೆಪಿಯ ದ್ವಂದ್ವ ನೀತಿಯಾಗಿದ್ದು, ಪಕ್ಷದ ಕಾರ್ಯಕರ್ತರು ಹತಾಶರಾಗಿದ್ದಾರೆ" ಎಂದು ಫೇಸ್‌ಬುಕ್ ಬಳಕೆದಾರರು ಹೇಳಿದ್ದಾರೆ.
"ಲವ್ ಜಿಹಾದ್" ಎಂಬುದು ಬಿಜೆಪಿ ನಾಯಕರು ಮತ್ತು ಬಲಪಂಥೀಯ ಕಾರ್ಯಕರ್ತರು ಸಾಮಾನ್ಯವಾಗಿ ಹಿಂದೂ ಮಹಿಳೆಯರನ್ನು ಮದುವೆಯ ಮೂಲಕ ಧಾರ್ಮಿಕ ಮತಾಂತರಕ್ಕೆ ಆಮಿಷವೊಡ್ಡಲು ಮುಸ್ಲಿಂ ಪುರುಷರ ತಂತ್ರ ಎಂದು ಆರೋಪಿಸಲು ಬಳಕೆ ಮಾಡುತ್ತಾರೆ.
ಪಕ್ಷದಿಂದ ಹೊರ ಹಾಕುವಂತೆ ಒತ್ತಾಯ
ಪೌರಿ ದೇವಾಲಯ ಸಮಿತಿಯ ಪದಾಧಿಕಾರಿಗಳು ಮಾತನಾಡಿ, "ಇದು ಕಳವಳಕಾರಿ ಸಂಗತಿಯಾಗಿದೆ. ಹಿಂದೂ ಕುಟುಂಬಗಳ ಹೆಣ್ಣುಮಕ್ಕಳನ್ನು ಇತರ ಧರ್ಮದ ಪುರುಷರೊಂದಿಗೆ ಮದುವೆ ಮಾಡುವುದು ಪ್ರಚಾರದ ಒಂದು ಭಾಗವಾಗಿದೆ. ಭಾರತದಲ್ಲಿ ಮತಾಂತರದ ಕಾನೂನುಗಳನ್ನು ಬದಲಾಯಿಸಲಾಗುತ್ತಿದೆ, ಸರ್ಕಾರಿ ಆಸ್ತಿಗಳಲ್ಲಿ ಇತರ ಸಮುದಾಯದ ಜನರಿಗಾಗಿ ನಿರ್ಮಿಸಲಾದ ಪ್ರಾರ್ಥನಾ ಕೇಂದ್ರ, ಗೋರಿಗಳನ್ನು ಕೇಂದ್ರವು ನೆಲಸಮ ಮಾಡುತ್ತಿದೆ, ಆದರೆ ಬಿಜೆಪಿಯ ಸ್ವಂತ ನಾಯಕರು ತಮ್ಮ ಹೆಣ್ಣುಮಕ್ಕಳನ್ನು ಮುಸ್ಲಿಂ ವ್ಯಕ್ತಿಯೊಂದಿಗೆ ಮದುವೆ ಮಾಡುತ್ತಿದ್ದಾರೆ," ಎಂದು ಹೇಳಿರುವುದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.
ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಜನರು ಇದನ್ನು ವಿರೋಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಬಿಜೆಪಿ ಹಿಂದೂಗಳ ರಕ್ಷಣೆಗಾಗಿ ಇರುವ ಪಕ್ಷವಾಗಿದ್ದು, ಮಾಜಿ ಶಾಸಕನನ್ನು ಕೂಡಲೇ ಪಕ್ಷದಿಂದ ಹೊರಹಾಕಬೇಕು ಎಂದು ಒತ್ತಾಯಿಸಲಾಗಿದೆ.
ಮೇ 28ರಂದು ಪೌರಿಯ ರೆಸಾರ್ಟ್‌ನಲ್ಲಿ ವಿವಾಹ ನಡೆಯಲಿದೆ. ಯಶ್‌ಪಾಲ್ ಬೇನಾಮ್ ಪೌರಿ ಮುನ್ಸಿಪಲ್ ಕಾರ್ಪೊರೇಶನ್‌ನ ಅಧ್ಯಕ್ಷರಾಗಿದ್ದಾರೆ. ಇದು ಪ್ರೇಮ ವಿವಾಹ ಎಂದು ಹೇಳಲಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ರಾಜಕೀಯ ನಾಯಕರನ್ನು ಮದುವೆಗೆ ಆಹ್ವಾನಿಸಲಾಗಿದೆ.












Click it and Unblock the Notifications