Mahakumbh 2025: ಜಗತ್ತಿನ ಪ್ರವಾಸಿಗರನ್ನು ಸೆಳೆಯಲು ಸಜ್ಜಾದ ಮಹಾಕುಂಭಮೇಳ
ವಿಶ್ವ ಪ್ರಸಿದ್ಧ ಮಹಾಕುಂಭಮೇಳಕ್ಕೆ ಇನ್ನೊಂದು ತಿಂಗಳು ಮಾತ್ರ ಬಾಕಿ ಇದೆ. ವಿಶ್ವದ ಅತಿ ದೊಡ್ಡ ಧಾರ್ಮಿಕ ಕಾರ್ಯಕ್ರಮವಾಗಿರುವ ಮಹಾ ಕುಂಭಮೇಳಕ್ಕೆ ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆ ಸಜ್ಜಾಗಿದ್ದು, ವಿಶ್ವದ ಪ್ರವಾಸಿಗರನ್ನು ಸೆಳೆಯಲು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆ ನವದೆಹಲಿಯ ಅಶೋಕ ಹೋಟೆಲ್‌ನಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿತ್ತು, ಜಗತ್ತಿನಾದ್ಯಂತದ ಗಣ್ಯರು, ರಾಯಭಾರಿಗಳು ಮತ್ತು ಹೈಕಮಿಷನರ್‌ಗಳು ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಸಂಗಮ ನಗರ ಪ್ರಯಾಗ್ ರಾಜ್‌ನ ವೈಭವದ ಬಗ್ಗೆ ಪರಿಚಯಿಸಲಾಯಿತು. ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಉತ್ತರ ಪ್ರದೇಶದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜೈವೀರ್ ಸಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಹಾಕುಂಭ ಮೇಳದ ಇತಿಹಾಸದ ಕಲಾತ್ಮಕ ಚಿತ್ರ ಪ್ರದರ್ಶಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಶೇಖಾವತ್, "ಭಾರತವನ್ನು ಒಂದೇ ಸ್ಥಳದಲ್ಲಿ ನೋಡಲು ಬಯಸಿದ್ದರೆ ನೀವು ಕುಂಭಮೇಳಕ್ಕೆ ಬರಬೇಕು" ಎಂದು ಹೇಳುವ ಮೂಲಕ ಮಹಾಕುಂಭಮೇಳದ ಪ್ರಾಮುಖ್ಯತೆಯನ್ನು ತಿಳಿಸಿದರು. ಮಹಾಕುಂಭಮೇಳಕ್ಕೆ ಯಾವ ರೀತಿ ಸಜ್ಜಾಗಿದ್ದೇವೆ ಎನ್ನುವುದರ ಕುರಿತು ಮಾತನಾಡಿದರು. ಲಕ್ಷಾಂತರ ಯಾತ್ರಾರ್ಥಿಗಳು ಮತ್ತು ಸಂದರ್ಶಕರನ್ನು ಸ್ವಾಗತಿಸಲು ಮಾಡಿರುವ ವ್ಯವಸ್ಥೆಗಳ ಬಗ್ಗೆ ವಿವರಣೆ ನೀಡಿದರು. ಐಷಾರಾಮಿ ಸೌಕರ್ಯಗಳು, ತಡೆರಹಿತ ಸಾರಿಗೆ ಮತ್ತು ಮಾರ್ಗದರ್ಶಿ ಪ್ರವಾಸಗಳನ್ನು ಪರಿಚಯಿಸುವ ಬಗ್ಗೆ ವಿವರಿಸಿದರು.
ಉತ್ತರ ಪ್ರದೇಶದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜೈವೀರ್ ಸಿಂಗ್ ಮಾತನಾಡಿ, ಮಹಾಕುಂಭ ಮೇಳ 2025 ಭಾರತದ ವೈವಿಧ್ಯತೆಯಲ್ಲಿ ಏಕತೆಗೆ ಸಾಕ್ಷಿಯಾಗಿ ನಿಲ್ಲುತ್ತದೆ ಎಂದು ಹೇಳಿದರು. ವಸುಧೈವ ಕುಟುಂಬಕಂ - ಜಗತ್ತು ಒಂದೇ ಕುಟುಂಬ ಎನ್ನುವ ಘೋಷವಾಕ್ಯವನ್ನು ಹೇಳಿದ ಅವರು ಜಗತ್ತಿನ ಪ್ರವಾಸಿಗರನ್ನು ದೊಡ್ಡ ಧಾರ್ಮಿಕ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಇದು ಧಾರ್ಮಿಕ ಹಬ್ಬ ಎನ್ನುವುದಕ್ಕಿಂತ ಹೆಚ್ಚಾಗಿ ಸಂಸ್ಕೃತಿ ಮತ್ತು ಆಲೋಚನೆಗಳ ಜಾಗತಿಕ ಸಂಗಮವಾಗಿದೆ ಎಂದರು.
ಪ್ರವಾಸೋದ್ಯಮ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮುಖೇಶ್ ಕುಮಾರ್ ಮೇಶ್ರಮ್ ಮಹಾಕುಂಭ ಮೇಳದ ಸಿದ್ಧತೆ, ಪ್ರಾಮುಖ್ಯತೆ, ವಿಶೇಷತೆ ಕುರಿತಂತೆ ವಿವರಣೆ ನೀಡಿದರು. ವಿವರವಾದ ಚಿತ್ರಗಳೊಂದಿಗೆ ಪರೇಡ್ ಮೈದಾನದ ಬಳಿ ವಿಸ್ತಾರವಾದ ಟೆಂಟ್ ಸಿಟಿಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಮಹಾರಾಜ ಟೆಂಟ್‌ಗಳಿಂದ ಆಧುನಿಕ ಸ್ವಿಸ್ ಕಾಟೇಜ್‌ಗಳವರೆಗೆ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಸಂಗಮದ ಮೇಲೆ ಹೆಲಿಕಾಪ್ಟರ್ ಸವಾರಿ, ಜಲ ಕ್ರೀಡೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಕುರಿತಂತೆ ಮಾಹಿತಿ ನೀಡಿದ ಅವರು, ಇದು ಆಧ್ಯಾತ್ಮಿಕ ಅನುಭವವನ್ನು ಮತ್ತೊಂದು ಮಜಲಿಗೆ ಕೊಂಡೊಯ್ಯುವ ವಿಶ್ವಾಸ ವ್ಯಕ್ತಪಡಿಸಿದರು.
ಮಲೇಷಿಯಾ, ಸೆಶೆಲ್ಸ್, ಸ್ವಿಟ್ಜರ್ಲೆಂಡ್ ಮತ್ತು ನೇಪಾಳದಂತಹ ದೇಶಗಳ ಹೈಕಮಿಷನರ್‌ಗಳು ಮತ್ತು ರಾಯಭಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಗಡಿ ಮತ್ತು ಧರ್ಮಗಳನ್ನು ಮೀರಿದ ಮಹಾಕುಂಭಮೇಳಕ್ಕೆ ಜಾಗತಿಕವಾಗಿ ಪ್ರವಾಸಿಗರನ್ನು ಆಕರ್ಷಿಸಲು, ಕುಂಭಮೇಳದ ಇತಿಹಾಸ ಕುರಿತ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು.












Click it and Unblock the Notifications