ಉತ್ತರ ಪ್ರದೇಶ: ಯುವತಿಯ ದೇಹವನ್ನು ಕತ್ತರಿಸಿ ಬಾವಿಗೆ ಬೀಸಾಕಿದ ಮಾಜಿ ಪ್ರಿಯಕರ
ವಾರಣಾಸಿ, ನವೆಂಬರ್ 21: ಉತ್ತರ ಪ್ರದೇಶದಲ್ಲಿ ನಡೆದ ಘೋರ ಹತ್ಯೆಯ ಹಿಂದಿನ ಅಸಲಿ ಸತ್ಯವನ್ನು ಅಜಂಗಢ ಪೊಲೀಸರು ಬೇಧಿಸಿದ್ದಾರೆ. ಯುವತಿ ಕೊಲೆಯ ಹಿಂದೆ ಮಾಜಿ ಪ್ರಿಯಕರನ ಕೈವಾಡವಿರುವುದನ್ನು ಖಾಕಿ ಟೀಮ್ ಪತ್ತೆ ಮಾಡಿದೆ.
ಕಳೆದ ನವೆಂಬರ್ 16ರಂದು ಅಜಂಗಢ ಜಿಲ್ಲೆಯ ಪಶ್ಚಿಮ್ ಪಟ್ಟಿ ಗ್ರಾಮದ ಬಾವಿಯಿಂದ ಛಿದ್ರಗೊಂಡ ಮಹಿಳೆಯ ಮೃತದೇಹದ ತುಂಡು ಪತ್ತೆಯಾಗಿತ್ತು. ಈ ಪ್ರಕರಣವನ್ನು ಬೆನ್ನು ಹತ್ತಿರ ಪೊಲೀಸರಿಗೆ, ಹತ್ಯೆಯ ಹಿಂದೆ ಮಾಜಿ ಲವ್ವರ್ ಕರಿನೆರಳು ಇರುವುದು ಗೊತ್ತಾಗಿದೆ.
ಬಾವಿಯಲ್ಲಿ ಪತ್ತೆಯಾದ ಮೃತದೇಹವು 22 ವರ್ಷದ ಆರಾಧನಾ ಪ್ರಜಾಪತಿ ಎಂಬ ಯುವತಿಯದ್ದು ಎಂದು ಖಾತ್ರಿಯಾಗಿದೆ. ಹುಡುಗಿ ಸಾವಿಗೆ ಮಾಜಿ ಪ್ರಿಯಕರನೇ ಕಾರಣನಾಗಿದ್ದ ಎಂಬುದು ಪೊಲೀಸ್ ವಿಚಾರಣೆಯಲ್ಲಿ ಬಹಿರಂಗವಾಗಿದೆ. ಹೊಸ ಮದುವೆ ಹಾಗೂ ಮಹಿಳೆಯ ಕೊಲೆಯ ಹಿಂದೆ ಹಳೆ ಪ್ರೇಮಕಥೆಯೊಂದು ಹೊಸೆದುಕೊಂಡಿರುವುದು ಬೆಳಕಿಗೆ ಬಂದಿದೆ. ಪ್ರೀತಿಸಿದಾಕೆಯ ಕತ್ತು ಸೀಳಿದ ಪ್ರಿಯಕರನ ಕ್ರೂರತೆಯು ಹೇಗಿತ್ತು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಆರಾಧನಾ ಮೃತದೇಹವನ್ನು ಪೀಸ್ ಪೀಸ್ ಮಾಡಿದ್ದ ಆರೋಪಿ
ತಾನು ಪ್ರೀತಿಸಿದ ಯುವತಿಯನ್ನು ಬೇರೊಬ್ಬನು ಮದುವೆಯಾದ ಎಂಬ ಕಾರಣಕ್ಕೆ ಈ ಕೊಲೆ ನಡೆದಿದೆ. ನವೆಂಬರ್ 10ರಂದು ಆರಾಧನಾ ಪ್ರಜಾಪತಿಯನ್ನು ಭೇಟಿ ಮಾಡಿದ್ದ ಮಾಜಿ ಪ್ರಿಯಕರ ಪ್ರಿನ್ಸ್ ಯಾದವ್, ತನ್ನ ಸೋದರಸಂಬಂಧಿ ಸರ್ವೇಶ್ ಸಹಾಯದಿಂದ ಆಕೆಯ ಕತ್ತು ಸೀಳಿ ಕೊಂದಿದ್ದಾನೆ. ಇಷ್ಟಕ್ಕೆ ಸುಮ್ಮನಾಗದೇ ಆಕೆಯ ದೇಹವನ್ನು ಬಾವಿಗೆ ಎಸೆಯುವ ಮೊದಲು ತುಂಡು ತುಂಡುಗಳಾಗಿ ಕತ್ತರಿಸಿದ್ದಾನೆ. ನಂತರ ಆಕೆಯ ತಲೆಯನ್ನು ಆರು ಕಿಲೋಮೀಟರ್ ದೂರದಲ್ಲಿ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೇರೆ ಹುಡುಗನೊಂದಿಗೆ ಆರಾಧನಾ ವಿವಾಹ
ಕಳೆದ ಫೆಬ್ರವರಿ ತಿಂಗಳವರೆಗೂ ಪ್ರಿನ್ಸ್ ಯಾದವ್ ಮತ್ತು ಆರಾಧನಾ ಪರಸ್ಪರ ಸಂಪರ್ಕದಲ್ಲಿದ್ದರು. ಆದರೆ ಕಳೆದ ಫೆಬ್ರವರಿಯಲ್ಲಿ ಆರಾಧನಾ ಕುಟುಂಬದವರು ಆಕೆಯನ್ನು ಬೇರೆ ವ್ಯಕ್ತಿಯೊಂದಿಗೆ ಮದುವೆ ಮಾಡಿದರು. ಇದರಿಂದ ಪ್ರಿನ್ಸ್ ಯಾದವ್ ತೀವ್ರವಾಗ ಅಸಮಾಧಾನಗೊಂಡಿದ್ದನು ಎಂದು ಪೊಲೀಸರು ಹೇಳಿದ್ದಾರೆ. ಈ ಹತ್ಯೆ ಪ್ರಕರಣದಲ್ಲಿ ಪ್ರಿನ್ಸ್ ಯಾದವ್ ಜೊತೆಗೆ ಅವರ ಇಬ್ಬರು ಚಿಕ್ಕಪ್ಪ, ಚಿಕ್ಕಮ್ಮ, ಸೋದರಸಂಬಂಧಿ ಸಹೋದರ ಮತ್ತು ಸಹೋದರಿ ಸೇರಿದಂತೆ ಪೋಷಕರು ಮತ್ತು ಇತರ ಸಂಬಂಧಿಕರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಆದರೆ ಇವರೆಲ್ಲರೂ ತಲೆಮರೆಸಿಕೊಂಡಿದ್ದಾರೆ.

ಮೃತ ಆರಾಧನಾ ನಾಪತ್ತೆಯಾಗಿದ್ದು ಯಾವಾಗ?
ನವೆಂಬರ್ 10ರಂದು ಆರಾಧನಾ ನಾಪತ್ತೆಯಾಗಿದ್ದಾರೆ ಎಂಬ ಪ್ರಕರಣವನ್ನು ಭೇದಿಸಲು ಹೊರಟ ಪೊಲೀಸರು ಶಂಕಿತರನ್ನು ಸೆರೆ ಹಿಡಿಯಲು ಮುಂದಾದರು. ಈ ಹಂತದಲ್ಲಿ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡವನೇ ಆರೋಪಿ ಪ್ರಿನ್ಸ್ ಯಾದವ್. ಈ ಆರೋಪಿಯು ಆರಾಧನಾ ಮದುವೆಗೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದೂ ಅಲ್ಲದೇ ಪತಿಯನ್ನು ಬಿಟ್ಟು ಬರುವಂತೆ ಒತ್ತಾಯಿಸುತ್ತಿದ್ದನು. ಗಂಡನನ್ನು ಬಿಟ್ಟು ತನ್ನೊಂದಿಗೆ ಇರುವಂತೆ ಆರಾಧನಾಗೆ ಪೀಡಿಸುತ್ತಿದ್ದನು, ಪೊಲೀಸ್ ವಿಚಾರಣೆ ವೇಳೆಯಲ್ಲಿ ತಾನೇ ಆರಾಧನಾರನ್ನು ಕೊಂದಿರುವುದಾಗಿ ಆರೋಪಿಯು ಒಪ್ಪಿಕೊಂಡಿದ್ದಾನೆ.
ಕಳೆದ ನವೆಂಬರ್ 19ರಂದು ಪ್ರಿನ್ಸ್ ಯಾದವ್ ಅನ್ನು ಪೊಲೀಸರು ಬಂಧಿಸಿದರು. ಆರೋಪಿಗಳು ಆರಾಧನಾ ತಲೆಯನ್ನು ಎಸೆದಿದ್ದ ಕೊಳಕ್ಕೆ ಪೊಲೀಸರನ್ನು ಕರೆದೊಯ್ಯುವಾಗ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಈ ವೇಳೆ ಎನ್‌ಕೌಂಟರ್ ನಡೆಸಿ ಔಪಚಾರಿಕವಾಗಿ ಆರೋಪಿಗಳನ್ನು ಅರೆಸ್ಟ್ ಮಾಡಲಾಯಿತು.

ಗೆಳತಿಯನ್ನು ಹೇಗೆ ಕತ್ತರಿಸಿದ ಈ ಮಾಜಿ ಪ್ರಿಯಕರ?
"ನವೆಂಬರ್ 9ರಂದೇ ಆರಾಧನಾಳನ್ನು ತನ್ನೊಂದಿಗೆ ಕರೆದೊಯ್ಯಲು ಪ್ರಯತ್ನಿಸಿದ್ದ ಪ್ರಿನ್ಸ್ ಯಾದವ್ ಅದರಲ್ಲಿ ಫೇಲ್ ಆಗಿದ್ದನು. ಆದರೆ ಮರುದಿನ ಹಾಗೆ ಆಗಲಿಲ್ಲ. ಹತ್ತಿರದ ದೇವಸ್ಥಾನದಲ್ಲಿ ಆಕೆಯನ್ನು ಭೇಟಿ ಮಾಡುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದನು. ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ, ಅವರು ರೆಸ್ಟೋರೆಂಟ್‌ನಲ್ಲಿ ಊಟ ಮಾಡಿದರು. ಅಲ್ಲಿಂದ ಮುಂದೆ ಆರಾಧನಾಳನ್ನು ಪಶ್ಚಿಮ ಪಟ್ಟಿ ಗ್ರಾಮದ ಆಕೆಯ ತಾಯಿಯ ಚಿಕ್ಕಪ್ಪನ ಮನೆಗೆ ಪ್ರಿನ್ಸ್ ಯಾದವ್ ಕರೆದುಕೊಂಡು ಹೋಗಿದ್ದನು. ಅಲ್ಲಿ ತನ್ನ ಪ್ರೇಯಸಿ ಆರಾಧನಾಳ ಕತ್ತು ಹಿಸುಕಿ ಕೊಂದಿದ್ದಾನೆ. ಆಕೆಯ ಗುರುತು ಪತ್ತೆಯಾಗದಂತೆ ನೋಡಿಕೊಳ್ಳುವುದಕ್ಕಾಗಿ ಪ್ರಿನ್ಸ್ ಯಾದವ್ ಮತ್ತು ಸರ್ವೇಶ್, ಆ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದಾನೆ," ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.












Click it and Unblock the Notifications