ಅಮೆರಿಕದಿಂದ ಬಂದಿಳಿದ ಮೂರನೇ ವಿಮಾನ; 112 ಅಕ್ರಮ ವಲಸಿಗರು ವಾಪಸ್
ಅಕ್ರಮ ವಲಸಿಗರನ್ನು ವಾಪಸ್ ಕಳಿಸಲು ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರ ದೊಡ್ಡ ಕಾರ್ಯಾಚರಣೆಯನ್ನೇ ಕೈಗೆತ್ತಿಕೊಂಡಿದೆ. ಭಾರತದಿಂದ ಅಕ್ರಮವಾಗಿ ಯುಎಸ್ ಪ್ರವೇಶ ಮಾಡಿರುವ ಅಕ್ರಮ ವಲಸಿಗರನ್ನು ಕೂಡ ಯುಎಸ್ ಸರ್ಕಾರ ಗುರುತಿಸಿದ್ದು ವಾಪಸ್ ಕಳಿಸುತ್ತಿದೆ. ಈಗಾಗಲೇ ಎರಡು ವಿಮಾನಗಳಲ್ಲಿ ಅಕ್ರಮ ವಲಸಿಗರನ್ನು ಯುಎಸ್ ಭಾರತಕ್ಕೆ ಕರೆತಂದಿದೆ. ಭಾನುವಾರ ಮೂರನೇ ಬ್ಯಾಚ್ ಭಾರತಕ್ಕೆ ಬಂದಿಳಿದಿದೆ.
112 ಅಕ್ರಮ ವಲಸಿಗರನ್ನು ಹೊತ್ತ ಯುಎಸ್ ಮಿಲಿಟರಿ ವಿಮಾನವು ಭಾನುವಾರ ಅಮೃತಸರದ ಶ್ರೀ ಗುರು ರಾಮ್ ದಾಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಅಮೆರಿಕದರಿಂದ ಗಡೀಪಾರಾದ 112 ಜನರಲ್ಲಿ ಹರಿಯಾಣದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ವರದಿಯಾಗಿದೆ.

ಗಡೀಪಾರಾದ 112 ಮಂದಿಯಲ್ಲಿ 44 ಜನ ಹರಿಯಾಣದವರಾಗಿದ್ದು 33 ಜನ ಗುಜರಾತ್‌ನವರಾಗಿದ್ದಾರೆ. 31 ಮಂದಿ ಪಂಜಾಬ್‌ನಿಂದ ಬಂದಿದ್ದು, ಇಬ್ಬರು ಉತ್ತರ ಪ್ರದೇಶ ಮತ್ತು ತಲಾ ಒಬ್ಬರು ಹಿಮಾಚಲ ಮತ್ತು ಉತ್ತಾರಖಂಡದವರಾಗಿದ್ದಾರೆ.
ಶನಿವಾರ 117 ಅಕ್ರಮ ಭಾರತೀಯ ವಲಸಿಗರನ್ನು ಅಮೆರಿಕದ ಮಿಲಿಟರಿ ವಿಮಾನವು ಅಮೃತಸರದಲ್ಲಿ ಇಳಿಸಿತ್ತು. ಶನಿವಾರ ರಾತ್ರಿ 11.35 ರ ಸುಮಾರಿಗೆ ಸಿ -17 ವಿಮಾನವು ಅಮೃತಸರ ವಿಮಾನ ನಿಲ್ದಾಣದಲ್ಲಿ ಬಂದಿಳಿದಿತ್ತು. ಅದಾದ ಒಂದು ದಿನದಲ್ಲೇ ಮತ್ತೊಂದು ಬ್ಯಾಚ್ ಅಕ್ರಮ ವಲಸಿಗರು ಭಾರತಕ್ಕೆ ಮರಳಿದ್ದಾರೆ.
ಶನಿವಾರ ಬಂದ 117 ಅಕ್ರಮ ವಲಸಿಗರಲ್ಲಿ 65 ಜನ ಪಂಜಾಬ್‌ನವರಾಗಿದ್ದರೆ 33 ಜನ ಹರಿಯಾಣದವರಾಗಿದ್ದರು. 8 ಮಂದಿ ಗುಜರಾತ್, ಮೂವರು ಉತ್ತರ ಪ್ರದೇಶದವರಾಗಿದ್ದರು. ಮಹಾರಾಷ್ಟ್ರ ಮತ್ತು ರಾಜಸ್ಥಾನದ ಇಬ್ಬರು ಮತ್ತು ಗೋವಾ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರದ ತಲಾ ಒಬ್ಬರು ಸೇರಿದ್ದರು.
ಗಡೀಪಾರಾದವರನ್ನು ವಾಪಸ್ ಕರೆತರುವಾದ ಅಮೆರಿಕ ಸರ್ಕಾರ ಕೈಗಳಿಗೆ ಕೋಳ ತೊಡಿಸಿ, ಕಾಲುಗಳಿಗೆ ಸರಪಳಿ ಹಾಕಿದ್ದು ಭಾರಿ ವಿರೋಧಕ್ಕೆ ಕಾರಣವಾಗಿದೆ. ಈ ಬಗ್ಗೆ ಅಮೆರಿಕ ಸರ್ಕಾರದ ಜೊತೆ ಮಾತನಾಡುವುದಾಗಿ ಭಾರತೀಯ ವಿದೇಶಾಂತ ಇಲಾಖೆ ತಿಳಿಸಿದೆ.
ಅಮೆರಿಕದಿಂದ ಗಡೀಪಾರಾದವರನ್ನು ಪಟಿಯಾಲ ಜಿಲ್ಲೆಯ ರಾಜಪುರದ ಇಬ್ಬರು ಯುವಕರು ಕೂಡ ಸೇರಿದ್ದು, ಅಮೃತಸರದಲ್ಲಿ ಇಳಿಯುತ್ತಿದ್ದಂತೆ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಸಂದೀಪ್ ಸಿಂಗ್ ಅಲಿಯಾಸ್ ಸನ್ನಿ ಮತ್ತು ಪ್ರದೀಪ್ ಸಿಂಗ್ 2023 ರಲ್ಲಿ ರಾಜಪುರದಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣ ಆರೋಪಿಗಳಾಗಿದ್ದರು.
104 ಅಕ್ರಮ ಭಾರತೀಯ ವಲಸಿಗರ ಮೊದಲ ತಂಡ ಫೆಬ್ರವರಿ 5ರಂದು ಅಮೃತಸರಕ್ಕೆ ಆಗಮಿಸಿತ್ತು. ವಿಮಾನದಲ್ಲಿದ್ದ ಹಲವಾರು ಗಡೀಪಾರು ಮಾಡಿದವರು ಪ್ರಯಾಣದ ಉದ್ದಕ್ಕೂ ತಮ್ಮ ಕೈಗಳು ಮತ್ತು ಕಾಲುಗಳಿಗೆ ಕೋಳ ಹಾಕಲಾಗಿತ್ತು ಮತ್ತು ಅಮೃತಸರದಲ್ಲಿ ಇಳಿದ ನಂತರವೇ ಅವರ ಸಂಕೋಲೆಗಳನ್ನು ಬಿಚ್ಚಲಾಯಿತು ಎಂದು ಆರೋಪಿಸಿದ್ದರು.












Click it and Unblock the Notifications