ಮೋದಿಯವರ 9 ವರ್ಷಗಳ ಆಡಳಿತದ ಪ್ರಯೋಜನ ಯುಪಿ ಪಡೆದಿದೆ- ಯೋಗಿ ಹೆಮ್ಮೆಯ ಮಾತು
ಲಕ್ನೋ ಮೇ 31: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಡಬಲ್ ಇಂಜಿನ್ ಸರ್ಕಾರವನ್ನು ಹೊಗಳಿದ್ದಾರೆ. ನರೇಂದ್ರ ಮೋದಿ ಅವರು ಪ್ರಧಾನಿಯಾಗಿದ್ದ ಈ 9 ವರ್ಷಗಳಲ್ಲಿ ದೇಶದ ಭದ್ರತೆಯನ್ನು ಬಲಪಡಿಸಲಾಗಿದ್ದು, ಉತ್ತರ ಪ್ರದೇಶಕ್ಕೆ ಸಾಕಷ್ಟು ಅನುಕೂಲಗಳು ದೊರೆತಿವೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ನರೇಂದ್ರ ಮೋದಿಯವರು ಪ್ರಧಾನಿಯಾಗಿ 9 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್ ಅವರು ಲಕ್ನೋದಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಅವರೊಂದಿಗೆ ಲಕ್ನೋದಲ್ಲಿ ಮಾಧ್ಯಮಗಳನ್ನು ಭೇಟಿ ಮಾಡಿದರು. ಈ ವೇಳೆ ಮಾತನಾಡಿದ ಅವರು, 'ಪ್ರಧಾನಿ ಮೋದಿಯವರಿಂದ ಸಾಕಷ್ಟು ಲಾಭ ಪಡೆದ ರಾಜ್ಯಗಳಲ್ಲಿ ಉತ್ತರ ಪ್ರದೇಶವೂ ಒಂದು. ಈ 9 ವರ್ಷಗಳ ನಂತರ ನಾವು ನವ ಭಾರತವನ್ನು ಕಾಣುತ್ತೇವೆ' ಎಂದು ಹೇಳಿದರು.

ಈ ನವ ಭಾರತಕ್ಕೆ ನಾಲ್ಕು ಸ್ತಂಭಗಳು ಮೂಲಭೂತವಾಗಿವೆ. ಈ ನಾಲ್ಕು ಆಧಾರಸ್ತಂಭಗಳು- ದೇಶದ ಗೌರವ, ಆಂತರಿಕ ಮತ್ತು ಬಾಹ್ಯ ಭದ್ರತೆ, ಬಡವರ ಕಲ್ಯಾಣ ಮತ್ತು ಮೂಲಸೌಕರ್ಯ ಅಭಿವೃದ್ಧಿ ಆಗಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ವಿಶ್ವದಲ್ಲಿ ಭಾರತದ ಬಗ್ಗೆ ಆಸಕ್ತಿ ಹೆಚ್ಚಾಗಿದೆ. ಭಾರತ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವನ್ನು ವಿಶ್ವದ ರಾಷ್ಟ್ರಗಳು ಸೂಕ್ಷ್ಮವಾಗಿ ಗಮನಿಸುತ್ತವೆ. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ನಮ್ಮ ದೇಶದ ಬಗ್ಗೆ ಕಾಳಜಿ ಮತ್ತು ಗೌರವ ಹೆಚ್ಚಾಗಿದೆ.
ಅದೇ ರೀತಿ ದೇಶದ ಗಡಿಗಳು ಕೂಡ ಸುರಕ್ಷಿತವಾಗಿವೆ. ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ರಾಜ್ಯಗಳು ಅಥವಾ ನಕ್ಸಲ್ ಮತ್ತು ಮಾವೋವಾದಿ ಹಿಂಸಾಚಾರದಿಂದ ಪ್ರಭಾವಿತವಾಗಿರುವ ಪ್ರದೇಶಗಳೆಲ್ಲವೂ ಸುರಕ್ಷಿತವಾಗಿದೆ. ಉಗ್ರವಾದ, ಪ್ರತ್ಯೇಕತಾವಾದ ಮತ್ತು ಭಯೋತ್ಪಾದನೆಯನ್ನು ಸರ್ಕಾರ ಯಶಸ್ವಿಯಾಗಿ ನಿಗ್ರಹಿಸಿದೆ. ಭದ್ರತೆಯ ವಿಷಯದಲ್ಲಿ ದೇಶದಲ್ಲಿ ಹೊಸ ವಿಶ್ವಾಸ ಮೂಡಿದೆ. ಮತ್ತೊಂದೆಡೆ ಭಾರತ ತನ್ನ 1.4 ಬಿಲಿಯನ್ ಜನರಿಗೆ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಿದೆ ಎಂದು ಹೇಳಿದರು.
ಸ್ವಾತಂತ್ರ್ಯದ 70 ವರ್ಷಗಳಲ್ಲಿ ಕೇವಲ 74 ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಯಿತು. ಆದರೆ ಒಂಬತ್ತು ವರ್ಷಗಳಲ್ಲಿ ಹೆಚ್ಚುವರಿಯಾಗಿ 74 ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಉತ್ತಮ ಮೂಲಸೌಕರ್ಯ ಎಷ್ಟಿರಬಹುದು ಎಂಬುದಕ್ಕೆ ಇದೊಂದು ಉದಾಹರಣೆ. ಬಡವರಿಗಾಗಿ ತಂದಿರುವ ಜನದನ್ ಯೋಜನೆ ಅತ್ಯಂತ ಪರಿಣಾಮಕಾರಿಯಾಗಿದೆ. ಈ ಯೋಜನೆಯ ಮೂಲಕ ಉತ್ತರ ಪ್ರದೇಶದಲ್ಲಿ ಸುಮಾರು 8.5 ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಈ ಮೂಲಕ ಜನರಿಗೆ ನಗದು ಲಾಭವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಇದಕ್ಕೆಲ್ಲ ಪ್ರಧಾನಿ ನರೇಂದ್ರ ಮೋದಿ ಕಾರಣ ಎಂದು ಕೊಂಡಾಡಿದ್ದಾರೆ.
ಡಬಲ್ ಇಂಜಿನ್ ಸರ್ಕಾರ
''ಕಳೆದ ಆರು ವರ್ಷಗಳಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ 54 ಲಕ್ಷಕ್ಕೂ ಹೆಚ್ಚು ಬಡವರಿಗೆ ವಸತಿ ಸೌಲಭ್ಯ ಕಲ್ಪಿಸುವಲ್ಲಿ ಸರಕಾರ ಯಶಸ್ವಿಯಾಗಿದೆ. ರಾಜ್ಯದಲ್ಲಿ ಬಿ.ಸಿ.ಸಖಿಯರು ಮಹಿಳಾ ಸಬಲೀಕರಣಕ್ಕೆ ಉದಾಹರಣೆ ಮಾತ್ರವಲ್ಲದೆ ಸ್ವಯಂ ಮಿನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿ ಹಳ್ಳಿಯಲ್ಲಿ ಬ್ಯಾಂಕ್‌ಗಳ ಶಾಖೆಗಳು, ಎಲ್ಲಾ ಬ್ಯಾಂಕಿಂಗ್ ವಹಿವಾಟುಗಳನ್ನು ನಿರ್ವಹಿಸುತ್ತವೆ" ಎಂದು ಯೋಗಿ ಹೇಳಿದರು.
ಯೋಗಿ ಆದಿತ್ಯನಾಥ್ ಅವರು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಡಿಜಿಟಲ್ ವಹಿವಾಟುಗಳ ಉತ್ತೇಜನಕ್ಕಾಗಿ 'ಸಮರ್ಥ 2023' ಅನ್ನು ಪ್ರಾರಂಭಿಸಿ ಯೋಜನೆಗೆ ಚಾಲನೆ ನೀಡಿದ ನಂತರ ಮಾತನಾಡಿದ ಯುಪಿ ಸಿಎಂ, ಪ್ರಧಾನಿ ನರೇಂದ್ರ ಮೋದಿ ಅವರು 56,000 ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲಿ ಬ್ಯಾಂಕಿಂಗ್ ವಹಿವಾಟುಗಳನ್ನು ಸುಗಮಗೊಳಿಸಲು 2020 ರಲ್ಲಿ ಪ್ರಯಾಗರಾಜ್‌ನಲ್ಲಿ ಬ್ಯಾಂಕಿಂಗ್ ಕರೆಸ್ಪಾಂಡೆಂಟ್ ಸಖಿ ಪ್ರಾರಂಭಿಸಿದರು ಎಂದು ಹೊಗಳಿದರು.












Click it and Unblock the Notifications