ರಾಮಮಂದಿರ ವಿವಾದದಲ್ಲಿ ಸಮಾಜವಾದಿ ಪಕ್ಷ
ಲಕ್ನೋ, ಅ.13 : ಅಯೋಧ್ಯೆಯಲ್ಲಿ ರಾಮಮಂದಿರ ಪುನರ್ ನಿರ್ಮಿಸುವ ಸಂಬಂಧ ಚರ್ಚೆ ನಡೆಸಲು ಉನ್ನತಾಧಿಕಾರಿಗಳ ಸಭೆಯೊಂದನ್ನು ಕರೆದಿರುವುದಾಗಿ ಉತ್ತರಪ್ರದೇಶದ ಗೃಹ ಕಾರ್ಯದರ್ಶಿಯು ಅಧಿಕಾರಿಗಳಿಗೆ ಬರೆದ ಪತ್ರವೊಂದು ಭಾರೀ ವಿವಾದ ಹುಟ್ಟುಹಾಕಿದೆ.
ಉತ್ತರ ಪ್ರದೇಶ ಸರ್ಕಾರ ಇದು ಮುದ್ರಣ ದೋಷದಿಂದ ಉಂಟಾದ ತಪ್ಪು ಎಂದು ಸ್ಪಷ್ಟನೆ ನೀಡಿದೆ. ಆದರೆ, ಇದು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ಕುತಂತ್ರ ಎಂದು ಬಿಜೆಪಿ ಟೀಕಿಸಿದೆ. ಉತ್ತರ ಪ್ರದೇಶದಲ್ಲಿ ಈ ಪತ್ರದ ಕುರಿತು ಭಾರೀ ಚರ್ಚೆ ನಡೆಯುತ್ತಿದೆ.

ಅ.9ರಂದು ಉತ್ತರ ಪ್ರದೇಶದ ಗೃಹ ಕಾರ್ಯದರ್ಶಿ ಸುರೇಶ್ಚಂದ್ರ ಮಿಶ್ರಾ, ಪೊಲೀಸ್ ಮಹಾನಿರ್ದೇಶಕರು ಮತ್ತು ಇತರೆ ಹಿರಿಯ ಅಧಿಕಾರಿಗಳಿಗೆ ಪತ್ರವೊಂದನ್ನು ಬರೆದಿದ್ದರು. ಅಯೋಧ್ಯೆಯಲ್ಲಿ ರಾಮಮಂದಿರ ಪುನರ್ ನಿರ್ಮಿಸುವ ಸಂಬಂಧ ಚರ್ಚೆ ನಡೆಸಲು ಅ.14ರಂದು ಸಭೆ ಆಯೋಜಿಸಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.
ಸೋಮನಾಥ ದೇಗುಲವನ್ನು ಪುನರ್ ನಿರ್ಮಿಸಿದ ಮಾದರಿಯಲ್ಲೇ ರಾಮ ಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಿಸುವ ಕುರಿತು ಕೇಂದ್ರ ಸರ್ಕಾರ ರೂಪಿಸಲಿರುವ ಸಂಸದೀಯ ಕಾನೂನಿನ ಸಂಬಂಧ ಈ ಸಭೆ ನಡೆಸಲಾಗುತ್ತಿದೆ ಎಂದು ಪತ್ರದಲ್ಲಿ ತಿಳಿಸಲಾಗಿತ್ತು.
ಆದರೆ, ಈ ಪತ್ರ ಬಹಿರಂಗಗೊಂಡ ತಕ್ಷಣ ಅದು ರಾಜಕೀಯ ತಿರುವು ಪಡೆದುಕೊಂಡಿದೆ. ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವಾಗ, ರಾಮಮಂದಿರ ನಿರ್ಮಾಣದ ಸುದ್ದಿ ಹಬ್ಬಿದ್ದರಿಂದ ಸಮಾಜವಾದಿ ಪಕ್ಷದ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಸಂಕಷ್ಟಕ್ಕೆ ಸಿಲುಕಿದೆ.
ಮುದ್ರಣ ದೋಷದಿಂದಾಗಿ ಪತ್ರದಲ್ಲಿ ತಪ್ಪು ಅಂಶ ನಮೂದಾಗಿದೆ. ಅ.19ರಂದು ವಿಶ್ವಹಿಂದೂ ಪರಿಷತ್ ಕರೆ ನೀಡಿರುವ 'ಸಂಕಲ್ಪ ದಿವಸ್'ಗೆ ಸಂಬಂಧಿಸಿದಂತೆ ಈ ಸಭೆ ಕರೆಯಲಾಗಿದ್ದು, ಮುದ್ರಣ ದೋಷದಿಂದಾಗಿ ಮಂದಿರ ಪುನರ್ ನಿರ್ಮಾಣ ಎಂದು ಪ್ರಕಟವಾಗಿದೆ ಎಂದು ಸ್ಪಷ್ಟನೆ ನೀಡಿದೆ.
ತಪ್ಪು ಸಂದೇಶ ಬರುವಂತೆ ಪತ್ರ ಸಿದ್ಧಪಡಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿಕೆ ನೀಡಿದೆ. ಆದರೆ, ಬಿಜೆಪಿ ಮಾತ್ರ ಇದು ಕಾಂಗ್ರೆಸ್, ಎಸ್‌ಪಿ ಮತ್ತು ಬಿಎಸ್‌ಪಿ ಜಾತ್ಯತೀತ ಶಕ್ತಿಗಳ ಒಕ್ಕೂಟದ ಕುತಂತ್ರ ಎಂದು ಆರೋಪಿಸಿದೆ.












Click it and Unblock the Notifications