Bakrid: ಬಕ್ರೀದ್ ಆಚರಣೆಗೆ ಉತ್ತರ ಪ್ರದೇಶದಲ್ಲಿ ಹೊಸ ರೂಲ್ಸ್: ರಸ್ತೆಗಳಲ್ಲಿ ನಮಾಜ್ ಮಾಡುವಂತಿಲ್ಲ, ಪ್ರಾಣಿ ಬಲಿಗೂ ಬ್ರೇಕ್
ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಬಕ್ರೀದ್ (ಈದ್ ಉಲ್-ಅಝ್ಹಾ) ಹಬ್ಬಕ್ಕಾಗಿ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿದೆ. ಹಬ್ಬದ ಆಚರಣೆಯ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ರಸ್ತೆಗಳ ಮೇಲೆ ನಮಾಜ್ ಮಾಡುವುದಾಗಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಬಲಿ (ಕುರ್ಬಾನಿ) ನೀಡುವುದಕ್ಕಾಗಲಿ ಅನುಮತಿ ನೀಡುವುದಿಲ್ಲ ಎಂದು ಯುಪಿ ಸರ್ಕಾರ ಸ್ಪಷ್ಟಪಡಿಸಿದೆ.
ರಸ್ತೆ ತಡೆದು ನಮಾಜ್ ಮಾಡುವಂತಿಲ್ಲ
ಈ ಬಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಉನ್ನತ ಮಟ್ಟದ ಆಡಳಿತ ಹಾಗೂ ಕಾನೂನು ಸುವ್ಯವಸ್ಥೆಯ ಪರಾಮರ್ಶನಾ ಸಭೆ ನಡೆಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಹಬ್ಬದ ಎಲ್ಲ ಧಾರ್ಮಿಕ ಆಚರಣೆಗಳು ಕಾನೂನು ಮತ್ತು ಸಾಂಪ್ರದಾಯಿಕ ಚೌಕಟ್ಟಿನೊಳಗೇ ನಡೆಯಬೇಕು ಎಂದು ಎಲ್ಲ ಜಿಲ್ಲಾಡಳಿತಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಿಎಂ ಯೋಗಿ ಆದಿತ್ಯನಾಥ್, ರಸ್ತೆಗಳ ಮೇಲೆ ಪ್ರಾರ್ಥನೆ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗುವುದು ಮತ್ತು ಅಗತ್ಯವಿದ್ದರೆ ಶಿಫ್ಟ್‌ಗಳ ಆಧಾರದ ಮೇಲೆ ಪ್ರಾರ್ಥನೆ ಸಲ್ಲಿಸಬೇಕು ಎಂದು ಭಕ್ತರಿಗೆ ತಿಳಿಸಿದ್ದರು. ಪ್ರಸ್ತುತ ಹೊಸ ಆದೇಶದ ಪ್ರಕಾರ, ಮಸೀದಿಗಳು ಮತ್ತು ಈದ್ಗಾ ಮೈದಾನಗಳಂತಹ ಸಾಂಪ್ರದಾಯಿಕ ಧಾರ್ಮಿಕ ಸ್ಥಳಗಳಲ್ಲಿ ಮಾತ್ರ ಹಬ್ಬದ ನಮಾಜ್ ಸಲ್ಲಿಸಲು ಅವಕಾಶವಿದ್ದು, ಯಾವುದೇ ಕಾರಣಕ್ಕೂ ರಸ್ತೆಗಳನ್ನು ಬ್ಲಾಕ್ ಮಾಡುವಂತಿಲ್ಲ ಎಂದು ಪೊಲೀಸರಿಗೆ ಸೂಚಿಸಿದ್ದಾರೆ.
ಪ್ರಾಣಿ ಬಲಿ ಹಾಗೂ ಮಾಂಸ ಮಾರಾಟಕ್ಕೆ ಕಠಿಣ ನಿಯಮ
ಅನಧಿಕೃತ ಅಥವಾ ಸಾರ್ವಜನಿಕ ಜಾಗಗಳಲ್ಲಿ ಪ್ರಾಣಿ ಬಲಿ ನೀಡುವಂತಿಲ್ಲ. ಕೇವಲ ಮೊದಲೇ ನಿಗದಿಪಡಿಸಿದ ಮತ್ತು ಸಾಂಪ್ರದಾಯಿಕವಾಗಿ ಅನುಮೋದಿಸಲ್ಪಟ್ಟ ಜಾಗಗಳಲ್ಲಿ ಮಾತ್ರವೇ ಬಲಿ ನೀಡಲು ಅವಕಾಶವಿರುತ್ತದೆ. ಅಲ್ಲದೆ ರಾಜ್ಯದಲ್ಲಿ ಯಾವುದೇ ಕಾನೂನುಬಾಹಿರ ಕಸಾಯಿಖಾನೆಗಳು ಕಾರ್ಯಾಚರಣೆ ನಡೆಸದಂತೆ ತೀವ್ರ ನಿಗಾ ಇಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಲೈಸೆನ್ಸ್ ಹೊಂದಿರುವ ಕಸಾಯಿಖಾನೆಗಳೂ ಸಹ ತಮ್ಮ ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚು ಪ್ರಾಣಿಗಳನ್ನು ಇಟ್ಟುಕೊಳ್ಳುವಂತಿಲ್ಲ ಎಂದು ಹೇಳಿದೆ. ಹಬ್ಬದ ದಿನಗಳಲ್ಲಿ ಮಾಂಸವನ್ನು ಬಹಿರಂಗವಾಗಿ ತೆರೆದ ಜಾಗದಲ್ಲಿ ಮಾರಾಟ ಮಾಡುವುದನ್ನು ತಡೆಯಲು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.
ಪ್ರಾಣಿ ಬಲಿಯ ನಂತರ ಉಳಿಯುವ ತ್ಯಾಜ್ಯ ಮತ್ತು ಅವಶೇಷಗಳನ್ನು ತಕ್ಷಣವೇ ವಿಲೇವಾರಿ ಮಾಡಲು ಸೂಕ್ತ ವ್ಯವಸ್ಥೆಯನ್ನು ಕೈಗೊಳ್ಳುವಂತೆ ಸ್ಥಳೀಯ ಸಂಸ್ಥೆಗಳು ಹಾಗೂ ಮಹಾನಗರ ಪಾಲಿಕೆಗಳಿಗೆ ಸರ್ಕಾರ ಆದೇಶಿಸಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಮತ್ತು ಯಾವುದೇ ರೀತಿಯ ಕೋಮು ಉದ್ವಿಗ್ನತೆ ಸೃಷ್ಟಿಯಾಗದಂತೆ ತಡೆಯಲು ಇಡೀ ಆಡಳಿತ ಯಂತ್ರ ಹದ್ದಿನಕಣ್ಣಿಡಬೇಕು ಎಂದು ಯೋಗಿ ಆದಿತ್ಯನಾಥ್ ಸೂಚನೆ ನೀಡಿದ್ದಾರೆ.
ಬಕ್ರೀದ್ ಹಬ್ಬದ ಹಿನ್ನೆಲೆ ಮತ್ತು ಆಚರಣೆ
ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ಹಾಗೂ ಪ್ರಮುಖ ಹಬ್ಬಗಳಲ್ಲಿ ಒಂದಾದ ಬಕ್ರೀದ್ ತ್ಯಾಗ ಮತ್ತು ಬಲಿದಾನದ ಸಂಕೇತವಾಗಿದೆ. ಅಲ್ಲಾಹನ ಮೇಲಿನ ಅಪಾರ ಭಕ್ತಿ ಹಾಗೂ ಆದೇಶಕ್ಕೆ ಬದ್ಧರಾಗಿ ಪ್ರವಾದಿ ಇಬ್ರಾಹಿಂ ಅವರು ತಮ್ಮ ಸ್ವಂತ ಪುತ್ರ ಇಸ್ಮಾಯಿಲ್‌ನನ್ನೇ ತ್ಯಾಗ ಮಾಡಲು ಸಿದ್ಧರಾದ ಐತಿಹಾಸಿಕ ಘಟನೆಯ ನೆನಪಿಗಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಧಾರ್ಮಿಕ ಗ್ರಂಥಗಳ ಪ್ರಕಾರ, ಪ್ರವಾದಿ ಇಬ್ರಾಹಿಂ ಅವರ ನಿಷ್ಠೆಯನ್ನು ಮೆಚ್ಚಿದ ಅಲ್ಲಾಹನು ಇಸ್ಮಾಯಿಲ್‌ನ ಪ್ರಾಣವನ್ನು ಉಳಿಸಿ, ಅವರ ಬದಲಿಗೆ ಪ್ರಾಣಿಯೊಂದನ್ನು ಬಲಿ ನೀಡಲು ಆದೇಶಿಸುತ್ತಾನೆ. ಅಂದಿನಿಂದ ಈ ಪವಿತ್ರ ದಿನದಂದು ಮುಸ್ಲಿಂ ಬಾಂಧವರು ಪ್ರಾಣಿ ಬಲಿ (ಕುರ್ಬಾನಿ) ನೀಡುವ ಮೂಲಕ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದಾರೆ.
ಈ ವರ್ಷದ ಬಕ್ರೀದ್ ದಿನಾಂಕ ಚಂದ್ರನ ದರ್ಶನದ ಆಧಾರದ ಮೇಲೆ ಇಸ್ಲಾಮಿಕ್ ಕ್ಯಾಲೆಂಡರ್‌ನ ದಿನಾಂಕಗಳು ನಿರ್ಧಾರವಾಗುತ್ತವೆ. ಈ ವರ್ಷ ನಿರೀಕ್ಷಿತ ಸಮಯಕ್ಕೆ 'ಧುಲ್ ಹಿಜ್ಜಾ' ಮಾಸದ ಚಂದ್ರ ದರ್ಶನವಾಗದ ಹಿನ್ನೆಲೆಯಲ್ಲಿ, ಭಾರತದ ಬಹುತೇಕ ಭಾಗಗಳಲ್ಲಿ 2026ರ ಮೇ 28ರ ಗುರುವಾರದಂದು ಸಡಗರದ ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತಿದೆ.













Click it and Unblock the Notifications