ಪಿಎಂ ಮೋದಿ ಕಟ್ಟಿಹಾಕಲು 48 ಗಂಟೆಯಲ್ಲಿ ಹೊಸ ಮೈತ್ರಿ ಘೋಷಣೆ?

Written By:
Subscribe to Oneindia Kannada

ನೆಹರೂ ಮತ್ತು ಗಾಂಧಿ ಕುಟುಂಬದ ಕರ್ಮಭೂಮಿ ಉತ್ತರಪ್ರದೇಶದ ರಾಜಕೀಯದಲ್ಲಿ ಶತಾಯಗತಾಯು ಮತ್ತೆ ಸುವರ್ಣಾಕ್ಷರ ಬರೆಯಲು ಕಾಂಗ್ರೆಸ್ ಸಾಧ್ಯವಾದ ಎಲ್ಲಾ ಪ್ರಯತ್ನಕ್ಕೂ ಬಾಗಿಲು ತೆರೆದಿಟ್ಟಿದೆ.

ಪೂರ್ವನಿಯೋಜಿತ 'ಯಾದವೀ ಕಲಹ' ಎನ್ನಲಾಗುತ್ತಿರುವ ರಾಜಕೀಯ ದಾಳದಲ್ಲಿ ಸದ್ಯದ ಮಟ್ಟಿಗೆ ಸಿಎಂ ಅಖಿಲೇಶ್ ಯಾದವ್ ಮೇಲೆ ಜನರ ಅನುಕಂಪ ತುಸು ಹೆಚ್ಚಾಗಿದೆಯಾದರೂ, ಅದು ವೋಟ್ ಬ್ಯಾಂಕ್ ಆಗಿ ಪರಿವರ್ತನೆಯಾಗಲು, ಮೋದಿ ಎನ್ನುವ ಹೆಸರು 'ಮೌಂಟ್ ಎವರೆಸ್ಟ್' ನಂತೆ ನಿಂತಿರುವುದು ಉತ್ತರಪ್ರದೇಶದ ರಾಜಕೀಯದಲ್ಲಿ ಬಹುಚರ್ಚಿತ ವಿಷಯ.

ಬಿಜೆಪಿ ಕೋಮುವಾದಿ ಎನ್ನುವ ಪಕ್ಷಗಳೇ ಅಧಿಕಾರಕ್ಕೆ ಮತ್ತೆ ಏರಲು ಜಾತಿ ಲೆಕ್ಕಾಚಾರದ ಹಿಂದೆ ಬಿದ್ದಿರುವುದರಿಂದ ಉತ್ತರಪ್ರದೇಶದ ರಾಜಕೀಯದಲ್ಲಿ ಹೊಸ ರಾಜಕೀಯ ಹೊಂದಾಣಿಕೆಯ ಸುದ್ದಿ ಮುಂದಿನ 48 ಗಂಟೆಯೊಳಗೆ ಅಧಿಕೃತ ಘೋಷಣೆಯಾಗುವ ಹಂತಕ್ಕೆ ಬಂದು ನಿಂತಿದೆ.

ಸದ್ಯ ಅಧಿಕಾರದಲ್ಲಿರುವ ಸಮಾಜವಾದಿ ಪಕ್ಷ, ಕಾಂಗ್ರೆಸ್ ಜೊತೆಗೆ ಮತ್ತು ಉತ್ತರಪ್ರದೇಶದ ಸ್ಥಳೀಯ ಪಕ್ಷವೊಂದರ ಜೊತೆ ಹೊಂದಾಣಿಕೆ ಮಾಡಿಕೊಂಡು ಬಿಜೆಪಿ ವಿರುದ್ದ ಕಣಕ್ಕಿಳಿಯುವ ಅಂತಿಮ ನಿರ್ಧಾರಕ್ಕೆ ಬಂದಿದೆ ಎನ್ನುವ ಖಚಿತ ಮಾಹಿತಿ ಲಭ್ಯವಾಗಿದೆ.

ಕೂಸು ಹುಟ್ಟುವ ಮುನ್ನವೇ ಕುಲಾವಿ ಎನ್ನುವಂತೆ ಸಮಾಜವಾದಿ ಪಕ್ಷದ ಜೊತೆಗಿನ ಮಾತುಕತೆಯ ವೇಳೆ ಉಪಮುಖ್ಯಮಂತ್ರಿ ಹುದ್ದೆ ತನಗೇ ಬೇಕೆಂದು ಕಾಂಗ್ರೆಸ್ ಪಟ್ಟು ಹಿಡಿದಿದ್ದು, ಎಸ್ಪಿ ವರಿಷ್ಠರು ಕಾಂಗ್ರೆಸ್ ಬೇಡಿಕೆಗೆ ಓಕೆ ಅಂದಿದ್ದಾರೆ ಎನ್ನಲಾಗುತ್ತಿದೆ. ಮುಂದೆ ಓದಿ..

ಪ್ರಶಾಂತ್ ಕಿಶೋರ್ ಐಡಿಯಾ

ಪ್ರಶಾಂತ್ ಕಿಶೋರ್ ಐಡಿಯಾ

ಸದ್ಯದ ಪರಿಸ್ಥಿತಿಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದರೆ ಮುಖಭಂಗ ಖಚಿತ ಎಂದು ಅರಿತಿರುವ ಕಾಂಗ್ರೆಸ್ ಪಕ್ಷಕ್ಕೆ, ಎಸ್ಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಐಡಿಯಾ ಕೊಟ್ಟಿದ್ದೇ ಪಕ್ಷದ ಪರವಾಗಿ ರಾಜಕೀಯ ತಂತ್ರಗಾರಿಕೆ ಹಣೆಯುತ್ತಿರುವ ಪ್ರಶಾಂತ್ ಕಿಶೋರ್ ಎನ್ನುವ ಮಾಹಿತಿಯಿದೆ.

ಲಾಲೂ, ನಿತೀಶ್

ಲಾಲೂ, ನಿತೀಶ್

ಕಾಂಗ್ರೆಸ್ ಮತ್ತು ಎಸ್ಪಿ ಮೈತ್ರಿಕೂಟದ ಜೊತೆ ಸ್ಥಳೀಯ ಪಕ್ಷವಾದ ಅಜಿತ್ ಸಿಂಗ್ ನೇತೃತ್ವದ ರಾಷ್ಟ್ರೀಯ ಲೋಕದಳ ಕೂಡಾ ಕೈಜೋಡಿಸುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆ ಮಹಾಮೈತ್ರಿಕೂಟದ ಲಾಲೂ ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾದಳ ಮತ್ತು ನಿತೀಶ್ ಕುಮಾರ್ ಅವರ ಜೆಡಿಯು ಕೂಡಾ ಬೆಂಬಲ ಸೂಚಿಸುವ ಸಾಧ್ಯತೆಯಿದೆ.

ನರೇಂದ್ರ ಮೋದಿ

ನರೇಂದ್ರ ಮೋದಿ

ನೋಟು ಬ್ಯಾನ್ ಎನ್ನುವ ಕ್ರಾಂತಿಕಾರಿ ನಿರ್ಧಾರದ ನಂತರ ಕರೆನ್ಸಿ ಮತ್ತು ಚಿಲ್ಲರೆ ಸಮಸ್ಯೆಯನ್ನು ಕೇಂದ್ರದ ಮೋದಿ ಸರಕಾರ ಪರಿಣಾಮಕಾರಿಯಾಗಿ ನಿಭಾಯಿಸಿದ್ದೇ ಆದಲ್ಲಿ, ಈ ಒಂದು ವಿಚಾರ ಉತ್ತರಪ್ರದೇಶದ ಎಲ್ಲಾ ಪಕ್ಷಗಳನ್ನು ಹಡೆಮುರಿ ಕಟ್ಟಲು ಸಾಕು ಎನ್ನುವ ಭೀತಿ ಎಲ್ಲಾ ಪಕ್ಷಗಳಲ್ಲಿ ಕಾಡುತ್ತಿದೆ.

ಮುಲಾಯಂ ಸಿಂಗ್

ಮುಲಾಯಂ ಸಿಂಗ್

ಇಂಡಿಯಾ ಟುಡೇ ವರದಿ ಮಾಡಿದ ಪ್ರಕಾರ ಈಗಾಗಲೇ ಎಸ್ಪಿ ಮತ್ತು ಕಾಂಗ್ರೆಸ್ ಮುಖಂಡರ ನಡುವೆ ಕೆಲವು ಸುತ್ತಿನ ಮಾತುಕತೆ ಮುಗಿದಿದ್ದು ಮಹಾಮೈತ್ರಿಕೂಟದ ಇತರ ಸದಸ್ಯರ ಮನವೊಲಿಸುವ ಜವಾಬ್ದಾರಿಯನ್ನು ಮುಲಾಯಾಂ ಸಿಂಗ್ ಅವರಿಗೆ ವಹಿಸಲಾಗಿದೆ.

ಹೊಸ ಮೈತ್ರಿ ಘೋಷಣೆ

ಹೊಸ ಮೈತ್ರಿ ಘೋಷಣೆ

ಕಾಂಗ್ರೆಸ್ ಜೊತೆಗಿನ ಹೊಂದಾಣಿಕೆಯ ಮೂಲಕ ನಾವು 300ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಜಯ ಸಾಧಿಸಿ ಮತ್ತೆ ಅಧಿಕಾರಕ್ಕೆ ಬರಲಿದ್ದೇವೆಂದು ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಈಗಾಗಲೇ ಹೇಳಿಕೆ ನೀಡಿರುವುದರಿಂದ, ಮೋದಿ ಸಡ್ಡು ಹೊಡೆಯಲು 48 ಗಂಟೆಯೊಳಗೆ ಹೊಸ ಮೈತ್ರಿ ಘೋಷಣೆಯಾಗಲಿದೆ ಎನ್ನುವುದು ರಾಜಕೀಯ ಪಂಡಿತರ ಲೆಕ್ಕಾಚಾರ ಮತ್ತು ರಾಷ್ಟ್ರೀಯ ಮಾಧ್ಯಮಗಳ ವರದಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
According to reports, the ruling Samajwadi Party in UP is most likely to collaborate with the Congress and the Rashtriya Lok Dal (RLD) in the upcoming elections. TV channels reported that SP chief Mulayam Singh Yadav most likely that an alliance will be announced in the next 48 hours.
Please Wait while comments are loading...