ನಿತಿನ್ ಗಡ್ಕರಿಗೂ ಬಂದಿತ್ತು ಪ್ರಧಾನಿ ಆಗುವ ಆಫರ್; ಯಾರಿಂದ?
ಸದ್ಯ ನರೇಂದ್ರ ಮೋದಿ ಅವರು ಭಾರತದ ಪ್ರಧಾನ ಮಂತ್ರಿಯಾಗಿ ಮೂರನೇ ಬಾರಿಗೆ ಕುರ್ಚಿ ಅಲಂಕರಿಸಿದ್ದಾರೆ. ಇದೇ ವೇಳೆ ಬಿಜೆಪಿಯ ಮತ್ತೊಬ್ಬ ಹಿರಿಯ ನಾಯಕರಾದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೂ ಪ್ರಧಾನಿಯಾಗುವ ಆಫರ್ ಬಂದಿತ್ತು ಎನ್ನುವ ವಿಚಾರ ಹೊರಬಿದ್ದಿದೆ. ಈ ಬಗ್ಗೆ ಖುದ್ದು ನಿತಿನ್ ಗಡ್ಕರಿ ಅವರೇ ಮಾತನಾಡಿರುವುದು ಎಲ್ಲರ ಗಮನ ಸೆಳೆದಿದೆ.
ನಾಗ್ಪುರದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಗಡ್ಕರಿ, ನೀವು ಪ್ರಧಾನಿ ಆಗುವುದಾದರೆ ನಾವು ನಿಮಗೆ ಬೆಂಬಲ ಕೊಡುತ್ತೇವೆ ಎಂದು ಕಳೆದ ಲೋಕಸಭಾ ಚುನಾವಣೆ ವೇಳೆ ರಾಜಕೀಯ ನಾಯಕರೊಬ್ಬರು ನನಗೆ ಆಫರ್ ನೀಡಿದ್ದರು ಎಂದು ಹೇಳಿದ್ದಾರೆ. ಆದರೆ, ನಾನು ಆ ಆಫರ್ ತಿರಸ್ಕರಿಸಿದ್ದೆ. ನಾನು ಯಾವುದೇ ಹುದ್ದೆಗಾಗಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.

ನನಗೆ ಆ ಘಟನೆ ಇಂದಿಗೂ ನೆನಪಿನಲ್ಲಿದೆ. ಆದರೆ, ನನಗೆ ಆಫರ್ ನೀಡಿದವರ ಹೆಸರನ್ನು ನಾನು ಇಲ್ಲಿ ಬಹಿರಂಗಪಡಿಸುವುದಿಲ್ಲ. ವ್ಯಕ್ತಿಯೊಬ್ಬರು ನೀವು ಪ್ರಧಾನಿಯಾಗಲು ಇಚ್ಛಿಸಿದರೆ, ನಾವು ನಿಮ್ಮನ್ನು ಬೆಂಬಲಿಸುವುದಾಗಿ ನನಗೆ ಹೇಳಿದ್ದರು ಎಂದು ಗುಟ್ಟು ಕಾಯ್ದುಕೊಂಡಿದ್ದಾರೆ.
ಆ ವ್ಯಕ್ತಿಗೆ ಉತ್ತರಿಸಿದ್ದ ನಾನು, ನೀವು ನನ್ನನ್ನು ಏಕೆ ಪ್ರಧಾನಿಯಾಗಲು ಬೆಂಬಲಿಸಬೇಕು? ನಾನು ನಿಮ್ಮ ಬೆಂಬಲವನ್ನು ಏಕೆ ಪಡೆಯಬೇಕು? ಎಂದು ಅವರನ್ನು ಕೇಳಿದ್ದೆ ಎಂದೂ ಗಡ್ಕರಿ ಹೇಳಿದ್ದಾರೆ. ಪ್ರಧಾನಿ ಹುದ್ದೆ ಅಲಂಕರಿಸುವುದು ನನ್ನ ಜೀವನದ ದೊಡ್ಡ ಗುರಿಯಲ್ಲ. ನಾನು ನನ್ನ ತತ್ವಗಳಿಗೆ, ಬಿಜೆಪಿ ಪಕ್ಷಕ್ಕೆ ನಿಷ್ಠೆಯಿಂದ ಇದ್ದೇನೆ. ನಾನು ನಂಬಿರುವ ತತ್ವಗಳೇ ನನಗೆ ಮುಖ್ಯ. ನಾನು ಯಾವುದಕ್ಕೂ ರಾಜಿಯಾಗಲ್ಲ ಎಂದಿದ್ದಾರೆ.
ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಮತ್ತು ಮಾಧ್ಯಮಗಳೆಂಬ ನಾಲ್ಕು ಆಧಾರ ಸ್ತಂಭಗಳು ಸರಿಯಾಗಿ ಜವಾಬ್ದಾರಿ ನಿರ್ವಹಿಸಿದಾಗ ಮಾತ್ರ ಪ್ರಜಾಪ್ರಭುತ್ವದ ಪರಿಕಲ್ಪನೆ ಯಶಸ್ವಿಯಾಗುತ್ತದೆ ಎಂದೂ ಗಡ್ಕರಿ ಹೇಳಿದ್ದಾರೆ.

ಗಡ್ಕರಿ ಅವರ ಹೇಳಿಕೆ ಬೆನ್ನಲ್ಲೇ ಪ್ರಧಾನಿ ಆಗಲು ಆಫರ್ ಕೊಟ್ಟ ನಾಯಕ ಯಾರಿರಬಹುದು? ಮೋದಿ ಅವರೇ ಪ್ರಧಾನಿ ಎಂದು ನಿರ್ಧರಿಸಲಾಗಿದ್ದರೂ, ಬಿಜೆಪಿಯಲ್ಲೇ ಮತ್ತೊಬ್ಬರು ಪ್ರಧಾನಿ ಆಗಬೇಕೆನ್ನುವ ಗುಂಪು ಇತ್ತಾ? ಎನ್ನುವ ಅನುಮಾನಗಳು ಹುಟ್ಟುಕೊಂಡಿವೆ. ಈ ಬಗ್ಗೆ ದೇಶಾದ್ಯಂತ ದೊಡ್ಡ ಚರ್ಚೆಗಳು ನಡೆಯಲಾರಂಭಿಸಿವೆ.
2019 ಹಾಗೂ 2024ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಹುದ್ದೆಗೆ ಸಂಭಾವ್ಯರ ಪಟ್ಟಿಯಲ್ಲಿ ನಿತಿನ್ ಗಡ್ಕರಿ ಅವರು ಹೆಸರು ಕೇಳಿಬಂದಿತ್ತು. ಕೆಲವು ಸಮೀಕ್ಷೆಯಲ್ಲೂ ಪ್ರಧಾನಿ ಹುದ್ದೆಗೆ ಅಮಿತ್ ಶಾ, ಯೋಗಿ ಆದಿತ್ಯನಾಥ್ ಅವರ ನಂತರ ನಿತಿನ್ ಗಡ್ಕರಿ ಅವರೇ ಮೂರನೇ ಸೂಕ್ತವಾದ ವ್ಯಕ್ತಿ ಎಂದು ಹೇಳಲಾಗಿತ್ತು.
ಆದರೆ, ಗಡ್ಕರಿ ಎಂದಿಗೂ ನಾನು ಪ್ರಧಾನಿ ಆಗಬೇಕು ಎಂದು ಬಹಿರಂಗವಾಗಿ ಇಂಗಿತ ವ್ಯಕ್ತಪಡಿಸಿರಲಿಲ್ಲ. ಭಾರತದ ಪ್ರಧಾನಿ ಹುದ್ದೆ ಮೋದಿ ಅವರಂತಹ ಸಮರ್ಥರ ಕೈಯಲ್ಲಿ ಭದ್ರವಾಗಿದೆ ಎಂದೇ ಹೇಳಿದ್ದರು. ಈಗಲೂ ಕೂಡ ಅವರು ಪ್ರಧಾನಿ ಸ್ಥಾನದ ಮೇಲೆ ತನಗೆ ಯಾವುದೇ ಆಸೆ ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications