ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಬೆಳಗಾವಿಯಿಂದ ಜೀವ ಬೆದರಿಕೆ ಕರೆ: ಪತ್ತೆ ಕಾರ್ಯದಲ್ಲಿ ಪೊಲೀಸರು ಯಶಸ್ವಿ
ಬೆಂಗಳೂರು, ಜನವರಿ 15: ಕೇಂದ್ರ ಸಚಿವರೊಬ್ಬರಿಗೆ ಕರ್ನಾಟಕ ರಾಜ್ಯದ ಜೈಲಲ್ಲಿರುವ ಖೈದಿಯೊಬ್ಬ ಜೀವ ಬೆದರಿಕೆ ಹಾಕಿರುವ ಘಟನೆ ಶನಿವಾರ ನಡೆದಿದೆ.
ಹೌದು, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಮಹಾರಾಷ್ಟ್ರದ ನಾಗಪುರ ಕಚೇರಿಗೆ ದೂರವಾಣಿ ಕರೆ ಮಾಡಿ ಜೀವ ಬೆದರಿಕೆ ಹಾಕಲಾಗಿತ್ತು. ಈ ಕುರಿತು ತಕ್ಷಣವೇ ಪ್ರಕರಣ ದಾಖಲಿಸಿಕೊಂಡ ನಾಗಪುರ ಪೊಲೀಸರು ತನಿಖೆ ಆರಂಭಿಸಿದ್ದು, ಸತ್ಯ ಬಯಲಾಗಿದೆ.
ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಮಂಗಳೂರು ಮೂಲದ ಖೈದಿ ಜಯೇಶ್ ಪೂಜಾರಿ ಎಂಬಾತ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಜೀವ ಬೆದರಿಕೆ ಹಾಕಿರುವುದು ಪೊಲೀಸರಿಗೆ ತಿಳಿದು ಬಂದಿದೆ. ಬೆದರಿಕೆ ಹಾಕಿ ಖೈದಿ ಜಯೇಶ್ ಪೂಜಾರಿ ಇಂಟರ್‌ನೆಟ್ ಸಹಾಯದಿಂದ ಆನ್‌ಲೈನ್‌ಲ್ಲಿ ಮೊದಲು ಕೇಂದ್ರ ಸಚಿವರ ಮೊಬೈಲ್ ನಂಬರ್ ಸಂಗ್ರಹಿಸಿದ್ದಾರೆ. ತದನಂತರ ಸುಮಾರು ಮೂರು ಬಾರಿ ಜೀವ ಬೆದರಿಕೆ ಕರೆ ಮಾಡಿದ್ದಾನೆ ಎಂದು ತನಿಖೆ ಕೈಗೆತ್ತಿಕೊಂಡ ಪೊಲೀಸರು ತಿಳಿಸಿದ್ದಾರೆ.

ಇಂದು ಖೈದಿ ನಾಗಪುರಕ್ಕೆ ಶಿಫ್ಟ್?
ಸದ್ಯ ನಾಗಪುರ ಪೊಲೀಸರು ಖೈದಿ ಜಯೇಶ್ ಪೂಜಾರಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ನಾಗಪುರದ ಕೇಂಧ್ರ ಸಚಿವರ ಕಚೇರಿಗೆ ಕರೆ ಮಾಡಲು ಖೈದಿ ಬಳಸಿದ್ದ ಮೊಬೈಲ್ ಗಾಗಿ ಪೊಲೀಸರು ಎಷ್ಟೇ ಪ್ರಯತ್ನಿಸಿದರೂ ಪತ್ತೆ ಮಾಡಲು ಸಾಧ್ಯವಾಗಿಲ್ಲ. ಅದರ ಪತ್ತೆ ಕಾರ್ಯ ಪೊಲೀಸರು ಮುಂದುವರೆಸಿದ್ದಾರೆ.
ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಿ ಭಾನುವಾರ ನಾಗಪುರ ಪೊಲೀಸರು ಜಯೇಶ್ನನ್ನು ವಿಚಾರಣೆಗೆ ಕರೆದೊಯ್ಯಲಿದ್ದಾರೆ ಎನ್ನಲಾಗಿದೆ. ಈ ಖೈದಿ ಕೊಲೆ ಸೇರಿದಂತೆ ಒಟ್ಟು ಮೂರು ಪ್ರಕರಣಗಳಲ್ಲಿ ಬಂಧಿಸಿ ಆತನನ್ನು ಜೈಲಿಗೆ ಕಳುಹಿಸಲಾಗಿತ್ತು. ಅಲ್ಲಿದ್ದುಕೊಂಡೆ ಇಂತಹ ಕೃತ್ಯ ಎಸಗಿದ್ದಾನೆ ಇದು ಜೈಲಿನ ಆಡಳಿತ ಮೇಲೆ ಹಲವು ಅನುಮಾನ ಮೂಡಲು ಕಾರಣವಾಗಿದೆ.
ಮೊಬೈಲ್ ಫೋನಿನಿಂದರೆ ಕೇಂದ್ರ ಸಚಿವರಿಗೆ ಬೆದರಿಕೆ ಕರೆ ಹೋಗಿದ್ದರ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಜಯೇಶ್ ಪೂಜಾರಿ ಪತ್ನಿಗೆ ಕರೆ ಮಾಡುವುದಾಗಿ ಹೇಳಿ ಮೊಬೈಲ್ ಪಡೆದಿದ್ದಾರೆ. ಅದು ಯಾರ ಮೊಬೈಲ್, ಅದು ಈಗ ಎಲ್ಲಿದೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡು ಕೊಂಡಳ್ಳಲು ಮಹಾರಾಷ್ಟ್ರ ಮತ್ತು ಬೆಳಗಾವಿ ಪೊಲೀಸರಿಂದ ತನಿಖೆ ಮುಂದುವರೆದಿದೆ. ಭಾನುವಾರವೂ ಮೊಬೈಲ್, ಇನ್ನಿತರ ಸಾಕ್ಷ್ಯಕ್ಕಾಗಿ ತನಿಖೆ ತೀವ್ರಗೊಳಿಸಲಾಗಿದೆ.

ಪೊಲೀಸರಿಗೇ ಜೀವ ಬೆದರಿಕೆ
ಇದೇ ಬೆಳಗಾವಿಯ ಹಿಂಡಲಗಾ ಜೈಲಿನ ಖೈದಿಗಳು ಈ ಹಿಂದೊಮ್ಮೆ ಉತ್ತರ ವಲಯ ಪೊಲೀಸ್ ಅಧಿಕಾರಿಗಳಿಗೇ ಜೀವ ಬೆದರಿಕೆ ಹಾಕಿದ್ದರು. ಐಜಿಪಿ ಅಲೋಕ್ ಕುಮಾರ್‌ಗೆ ಖೈದಿಗಳಿಂದ ಜೀವ ಬೆದರಿಕೆ ಕರೆ ಸ್ವೀಕರಿಸಿದ್ದರು. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ವಹಿಸಿದರೂ ಸಹ ಜೈಲಿನಲ್ಲಿ ಮೊಬೈಲ್ ಬಳಕೆ ಸಂಪೂರ್ಣವಾಗಿ ನಿಯಂತ್ರಿಸುವಲ್ಲಿ ಪೊಲೀಸ್ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಜೈಲಿಗೆ ಇತ್ತೀಚೆಗಷ್ಟೇ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸಹ ಭೇಟಿ ನೀಡಿದ್ದರು.












Click it and Unblock the Notifications