PF Withdraw: ಉದ್ಯೋಗಿಗಳಿಗೆ ಸಿಹಿಸುದ್ದಿ, ಪಿಎಫ್ ತುರ್ತು ವಿತ್ ಡ್ರಾ ಮಿತಿ ಹೆಚ್ಚಳ
ನವದೆಹಲಿ, ಸೆಪ್ಟೆಂಬರ್ 18: ಭಾರತದ ಕಾರ್ಮಿಕ ಸಚಿವಾಲಯ ಇಪಿಎಫ್‌ಒ ನಿಯಮಗಳಲ್ಲಿ ಹಲವು ಬದಲಾವಣೆಗಳನ್ನು ತಂದಿದೆ. ತುರ್ತು ಸಂದರ್ಭದಲ್ಲಿ ಪಿಎಫ್ ಹಿಂಪಡೆಯುವ ಮಿತಿಯನ್ನು ಸಹ ಏರಿಕೆ ಮಾಡಲಾಗಿದ್ದು, ಇದರಿಂದಾಗಿ ಕೋಟ್ಯಾಂತರ ಉದ್ಯೋಗಿಗಳಿಗೆ ಅನುಕೂಲವಾಗಲಿದೆ. ತುರ್ತು ಸಂದರ್ಭದಲ್ಲಿ ಪಿಎಫ್ ಹಿಂಪಡೆಯುವ ಮಿತಿಯನ್ನು ಏರಿಕೆ ಮಾಡಬೇಕು ಎಂದು ಹಲವು ದಿನಗಳಿಂದ ಸರ್ಕಾರದ ಮುಂದೆ ಬೇಡಿಕೆ ಇಡಲಾಗಿತ್ತು.
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವೀಯಾ ಈ ಕುರಿತು ಮಾಹಿತಿ ನೀಡಿದ್ದಾರೆ. "ತುರ್ತು ಸಂದರ್ಭದಲ್ಲಿ ಉದ್ಯೋಗಿಗಳು ಪಿಎಫ್ ಹಿಂಪಡೆಯುವ ಮಿತಿಯನ್ನು 1 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಇದು 50,000 ರೂ. ತನಕ ಇತ್ತು" ಎಂದು ಹೇಳಿದರು.

"ಹೊಸ ಡಿಜಿಟಲ್ ವ್ಯವಸ್ಥೆಯ ಜೊತೆಗೆ ಕಾರ್ಮಿಕ ಇಲಾಖೆ ಪಿಎಫ್ ನಿಯಮಗಳಲ್ಲಿ ಹಲವು ಬದಲಾವಣೆಗಳನ್ನು ತಂದಿದೆ. ಉದ್ಯೋಗಿ ಭವಿಷ್ಯ ನಿಧಿ ಚಂದಾದರರು, ಸರ್ಕಾರಿ ನಿವೃತ್ತಿ ಉಳಿತಾಯ ವ್ಯವಸ್ಥಾಪಕರು ಈಗ ತುರ್ತು ಸಂದರ್ಭದಲ್ಲಿ 1 ಲಕ್ಷದ ತನಕ ಪಿಎಫ್ ಹಿಂಪಡೆಯಬಹುದು" ಎಂದರು.
"ಕೇಂದ್ರ ಸರ್ಕಾರದ ಅಧಿಕಾರಕ್ಕೆ ಬಂದು 100 ದಿನಗಳು ತುಂಬಿದ ಹಿನ್ನಲೆಯಲ್ಲಿ ಹೊಸ ಘೋಷಣೆ ಮಾಡಲಾಗುತ್ತಿದೆ. ಮದುವೆ, ವೈದ್ಯಕೀಯ ಚಿಕಿತ್ಸೆ ಇತ್ಯಾದಿ ತುರ್ತು ವೆಚ್ಚಕ್ಕಾಗಿ ಜನರು ಸಾಮಾನ್ಯವಾಗಿ ಪಿಎಫ್ ಹಣವನ್ನು ಪಡೆಯುತ್ತಾರೆ. ನಾವು ಒಂದು ಬಾರಿಗೆ ತುರ್ತು ಅಗತ್ಯಕ್ಕೆ ಪಡೆಯುವ ಹಣದ ಮಿತಿಯನ್ನು 1 ಲಕ್ಷಕ್ಕೆ ಏರಿಕೆ ಮಾಡಿದ್ದೇವೆ" ಎಂದು ಸಚಿವರು ಘೋಷಣೆ ಮಾಡಿದರು.
"ಪಿಎಫ್ ಹಿಂಪಡೆಯುವ ಮೊತ್ತವನ್ನು ಹೆಚ್ಚಿಸುವಂತೆ ಹಿಂದಿನಿಂದಲೂ ಉದ್ಯೋಗಿಗಳು ಬೇಡಿಕೆ ಇಡುತ್ತಿದ್ದರು. ದಿನ ಕಳೆದಂತೆ ಅಗತ್ಯ ವಸ್ತುಗಳ ಬೆಲೆಗಳು ಏರಿಕೆಯಾಗುತ್ತಿವೆ. ವೆಚ್ಚಗಳು ಸಹ ಹೆಚ್ಚಳವಾಗುತ್ತಿರುವುದರಿಂದ ಹೊಸ ಮಿತಿಯನ್ನು ಪರಿಚಯಿಸಲಾಗಿದೆ" ಎಂದು ಸಚಿವರು ವಿವರಣೆ ನೀಡಿದರು.
6 ತಿಂಗಳು ಕಳೆದಿರಬೇಕು: ಪಿಎಫ್ ವಿತ್ ಡ್ರಾ ಮಿತಿ ಏರಿಕೆ ಹೊಸದಾಗಿ ಕೆಲಸಕ್ಕೆ ಸೇರಿದ ಉದ್ಯೋಗಿಗಳಿಗೂ ಅನ್ವಯವಾಗುತ್ತದೆ. ಹೊಸದಾಗಿ ಕೆಲಸಕ್ಕೆ ಸೇರಿ ಕಂಪನಿಯಲ್ಲಿ 6 ತಿಂಗಳು ಕಳೆದಿದ್ದರೆ ಅವರು ಸಹ ತುರ್ತು ಸಂದರ್ಭದಲ್ಲಿ 1 ಲಕ್ಷ ರೂ. ತನಕ ವಿತ್ ಡ್ರಾ ಮಾಡಬಹುದು ಎಂದು ಕಾರ್ಮಿಕ ಸಚಿವಾಲಯ ಹೇಳಿದೆ.
ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ಪಿಎಫ್ ವಿತ್ ಡ್ರಾ ಮಿತಿ ಹೆಚ್ಚಳದ ನಿಯಮಗಳು ಹಳೆಯದಾಗಿತ್ತು. ಹೊಸ ಕೆಲಸಕ್ಕೆ ಸೇರಿದ ಉದ್ಯೋಗಿ ತುರ್ತು ಸಂದರ್ಭದಲ್ಲಿ ಪಿಎಫ್ ಹಣ ವಿತ್ ಡ್ರಾ ಮಾಡಲು ಅವಕಾಶ ಇರಲಿಲ್ಲ. ಆದ್ದರಿಂದ ಉದ್ಯೋಗಿಗಳಿಗೆ ಅನುಕೂಲವಾಗುವಂತೆ ಹಲವು ನಿಯಮಗಳನ್ನು ಬದಲಾವಣೆ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಇಪಿಎಫ್‌ನಿಂದ ಸುಮಾರು 10 ಲಕ್ಷಕ್ಕೂ ಅಧಿಕ ನಿವೃತ್ತರಿಗೆ ಸಹಾಯಕವಾಗಲಿದೆ. ಇದು ಅವರ ಜೀವನಪೂರ್ತಿಯ ಉಳಿತಾಯದ ಹಣವಾಗಿದೆ. ಸಂಘಟಿತ ವಲಯದಲ್ಲಿ ಕೆಲಸ ಮಾಡುವ ನೌಕರರು ತುರ್ತು ಸಂದರ್ಭದಲ್ಲಿ ವಿಶೇಷವಾಗಿ ವಿವಾಹ, ವೈದ್ಯಕೀಯ ವೆಚ್ಚಕ್ಕಾಗಿ ಹೆಚ್ಚು ಪಿಎಫ್ ಹಣವನ್ನು ವಿತ್ ಡ್ರಾ ಮಾಡುತ್ತಾರೆ ಎಂದು ಸಚಿವಾಲಯ ಹೇಳಿದೆ.
2024ನೇ ಆರ್ಥಿಕ ವರ್ಷದಲ್ಲಿ ಇಪಿಎಫ್‌ಗೆ ಕೇಂದ್ರ ಸರ್ಕಾರ 8.25ರಷ್ಟು ಬಡ್ಡಿದರವನ್ನು ನಿಗದಿ ಮಾಡಿದೆ. ಕಾಲ ಕಾಲಕ್ಕೆ ಬಡ್ಡಿದರವನ್ನು ಬದಲಾವಣೆ ಮಾಡಲಾಗುತ್ತಿದ್ದು, ಉದ್ಯೋಗಿಗಳಿಗೆ ಅನುಕೂಲ ಮಾಡಿಕೊಡಲು ವ್ಯವಸ್ಥೆಯನ್ನು ಸಂಪೂರ್ಣ ಡಿಜಿಟಲೀಕರಣ ಮಾಡಲಾಗಿದೆ.












Click it and Unblock the Notifications