ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿಗೆ ಜಿಎಸ್‌ಟಿ ನೆಟ್‌ವರ್ಕ್
ನವದೆಹಲಿ, ಜುಲೈ 09; ಕೇಂದ್ರ ಸರ್ಕಾರ ಸರಕು ಮತ್ತು ಸೇವೆಗಳ ತೆರಿಗೆ ನೆಟ್‌ವರ್ಕ್ ಅನ್ನು ಪಿಎಂಎಲ್‌ಎ ಅಡಿ ತರಲು ಅಧಿಸೂಚನೆ ಹೊರಡಿಸಿದೆ. ಇದರಿಂದಾಗಿ ಜಿಎಸ್‌ಟಿ ಅಡಿ ಸಂಗ್ರಹವಾಗುವ ಮಾಹಿತಿಯನ್ನು ಹಂಚಿಕೊಳ್ಳಲು ಅವಕಾಶ ಸಿಕ್ಕಿದಂತಾಗಿದೆ.
ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ಜಿಎಸ್‌ಟಿಎನ್‌ನಲ್ಲಿ ಸಂಗ್ರಹವಾಗುವ ಮಾಹಿತಿಯನ್ನು ಹಂಚಿಕೊಳ್ಳಬಹುದು. ಕೇಂದ್ರ ಹಣಕಾಸು ಸಚಿವಾಲಯ ಈ ಕುರಿತು ಆದೇಶ ಹೊರಡಿಸಿದೆ.

ಹಣಕಾಸು ಸಚಿವಾಲಯದ ಮಾಹಿತಿ ಪ್ರಕಾರ 2006ರ ಕಾನೂನಿಗೆ ಇದರ ಅನ್ವಯ ತಿದ್ದುಪಡಿ ತರಲಾಗುತ್ತದೆ. ಇನ್ನು ಮುಂದೆ ಜಿಎಸ್‌ಟಿ ತೆರಿಗೆ ಸಂಗ್ರದಲ್ಲಿ ಅಕ್ರಮಗಳು ನಡೆದರೆ ಆ ಕುರಿತು ತನಿಖೆ ನಡೆಸಲು ಮಾಹಿತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಮತ್ತು ಇತರ ತನಿಖಾ ಸಂಸ್ಥೆಗಳ ನಡುವೆ ಹಂಚಿಕೊಳ್ಳಬಹುದು.
ಈ ಹಿಂದಿನ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಯ ಸೆಕ್ಷನ್ 66ಕ್ಕೆ ತಿದ್ದುಪಡಿ ತರಲಾಗುತ್ತದೆ. ಇದರಿಂದಾಗಿ ಮಾಹಿತಿ ಹಂಚಿಕೆಗೆ ಅನುವು ಮಾಡಿಕೊಡಲಾಗುತ್ತದೆ. ಕಳೆದ ವರ್ಷದ ನವೆಂಬರ್‌ನಲ್ಲಿ ಕೇಂದ್ರ ಸರ್ಕಾರ ಜಿಎಸ್‌ಟಿಎನ್ ವ್ಯಾಪ್ತಿಗೆ 15 ಸಂಸ್ಥೆಗಳನ್ನು ತಂದಿತ್ತು. ಇವು ಇಡಿ ಜೊತೆ ಮಾಹಿತಿ ಹಂಚಿಕೊಳ್ಳಬಹುದು.
ನಕಲಿ ನೋಂದಣಿಗಳಿಗೆ ಕಡಿವಾಣ; ಜಿಎಸ್‌ಟಿಎನ್ ಅನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ತರಲು ಹಲವು ಪ್ರಮುಖ ಕಾರಣಗಳಿವೆ. ಪ್ರಮುಖವಾಗಿ ಜಿಎಸ್‌ಟಿ ಸಂಗ್ರಹದಲ್ಲಿ ನಡೆಯುತ್ತಿರುವ ವಂಚನೆ, ನಕಲಿ ನೋಂದಣಿ ತಡೆಗಟ್ಟುವುದು ಇವುಗಳಲ್ಲಿ ಸೇರಿದೆ. ಈಗ ತೆರಿಗೆ ಅಧಿಕಾರಿಗಳು ತನಿಖೆ ನಡೆಸಲು ಸಹ ಅನುಕೂಲವಾಗಿದೆ.
ಜಿಎಸ್‌ಟಿ ನಕಲಿ ನೋಂದಣಿ ವಿರುದ್ಧ ಮೇ ತಿಂಗಳಿನಿಂದ ವಿಶೇಷ ಅಭಿಯಾನ ಕೈಗೊಳ್ಳಲಾಗಿತ್ತು. ಸುಮಾರು 69,600 ನೋಂದಣಿಗಳನ್ನು ಇದುವರೆಗೂ ಪರಿಶೀಲನೆ ಮಾಡಲಾಗಿದ್ದು, ಸುಮಾರು 17 ಸಾವಿರ ನೋಂದಣಿ ನಕಲಿ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಕೇಂದ್ರ ಸರ್ಕಾರ ಹಿಂದಿನ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಜಿಎಸ್‌ಟಿ ತೆರಿಗೆ ವಂಚನೆಯನ್ನು ಗಂಭೀರ ಅಪರಾಧ ಎಂದು ಪರಿಗಣಿಸಿ, ಕಠಿಣವಾದ ಜೈಲು ಶಿಕ್ಷೆ, ದಂಡ ಮೊತ್ತವನ್ನು ವಿಧಿಸಲು ಅನುಕೂಲವಾಗುವಂತೆ ಕಾನೂನು ರೂಪಿಸುವ ಕುರಿತು ಚರ್ಚೆಯನ್ನು ನಡೆಸಿತ್ತು.
ಈ ಕುರಿತು ಹಣಕಾಸು ಸಚಿವಾಲಯದ ಅಡಿ ಬರುವ ಕಂದಾಯ ಇಲಾಖೆಯು ಸಿಇಐಬಿಗೆ ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಿತ್ತು. ರಾಜ್ಯಗಳ ಮಟ್ಟದಲ್ಲಿಯೇ ಜಿಎಸ್‌ಟಿ ತೆರಿಗೆ ವಂಚನೆ ಹೆಚ್ಚು ಅಂದು ಅಂದಾಜಿಸಲಾಗಿದ್ದು, ಹೊಸ ಕಾನೂನಿನಿಂದ ವಂಚನೆ ಬಗ್ಗೆ ತನಿಖೆ ನಡೆಸಲು ಸಹಾಯಕವಾಗಲಿದೆ.












Click it and Unblock the Notifications