Union Budget 2025: ವಕ್ಫ್ ತಿದ್ದುಪಡಿ ಮಸೂದೆ ಮಂಡನೆ, ಅಧಿವೇಶನದ ಹೈಲೆಟ್ಸ್ ಇಲ್ಲಿದೆ
Union Budget 2025: ಶುಕ್ರವಾರ (ಜನವರಿ 31)ರಿಂದ ಕೇಂದ್ರ ಬಜೆಟ್ ಅಧಿವೇಶನ ಪ್ರಾರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೂರನೇ ಅವಧಿಯ ಎರಡನೇ ಪೂರ್ಣ ಪ್ರಮಾಣದ ಬಜೆಟ್ ಇದಾಗಿದೆ. ಮಿತ್ರಪಕ್ಷಗಳೊಂದಿಗೆ ಸೇರಿ ಬಜೆಟ್ ಮಂಡನೆ ಮಾಡಲಾಗುತ್ತಿದ್ದು. ಈ ಬಾರಿಯ ಬಜೆಟ್ ಹಲವು ಕಾರಣಕ್ಕೆ ವಿಶೇಷವಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಆರ್ಥಿಕ ಸಮೀಕ್ಷಾ ವರದಿಯನ್ನು ಮಂಡಿಸಿದ್ದಾರೆ.
ಬಜೆಟ್ ಅಧಿವೇಶನ ಎರಡು ಹಂತಗಳಲ್ಲಿ ನಡೆಯಲಿದ್ದು. ಇದರಲ್ಲಿ ಹಲವು ಪ್ರಮುಖ ಕಾನೂನು, ಮಸೂದೆ ಹಾಗೂ ಬಜೆಟ್‌ನ ಬಗ್ಗೆ ಸುದೀರ್ಘವಾದ ಚರ್ಚೆ ನಡೆಯಲಿದೆ. ಕೇಂದ್ರ ಸರ್ಕಾರದ ಬಜೆಟ್‌ನ ಮೇಲೆ ದೇಶದ ಮಧ್ಯಮ ವರ್ಗದವರು ಹಾಗೂ ತೆರಿಗೆ ಪಾವತಿ ಮಾಡುವವರು ಸೇರಿದಂತೆ ಎಲ್ಲಾ ವರ್ಗದ ಜನರಿಂದ ಭಾರೀ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಬಜೆಟ್ ಅಧಿವೇಶನ ಎಲ್ಲಿಯ ವರೆಗೆ ನಡೆಯಲಿದೆ. ಯಾವೆಲ್ಲ ಹೊಸ ಕಾನೂನು ಜಾರಿಯಾಗಲಿದೆ ಹಾಗೂ ಇದು ಜನರ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಕೇಂದ್ರ ಬಿಜೆಪಿ ಸರ್ಕಾರವು 2025 -26ನೇ ಆರ್ಥಿಕ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಅನ್ನು ಶನಿವಾರ ಫೆಬ್ರವರಿ 1ಕ್ಕೆ ಮಂಡನೆ ಮಾಡಲಿದೆ. ಇನ್ನು ಜನವರಿ 31ರಿಂದ ಏಪ್ರಿಲ್ 4ರವರೆಗೆ 2 ಹಂತದಲ್ಲಿ ಬಜೆಟ್ ಅಧಿವೇಶನಗಳು ನಡೆಯಲಿವೆ. ಮೊದಲ ಹಂತದ ಅಧಿವೇಶನವು ಜನವರಿ 31ರಿಂದ ಫೆಬ್ರವರಿ 13 ವರೆಗೆ ನಡೆಯಲಿದೆ. ಎರಡನೇ ಹಂತದಲ್ಲಿ ಮಾರ್ಚ್ 10 ರಿಂದ ಏಪ್ರಿಲ್ 4 ವರೆಗೆ ಅಧಿವೇಶನ ನಡೆಯಲಿದೆ. ಈ ಅವಧಿಯಲ್ಲಿ ಬಜೆಟ್ ವಿಷಯಗಳ ಮೇಲೆ ಚರ್ಚೆಯಾಗಲಿದೆ.
ಈ ಬಾರಿಯ ಬಜೆಟ್ ಅಧಿವೇಶನದ ಸಮಯದಲ್ಲಿ ಬ್ಯಾಂಕಿಂಗ್ ನಿಯಮಗಳನ್ನು ಪರಿಷ್ಕರಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಅದರ ಮೂಲಕ ಬ್ಯಾಂಕಿಂಗ್ ಕಾನೂನುಗಳು (ತಿದ್ದುಪಡಿ) ಮಸೂದೆ 2024, ಭಾರತೀಯ ರೈಲ್ವೆ ಕಾರ್ಯಾಚರಣೆ ವ್ಯವಸ್ಥೆಯನ್ನು ಸುಧಾರಿಸುವ ಹಾಗೂ ಅಭಿವೃದ್ಧಿಪಡಿಸುವ ರೈಲ್ವೆ (ತಿದ್ದುಪಡಿ) ಮಸೂದೆ 2024 ಹಾಗೂ ದೇಶಾದ್ಯಂತ ವಿಪತ್ತು ಸಂದರ್ಭದಲ್ಲಿ ಸಹಾಯ / ವಿಪತ್ತು ನಿರ್ವಹಣಾ (ತಿದ್ದುಪಡಿ) ಮಸೂದೆ 2024 ಸೇರಿದಂತೆ ಹಲವಾರು ಪ್ರಮುಖ ಮಸೂದೆಗಳನ್ನು ಈ ಬಾರಿಯ ಅಧಿವೇಶನದಲ್ಲಿ ಮಂಡಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇನ್ನು ಇದರೊಂದಿಗೆ ವಕ್ಫ್ (ತಿದ್ದುಪಡಿ) ಮಸೂದೆ 2024 ಮತ್ತು ಧಾರ್ಮಿಕ ದತ್ತಿಗಳ ನಿರ್ವಹಣೆಯ ಸುಧಾರಣೆಯ ಮುಸಲ್ಮಾನ್ ವಕ್ಫ್ (ರದ್ದತಿ) ಮಸೂದೆ 2024 ಎನ್ನುವುದು ಸೇರಿದಂತೆ ಹಲವು ಮಸೂದೆಗಳನ್ನು ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.
ವಕ್ಫ್ ತಿದ್ದುಪಡಿ ಮಸೂದೆ: ಕಳೆದ ಒಂದು ವರ್ಷದಿಂದಲೂ ದೇಶದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ಕೇಂದ್ರ ಬಿಜೆಪಿ ಮಂಡನೆ ಮಾಡುವ ಸಾಧ್ಯತೆ ಇದೆ. ವಕ್ಫ್ ತಿದ್ದುಪಡಿ ಮಸೂದೆಗೆ ಈಗಾಗಲೇ ಮುಸ್ಲಿಮ್ ಸಮುದಾಯ ಹಾಗೂ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಆದರೆ ಈಗಾಗಲೇ ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ವಕ್ಫ್ ಆಸ್ತಿ ವಿವಾದ ಆಗಿರುವುದರಿಂದ ಈ ಬಾರಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ ಮಾಡುವುದಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಹೇಳಲಾಗತ್ತಿದೆ.












Click it and Unblock the Notifications