Union Budget 2024: ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕದ ಪ್ರಮುಖ ನಿರೀಕ್ಷೆಗಳೇನು?
Union Budget 2024: ಇಂದು (ಜುಲೈ 23) ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಮೂಲಕ ಅವರು ಸತತ 7ನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸಿದ ದಾಖಲೆಯನ್ನು ಮುಡಿಗೇರಿಸಿಕೊಳ್ಳಲಿದ್ದಾರೆ. ಹಾಗೆಯೇ ಈ ಬಜೆಟ್‌ನಲ್ಲಿ ಹಲವರು ಹಲವು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಹಾಗಾದರೆ ಪ್ರಮುಖವಾಗಿ ಕರ್ನಾಟಕದ ನಿರೀಕ್ಷೆಗಳೇನು ಎಂದು ಇಲ್ಲಿ ತಿಳಿಯಿರಿ.
ರಾಜ್ಯದಲ್ಲಿ ವಿವಿಧ ಹಂತಗಳಲ್ಲಿರುವ ನೀರಾವರಿ ಯೋಜನೆಗಳಿಗೆ ಅನುಮತಿ ಮತ್ತು ಅನುದಾನ, ಹೊಸ ಮಾರ್ಗಗಳ ನಿರ್ಮಾಣ ಮತ್ತು ಇರುವ ಮಾರ್ಗಗಳ ಮೇಲ್ದರ್ಜೆಗೆ ಕ್ರಮ, ಬೆಂಗಳೂರಿನ ಸಂಚಾರ ದಟ್ಟಣೆ ನಿರ್ವಹಣೆಗೆ ಅಗತ್ಯ ಇರುವ ಉಪನಗರ ರೈಲು ಹಾಗೂ ವರ್ತುಲ ರೈಲು ಯೋಜನೆ ಹಲವು ನಿರೀಕ್ಷೆಗಳಿವೆ. ಇನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಬಜೆಟ್ ಮೇಲೆ ಕರ್ನಾಟಕ ರಾಜ್ಯ ಭಾರೀ ನಿರೀಕ್ಷೆಯನ್ನಿಟ್ಟುಕೊಂಡಿದೆ.

ರೈಲ್ವೇ ಯೋಜನೆ: ಮಂಗಳೂರಿನ ರೈಲ್ವೇ ಮಾರ್ಗಗಳು ದಕ್ಷಿಣ ರೈಲ್ವೇ, ಕೊಂಕಣ ರೈಲ್ವೇ ಮತ್ತು ನೈಋತ್ಯ ರೈಲ್ವೇಗಳಲ್ಲಿ ಹಂಚಿ ಹೋಗಿವೆ. ಇವುಗಳನ್ನು ಒಂದೆಡೆಗೆ ತಂದು ಮಂಗಳೂರು ರೈಲ್ವೇ ವಿಭಾಗವನ್ನು ಸೃಷ್ಟಿಸಬೇಕು. ಇಲ್ಲವೇ ಮಂಗಳೂರಿನ ರೈಲ್ವೇ ಜಾಲವನ್ನು ನೈಋತ್ಯ ರೈಲ್ವೇಗೆ ಸೇರಿಸಬೇಕೆಂಬ ನಿರೀಕ್ಷೆಗಳು ಈ ಬಜೆಟ್‌ನಲ್ಲಿ ಪ್ರಸ್ತಾವ ಆಗುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.
ಇನ್ನು ಬೆಂಗಳೂರು ವಿಭಾಗದಂತೆ ಕಲಬುರಗಿಯನ್ನೂ ವಿಭಾಗವಾಗಿ ಘೋಷಿಸಿ, ಕಾರ್ಯನಿರ್ವಹಣೆಗೆ ಚಾಲನೆ ನೀಡಬೇಕು. ಬೆಂಗಳೂರು- ಮೀರಜ್ ನಡುವೆ ವಿದ್ಯುದೀಕರಣಗೊಳ್ಳಬೇಕಿದೆ. ಬೆಂಗಳೂರು-ಹಾಸನ ನಡುವೆ ವಿದ್ಯುದ್ದೀಕರಣಗೊಂದೆ ಆದರೂ, ಹಾಸನ ಯಾರ್ಡ್ ಇನ್ನೂ ಬಾಕಿಯಿದೆ.
ಗದಗ-ವಾಡಿ ಹೊಸ ಮಾರ್ಗ?: ಗಿಣಿಗೆರ-ಗಂಗಾವತಿ-ರಾಯಚೂರು, ತುಮಕೂರು- ಚಿತ್ರದುರ್ಗ- ದಾವಣಗೆರೆ, ತುಮಕೂರು- ಮಧುಗಿರಿ- ರಾಯದುರ್ಗ, ದಾವಣಗೆರೆ- ಬೆಳಗಾವಿ, ಗದಗ- ವಾಡಿಯಲ್ಲಿ ಹೊಸ ರೈಲು ಮಾರ್ಗಗಳ ನಿರ್ಮಾಣವಾಗಬೇಕಿದೆ. ಅಲ್ಲದೆ, ರಾಜ್ಯದ ಹಲವು ರೈಲ್ವೇ ಮಾರ್ಗಗಳ ವಿದ್ಯುದೀಕರಣ, ಜೋಡಿ ಮಾರ್ಗವಾಗಿ ಮೇಲ್ದರ್ಜೆಗೆ ಏರಿಸುವ ಬೇಡಿಕೆಗಳಿಗೆ ಒಪ್ಪಿಗೆ, ವಿವಿಧ ಹಂತದಲ್ಲಿರುವ ಕಾಮಗಾರಿಗಳನ್ನು ಶೀಘ್ರ ಮುಕ್ತಾಯಗೊಳಿಸಲು ತಕ್ಕ ಅನುದಾನವನ್ನು ನೀಡಬೇಕಿದೆ. ರಾಜ್ಯದವರೇ ಆದ ವಿ.ಸೋಮಣ್ಣ ರೈಲ್ವೇ ಖಾತೆಯ ರಾಜ್ಯ ಸಚಿವರಾಗಿರುವುದು ರಾಜ್ಯಕ್ಕೆ ಸಿಗಲಿದೆಯೇ ಭರ್ಜರಿ ಕೊಡುಗೆ.
ಬೆಂಗಳೂರು ವರ್ತುಲ ರೈಲು: ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಹಾಗೂ ಅಭಿವೃದ್ಧಿಯ ದೂರದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು ನಗರದಲ್ಲಿ 23,000 ಕೋಟಿ ರೂಪಾಯಿ ವೆಚ್ಚದ ವರ್ತುಲ ರೈಲ್ವೇ ಯೋಜನೆಗೆ ಸಂಬಂಧಿಸಿದ ನೀಲನಕ್ಷೆ ತಯಾರಿಸಲಾಗಿದೆ. 287 ಕಿಲೋ ಮೀಟರ್ ಉದ್ದದ ಈ ರೈಲು ಯೋಜನೆ ನಿಡುವಂದ-ವಡ್ಡರಹಳ್ಳಿ-ದೇವನಹಳ್ಳಿ-ಮಾಲೂರು-ಹೀಲಲಿಗೆ-ಹೆಜ್ಜಾಲ-ಸೋಲೂರು-ನಿಡುವಂದ ನಿಲ್ದಾಣಗಳ ಮೂಲಕ ಬೆಂಗಳೂರು ನಗರದ ಪ್ರಮುಖ ರೈಲ್ವೇ ಕೊಂಡಿಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಈ ಯೋಜನೆಗೆ 2.300 ಕೋಟಿ ರೂಪಾಯಿ ವೆಚ್ಚವಾಗುವ ಅಂದಾಜಿದ್ದು, ಅನುದಾನದ ನಿರೀಕ್ಷೆ ಇದೆ.
ಬೆಂಗಳೂರು ಉಪನಗರ ರೈಲು: ಕುಂಟುತ್ತಾ ಸಾಗುತ್ತಿರುವ ಬೆಂಗಳೂರು ಉಪನಗರ ರೈಲ್ವೇ ಯೋಜನೆಗೆ ವೇಗ ನೀಡಲು ಅಗತ್ಯವಾದ ಅನುದಾನಕ್ಕೆ ರಾಜ್ಯ ಕಾಯುತ್ತಿದೆ. ನಗರದ ಟ್ರಾಫಿಕ್ ದಟ್ಟಣೆ ನಿಯಂತ್ರಿಸಲಯ ಅಗತ್ಯ ಆಗಿರುವ ಈ ಯೋಜನೆಗೆ 2023ರಲ್ಲಿ ಪ್ರಧಾನ ಮಂತ್ರಿ ಶಂಕುಸ್ಥಾಪನೆ ಮಾಡಿದ್ದರು. 4 ಮಾರ್ಗಗಳಲ್ಲಿ 64 ನಿಲ್ದಾಣಗಳನ್ನು ಹೊಂದಿರುವ 149.34 ಕಿಲೋ ಮೀಟರ್ ಉದ್ದದ ಈ ರೈಲ್ವೇ ಜಾಲಕ್ಕೆ 15,767 ಕೋಟಿ ರೂಪಾಯಿ ವೆಚ್ಚದ ಅಂದಾಜಿದೆ.
ಇನ್ನು ಬೆಂಗಳೂರು ಮೆಟ್ರೋದ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ಪ್ರತಿ ಮೆಟ್ರೋ ಕಾಮಗಾರಿ ನಿಗದಿತ ಸಮಯಕ್ಕಿಂತ ತಡವಾಗಿ ಮುಕ್ತಾಯ ಆಗುತ್ತಿದೆ. ಸದ್ಯ ಸಾಗುತ್ತಿರುವ ಏರ್‌ಪೋರ್ಟ್ ಲೈನ್, ಕಾಳೇನ ಅಗ್ರಹಾರ-ನಾಗವಾರ ಕಾಮಗಾರಿಗೆ ಅನುದಾನದ ಜೊತೆ ಮೆಟ್ರೋ ಹಂತ-3ರ ಯೋಜನೆಗೆ 15,000 ಕೋಟಿ ರೂಪಾಯಿ ಪ್ರಸ್ತಾವದ ನಿರೀಕ್ಷೆ ಇದೆ.
ನೀರಾವರಿ ಯೋಜನೆಗಳು: ಪ್ರಮುಖವಾಗಿ ಭದ್ರಾ ಮೇಲ್ದಂಡೆ ಯೋಜನೆಯಿಂದ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಮತ್ತು ದಾವಣಗೆರೆ ಜಿಲ್ಲೆಯ 2,25,525 ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಒದಗಲಿದೆ. 29.90 ಟಿಎಂಸಿಯಷ್ಟು ಅಂತರ್ಜಲ ಭರ್ತಿಗೆ ನೆರವಾಗಲಿದೆ. 2023-24ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಈ ಯೋಜನೆಗೆ ಕೇಂದ್ರ ಸರಕಾರ 5,300 ಕೋಟಿ ರೂಪಾಯಿ ಆರ್ಥಿಕ ನೆರವು ಘೋಷಿಸಿದ್ದರೂ ಹಣ ಬಿಡುಗಡೆಯಾಗಿಲ್ಲ. ಈ ಬಾರಿ ಬಿಡುಗಡೆಯಾಗುವ ನಿರೀಕ್ಷೆಯಿದೆ.












Click it and Unblock the Notifications