ಎಚ್ಚರ.. ಎಚ್ಚರ..! ಹೊಸ ಹಾದಿ ಹಿಡಿದ ಸೈಬರ್ ವಂಚಕರು... Phishing Scam
ಸೈಬರ್ ಕಳ್ಳರು ಅಮಾಯಕರನ್ನೇ ಟಾರ್ಗೆಟ್ ಮಾಡಿ, ಮೋಸ ಮಾಡಿ ಹಣ ದೋಚುತ್ತಾರೆ. ಜಗತ್ತಿನ ಮೂಲೆ ಮೂಲೆಯಲ್ಲೂ ಇದೇ ರೀತಿ ಸೈಬರ್ ವಂಚಕರ ಹಾವಳಿ ಹೆಚ್ಚಾಗಿದೆ. ಅದರಲ್ಲೂ ಡಿಜಿಟಲ್ ಕ್ರಾಂತಿ ನಡೆಯುತ್ತಿರುವ ಭಾರತದಲ್ಲಿ ಸೈಬರ್ ಕಳ್ಳರು ಪ್ರತಿನಿತ್ಯ ಹಾವಳಿ ಮುಂದುವರಿಸುತ್ತಿದ್ದಾರೆ. ಈ ರೀತಿ ಇದ್ದಾಗಲೇ ಭಾರತದಲ್ಲಿ ಸೈಬರ್ ವಂಚಕರು ರಂಗೋಲಿ ಕೆಳಗೆ ತೂರಲು ಮುಂದಾಗಿದ್ದು ಹೀಗೆಲ್ಲಾ ನಡೆಯುವಾಗಲೇ ಮತ್ತೊಂದು ಸ್ಫೋಟಕ ವಿಚಾರ ಬಯಲಾಗಿದೆ.
ಫಿಶಿಂಗ್ ವಂಚನೆ ಜಾಲ ನಿಮ್ಮ ಇ-ಮೇಲ್ ಒಳಗೆ ಮಾತ್ರವಲ್ಲ ಬೇರೆ ಬೇರೆ ಮೂಲದಲ್ಲೂ ಇದೀಗ ಬೆರೆತು ಹೋಗಿದೆ. ಇ-ಮೇಲ್ ಒಳಗಿನ ಸ್ಪ್ಯಾಮ್ ಫೋಲ್ಡರ್ ಹೊರತಾಗಿ ಸೈಬರ್ ಅಪರಾಧಿಗಳು ವಿಶ್ವಾಸಾರ್ಹ ಕಂಪನಿಗಳ ರೀತಿ ಕಾಣುವ ಅಂದದ ವೆಬ್‌ಸೈಟ್ಸ್, ನಕಲಿ ಪೋರ್ಟಲ್ ಮತ್ತು ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕವೂ ನುಗ್ಗುತ್ತಿದ್ದಾರೆ. ರಿವಾರ್ಡ್ ಪಾಯಿಂಟ್ಸ್, ಶಾಪಿಂಗ್ ವೋಚರ್ ಅಥವಾ ಸೀಮಿತ ಅವಧಿಯ ಹೂಡಿಕೆ ವಿಚಾರ ಮುಂದೆ ಇಟ್ಟುಕೊಂಡು ಸಾಮಾನ್ಯರನ್ನು ತಮ್ಮತ್ತ ಆಕರ್ಷಿಸಿ ಮೋಸ ಮಾಡುವ ಜಾಲ ದಿಢೀರ್ ಅಲರ್ಟ್ ಆಗಿದೆ. ಒಂದೇ ಒಂದು ಕ್ಲಿಕ್ ಮೂಲಕವೇ ಜನರನ್ನು ಮೋಸ ಮಾಡಿರುವ ಸೈಬರ್ ಅಪರಾಧಿಗಳ ವಿಚಾರ ಬಯಲಾಗಿದ್ದು, ಕಳೆದ ಕೆಲ ತಿಂಗಳುಗಳಲ್ಲಿ ಈ ರೀತಿಯ ಹಲವಾರು ಆಘಾತಕಾರಿ ಪ್ರಕರಣ ಬಯಲಿಗೆ ಬಂದಿರುವುದು ಸಮಸ್ಯೆಯ ಪ್ರಮಾಣವನ್ನು ಎತ್ತಿ ತೋರಿಸಿದೆ. ಹೀಗಿದ್ದಾಗ ತಕ್ಷಣ ಸ್ಪಂದಿಸಿದ ಗೃಹ ವ್ಯವಹಾರಗಳ ಸಚಿವಾಲಯ (MHA) ಸಾರ್ವಜನಿಕರ ರಕ್ಷಣೆಗೆ ಸಲಹೆ, ಸಹಾಯವಾಣಿ ಮತ್ತು ಜಾಗೃತಿ ಅಭಿಯಾನ ಕೈಗೊಂಡು ತ್ವರಿತವಾಗಿ ಹೆಜ್ಜೆ ಹಾಕಿದೆ.

ಸಿಕಂದರಾಬಾದ್‌ನ ಹಿರಿಯ ನಾಗರಿಕರೊಬ್ಬರಿಗೆ ಇತ್ತೀಚೆಗೆ, ಇದೇ ರೀತಿಯಾಗಿ ವಂಚನೆ ಮಾಡಿದ್ದರು ಸೈಬರ್ ವಂಚಕರು. ಇಂಡಿಯನ್ ಆಯಿಲ್ ರಿವಾರ್ಡ್ ಪಾಯಿಂಟ್ಸ್ ಅವಧಿ ಮುಗಿಯಲಿದೆ ಎಂಬ ರೀತಿ ಲಿಂಕ್ ಕಳುಹಿಸಿದ್ದ ಸೈಬರ್ ವಂಚಕರು, 399 ರೂಪಾಯಿ ವೋಚರ್ ನೀಡುವ ಆಮಿಷ ತೋರಿದ್ದರು. ನಕಲಿ ವೆಬ್‌ಸೈಟ್ ಮೂಲಕ 399 ರೂಪಾಯಿ ವೋಚರ್ ಆಸೆಯನ್ನು ತೋರಿಸಿ, ಸಿಕಂದರಾಬಾದ್‌ನ ಹಿರಿಯ ನಾಗರಿಕರೊಬ್ಬರಿಗೆ 1.28 ಲಕ್ಷ ರೂಪಾಯಿ ವಂಚಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು.
11 ಲಕ್ಷ ರೂಪಾಯಿ ವಂಚನೆ
ಹೈದರಾಬಾದ್ ನಗರದಲ್ಲೂ ಇದೇ ರೀತಿ ಘಟನೆಗಳು ವರದಿ ಆಗಿವೆ, ಹೈದರಾಬಾದ್‌ನಲ್ಲಿ ಇತ್ತೀಚೆಗಷ್ಟೇ ಇಬ್ಬರು ಉದ್ಯೋಗ ಸಂಬಂಧಿತ ಫಿಶಿಂಗ್ ಹಗರಣಗಳಲ್ಲಿ ಭಾರಿ ದೊಡ್ಡ ಪ್ರಮಾಣದಲ್ಲಿ ಹಣವನ್ನು ಕಳೆದುಕೊಂಡಿದ್ದಾರೆ. ವಂಚಕರು ಟೆಲಿಗ್ರಾಮ್ ಮತ್ತು ವಾಟ್ಸಾಪ್ ಮೂಲಕ ನೇಮಕಾತಿ ಮಾಡುವವರ ರೀತಿ ನಟನೆ ಮಾಡಿದ್ದು, ಪ್ರಿಪೇಯ್ಡ್ ಉದ್ಯೋಗ & ನಂಬಿಕೆ ಬೆಳೆಸಲು ಸಣ್ಣ ಪ್ರಮಾಣದಲ್ಲಿ ಆರಂಭಿಕ ಪಾವತಿ ಮಾಡಿದ್ದಾರೆ. ಆದರೆ ಆ ನಂತರ ದೊಡ್ಡ ಮೊತ್ತವನ್ನು ನಕಲಿ ಖಾತೆಗಳಿಗೆ ವರ್ಗಾಯಿಸಲು ಹೇಳಿ ಮೋಸ ಮಾಡಿದ್ದಾರೆ, ಈ ರೀತಿಯಾಗಿ ಸುಮಾರು 11 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ.
ಗೃಹ ವ್ಯವಹಾರಗಳ ಸಚಿವಾಲಯದ ಮಹತ್ವದ ಹೆಜ್ಜೆ
ಹೀಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸೈಬರ್ ಬೆದರಿಕೆ ಗಂಭೀರತೆ ಗುರುತಿಸಿರುವ ಗೃಹ ಸಚಿವಾಲಯ ಮಹತ್ವದ ಹೆಜ್ಜೆ ಇಟ್ಟಿದೆ. ತಮ್ಮ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C)ದ ಮೂಲಕ ದೇಶದ ಮೂಲೆ ಮೂಲೆಯಲ್ಲೂ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ. ಸಹಾಯವಾಣಿ ಸಂಖ್ಯೆ 1930 ಮೂಲಕ ಅಥವಾ cybercrime.gov.in ವೆಬ್‌ಸೈಟ್ ಮೂಲಕ ದೂರು ಸಲ್ಲಿಸಲು ಸುಲಭವಾದ ವ್ಯವಸ್ಥೆ ಕಲ್ಪಿಸಿದೆ MHA. ತಕ್ಷಣವೇ ದೂರುದಾರರು ಮಾಹಿತಿ ನೀಡಿದರೆ ವಂಚಕರ ವಿರುದ್ಧ ಶೀಘ್ರವೇ ಕ್ರಮ ಕೈಗೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ. ಆ ಮೂಲಕ ಸಾರ್ವಜನಿಕರ ಸಮಸ್ಯೆ ತ್ವರಿತವಾಗಿ ಈಗ ಬಗೆಹರಿಸಲು ವ್ಯವಸ್ಥೆ ಮಾಡಲಾಗಿದೆ. ಹಾಗೂ ಇದರ ಜೊತೆಯಲ್ಲೇ ಅನುಮಾನಾಸ್ಪದ ವೆಬ್‌ಸೈಟ್, ಸೋಷಿಯಲ್ ಮೀಡಿಯಾ ಲಿಂಕ್ ಅಥವಾ ಫೋನ್ ನಂಬರ್ ಕಂಡುಬಂದರೆ cybercrime.gov.in ವೆಬ್‌ಸೈಟ್‌ನಲ್ಲಿ ಇರುವ "ಚೆಕ್ & ರಿಪೋರ್ಟ್ ಸಸ್ಪೆಕ್ಟ್" ಟ್ಯಾಬ್‌ನಲ್ಲಿ ವರದಿ ಮಾಡಲು ಕೂಡ ವ್ಯವಸ್ಥೆ ಮಾಡಲಾಗಿದೆ.












Click it and Unblock the Notifications