ನಿರ್ಮಾಣ ಹಂತದಲ್ಲಿದ್ದ ಬೃಹತ್ ಸೇತುವೆ ಕುಸಿತ: ಗಂಗೆ ಪಾಲಾದ 1,710 ಕೋಟಿ ಮೌಲ್ಯದ ಸೇತುವೆ
ಬಿಹಾರದಲ್ಲಿ ಗಂಗಾನದಿಗೆ ಅಡ್ಡಲಾಗಿ ಕಟ್ಟಲಾಗುತ್ತಿದ್ದ ಬೃಹತ್ ಸೇತುವೆ ಕುಸಿದು ಬಿದ್ದಿದೆ. ಸೇತುವೆ ಕುಸಿದು ಬೀಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. 2014ರಲ್ಲಿ ಸೇತುವೆ ಉದ್ಘಾಟನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು, ಸುಲ್ತಂಗಂಜ್ ಮತ್ತು ಖಗಾರಿಯಾವನ್ನು ಈ ಸೇತುವೆ ಸಂಪರ್ಕಿಸುತ್ತದೆ.
ಆದರೆ, ಘಟನೆಯಲ್ಲಿ ಯಾರಾದರೂ ಗಾಯಗೊಂಡಿದ್ದಾರೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. 1,710 ಕೋಟಿ ಅಂದಾಜು ವೆಚ್ಚದ 3,160 ಮೀಟರ್ ಉದ್ದದ ನಾಲ್ಕು ಪಥದ ಕೇಬಲ್ ತಂಗುದಾಣ ಸೇತುವೆಯ ಜೊತೆಗೆ ಅಪ್ರೋಚ್ ರಸ್ತೆಯ ನಿರ್ಮಾಣಕ್ಕೆ ಸಿಎಂ ನಿತೀಶ್ ಕುಮಾರ್ ಫೆಬ್ರವರಿ 23, 2014 ರಂದು ಅಡಿಪಾಯ ಹಾಕಿದ್ದರು.

ಈ ವರ್ಷದ ಏಪ್ರಿಲ್ತಿಂಗಳಿನಲ್ಲಿ ಸುರಿದ ಭಾರಿ ಮಳೆಯ ಪರಿಣಾಮ ಸೇತುವೆಗೆ ಹಾನಿಯಾಗಿತ್ತು, 2 ವರ್ಷಗಳ ಹಿಂದೆ ಕೂಡ ಸೇತುವೆ ಒಂದು ಭಾಗ ಕುಸಿದಿತ್ತು ಎಂದು ವರದಿಯಾಗಿದೆ.
#Bihar a portion of under construction bridge over Ganga river collapsed today. The Aguanhighat Sultanganj bridge will connect Khagaria and Bhagalpur districts. pic.twitter.com/7DLTQszso7
— All India Radio News (@airnewsalerts) June 4, 2023
ಮಳೆಯಿಂದಾಗಿ ಸೇತುವೆಗೆ ಹಾನಿಯಾದಾಗಲೇ ಕಳಪೆ ಕಾಮಗಾರಿ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಆದರೆ ಸೇತುವೆ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಯಾವೊಬ್ಬ ಅಧಿಕಾರಿಯಾಗಲಿ, ಗುತ್ತಿಗೆದಾರರಾಗಲಿ ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದ ಕಾರಣದಿಂದಾಗಿ ನಿರ್ಮಾಣ ಹಂತದಲ್ಲೇ ಸೇತುವೆ ಕುಸಿದು ಗಂಗೆಯ ಪಾಲಾಗಿದೆ.
ಕಳಪೆ ಕಾಮಗಾರಿಗಳ ಬಗ್ಗೆ ಹಲವು ವರದಿಗಳು
2022ರ ಡಿಸೆಂಬರ್ ತಿಂಗಳಿನಲ್ಲಿ, ಬೇಗುಸರಾಯ್‌ನಲ್ಲಿ ಬುರ್ಹಿ ಗಂಡಕ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸೇತುವೆಯ ಒಂದು ಭಾಗ ಕುಸಿದ ಬಗ್ಗೆ ವರದಿಯಾಗಿತ್ತು. ಸೇತುವೆಯ 2-3 ಕಂಬಗಳು ಉರುಳಿದ್ದು, ಸೇತುವೆಯ ಒಂದು ಭಾಗ ಕುಸಿಯಲು ಕಾರಣವಾಗಿತ್ತು. ಅದಕ್ಕೂ ಕೆಲವು ದಿನಗಳ ಮೊದಲು ನಳಂದ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆಯೊಂದು ಮುರಿದುಬಿದ್ದಿತ್ತು. ಘಟನೆಯಲ್ಲಿ ಕಾರ್ಮಿಕನೊಬ್ಬ ಮೃತಪಟ್ಟು ಇಬ್ಬರು ಕಾರ್ಮಿಕರು ಗಾಯಗೊಂಡಿದ್ದರು.
ಕಿಶನ್‌ಗಂಜ್ ಮತ್ತು ಸಹರ್ಸಾ ಜಿಲ್ಲೆಗಳಲ್ಲಿಯೂ ಉದ್ಘಾಟನೆಗೆ ಮುನ್ನ ನಿರ್ಮಾಣ ಹಂತದಲ್ಲಿದ್ದ ಸೇತುವೆಗಳು ಕುಸಿದ ಬಗ್ಗೆ ವರದಿಯಾಗಿತ್ತು. ಇನ್ನು ಬಿಹಾರದಲ್ಲಿ ಕಳಪೆ ಕಾಮಗಾರಿಗಳನ್ನು ನೋಡಿರುವ ನಾಗರಿಕರು ನಿತೀಶ್ ಕುಮಾರ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.












Click it and Unblock the Notifications