Ujjain Rape Case: 'ಅವಳು ನನ್ನ ಮಗುವಾಗಿರಬಹುದು'- ಆರೋಪಿಗೆ ಮರಣದಂಡನೆ ವಿಧಿಸಿ- ತಂದೆ ಭಾವುಕ ಮಾತು
ಉಜ್ಜಯಿನಿ ಸೆಪ್ಟೆಂಬರ್ 30: ಉಜ್ಜಯಿನಿಯಲ್ಲಿ 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧಿತನ ತಂದೆ ತನ್ನ ಮಗನಿಗೆ ಮರಣದಂಡನೆ ವಿಧಿಸುವಂತೆ ಒತ್ತಾಯಿಸಿದ್ದಾರೆ. ಈ ಪ್ರಕರಣದಲ್ಲಿ ಆಟೋ ರಿಕ್ಷಾ ಚಾಲಕ ಭರತ್ ಸೋನಿ ಎಂಬಾತನನ್ನು ಬಂಧಿಸಲಾಗಿದೆ. ಈತನ ತಂದೆ ಸದ್ಯ ಮಾದ್ಯಮ ಹೇಳಿಕೆಯನ್ನು ನೀಡಿದ್ದು ಆರೋಪಿ ಮಗನಿಗೆ ಮರಣದಂಡನೆ ವಿಧಿಸುವಂತೆ ಒತ್ತಾಯಿಸಿದ್ದಾರೆ.
"ಇದು ನಾಚಿಕೆಗೇಡಿನ ಕೃತ್ಯ. ನಾನು ಅವನನ್ನು ಭೇಟಿ ಮಾಡಲು ಆಸ್ಪತ್ರೆಗೆ ಹೋಗಿಲ್ಲ, ನಾನು ಪೊಲೀಸ್ ಠಾಣೆ ಅಥವಾ ನ್ಯಾಯಾಲಯಕ್ಕೂ ಹೋಗುವುದಿಲ್ಲ. ನನ್ನ ಮಗ ಅಪರಾಧ ಮಾಡಿದ್ದಾನೆ, ಆದ್ದರಿಂದ ಅವನನ್ನು ಗಲ್ಲಿಗೇರಿಸಬೇಕು" ಎಂದು ಆರೋಪಿ ಆಟೋ ಚಾಲಕನ ತಂದೆ ಹೇಳಿಕೆ ನೀಡಿದ್ದಾರೆ.

ಜೊತೆಗೆ ಯಾವುದೇ ವಕೀಲರು ನ್ಯಾಯಾಲಯದಲ್ಲಿ ಆತನ ಪರವಾಗಿ ವಾದಿಸಬಾರದು ಎಂದು ಸ್ಥಳೀಯ ವಕೀಲರ ಸಂಘ ಮನವಿ ಮಾಡಿದೆ. ಪ್ರತಿಪಕ್ಷ ಕಾಂಗ್ರೆಸ್ ಈ ಘಟನೆಯ ಬಗ್ಗೆ ಮಧ್ಯಪ್ರದೇಶದ ಬಿಜೆಪಿ ಸರ್ಕಾರವನ್ನು ಗುರಿಯಾಗಿಸಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಪ್ರಕರಣದಲ್ಲಿ ಮೌನತಾಳಿರುವುದನ್ನು ಕಾಂಗ್ರೆಸ್ ಪ್ರಶ್ನಿಸಿದೆ.
ಕೆಲ ದಿನಗಳ ಹಿಂದೆ ಅತ್ಯಾಚಾರಕ್ಕೊಳಗಾದ 12 ವರ್ಷ ವಯಸ್ಸಿನ ಬಾಲಕಿ ಅರೆ ಬೆತ್ತಲೆಯಲ್ಲಿ ಸಹಾಯಕ್ಕಾಗಿ ಬೇಡುತ್ತಾ ಅಲೆದಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ರಕ್ತಸ್ರಾವದೊಂದಿಗೆ ಗಾಯಗೊಂಡ ಸ್ಥಿತಿಯಲ್ಲಿ ನಗರದ ಬೀದಿಗಳಲ್ಲಿ ಬಾಲಕಿ ಓಡಾಡುತ್ತಿರುವುದು ಕಂಡು ಬಂದಿತ್ತು. ಯಾರು ಬಾಲಕಿ ಸಹಾಯಕ್ಕೆ ಬಾರದೇ ಇದ್ದಾಗ ಅಲ್ಲಿನ ಪುರೋಹಿತರೊಬ್ಬರು ಬಾಲಕಿಗೆ ಬಟ್ಟೆ ನೀಡಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ವೈದ್ಯಕೀಯ ಪರೀಕ್ಷೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ.
ಈ ಘಟನೆ ನಡೆದು ಮೂರು ದಿನಗಳ ನಂತರ ಭರತ್ ಸೋನಿ ಎಂಬ ಆಟೋ ಚಾಲಕನನ್ನು ಬಂಧಿಸಲಾಯಿತು. ತನಿಖೆಗಾಗಿ ಅಪರಾಧ ಸ್ಥಳಕ್ಕೆ ಕರೆದೊಯ್ಯುವಾಗ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಆರೋಪಿ ಸೋನಿ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯನ್ನು ಇಂದೋರ್‌ನ ಸರ್ಕಾರಿ ಮಹಾರಾಜ ತುಕೋಜಿರಾವ್ ಹೋಳ್ಕರ್ ಮಹಿಳಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬುಧವಾರ ಆಕೆಗೆ ದೊಡ್ಡ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಆದರೆ ಬಾಲಕಿಗೆ ಹೆಸರು ಅಥವಾ ವಿಳಾಸವನ್ನು ಸರಿಯಾಗಿ ಹೇಳಲು ಸಾಧ್ಯವಾಗಲಿಲ್ಲ. ಸತ್ನಾದಲ್ಲಿ ಅದೇ ವಯಸ್ಸಿನ ಬಾಲಕಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಅತ್ಯಾಚಾರದಿಂದ ಬದುಕುಳಿದವರು ಅದೇ ಹುಡುಗಿಯೇ ಎಂದು ದೃಢಪಡಿಸಬೇಕಾಗಿದೆ.
ವರ್ಷಾಂತ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಮಧ್ಯಪ್ರದೇಶದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಆಡಳಿತದಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಗಣನೀಯವಾಗಿ ಹದಗೆಟ್ಟಿದೆ ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಟೆ ಆರೋಪಿಸಿದ್ದಾರೆ.
"ಮಧ್ಯಪ್ರದೇಶದಲ್ಲಿ ದಲಿತ, ಬುಡಕಟ್ಟು ಮತ್ತು ಮಹಿಳೆಯಾಗಿರುವುದು ಪಾಪವಾಗಿದೆ. ಅಪ್ರಾಪ್ತರ ಮೇಲಿನ ಅತ್ಯಾಚಾರದಲ್ಲಿ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದೆ. ಅವರ (ಚೌಹಾಣ್) ಆಡಳಿತದ 18 ವರ್ಷಗಳಲ್ಲಿ ಐವತ್ತೆಂಟು ಸಾವಿರ ಅತ್ಯಾಚಾರ ಪ್ರಕರಣಗಳು ಮತ್ತು 68,000 ಅಪಹರಣ ಪ್ರಕರಣಗಳು ವರದಿಯಾಗಿವೆ. ಆದರೆ ದೇಶದ ಪ್ರಧಾನಿ, ಗೃಹ ಸಚಿವರು ಮತ್ತು ಬಿಜೆಪಿಯ ಎಲ್ಲಾ ನಾಯಕರು ಸುಮ್ಮನೆ ಕುಳಿತಿದ್ದಾರೆ,'' ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಆಕ್ರೋಶಗೊಂಡರು.
ಘಟನೆಯ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯೂ) ಮತ್ತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್)ದ ಮೌನವನ್ನು ಅವರು ಪ್ರಶ್ನಿಸಿದ್ದಾರೆ. ಮಧ್ಯಪ್ರದೇಶದ ಉಸ್ತುವಾರಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ, ಈ "ದಲಿತ ಹುಡುಗಿ" ಮೇಲಿನ ದಾಳಿಯು ನಿರ್ಭಯಾ ಪ್ರಕರಣದ ಸಂತ್ರಸ್ತೆಯ ಮೇಲಿನ ದಾಳಿಗಿಂತ ಹೆಚ್ಚು ಕ್ರೂರವಾಗಿದೆ ಎಂದು ಹೇಳಿದ್ದಾರೆ.












Click it and Unblock the Notifications