ಅಫ್ಘಾನಿಸ್ತಾನದಿಂದ ಸ್ಥಳಾಂತರಗೊಂಡ 146 ಮಂದಿ ಪೈಕಿ ಇಬ್ಬರಿಗೆ ಕೊರೊನಾ
ನವದೆಹಲಿ, ಆಗಸ್ಟ್ 23: ಅಫ್ಘಾನಿಸ್ತಾನದಿಂದ ಭಾರತಕ್ಕೆ ಸ್ಥಳಾಂತರಗೊಂಡಿದ್ದ 146 ಮಂದಿ ಪೈಕಿ ಇಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಅಫ್ಘಾನಿಸ್ತಾನದಿಂದ ಹಿಂದಿರುಗಿದವರ ಕೊರೊನಾ ಪರೀಕ್ಷೆಗಾಗಿ ಸರ್ಕಾರ ಓರ್ವ ನೋಡಲ್ ಅಧಿಕಾರಿಯನ್ನು ನೇಮಿಸಿತ್ತು ಅವರು ಈ ಕುರಿತು ಸ್ಪಷ್ಟಪಡಿಸಿದ್ದಾರೆ.
ವಿದೇಶಗಳಿಂದ ದೇಶಕ್ಕೆ ಹಿಂದುರುಗಿದವರಿಗೆ ಈಗಿರುವ ಮಾರ್ಗಸೂಚಿ ಪ್ರಕಾರ ಇಬ್ಬರನ್ನು ಪ್ರತ್ಯೇಕವಾಗಿರಿಸಿ, ಸಮಾಜದೊಂದಿಗೆ ಬೆರೆಯದಂತೆ ನೋಡಿಕೊಳ್ಳಲಾಗಿದೆ. ಕೊರೊನಾ ಸೋಂಕು ತಗುಲಿದವರ ಗುರುತು ಇನ್ನೂ ಪತ್ತೆಯಾಗಿಲ್ಲ.

ಇಂದು ಬೆಳಗ್ಗೆ ಅಫ್ಘಾನಿಸ್ತಾನದಿಂದ ದೋಹಾ ಮೂಲಕ ದೆಹಲಿಗೆ 146 ಮಂದಿ ಪ್ರಯಾಣಿಕರು ಬಂದಿಳಿದಿದ್ದರು. ಬಂಡುಕೋರರಿಂದ ದಿನೇ ದಿನೇ ಆಫ್ಘಾನಿಸ್ತಾನದ ಪರಿಸ್ಥಿತಿ ಹದಗೆಡುತ್ತಿದ್ದು, ಅಲ್ಲಿಂದ ಇಂದು ಬೆಳಗ್ಗೆ 146 ಮಂದಿ ಭಾರತೀಯರನ್ನು ನವದೆಹಲಿಗೆ ಸ್ಥಳಾಂತರಿಸಲಾಗಿದೆ. ಸುರಕ್ಷಿತವಾಗಿ ಭಾರತಕ್ಕೆ ಬಂದಿಳಿದವರ ಪೈಕಿ ಮಾತನಾಡಿರುವ ಸುನೀಲ್ ಎಂಬವರು. ಆಗಸ್ಟ್ 14ರಂದು ನಮ್ಮನ್ನು ಅಮೆರಿಕಾದ ರಾಯಭಾರ ಕಚೇರಿ ವಿಮಾನ ಕತ್ತಾರ್‍ಗೆ ಕರೆದುಕೊಂಡು ಹೋಗಿತ್ತು. ಅಲ್ಲಿ ಅಮೆರಿಕಾ ಸೇನೆಯ ನೆಲೆಯಲ್ಲಿ ನೆಲೆಸಿದ್ದವು.
ಭಾರತೀಯ ರಾಯಭಾರ ಕಚೇರಿ ಮಾತುಕತೆ ನಡೆಸಿ ನಮ್ಮನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆ ತಂದಿದೆ ಎಂದು ಹೇಳಿದ್ದಾರೆ. 6ಇ 1702 ಸೇರಿದಂತೆ ವಿವಿಧ ವಿಮಾನದಲ್ಲಿ ಆಗಮಿಸಿದವರ ಪೈಕಿ 11 ಮಂದಿ ಆಫ್ಘಾನಿಸ್ತಾನದ ಪ್ರಜೆಗಳು ಸೇರಿದ್ದಾರೆ. 46 ಮಂದಿ ಹಿಂದುಗಳು ಹಾಗೂ ಸಿಖರನ್ನು ಆಫ್ಘಾನಿಸ್ತಾನದಿಂದ ಸ್ಥಳಾಂತರಿಸಲಾಗಿದೆ.
ಭಾರತೀಯರನ್ನು ಸ್ಥಳಾಂತರಿಸಲು ಕಾಬೂಲ್‍ನಿಂದ ಪ್ರತಿ ದಿನ ಎರಡು ವಿಮಾನಗಳು ಸಂಚಾರಿಸಲು ಅನುಮತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ತಾಲಿಬಾನಿಗಳಿಂದ ತಪ್ಪಿಸಿಕೊಳ್ಳಲು ಸಿಕ್ಕಸಿಕ್ಕ ಕಡೆಗಳಲ್ಲಿ ಅಫ್ಘಾನ್ ಪ್ರಜೆಗಳು ಹೋಗುತ್ತಿದ್ದಾರೆ. ಭಾರತ ಸೇರಿದಂತೆ ಹಲವು ದೇಶಗಳಿಗೆ ಈಗಾಗಲೇ ವಿಮಾನ ಏರಿ ಹೊರಟಿದ್ದಾರೆ.
ಜೀವ ಉಳಿದರೆ ಸಾಕು ಎನ್ನುವಂತೆ ಯಾವ ದೇಶವಾದರೂ ಸರಿ, ಅಲ್ಲಿಗೆ ಹೋಗಿ ನೆಲೆಸಲು ಹವಣಿಸುತ್ತಿರುವ ಅಫ್ಘಾನ್ ಪ್ರಜೆಗಳಿಗೆ ಕೆಲವು ದೇಶಗಳು ಸಹಾಯ ಹಸ್ತ ಚಾಚಿ ಬರಮಾಡಿಕೊಳ್ಳುತ್ತಿವೆ.
ಅದೇ ಇನ್ನೊಂದೆಡೆ, ಬಹುತೇಕ ದೇಶಗಳು ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ತಮ್ಮ ದೇಶಗಳ ಪ್ರಜೆಗಳನ್ನು ವಾಪಸ್ ಕರೆಸಿಕೊಳ್ಳಲು ವಿಮಾನ ಸೌಕರ್ಯ ಕಲ್ಪಿಸಿವೆ. ತಾಲಿಬಾನ್ ವಶಕ್ಕೆ ಸಂಪೂರ್ಣ ಅಫ್ಘಾನಿಸ್ತಾನ ಬಂದ ಮೇಲೆ ಇದುವರೆಗೆ ವಿವಿಧ ದೇಶಗಳಿಗೆ ಹೋಗಿರುವವರ ಸಂಖ್ಯೆ 28 ಸಾವಿರ ಎನ್ನಲಾಗಿದೆ.
ಅಮೆರಿಕ, ಭಾರತ, ಇಂಗ್ಲೆಂಡ್, ಡೆನ್ಮಾರ್ಕ್, ಜರ್ಮನಿ, ಇಟಲಿ, ಟರ್ಕಿ, ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿ 13ದೇಶಗಳು ಅಫ್ಘನ್ ಪ್ರಜೆಗಳಿಗೆ ತಾತ್ಕಾಲಿಕವಾಗಿ ಆಶ್ರಯ ನೀಡಲು ಸಮ್ಮತಿ ಸೂಚಿಸಿವೆ.
ಆದರೆ ಉಳಿದ ದೇಶಗಳು ತಮ್ಮ ಪ್ರಜೆಗಳನ್ನು ಮಾತ್ರ ವಾಪಸ್ ಕರೆ ತರುತ್ತಿವೆ. ಅಫ್ಘಾನಿಸ್ತಾನದ ಸಿಖ್ಖರು, ಹಿಂದೂಗಳು, ಸೇರಿ ಒಟ್ಟು 552 ಜನರನ್ನು ಕಾಬೂಲ್ ವಿಮಾನಗಳಲ್ಲಿ ಕರೆತರಲಾಗಿದೆ.
ಒಟ್ಟು ಭಾರತದ 25 ವಿಮಾನಗಳು ಕಾರ್ಯಾಚರಣೆ ನಡೆಸುತ್ತಿದ್ದು, ಇಂದು 146 ಮಂದಿ ದೆಹಲಿಗೆ ಬಂದಿಳಿದಿದ್ದಾರೆ. ಅಮೆರಿಕ ಕಳೆದೊಂದು ವಾರದಿಂದ ಒಟ್ಟು 17,000 ಮಂದಿಯನ್ನು ಅಫ್ಘಾನಿಸ್ತಾನದಿಂದ ಅಮೆರಿಕಕ್ಕೆ ಸ್ಥಳಾಂತರಿಸಿದೆ. ಇದರಲ್ಲಿ 2500 ಮಂದಿ ಅಮೆರಿಕನ್ನರು ಎಂದು ತಿಳಿಸಿದ್ದಾರೆ.












Click it and Unblock the Notifications